ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ವಾರ ಪೂರ್ತಿ ಕುಂಭದ್ರೋಣ ಮಳೆ. ಉತ್ತರ ಕರ್ನಾಟಕದ ಜಿಲ್ಲೆಗಳೂ ಸೇರಿದಂತೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಯಿತು. ಕೃಷಿ ಚಟುವಟಿಕೆಗಳು ಭರದಿಂದ ನಡೆಯಬೇಕಿದ್ದ ಭೂಮಿಯಲ್ಲಿ ರೈತರು ನೆರೆಯಲ್ಲಿ ಜೀವ ಉಳಿಸಿಕೊಳ್ಳಲು ಪರದಾಡಿದರು. ಬಾಗಿಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ಪ್ರವಾಹಕ್ಕೆ 25 ಸೇತುವೆಗಳು ಮುಳುಗಡೆಯಾದವು. ನದಿ ಪಾತ್ರದ ಹಳ್ಳಿಗಳಲ್ಲಿ ನೀರು ನುಗ್ಗಿ 10 ಸಾವಿರ ಹೆಕ್ಟೇರ್‌ಗೂ ಅಧಿಕ ಕೃಷಿಭೂಮಿಗೆ ಹಾನಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ 9 ಸೇತುವೆಗಳು ಮುಳುಗಿದ್ದು, 700 ಹೆಕ್ಟೇರ್ ಕೃಷಿಭೂಮಿ ಹಾನಿಗೊಂಡಿದೆ. ಯಾದಗಿರಿ ಜಿಲ್ಲೆಯಲ್ಲಿ 2500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ. ಗದಗ ಜಿಲ್ಲೆಯಲ್ಲಿ 6 ಗ್ರಾಮಗಳೇ ಮಳೆಯ ಅಬ್ಬರಕ್ಕೆ ಮುಳುಗಿ ಹೋಗಿವೆ. 410 ಕ್ಕೂ ಹೆಚ್ಚು ಮನೆಗಳು ಧರಾಶಾಯಿಯಾಗಿವೆ. ಅಲ್ಲಿ 16 ಗ್ರಾಮಗಳ 51 ಸಾವಿರ ಜನರನ್ನು ವಿವಿಧ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಧಾರವಾಡದಲ್ಲಿ 1300 ಮನೆಗಳಿಗೆ ಹಾನಿ. ಹಾವೇರಿ ಜಿಲ್ಲೆಯಲ್ಲಿ 9 ಸೇತುವೆಗಳು ಮುಳುಗಿದ್ದು 907 ಮನೆಗಳಿಗೆ ಹಾನಿ. 2642 ಮಂದಿ ಪುನರ್ವಸತಿ ಕೇಂದ್ರದಲ್ಲಿ. ಉತ್ತರ ಕನ್ನಡ ಜಿಲ್ಲೆಯಲ್ಲಂತೂ 105 ಗ್ರಾಮಗಳೇ ಮಳೆಯ ಹೊಡೆತಕ್ಕೆ ಮುಳುಗಿಹೋಗಿವೆ. 24ಸೇತುವೆಗಳು ಜಲಾವೃತವಾಗಿದ್ದು 22 ರಸ್ತೆಗಳೇ ಕೊಚ್ಚಿ ಹೋಗಿವೆ. ಇತ್ತ ಚಿಕ್ಕಮಗಳೂರು, ಉಡುಪಿ, ಕೊಡಗು ಜಿಲ್ಲೆಗಳಲ್ಲೂ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಹೆಚ್ಚು ಕಡಿಮೆ ರಾಜ್ಯದ 18 ಜಿಲ್ಲೆಗಳಲ್ಲಿ ಜಡಿಮಳೆಯಿಂದಾಗಿ ಆಗಿರುವ ಹಾನಿ ಅಪಾರ.
ಮಳೆಗಾಲದಲ್ಲಿ ಮಳೆಯ ಭೀಕರತೆಯಿಂದಾಗಿ ಒಂದಿಷ್ಟು ಹಾನಿಯಾಗುವುದು ಸಹಜವಾಗಿದ್ದರೂ ಈ ಪ್ರಮಾಣದ ಹಾನಿ ಸಂಭವಿಸಿದ್ದು ಬಹುಶಃ ಇದೇ ಮೊದಲು. ಮಳೆಗಾಲದಲ್ಲಿ ಸಂಭವಿಸಬಹುದಾದ ಅನಿರೀಕ್ಷಿತ ಹಾನಿ, ಆಸ್ತಿಪಾಸ್ತಿ ನಷ್ಟಗಳ ಪ್ರಮಾಣ ಹೆಚ್ಚಾಗದಂತೆ ಮುಂಜಾಗರೂಕತೆ ವಹಿಸಿ, ಅದಕ್ಕೆ ತಕ್ಕ ಎಲ್ಲ ಬಗೆಯ ಕ್ರಮಗಳನ್ನು ಕೈಗೊಳ್ಳಬೇಕಾದದ್ದು ಆಯಾ ಜಿಲ್ಲಾಡಳಿತಗಳ ಆದ್ಯ ಕರ್ತವ್ಯ. ಜಿಲ್ಲಾಡಳಿತಗಳು ಸೂಕ್ತ ಕಾಲಕ್ಕೆ ಕ್ರಮ ಕೈಗೊಳ್ಳುವಂತೆ ಎಚ್ಚರಿಸಿ, ಕಾರ್ಯೋನ್ಮುಖರಾಗುವಂತೆ ಮಾಡಬೇಕಾದ ಗುರುತರ ಹೊಣೆ ಆಯಾ ಜಿಲ್ಲೆಗೆ ಸಂಬಂಧಿಸಿದ ಶಾಸಕರು, ಸಂಸದರು ಹಾಗೂ ಇತರೆ ಜನಪ್ರತಿನಿಧಿಗಳ ಕರ್ತವ್ಯ. ಆದರೆ ಈ ಬಾರಿ ಇಡೀ ರಾಜ್ಯದ ಜನತೆ ಪ್ರವಾಹ, ಮಳೆ ಪರಿಸ್ಥಿತಿಯಿಂದ ಪತರಗುಟ್ಟಿ ಜೀವ ಕೈಯಲ್ಲಿ ಹಿಡಿದು ನೆರವಿಗಾಗಿ ಮೊರೆಯಿಡುತ್ತಿರುವಾಗ ನಮ್ಮ ಹೆಚ್ಚಿನ ಜನಪ್ರತಿನಿಧಿಗಳು ಮಾಡಿದ್ದೇನು?
ಕೆಲವರು ತಾವು ನೂತನ ಸರ್ಕಾರದಲ್ಲಿ ಮಂತ್ರಿಯಾಗುತ್ತೇನೋ ಇಲ್ಲವೋ ಎಂಬ ಚಿಂತೆ ಹಚ್ಚಿಕೊಂಡು ಎಲ್ಲೆಲ್ಲೋ ಅಡ್ಡಾಡುತ್ತಿದ್ದರು. ಕೆಲವು ಸಂಸದರಿಗೆ ತಮ್ಮ ಕ್ಷೇತ್ರದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿ ಜನರು ಕಂಗಾಲಾಗಿದ್ದಾರೆಂಬ ಸುದ್ದಿ ಖಚಿತವಾಗಿ ತಿಳಿದಿದ್ದರೂ ದೆಹಲಿಯಲ್ಲಿ ಅಧಿವೇಶನ, ಆ ಸಭೆ, ಈ ಕಾರ್‍ಯಕ್ರಮ ಎನ್ನುತ್ತಾ ಕ್ಷೇತ್ರಕ್ಕೆ ತಕ್ಷಣ ಧಾವಿಸಿ ಬರಲೇ ಇಲ್ಲ. ನೊಂದ ಜನರ ಕಣ್ಣೀರು ಒರೆಸಲು ಮುಂದಾಗಲೇ ಇಲ್ಲ. ಇನ್ನೂ ಕೆಲವು ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರದಲ್ಲೇ ಇದ್ದರೂ ಮಳೆ, ಪ್ರವಾಹ, ಪರಿಹಾರ ಕೇಂದ್ರಗಳನ್ನು ನಿಭಾಯಿಸಬೇಕಾದವರು ಸರ್ಕಾರಿ ಅಧಿಕಾರಿಗಳು, ತಮಗೇನು ಅಲ್ಲಿ ಕೆಲಸ ಎಂಬ ನಿರ್ಭಾವುಕತೆಯಿಂದ ಕಾಲಹರಣ ಮಾಡಿದರು. ಚುನಾವಣೆ ಬಂದಾಗ ಹಳ್ಳಿ ಹಳ್ಳಿಗಳನ್ನೂ ಬಿಡದೆ ಬಿರುಬಿಸಿಲಿನಲ್ಲಿ ಸುತ್ತಿ ಜನರ ಪಾದಗಳೆರಗಿ ಅಣ್ಣಾ, ಅಪ್ಪ, ಅಮ್ಮಾ, ಅಕ್ಕ ಎಂದು ಅಂಗಲಾಚಿ ಓಟು ಕೇಳುವ ಜನಪ್ರತಿನಿಧಿಗಳಿಗೆ ಅದು ಜನರು ತೀವ್ರ ಸಂಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸಬೇಕೆಂದು ಅನಿಸದಿರುವುದು ದುರಂತ ವ್ಯಂಗ್ಯವೇ ಸರಿ!
ತಮ್ಮ ಸರ್ಕಾರ ಈಗ ರಾಜ್ಯದಲ್ಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್-ಜೆಡಿಎಸ್ ಸಂಕಷ್ಟಗಳಿಗೆ ಸ್ಪಂದಿಸುವ ಗೋಜಿಗೇ ಹೋಗಲಿಲ್ಲ. “ರೋಂ ನಗರ ಉರಿತಾ ಇರೋವಾಗ ನೀರೋ ದೊರೆ ಪಿಟೀಲು ಬಾರಿಸುತ್ತಿದ್ದನಂತೆ. ಅದೇ ರೀತಿ ಬಿಜೆಪಿಯ ಮುಖ್ಯಮಂತ್ರಿ ಯಡಿಯೂರಪ್ಪ ಮಂತ್ರಿಗಳಾಗುವವರ ಪಟ್ಟಿ ಹಿಡಿದುಕೊಂಡು ದೆಹಲಿಯಲ್ಲಿ ಕಾಲಹರಣ ಮಾಡ್ತಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆ ನೀಡಿ ತಮ್ಮ ಬಾಯಿಚಪಲ ತೀರಿಸಿಕೊಂಡರು. ಮಂತ್ರಿಗಳ ಪಟ್ಟಿ ಹಿಡಿದು ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ಹೋಗಿದ್ದು ಹೌದು. ಆದರೆ ಅವರು ದೆಹಲಿಗೆ ಹೊರಟಾಗ ಮಳೆ, ಪ್ರವಾಹ ಪ್ರಕೋಪಕ್ಕೆ ಹೋಗಿರಲಿಲ್ಲ. ಪರಿಸ್ಥಿತಿ ವಿಷಮಿಸಿದೆ ಎಂದು ಗೊತ್ತಾದ ತಕ್ಷಣ ಅವರು ದೆಹಲಿಯಿಂದ ವಾಪಸಾಗಿ, ಪ್ರವಾಹ ಸಂತ್ರಸ್ತರ ಭೇಟಿಗೆ ಧಾವಿಸಿದರು. ಮೂರ್‍ನಾಲ್ಕು ದಿನಗಳ ಕಾಲ ಕಾಲಿಗೆ ಚಕ್ರ ಕಟ್ಟಿ ಕೊಂಡವರಂತೆ ಉತ್ತರ ಕರ್ನಾಟಕದ ಪ್ರವಾಹಪೀಡಿತ ಜಿಲ್ಲೆಗಳ ಮೂಲೆಮೂಲೆಗೆ ತಿರುಗಾಡಿದರು. ಮುಖ್ಯಮಂತ್ರಿಯಾಗಿ ಏನೆಲ್ಲ ಮಾಡಬೇಕೋ ಅದಕ್ಕಿಂತ ಹೆಚ್ಚಿನದನ್ನೇ ಮಾಡಿದರು.
ಆದರೆ ಜೆಡಿಎಸ್ ನಾಯಕರಾಗಲೀ, ಕಾಂಗ್ರೆಸ್ ನಾಯಕರಾಗಲೀ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಕಣ್ಣೀರು ಒರೆಸಿದ ನಿದರ್ಶನ ಎಲ್ಲೂ ವರದಿಯಾಗಲಿಲ್ಲ. ಕುಮಾರಸ್ವಾಮಿ, ದೇವೇಗೌಡರು, ಡಿಕೆಶಿ, ಡಾ. ಪರಮೇಶ್ವರ, ರೇವಣ್ಣ, ದಿನೇಶ್ ಗುಂಡೂರಾವ್ ಮೊದಲಾದ ಅಖಂಡ ಮುಖಂಡರು ಬೆಂಗಳೂರಿನಲ್ಲೇ ಹಾಯಾಗಿದ್ದರೇ ಹೊರತು ಉತ್ತರ ಕರ್ನಾಟಕದತ್ತ ಮುಖ ಮಾಡಲೇ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಶಾಸಕರು. ಆದರೆ ಅವರು ಅತ್ತ ಸುಳಿಯದೆ, ನೆರೆಬಂದ ಸಂದರ್ಭದಲ್ಲೇ ತಮ್ಮ ಕಣ್ಣಿನ ಪೊರೆ ಚಿಕಿತ್ಸೆಯಲ್ಲಿ ವ್ಯಸ್ತರಾಗಿದ್ದರು.
ರಾಜ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರಕಾರ ಈಗಿಲ್ಲ ನಿಜ. ಆ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು ಈಗ ಮಾಜಿಗಳಾಗಿರುವುದೂ ನಿಜ. ಆದರೆ ಅವರೆಲ್ಲ ಈಗಲೂ ಶಾಸಕರಾಗಿದ್ದಾರೆ. ಶಾಸಕರಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜನಸೇವೆ ಮಾಡಲು ಅವರಿಗೆ ಅಧಿಕಾರ ಇದ್ದೇ ಇದೆ. ಅದಕ್ಕೆ ಯಾರದ್ದೇ ಅಡ್ಡಿ ಇರಲಿಲ್ಲ. ಅಷ್ಟಕ್ಕೂ ಜನಸೇವೆ ಮಾಡಲು ತಮ್ಮ ಸರ್ಕಾರವೇ ಅಸ್ತಿತ್ವದಲ್ಲಿರಬೇಕೆಂಬ ನಿಯಮವೇನೂ ಇಲ್ಲವಲ್ಲ. ಜನರ ಕಣ್ಣೀರೊರೆಸಲು, ಸಕಾಲಿಕ ನೆರವು ನೀಡಲು ಶಾಸಕರೇ ಆಗಿರಬೇಕೆಂದೇನೂ ಇಲ್ಲ. ಜನ ಸೇವೆ ಮಾಡಬೇಕೆಂಬ ಪ್ರಾಮಾಣಿಕ ಕಾಳಜಿ, ನಿಷ್ಠೆ ಇದ್ದರೆ ಸಾಕು. ಆದರೆ ಅದು ಮಾತ್ರ ಬಹುತೇಕ ಜನಪ್ರತಿನಿಧಿಗಳಿಗೇ ಇರಲೇ ಇಲ್ಲ ಎನ್ನುವುದು ಈಗ ಸಾಬೀತಾಗಿದೆ.
ಅಧಿಕಾರವಿಲ್ಲ, ಅಧಿಕಾರಕ್ಕೇರುವ ಹಂಬಲವಿಲ್ಲ. ಹಾಗಿದ್ದರೂ ನೆರೆಪೀಡಿತ ಸಂತ್ರಸ್ತರ ನೆರವಿಗೆ ತಕ್ಷಣ ಧಾವಿಸಿದವರೆಂದರೆ ಆರೆಸ್ಸೆಸ್‌ನ ಸ್ವಯಂಸೇವಕರು. ನೆರೆ, ಪ್ರವಾಹ ಬಂತೆಂಬ ಸುದ್ದಿ ಗೊತ್ತಾದೊಡನೆ ಸಂತ್ರಸ್ತರ ಪರಿಹಾರ ಸಮಿತಿ ರಚಿಸಿ, ತಂಡೋಪತಂಡವಾಗಿ ಪರಿಹಾರ ಕೇಂದ್ರಕ್ಕೆ ತೆರಳಿ ಸಂತ್ರಸ್ತರನ್ನು ಸಂತೈಸಿದ ಮೊದಲಿಗರು ಆರೆಸ್ಸೆಸ್‌ನವರು. ಸರ್ಕಾರದ ಸೂಚನೆಗಾಗಿ ಅವರು ಕಾದು ಕುಳಿತುಕೊಳ್ಳಲಿಲ್ಲ. ಸ್ವಂತದ ಸಾಕಷ್ಟು ಕೆಲಸಗಳಿದ್ದರೂ ಅದನ್ನೆಲ್ಲ ಬದಿಗೆ ಸರಿಸಿ ಸಂತ್ರಸ್ತರ ನೆರವಿಗೆ ಧಾವಿಸಿದರು. ಅವರೇಕೆ ಮಾಡಲಿಲ್ಲ, ಇವರೇಕೆ ಅಲ್ಲಿಗೆ ಹೋಗಲಿಲ್ಲ, ಅವರಿಗೇನಾಗಿತ್ತು ಧಾಡಿ ಎಂಬ ಕೆಲಸಕ್ಕೆ ಬಾರದ ಕಾಡುಹರಟೆಯಲ್ಲಿ ಕರಗಿಹೋಗದೆ ಕರ್ತವ್ಯನಿರತರಾದ ಪರಿ ನಿಜಕ್ಕೂ ಅನುಕರಣೀಯ.
ಒಬ್ಬರು ಆಪತ್ತಿನಲ್ಲಿದ್ದಾಗ ಅಂಥವರ ನೆರವಿಗೆ ತಕ್ಷಣ ಧಾವಿಸಬೇಕಾಗಿದ್ದುದು ಮನುಷ್ಯ ಸಹಜ ಸ್ವಭಾವ. ಭಾರತೀಯರಲ್ಲಂತೂ ಈ ಗುಣಸ್ವಭಾವ ಸಹಜವಾಗಿಯೇ ಇದೆ ಎಂದು ಪ್ರತೀತಿ. ಮನುಷ್ಯರ ಸಂಕಷ್ಟಗಳಿಗೆ ಮನುಷ್ಯರೇ ಸ್ಪಂದಿಸದಿದ್ದರೆ ಮನುಷ್ಯನಾಗಿ ಇರುವುದೇ ಅವಮಾನ. ಹಾಗಿರುವಾಗ ನಮ್ಮ ಹಲವು ಜನಪ್ರತಿನಿಧಿಗಳು ನೆರೆ, ಪ್ರವಾಹ ಸಂದರ್ಭದಲ್ಲಿ ಕರ್ತವ್ಯವಿಮುಖರಾಗಿದ್ದು ಅತ್ಯಂತ ಅಕ್ಷಮ್ಯ.
76ರ ಇಳಿಯವಸ್ಸಿನಲ್ಲಿ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು, ಜನರಿಗೆ ಸಾಂತ್ವನ ಹೇಳಬಹುದಾದರೆ, ಅವರಿಗಿಂತಲು ಕಡಿಮೆ ವಯಸ್ಸಿನ ಶಾಸಕರು, ಸಂಸದರು, ಇನ್ನಿತರ ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಕ್ಕೆ ಧಾವಿಸಿ, ನೆರೆ ಪರಿಹಾರ ಕಾರ್ಯದಲ್ಲಿ ಕೈಜೋಡಿಸದಿರುವುದು ಘೋರ ಅಪರಾಧವಲ್ಲದೆ ಮತ್ತೇನು? ನಮ್ಮ ಹಲವು ಜನಪ್ರತಿನಿಧಿಗಳು ಅತ್ಯುತ್ತಮ ವಾಗ್ಮಿಗಳು, ಸಂಸದೀಯ ಪಟುಗಳು ಮೈಕ್ ಹಿಡಿದು ನಿಂತರೆ ಗಂಟೆಗಟ್ಟಲೆ ಮಾತಾಡಬಲ್ಲ, ಜನರನ್ನು ರಂಜಿಸಬಲ್ಲ ತಾಕತ್ತುಳ್ಳವರು, ಪ್ರತಿಬಾರಿ ಚುನಾವಣೆಯಲ್ಲಿ ತಾವೇ ಆರಿಸಿಬರುವಂತೆ ಮೋಡಿ ಮಾಡಬಲ್ಲವರು. ಆದರೇನು? ಕ್ಷೇತ್ರದ ಜನರು, ಮತದಾರ ಪ್ರಭುಗಳು ಸಂಕಷ್ಟಕ್ಕೆ ಸಿಲುಕಿ, ಕಣ್ಣೀರಿನಲ್ಲಿ ಕೈತೊಳೆಯುತ್ತಿರುವಾಗ ಅವರ ನೆರವಿಗೆ ಧಾವಿಸದಿದ್ದರೆ ಇದ್ದೂ ಸತ್ತಂತೆ. ಅಂತಹ ಜನಪ್ರತಿನಿಧಿಗಳಿಗೆ ಎಲ್ಲರದೂ ಧಿಕ್ಕಾರವಿರಲಿ.
‘ನಗುವಾಗ ಎಲ್ಲ ನೆಂಟರು. ಅಳುವಾಗ ಯಾರೂ ಇಲ್ಲ’ ಎಂಬ ಜನಪ್ರಿಯ ಕನ್ನಡ ಚಿತ್ರಗೀತೆಯೊಂದಿದೆ. ಸಂಭ್ರಮದ ಸಮಯದಲ್ಲಿ ಆ ಸಂಭ್ರಮದ ಪಾಲುದಾರರಾಗಲು ಎಲ್ಲರೂ ಹಪಹಪಿಸುತ್ತಾರೆ. ಆದರೆ ದುಃಖ ಸಂಕಟ ಬಂದೆರಗಿದಾಗ ದುಃಖಿತರ ಪಾಲುದಾರರಾಗಲು ಬಹುತೇಕ ಮಂದಿ ಇಷ್ಟಪಡುವುದಿಲ್ಲ. ‘ಅವರ ಹಣೆಬರಹ. ನಾವೇನು ಮಾಡೋಕಾಗುತ್ತೆ’ ಎನ್ನುವ ಜಾಣರೇ ಅಧಿಕ! ಸಮಾಜ, ದೇಶ ಸಂಕಷ್ಟಕ್ಕೀಡಾಗುವಾಗ ಇಂತಹ ನಿದರ್ಶನಗಳು ಸಿಗುತ್ತಲೇ ಇರುತ್ತವೆ. ಸಂಕಷ್ಟಕ್ಕೀಡಾದವರ ನೆರವಿಗೆ ಧಾವಿಸುವವರ ಸಂಖ್ಯೆ ಯಾವಾಗಲೂ ಕಡಿಮೆಯೇ. ಮಾನವೀಯತೆ, ಮಾನವ ಹಕ್ಕು ಇತ್ಯಾದಿಗಳ ಬಗ್ಗೆ ಒಂದೇ ಭಾಷಣ ಕುಟ್ಟುವವರು ಕನಿಷ್ಠ ಪಕ್ಷ ಮನುಷ್ಯರ ವರ್ತನೆ ತೋರಬೇಕಾದ ಅಗತ್ಯವಿದೆ.
✍ ದು.ಗು. ಲಕ್ಷ್ಮಣ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.