ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಹುದ್ದೆಯನ್ನು ಘೋಷಣೆ ಮಾಡಿದ್ದಾರೆ. ಮೂರು ಪಡೆಗಳಿಗೂ ಹಿರಿಯರಾದ ಒಬ್ಬರು ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಇವರು ಸರ್ಕಾರದ ಮಿಲಿಟರಿ ಸಲಹೆಗಾರರಾಗಿಯೂ ಕೆಲಸ ಮಾಡಲಿದ್ದಾರೆ.
ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ನಡುವೆ ಸಮನ್ವಯವನ್ನು ಸಾಧಿಸುವ ಸಲುವಾಗಿ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಯನ್ನು ಸ್ಥಾಪನೆ ಮಾಡುವುದಾಗಿ ಮೋದಿ ಹೇಳಿದ್ದಾರೆ.
“ನಮ್ಮ ಪಡೆಗಳು ಭಾರತದ ಹೆಮ್ಮೆ. ಪಡೆಗಳ ನಡುವಿನ ಸಮನ್ವಯವನ್ನು ಇನ್ನಷ್ಟು ತೀಕ್ಷ್ಣಗೊಳಿಸಲು, ನಾನು ಕೆಂಪು ಕೋಟೆಯಿಂದ ಪ್ರಮುಖ ನಿರ್ಧಾರವನ್ನು ಘೋಷಿಸಲು ಬಯಸುತ್ತೇನೆ. ‘ಭಾರತವು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್)ರನ್ನು ಹೊಂದಲಿದೆ”ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. “ಇದು ಪಡೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲಿದೆ” ಎಂದು ಅವರು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
72 ವರ್ಷಗಳಲ್ಲಿ ಇದು ಭಾರತದ ಅತ್ಯಂತ ಮಹತ್ವದ ರಕ್ಷಣಾ ಸುಧಾರಣೆಯಾಗಿದೆ. ಇದನ್ನು ಐತಿಹಾಸಿಕ ನಿರ್ಧಾರ ಎಂದು ಲೆಫ್ಟಿನೆಂಟ್ ಜನರಲ್ ಡಿ.ಬಿ.ಶೆಕತ್ಕರ್ ಅವರು ಬಣ್ಣಿಸಿದ್ದಾರೆ. ಇವರ ನೇತೃತ್ವದ ಸಮಿತಿಯು 2016 ರಲ್ಲಿ ರಕ್ಷಣಾ ಮುಖ್ಯಸ್ಥರನ್ನು ಹೊಂದುವ ಪ್ರಮುಖ ಶಿಫಾರಸ್ಸನ್ನು ಮಾಡಿತ್ತು.
“ಥಿಯೇಟರ್ ಕಮಾಂಡ್ಸ್ಗಳ ರಚನೆಯನ್ನು ಸರ್ಕಾರವು ಶೀಘ್ರವಾಗಿ ಘೋಷಿಸಬೇಕು ಮತ್ತು ಇವುಗಳನ್ನು ಸಿಡಿಎಸ್ ಅಡಿಯಲ್ಲಿ ಇಡಬೇಕು” ಎಂದು ಶೆಕತ್ಕರ್ ಹೇಳಿದರು.
1999ರಲ್ಲಿ ಕಾರ್ಗಿಲ್ ಯುದ್ಧದ ಬಳಿಕ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಯನ್ನು ರಚನೆ ಮಾಡುವ ಪ್ರಸ್ತಾಪ ಮುನ್ನಲೆಗೆ ಬಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.