ನವದೆಹಲಿ: ಸಂಸತ್ತು ಭವನದ ಆವರಣದೊಳಗೆ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಮತ್ತು ಇತರ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದನ್ನು ಲೋಕಸಭಾ ಸೆಕ್ರೆಟರಿಯೇಟ್ ಮಂಗಳವಾರದಿಂದ ನಿಷೇಧಿಸಿದೆ. ಈ ಬಗ್ಗೆ ಅದು ಸುತ್ತೋಲೆಯನ್ನು ಹೊರಡಿಸಿದ್ದು, ಇದರ ಪ್ರಕಾರ, ಸಂಸತ್ತಿನ ಆವರಣದಲ್ಲಿ ಕೆಲಸ ಮಾಡುವ ಕಾರ್ಯದರ್ಶಿಗಳು, ಸಿಬ್ಬಂದಿಗಳು ಸೇರಿದಂತೆ ಎಲ್ಲರೂ ಈ ನಿರ್ದೇಶನಗಳನ್ನು ಅನುಸರಿಸಲೇ ಬೇಕು ಎಂದು ಸೂಚನೆಯನ್ನು ನೀಡಲಾಗಿದೆ.
ಪರಿಸರ ಸ್ನೇಹಿ ಅಥವಾ ಜೈವಿಕವಾಗಿ ಕರಗುವ ಬ್ಯಾಗುಗಳನ್ನು ಮತ್ತು ವಸ್ತುಗಳನ್ನು ಬಳಸುವಂತೆ ಇದರಲ್ಲಿ ಸೂಚಿಸಲಾಗಿದೆ. ಸುತ್ತೋಲೆಯನ್ನು ಸೋಮವಾರ ಹೊರಡಿಸಲಾಗಿದ್ದು, ಈ ಮಾಹಿತಿಯನ್ನು ಮಂಗಳವಾರ ಮಾಧ್ಯಮಗಳಿಗೆ ತಲುಪಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ವೇಳೆ, ದೇಶವನ್ನು ಏಕ ಬಳಕೆಯ ಪ್ಲಾಸ್ಟಿಕ್ನಿಂದ ಮುಕ್ತಗೊಳಿಸಬೇಕೆಂದು ಜನರಿಗೆ ಕರೆ ನೀಡಿದ್ದರು ಮತ್ತು ಈ ದಿಕ್ಕಿನಲ್ಲಿ ಮೊದಲ ದೊಡ್ಡ ಹೆಜ್ಜೆಯನ್ನು ಗಾಂಧೀಜಿಯವರು 150 ನೇ ಜನ್ಮ ದಿನಾಚರಣೆಯಾದ ಅಕ್ಟೋಬರ್ 2 ರಂದು ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದರು.
ಮರುಬಳಕೆಗೆ ಬಾರದ, ಮಣ್ಣಿನಲ್ಲಿ ಕರಗದ ಏಕ ಬಳಕೆ ಪ್ಲಾಸ್ಟಿಕ್ಗಳು ಪರಿಸರಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯನ್ನು ಉಂಟು ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಂಸತ್ತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಇಡೀ ದೇಶ ಕೂಡ ಅದನ್ನು ಪಾಲನೆ ಮಾಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.