ನವದೆಹಲಿ: ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವೆ ಉದ್ಭವಿಸಿದ್ದ ಮಿಲಿಟರಿ ಮುಖಾಮುಖಿಯ ಸಂದರ್ಭ ಖ್ಯಾತಿಗೆ ಬಂದ ವಾಯುಸೇನೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಮತ್ತೆ ಮಿಗ್ 21 ಜೆಟ್ನ ಹಾರಾಟವನ್ನು ನಡೆಸಲು ಆರಂಭಿಸಿದ್ದಾರೆ.
ಫೆಬ್ರವರಿ 27 ರಂದು ಭಾರತದ ವಾಯುಪ್ರದೇಶದೊಳಗೆ ನುಗ್ಗಲು ಯತ್ನಿಸಿದ್ದ ಪಾಕಿಸ್ಥಾನದ ಯುದ್ಧ ವಿಮಾನವನ್ನು ತಮ್ಮ ಮಿಗ್ 21 ವಿಮಾನದಲ್ಲಿ ಅಟ್ಟಾಡಿಸಿಕೊಂಡು ಹೋಗಿದ್ದ ಅಭಿನಂದನ್ ಪಾಕಿಸ್ಥಾನ ಪ್ರದೇಶದಲ್ಲಿ ಬಿದ್ದು ಅಲ್ಲಿ ಎರಡು ದಿನಗಳ ಕಾಲ ಯುದ್ಧ ಕೈದಿಯಾಗಿದ್ದರು. ಆ ವೇಳೆ ಅವರ ದೇಹದ ವಿವಿಧ ಭಾಗಗಳಿಗೆ ಗಾಯಗಳೂ ಆಗಿತ್ತು. ಅದಾದ ಆರು ತಿಂಗಳ ನಂತರ ವರ್ತಮಾನ್ ಅವರು ಮತ್ತೆ ಫೈಟರ್ ಕಾಕ್ಪಿಟ್ಗೆ ಮರಳಿದ್ದಾರೆ.
“ಅವರು ಹಾರಲು ಪ್ರಾರಂಭಿಸಿದ್ದಾರೆ” ಎಂದು ಮಿಲಿಟರಿಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಸ್ತುತ, ಅಭಿನಂದನ್ ರಾಜಸ್ಥಾನದ ಐಎಎಫ್ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ವೈಮಾನಿಕ ಮುಖಾಮುಖಿಯ ಸಮಯದಲ್ಲಿ ಪಾಕಿಸ್ಥಾನದ ಎಫ್ -16 ಜೆಟ್ ಅನ್ನು ಉರುಳಿಸಿದ್ದಕ್ಕಾಗಿ ಅಭಿನಂದನ್ ಅವರಿಗೆ ಶೌರ್ಯ ಪದಕ ವೀರ ಚಕ್ರವನ್ನು ನೀಡಿ ಪುರಸ್ಕರಿಸಲಾಗಿದೆ. ಪರಮವೀರ ಚಕ್ರ ಮತ್ತು ಮಹಾವೀರ ಚಕ್ರದ ನಂತರ ವೀರ ಚಕ್ರ ಮೂರನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿಯಾಗಿದೆ.
ಐಎಎಫ್ನ ಬೆಂಗಳೂರು ಮೂಲದ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಮೂರು ವಾರಗಳ ಹಿಂದೆಯೇ ಸಂಪೂರ್ಣ ವೈದ್ಯಕೀಯ ಮೌಲ್ಯಮಾಪನವನ್ನು ನಡೆಸಿ ನಂತರ ಮತ್ತೆ ಹಾರಾಟ ನಡೆಸಲು ಅಭಿನಂದನ್ ಅವರಿಗೆ ಅನುಮೋದನೆ ನೀಡಿತ್ತು.
ಪಾಕಿಸ್ಥಾನದಿಂದ ಹಿಂದಿರುಗಿದ ಕೆಲವು ದಿನಗಳಲ್ಲೇ, ಅಭಿನಂದನ್ ಅವರು ವಾಯುಸೇನೆಯ ಫೈಟರ್ ಕಾಕ್ಪಿಟ್ಗೆ ಮರಳಬೇಕೆಂಬ ಬಯಕೆಯನ್ನು ತೋಡಿಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.