ರಾಜೌರಿ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಇರ್ಮಿಮ್ ಶಮೀಮ್ ಅವರು ಜೂನ್ನಲ್ಲಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್)ನಲ್ಲಿ ವೈದ್ಯಕೀಯ ಅಧ್ಯಯನವನ್ನು ಮಾಡಲು ಅರ್ಹತೆ ಪಡೆದುಕೊಂಡಿದ್ದಾರೆ. ಈ ಅರ್ಹತೆಯನ್ನು ಪಡೆದುಕೊಂಡ ಮೊದಲ ಗುಜ್ಜರ್ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಗಡಿ ಜಿಲ್ಲೆಯ ಧನೋರ್ ಗ್ರಾಮದವರಾದ ಶಮೀಮ್, ಎಲ್ಲ ಅಡತಡೆಗಳನ್ನು ಮೆಟ್ಟಿನಿಂತು ಪ್ರತಿಷ್ಠಿತ ಸಂಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಅವರ ಶಿಕ್ಷಣ ಎಷ್ಟು ಕಠಿಣವಾಗಿತ್ತು ಎಂದರೆ, ಅವರ ಹಳ್ಳಿಯ ಬಳಿ ಉತ್ತಮ ಶಾಲೆ ಇಲ್ಲದ ಕಾರಣ ಶಾಲೆಗೆ ಹೋಗಲು ಅವರು ಪ್ರತಿದಿನ 10 ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲಿ ಹೋಗಬೇಕಾಗಿತ್ತು.
ಹಿಂದುಳಿದ ಸಮುದಾಯಕ್ಕೆ ಸೇರಿದ ಮತ್ತು ಆರ್ಥಿಕ ತೊಂದರೆಗಳೊಂದಿಗೆ ಹೋರಾಡುತ್ತಲೇ ಬೆಳೆದ ಶಮೀಮ್ ತನ್ನ ದಾರಿಯಲ್ಲಿ ಎದುರಾದ ಎಲ್ಲಾ ಸವಾಲುಗಳನ್ನು ಸೋಲಿಸಿದ್ದಾರೆ. “ಪ್ರತಿಯೊಬ್ಬರಿಗೂ ಅವರ ಜೀವನದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ನಾವು ಸವಾಲುಗಳನ್ನು ಎದುರಿಸಲೇ ಬೇಕಾಗುತ್ತದೆ, ಆಗ ಮಾತ್ರ ಯಶಸ್ಸು ಖಂಡಿತವಾಗಿಯೂ ನಮ್ಮ ಬಳಿ ಬರುತ್ತದೆ” ಎಂದು ಅವರು ಹೇಳಿದ್ದಾರೆ.
ಮಗಳ ಯಶಸ್ಸನ್ನು ಕಂಡು ಅವರ ಕುಟುಂಬವು ಸಂತೋಷವಾಗಿದೆ. ಯಶಸ್ವಿ ವೈದ್ಯೆಯಾಗಿ ಜಮ್ಮು ಮತ್ತು ಕಾಶ್ಮೀರ ಮತ್ತು ದೇಶದ ಜನರಿಗೆ ಸೇವೆ ಸಲ್ಲಿಸಲು ಬಯಸುತ್ತಿರುವುದಾಗಿ ಶಮೀಮ್ ಹೇಳಿಕೊಂಡಿದ್ದಾರೆ.
“ಜಮ್ಮು ಮತ್ತು ಕಾಶ್ಮೀರದ ಹುಡುಗಿಯರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ” ಎಂದು ಶಮೀಮ್ ಚಿಕ್ಕಪ್ಪ ಹೇಳಿದ್ದಾರೆ.
ಜಿಲ್ಲಾ ಅಭಿವೃದ್ಧಿ ಆಯುಕ್ತ ಐಜಾಜ್ ಅಸಾದ್ ಅವರು ಈಕೆಯ ಸಾಧನೆಯನ್ನು ಶ್ಲಾಘಿಸಿದ್ದಾರೆ ಮತ್ತು ಭವಿಷ್ಯದಲ್ಲಿ ಆಕೆಗೆ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.