ಇಸ್ರೇಲ್ ರಾಜ ಸೊಲೊಮೋನ್ ಮುಂದೆ ಒಂದು ಭಿನ್ನವಾದ ಸಮಸ್ಯೆ ಇತ್ತು. ಇಬ್ಬರು ಮಹಿಳೆಯರು ಆತನ ನ್ಯಾಯಾಲಯಕ್ಕೆ ಒಂದು ಮಗುವಿನೊಂದಿಗೆ ಆಗಮಿಸಿದ್ದರು, ಆ ಮಗುವನ್ನು ನನ್ನದು ನನ್ನದು ಎಂದು ಅವರಿಬ್ಬರೂ ವಾದಿಸುತ್ತಿದ್ದರು. ಇದರಿಂದ ನ್ಯಾಯಾಲಯದಲ್ಲಿ ಹಾಜರಿದ್ದ ಎಲ್ಲರೂ ಗೊಂದಲಕ್ಕೊಳಗಾದರು. ಯಾವ ಮಹಿಳೆ ಮಗುವಿನ ನಿಜವಾದ ತಾಯಿ ಮತ್ತು ಯಾವ ಮಹಿಳೆ ಮೋಸಗಾರ್ತಿ ಎಂದು ಹೇಗೆ ನಿರ್ಧರಿಸುವುದು? ಎಂದು ಸೋಲೊಮೋನ್ ಚಿಂತಿಸಿದ, ಚರ್ಚಿಸಿದ. ನಂತರ, ಆತ ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡು, ಮಗು ಯಾರದ್ದೆಂದು ನಿರ್ಧರಿಸಲು ಸಾಧ್ಯವಿಲ್ಲದ ಕಾರಣ, ಮಗುವನ್ನು ಎರಡು ತುಂಡುಗಳಾಗಿ ಕತ್ತರಿಸಲಾಗುವುದು ಮತ್ತು ಅದನ್ನು ಇಬ್ಬರಿಗೂ ಹಂಚಲಾಗುವುದು ಎಂದು ಘೋಷಿಸಿದ. ಇದನ್ನು ಕೇಳಿದ ಒಬ್ಬ ಮಹಿಳೆ, “ಮಗುವನ್ನು ಅವಳಿಗೆ ಕೊಟ್ಟು ಬಿಡಿ, ಆದರೆ ತುಂಡರಿಸಬೇಡಿ” ಎಂದು ಉದ್ಗರಿಸುತ್ತಾಳೆ. ರಾಜ ಸೊಲೊಮೋನನು ಮಗುವಿನ ಪಾಲನೆಯನ್ನು ಆ ಮಹಿಳೆಗೇ ತಕ್ಷಣವೇ ನೀಡಿತ್ತಾನೆ. ಅಲ್ಲದೇ, ತಾಯಿಯು ತನ್ನ ಮಗನನ್ನು ಬೇಕಾದರೆ ಬಿಟ್ಟು ಬಿಡುತ್ತಾಳೆ, ಆದರೆ ಎಂದಿಗೂ ಆತನ ನೋವನ್ನು ನೋಡಲು ಬಯಸುವುದಿಲ್ಲ ಎಂದು ಆತ ಹೇಳುತ್ತಾನೆ.
ಬಹುಶಃ ಬೈಬಲ್ನ ಈ ಕಥೆಯು, ಭಿನ್ನ ರಾಷ್ಟ್ರಗಳಿಗೆ ಹಂಚಿಹೋಗಿರುವ ಕಾಶ್ಮೀರದ ಎರಡು ಪ್ರದೇಶಗಳಿಗೆ ಸೂಕ್ತವಾಗಿ ಅನ್ವಯವಾಗುತ್ತದೆ. ಒಂದು ಪಾಕಿಸ್ತಾನ ಆಕ್ರಮಿತ ಗಿಲ್ಗಿಟ್-ಬಾಲ್ತಿಸ್ಥಾನ್ ಪ್ರದೇಶ ಮತ್ತು ಇನ್ನೊಂದು ಭಾರತೀಯ ಕಾಶ್ಮೀರ. ವಿಭಜನೆಯ ನಂತರದ ಎರಡು ಕಾಶ್ಮೀರದ ಕಥೆಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಗಿಲ್ಗಿಟ್-ಬಾಲ್ತಿಸ್ಥಾನ್ ಕಿರುಕುಳ, ಬಲವಂತದ ಸ್ಥಳಾಂತರ, ಜನಸಂಖ್ಯಾ ಬದಲಾವಣೆಗಳನ್ನು ಎದುರಿಸಿದರೆ, ಭಾರತೀಯ ಕಾಶ್ಮೀರವು ಅಶಾಂತಿಯ ಹೊರತಾಗಿಯೂ, ಆರ್ಥಿಕ ಬೆಳವಣಿಗೆ, ಸಮೃದ್ಧಿ ಮತ್ತು ಅಭಿವೃದ್ಧಿಗೆ ಸಾಕ್ಷಿಯಾಯಿತು.
ಪಾಕಿಸ್ಥಾನವು ತಾನು ಬಲವಂತವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗವನ್ನು ಜನರು ಅಥವಾ ಮಾನವ ಹಕ್ಕುಗಳಿಲ್ಲದ ಒಂದು ತುಂಡು ಭೂಮಿಯೆಂದು, ತಾನು ಪರಾಕ್ರಮವನ್ನು ಪ್ರದರ್ಶಿಸಿ ಭಾರತದಿಂದ ಗೆದ್ದ ಬಹುಮಾನವೆಂದು ಪರಿಗಣಿಸುತ್ತದೆ. ಆದರೆ ಕಾಶ್ಮೀರವನ್ನು ಭಾರತ ತನ್ನ ಸೈಸರ್ಗಿಕ ಭಾಗ ಎಂದು ನಂಬುತ್ತದೆ. ಕಾಶ್ಮೀರದ ಎಲ್ಲಾ ಪ್ರದೇಶಗಳನ್ನು 1947 ರಲ್ಲಿ ಭಾರತಕ್ಕೆ ಕಾನೂನುಬದ್ಧವಾಗಿಯೇ ಅಂಗೀಕರಿಸಲಾಗಿದೆ. ಭಾರತವು ಕಾಶ್ಮೀರ ಪ್ರದೇಶವನ್ನು ಎಚ್ಚರಿಕೆಯಿಂದ ಪೋಷಿಸಿ ಅಭಿವೃದ್ಧಿಪಡಿಸಿದೆ.
ಈ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಆರೋಗ್ಯ, ಶಿಕ್ಷಣ ಮತ್ತು ಇತರ ಸಾಮಾಜಿಕ-ಆರ್ಥಿಕ ಸ್ಥಿತಿಯು ದೇಶದ ಇತರ ಉತ್ತಮ ರಾಜ್ಯಗಳಿಗಿಂತ ಉತ್ತಮವಾಗಿದೆ ಎಂಬುದನ್ನು ಗಮನಿಸುವುದು ಸೂಕ್ತ. ಅದಕ್ಕಿಂತಲೂ ಮುಖ್ಯವಾದ ಸಂಗತಿಯೆಂದರೆ, ಕಾಶ್ಮೀರದ ಖರ್ಚಿಗೆ ಹೆಚ್ಚಿನ ಹಣವು ಕೇಂದ್ರ ಸರ್ಕಾರದ ಖಜಾನೆಯಿಂದ ಬರುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಶೇ.73.6ರಷ್ಟು ಆದಾಯವು ಕೇಂದ್ರ ಸರ್ಕಾರದಿಂದ ಬರುತ್ತದೆ, ಆದರೆ ಈ ರಾಜ್ಯವು ತನ್ನ ಒಟ್ಟು ಆದಾಯದ ಶೇಕಡಾ 26 ರಷ್ಟು ಮಾತ್ರ ಗಳಿಸುತ್ತದೆ.
2018-19ರ ಆರ್ಥಿಕ ವರ್ಷದಲ್ಲಿ ರಾಜ್ಯದ ಒಟ್ಟು ಆದಾಯವು 64,269 ಕೋಟಿ ರೂಪಾಯಿಗಳು. ಈ ಆದಾಯದ ಪೈಕಿ, ರಾಜ್ಯದ ಸ್ವಂತ ತೆರಿಗೆಗಳು (11,194 ಕೋಟಿ ರೂಪಾಯಿಗಳು) ಮತ್ತು ತೆರಿಗೆಯೇತರ (5,761 ಕೋಟಿ ರೂಪಾಯಿಗಳು) 16,955 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದಿಂದ ಈ ರಾಜ್ಯಕ್ಕೆ ಬಂದ ಒಟ್ಟು ಅನುದಾನ 34,330 ಕೋಟಿ ರೂಪಾಯಿಗಳು ಮತ್ತು ಕೇಂದ್ರ ತೆರಿಗೆಯಲ್ಲಿ ಅದರ ಪಾಲು 12,984 ಕೋಟಿ ರೂಪಾಯಿಗಳು. ಅಂದರೆ, 2018-19ರ ಆರ್ಥಿಕ ವರ್ಷದಲ್ಲಿ ರಾಜ್ಯವು ಕೇಂದ್ರ ಸರ್ಕಾರದಿಂದ 47,314 ಕೋಟಿ ರೂಪಾಯಿಗಳನ್ನು ಪಡೆಯುವ ನಿರೀಕ್ಷೆಯಿದೆ.
ದೇಶದ ಇತರ ಭಾಗಗಳಿಗಿಂತ ಈ ರಾಜ್ಯವು ಹೆಚ್ಚಿನ ಸಾಮಾಜಿಕ ಖರ್ಚುಗಳನ್ನು ಹೊಂದಿದೆ. ಜಮ್ಮು ಕಾಶ್ಮೀರದಲ್ಲಿ ತಲಾ ಆದಾಯ ಸಾಮಾಜಿಕ ಖರ್ಚು ವರ್ಷಕ್ಕೆ ಸುಮಾರು 12,000 ರೂಪಾಯಿಗಳು ಮತ್ತು ದೇಶದ ಉಳಿದ ರಾಜ್ಯಗಳಲ್ಲಿ ಇದು ಕೇವಲ 8,500 ರೂಪಾಯಿಗಳು. ರಾಜ್ಯದಲ್ಲಿ ತಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ (ಪಿಎಚ್ಸಿ) ದೇಶಕ್ಕಿಂತ 60 ಪ್ರತಿಶತ ಹೆಚ್ಚಿದ್ದರೆ, ಸಮುದಾಯ ಆರೋಗ್ಯ ಕೇಂದ್ರಗಳ (ಸಿಎಚ್ಸಿ) ಸಂಖ್ಯೆ 70 ಪ್ರತಿಶತ ಹೆಚ್ಚಾಗಿದೆ. ದೇಶದ ಸರಾಸರಿ 44 ಕ್ಕೆ ಹೋಲಿಸಿದರೆ ಈ ರಾಜ್ಯದ ಶಿಶು ಮರಣ ಪ್ರಮಾಣ (ಐಎಂಆರ್) 41 ಆಗಿದೆ. ಈ ರಾಜ್ಯದ ಜೀವಿತಾವಧಿ ಭಾರತದ ಉಳಿದ ಭಾಗಗಳಿಗಿಂತ 5 ವರ್ಷಗಳು ಹೆಚ್ಚಾಗಿದೆ. ಭಾರತದ ಉಳಿದ ಭಾಗಗಳ ಜೀವಿತಾವಧಿ 68 ವರ್ಷ ಆಗಿದ್ದರೆ, ಕಣಿವೆ ರಾಜ್ಯದಲ್ಲಿ ಅದು 73 ವರ್ಷ.
ಈ ರಾಜ್ಯದ ಪ್ರತಿ ಮನೆಗೂ ಶಾಲೆ ಸರಾಸರಿಯು ಭಾರತದ ಉಳಿದ ರಾಜ್ಯಗಳ ಸರಾಸರಿಗಿಂತ ಎರಡು ಪಟ್ಟು ಹೆಚ್ಚಿದ್ದರೆ, ಒಟ್ಟು ದಾಖಲಾತಿ ಅನುಪಾತ ಮತ್ತು ರಾಜ್ಯದ ಲಿಂಗ ಸಮಾನತೆ ಸೂಚ್ಯಂಕವು ದೇಶದ ಸರಾಸರಿಗೆ ಹೋಲಿಸಬಹುದು. ಭಾರತ ಸರಾಸರಿಗೆ ಹೋಲಿಸಿದರೆ ಬ್ಯಾಂಕಿಂಗ್ ಸೌಲಭ್ಯಗಳಾದ ಠೇವಣಿ ಖಾತೆಗಳು, ಸಾಲಗಳು ರಾಜ್ಯದಲ್ಲಿ ಹೆಚ್ಚಾಗಿದೆ.
ಜಮ್ಮು ಮತ್ತು ಕಾಶ್ಮೀರವು ಅಭಿವೃದ್ಧಿ ಸೂಚಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಇಲ್ಲಿನ ಅಭಿವೃದ್ಧಿ ವೆಚ್ಚಕ್ಕಾಗಿ ಹಣವು ಕೇಂದ್ರ ಸರ್ಕಾರದಿಂದ ಬರುತ್ತದೆ. ಬಹುತೇಕ ಜಮ್ಮು ಕಾಶ್ಮೀರದಷ್ಟೇ ಜನಸಂಖ್ಯೆಯನ್ನು ಹೊಂದಿರುವ ಉತ್ತರಾಖಂಡವು 51 ಪ್ರತಿಶತದಷ್ಟು ತನ್ನ ಸಂಪನ್ಮೂಲಗಳಿಂದ ಆದಾಯವನ್ನು ಗಳಿಸುತ್ತದೆ. ಆದರೆ ಜಮ್ಮು ಕಾಶ್ಮೀರ ರಾಜ್ಯವು ತನ್ನ ಸ್ವಂತ ಸಂಪನ್ಮೂಲಗಳಿಂದ ಕೇವಲ 27 ಪ್ರತಿಶತದಷ್ಟು ಆದಾಯವನ್ನು ಗಳಿಸುತ್ತದೆ. ಮಹಾರಾಷ್ಟ್ರ ಮತ್ತು ತಮಿಳುನಾಡಿನಂತಹ ರಾಜ್ಯಗಳು ತಮ್ಮ ಸ್ವಂತ ಸಂಪನ್ಮೂಲಗಳಿಂದ ಕ್ರಮವಾಗಿ ಶೇಕಡಾ 75 ಮತ್ತು ಶೇಕಡಾ 72ರಷ್ಟು ಒಟ್ಟು ಆದಾಯವನ್ನು ಗಳಿಸುತ್ತವೆ.
ಅಂದರೆ ಭಾರತದ ಸರ್ಕಾರವು ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿಗೆ ಒತ್ತು ನೀಡಲು ಪರಿಗಣಿಸಬೇಕಾದ ರಾಜ್ಯವೆಂದು ಪರಿಗಣಿಸಿದೆ. ಇಲ್ಲಿನ ನೀತಿಗಳು ಅತ್ಯಂತ ಜನಸ್ನೇಹಿಯಾಗಿವೆ. ಮತ್ತೊಂದೆಡೆ ಪಾಕಿಸ್ತಾನವು ಗಿಲ್ಗಿಟ್-ಬಾಲ್ತಿಸ್ಥಾನದಲ್ಲಿ ವ್ಯಕ್ತಿಗಳು ಅನುಭವಿಸುತ್ತಿರುವ ದೌರ್ಜನ್ಯವನ್ನು ಲೆಕ್ಕಿಸದೆ, ಅದನ್ನು ಒಂದು ತುಂಡು ಭೂಮಿಯನ್ನಾಗಿ ನೋಡಲು ಮಾತ್ರ ಬಯಸುತ್ತದೆ. ಇದನ್ನು ಪಾಕಿಸ್ತಾನವು ಪ್ರತ್ಯೇಕ ಭೌಗೋಳಿಕ ಘಟಕವೆಂದು ಪರಿಗಣಿಸಿದೆ. ಇಲ್ಲಿನ ಸನ್ನಿವೇಶಗಳು ತುಂಬಾ ತೀವ್ರವಾಗಿದ್ದು, ಭೂಪ್ರದೇಶವನ್ನು ನಿಯಂತ್ರಿಸುವುದಾಗಿ ಪಾಕಿಸ್ತಾನ ಹೇಳಿಕೊಳ್ಳುತ್ತದೆ, ಆದರೆ ಗಿಲ್ಗಿಟ್-ಬಾಲ್ತಿಸ್ಥಾನ್ ಬಗ್ಗೆ ಪಾಕಿಸ್ತಾನದ ಸಂವಿಧಾನದಲ್ಲಿ ಯಾವುದೇ ಉಲ್ಲೇಖವನ್ನು ನಾವು ಕಾಣುವುದಿಲ್ಲ.
ಗಿಲ್ಗಿಟ್-ಬಾಲ್ತಿಸ್ಥಾನದ ಆಂತರಿಕ ಅಗತ್ಯಗಳನ್ನು ಪೂರೈಸಲು ಪಾಕಿಸ್ಥಾನ ನಿರಾಕರಿಸಿದೆ ಎಂಬುದಕ್ಕಿಂತಲೂ ಹೆಚ್ಚಾಗಿ, ಆ ದೇಶವು ಈ ಪ್ರದೇಶದ ಜನಸಂಖ್ಯಾರಚನೆಯನ್ನು ದಶಕಗಳಿಂದ ಬದಲಾಯಿಸಲು ಪ್ರಯತ್ನಿಸುತ್ತಿದೆ. 1970 ರ ದಶಕದಲ್ಲಿ, ಪಾಕಿಸ್ತಾನದ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರು ಸುನ್ನಿ ಮುಸ್ಲಿಮರಿಗೆ ಶಿಯಾ ಪ್ರಾಬಲ್ಯದ ಗಿಲ್ಗಿಟ್-ಬಾಲ್ತಿಸ್ಥಾನದಲ್ಲಿ ನೆಲೆಸಲು ಅವಕಾಶವನ್ನು ನೀಡಲು ನಿಯಮವನ್ನೇ ಬದಲಾಯಿಸಿದ್ದರು. ಇದು ಭೌಗೋಳಿಕವಾಗಿ ರಾಜಕೀಯವಾಗಿ ಪಾಕಿಸ್ತಾನದ ಪರವಾಗಿ ಕೆಲಸ ಮಾಡಿದೆ, ಆದರೆ ಗಿಲ್ಗಿಟ್-ಬಾಲ್ತಿಸ್ಥಾನದ ಜನರ ಪರಿಸ್ಥಿತಿ ಅಲ್ಲಿಂದ ಚಿಂತಾಜನಕ ಸ್ಥಿತಿಗೆ ತಲುಪಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.