ಬಿಯರಿಟ್ಜ್ : ಭಾರತ ಮತ್ತು ಪಾಕಿಸ್ಥಾನ ಎದುರಿಸುತ್ತಿರುವ ದ್ವಿಪಕ್ಷೀಯ ಸಮಸ್ಯೆಗಳ ನಡುವೆ ಯಾವುದೇ ದೇಶವು ಮಧ್ಯಸ್ಥಿಕೆ ವಹಿಸಲು ಅವಕಾಶವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಸೋಮವಾರ ಸ್ಪಷ್ಟವಾಗಿ ಹೇಳಿದ್ದಾರೆ.
ಫ್ರಾನ್ಸ್ನ ಬಿಯರಿಟ್ಜ್ನಲ್ಲಿ ನಡೆದ ಜಿ 7 ಶೃಂಗಸಭೆಯ ಸೈಡ್ಲೈನಿನಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾದ ಮೋದಿ, ಕಾಶ್ಮೀರ ವಿಷಯವು ಯಾವುದೇ ಮೂರನೇ ಶಕ್ತಿಯ ಹಸ್ತಕ್ಷೇಪವನ್ನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಭಾರತ ಮತ್ತು ಪಾಕಿಸ್ಥಾನವು ಹಲವಾರು ದ್ವಿಪಕ್ಷೀಯ ಸಮಸ್ಯೆಗಳನ್ನು ಹೊಂದಿವೆ. ನಾವು ಕುಳಿತು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಭಾರತ ಮತ್ತು ಪಾಕಿಸ್ಥಾನಗಳು ಬಡತನ ಮತ್ತು ಶಿಕ್ಷಣದ ಕೊರತೆಯ ವಿರುದ್ಧ ಹೋರಾಡಬೇಕಾಗಿದೆ, ಎರಡೂ ರಾಷ್ಟ್ರಗಳ ಜನರ ಉನ್ನತಿಗಾಗಿ ಕೆಲಸ ಮಾಡಬೇಕಾಗಿದೆ. ನಾನು ಇದನ್ನು ಪಾಕಿಸ್ಥಾನದ ಪ್ರಧಾನಮಂತ್ರಿಗೆ ತಿಳಿಸಿದ್ದೇನೆ. ಇಮ್ರಾನ್ ಖಾನ್ ಪ್ರಧಾನಿಯಾಗಿ ಆಯ್ಕೆಯಾದ ನಂತರ, ನಾನು ಅವರಿಗೆ ಕರೆಯನ್ನು ಮಾಡಿ, ಪಾಕಿಸ್ಥಾನ ಮತ್ತು ಭಾರತ ಬಡತನದ ವಿರುದ್ಧ, ರೋಗಗಳ ವಿರುದ್ಧ ಹೋರಾಡಬೇಕಾಗಿದೆ, ಎರಡೂ ದೇಶಗಳ ಜನರ ಒಳಿತಿಗೆ ನಾವು ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದ್ದೆ” ಎಂದು ಮೋದಿ ಟ್ರಂಪ್ ಜೊತೆಗಿನ ಸಭೆಯ ವೇಳೆ ಹೇಳಿದ್ದಾರೆ.
“ಅಧ್ಯಕ್ಷ ಟ್ರಂಪ್ ಅವರೊಂದಿಗೆ ನಾನು ಸದಾ ಸಂಪರ್ಕದಲ್ಲಿರುತ್ತೇನೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವು ಸಮಸ್ಯೆಗಳಿವೆ. ಅವುಗಳನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಬೇಕಿದೆ. ಇದರಲ್ಲಿ ನಾವು ಬೇರೆ ಯಾವುದೇ ದೇಶದ ಮಧ್ಯಸ್ಥಿಕೆಯನ್ನು ಬಯಸುವುದಿಲ್ಲ. ನಮ್ಮ ಸಮಸ್ಯೆಗಳನ್ನು ನಾವು ಜಂಟಿಯಾಗಿಯೇ ನಿಭಾಯಿಸಬಹುದಾಗಿದೆ “ಎಂದಿದ್ದಾರೆ.
“ಇದು ನನ್ನ ಸ್ನೇಹಿತ ಮತ್ತು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವದೊಂದಿಗಿನ ಪ್ರಮುಖ ಸಭೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಟ್ರಂಪ್ ಚುನಾವಣಾ ವಿಜಯಕ್ಕಾಗಿ ನನ್ನನ್ನು ಅಭಿನಂದಿಸಿದ್ದರು. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಬಹುದಾಗಿದೆ, ನಮ್ಮಲ್ಲಿ ಜಗತ್ತಿಗೆ ಉಪಯೋಗವಾಗುವಂತಹ ಸಮಾನ ಮೌಲ್ಯಗಳಿವೆ. ಆರ್ಥಿಕ ಕ್ಷೇತ್ರದಲ್ಲಿ, ನಾವು ನಿರಂತರ ಮಾತುಕತೆಯನ್ನು ನಡೆಸುತ್ತಿದ್ದೇವೆ ಮತ್ತು ನಾವು ಅಮೆರಿಕಾದ ಸಲಹೆಗಳನ್ನು ಸೂಕ್ತವಾಗಿ ಪರಿಗಣಿಸುತ್ತೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.