ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 23 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಬಹ್ರೇನ್ಗೆ ಮೂರು ದಿನಗಳ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಭಾನುವಾರ ತಿಳಿಸಿದೆ. ಭೇಟಿಯ ಸಮಯದಲ್ಲಿ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ದೊಡ್ಡ ಉತ್ತೇಜನವನ್ನು ನೀಡಿದ ಮೋದಿಯವರ ವಿಶಿಷ್ಟ ನಾಯಕತ್ವವನ್ನು ಗುರುತಿಸಿ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಫ್ ಜಾಯೆದ್ ಅನ್ನು ಪ್ರದಾನಿಸಲಿದೆ. 2019 ರ ಏಪ್ರಿಲ್ನಲ್ಲಿ ಮೋದಿಯವರಿಗೆ ಪುರಸ್ಕಾರವನ್ನು ಘೋಷಣೆ ಮಾಡಲಾಗಿತ್ತು.
“ಯುಎಇ ಸಂಸ್ಥಾಪಕ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಹೆಸರಿನಲ್ಲಿರುವ ಈ ಪ್ರಶಸ್ತಿಯನ್ನು ಶೇಖ್ ಜಾಯೆದ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ನೀಡಲ್ಪಟ್ಟಿದ್ದರಿಂದ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅಬುಧಾಬಿಯ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮೋದಿಯವರು ಪರಸ್ಪರ ಹಿತಾಸಕ್ತಿಯ, ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
ಭಾರತ ಮತ್ತು ಯುಎಇ ಸಾಂಸ್ಕೃತಿಕ, ಧಾರ್ಮಿಕ ಮತ್ತು ಆರ್ಥಿಕ ಸಂಪರ್ಕಗಳ ಆಧಾರಿತ ನಿಕಟ ಮತ್ತು ಬಹುಮುಖಿ ಸಂಬಂಧಗಳನ್ನು ಹೊಂದಿವೆ. ಮೋದಿಯವರು 2015ರ ಆಗಸ್ಟ್ ತಿಂಗಳಲ್ಲಿ ಆ ದೇಶಕ್ಕೆ ಭೇಟಿ ನೀಡಿದ ತರುವಾಯ ಉಭಯ ದೇಶಗಳ ಸಮಗ್ರ ಬಾಂಧವ್ಯ ಉನ್ನತ ಮಟ್ಟಕ್ಕೆ ಏರಿತು. ದ್ವಿಪಕ್ಷೀಯ ಹೂಡಿಕೆಗಳ ದೃಢವಾದ ಹರಿವು ಮತ್ತು ಸುಮಾರು 60 ಶತಕೋಟಿ ಡಾಲರ್ಗಳಷ್ಟು ವಾರ್ಷಿಕ ದ್ವಿಪಕ್ಷೀಯ ವ್ಯಾಪಾರದೊಂದಿಗೆ ಯುಎಇ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದೆ. ಇದು ಭಾರತಕ್ಕೆ ಕಚ್ಚಾ ತೈಲ ರಫ್ತು ಮಾಡುವ ನಾಲ್ಕನೇ ಅತಿದೊಡ್ಡ ದೇಶವಾಗಿದೆ.
“ಯುಎಇಯಲ್ಲಿನ 3.3 ಮಿಲಿಯನ್ ಪ್ರಬಲ ಭಾರತೀಯ ಸಮುದಾಯವು ಎರಡು ಸ್ನೇಹಪರ ದೇಶಗಳ ನಡುವಣ ‘ಜನರಿಂದ ಜನರ’ ಸಂಪರ್ಕವನ್ನು ಪೋಷಿಸುತ್ತಿದೆ. ಈ ಭೇಟಿ ಯುಎಇಯೊಂದಿಗಿನ ನಮ್ಮ ಸ್ನೇಹಪರ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆಗಸ್ಟ್ 24 ರಂದು ಮೋದಿ ಬಹ್ರೇನ್ಗೆ ತೆರಳಲಿದ್ದು, ಇದು ಭಾರತದಿಂದ ಆ ದೇಶಕ್ಕೆ ನೀಡಲಾಗುವ ಮೊದಲ ಪ್ರಧಾನಿ ಮಟ್ಟದ ಭೇಟಿಯಾಗಲಿದೆ. ಅವರು ಬಹ್ರೇನ್ ಪ್ರಧಾನಿ ಪ್ರಿನ್ಸ್ ಶೇಖ್ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರನ್ನು ಭೇಟಿಯಾಗಲಿದ್ದಾರೆ ಮತ್ತು ದ್ವಿಪಕ್ಷೀಯ ಸಂಬಂಧಗಳ, ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
ಪ್ರಾಚೀನ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕದ ಬೇರುಗಳನ್ನು ಹೊಂದಿರುವ ಬಹ್ರೇನ್ನೊಂದಿಗಿನ ಭಾರತವು ನಿಕಟ ಮತ್ತು ಸ್ನೇಹಪರ ಸಂಬಂಧವನ್ನು ಹೊಂದಿದೆ ಮತ್ತು ಜನರಿಂದ ಜನರ ಸಂಪರ್ಕವೂ ಗಟ್ಟಿಯಾಗಿದೆ. ಉನ್ನತ ಮಟ್ಟದ ನಿಯಮಿತ ಭೇಟಿಗಳ ವಿನಿಮಯದಿಂದ ಉಭಯ ದೇಶಗಳ ಸಂಬಂಧ ದೃಢವಾಗಿ ನಿಂತಿದೆ. ಭಾರತ-ಬಹ್ರೇನ್ ದ್ವಿಪಕ್ಷೀಯ ವ್ಯಾಪಾರವು ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗುತ್ತಿದ್ದು, 2018-19ರಲ್ಲಿ ಸುಮಾರು 1.3 ಬಿಲಿಯನ್ ಡಾಲರ್ಗಳನ್ನು ತಲುಪಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.