ನವದೆಹಲಿ: ಸಂಪೂರ್ಣ ಮಹಿಳಾ ಸೈನಿಕರನ್ನು ಒಳಗೊಂಡ ತಂಡವು ಅರುಣಾಚಲ ಪ್ರದೇಶದ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ನಾಲ್ಕು ದಿನಗಳ ಗಸ್ತು ತಿರುಗುವಿಕೆಯನ್ನು ಪೂರ್ಣಗೊಳಿಸಿದೆ ಎಂದು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
18 ಮಹಿಳಾ ಸೈನಿಕರನ್ನು ಒಳಗೊಂಡ ಈ ತಂಡವು ಭಾರತೀಯ ಸೇನೆಯ ಮಹಿಳಾ ಅಧಿಕಾರಿಯ ನೇತೃತ್ವದಲ್ಲಿತ್ತು. ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸದಸ್ಯರನ್ನು ಇದು ಹೊಂದಿತ್ತು. ಈ ತಂಡವು ಆಗಸ್ಟ್ 10 ರಂದು ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಕಿಬುತು ಎಂಬ ಗಡಿ ಪ್ರದೇಶದಲ್ಲಿ ಗಸ್ತು ತಿರುಗುವಿಕೆಯನ್ನು ನಡೆಸಿತ್ತು.
“ಹಿಮಾಲಯದಲ್ಲಿ ಸಾಹಸ ಮೆರೆದ ಮತ್ತು ಕಾರ್ಯಾಚರಣೆಯ ಭಾಗವಾಗಿ ಗಸ್ತು ತಿರುಗಿದ ಮೊದಲ ಮಹಿಳಾ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಈ ತಂಡವು ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಹೆಸರನ್ನು ಬರೆದಿದೆ” ಎಂದು ಹೇಳಿಕೆ ತಿಳಿಸಿದೆ.
ಸಮವಸ್ತ್ರದಲ್ಲಿರುವ ಮಹಿಳೆಯರು ‘ನಾರಿ ಶಕ್ತಿ’ ಯ ಅದ್ಭುತ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಲಾಗಿದೆ.
“ನಮ್ಮ ರಾಷ್ಟ್ರ 73 ನೇ ಸ್ವಾತಂತ್ರ್ಯವನ್ನು ಆಚರಿಸಿದ ಸಂದರ್ಭದಲ್ಲಿ, ಪರ್ವತಗಳು, ತೊರೆಗಳು ಮತ್ತು ದಟ್ಟವಾದ ಕಾಡುಗಳನ್ನು ಅಡ್ಡಾಡಿ ನಾಲ್ಕು ದಿನಗಳ ಕಾಲ ಕಠಿಣ ಭೂಪ್ರದೇಶದಲ್ಲಿ ಗಸ್ತು ತಿರುಗುವುದರ ಮೂಲಕ ಮಹಿಳೆಯರು ತಮ್ಮ ಸಬಲೀಕರಣವನ್ನು ನಿರೂಪಿಸಿದರು. ಇದು ಅವರ ದೃಢ ನಿಶ್ಚಯ ಮತ್ತು ಕೌಶಲ್ಯಗಳನ್ನು ಪರೀಕ್ಷಿಸಿತು” ಎಂದು ಹೇಳಿಕೆ ತಿಳಿಸಿದೆ.
ಗಸ್ತು ತಂಡವನ್ನು ಈಸ್ಟರ್ನ್ ಕಮಾಂಡಿನ ಲೆಫ್ಟಿನೆಂಟ್ ಜನರಲ್ ಎಂ ಎಂ ನಾರವಾನೆ ಅವರು ಶ್ಲಾಘಿಸಿದ್ದು, ಮಹಿಳಾ ಯೋಧೆಯರ ವೃತ್ತಿಪರತೆ ಮತ್ತು ಶ್ರದ್ಧೆಯನ್ನು ಇದು ತೋರಿಸುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.