ಭಾರತದಲ್ಲಿ ಜನಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಆದರೂ ಅರಿವು, ಜಾಗೃತಿಗಳ ಕಾರಣಗಳಿಂದಾಗಿ ಒಟ್ಟು ಜನಸಂಖ್ಯೆಯ ಕೆಲವೇ ಪಾಲು ಜನರು ಈ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ನಾಗರಿಕರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಹೊಡೆದೋಡಿಸುವ ಉದ್ದೇಶದಿಂದ ಭಾರತವು ದೇಶದ ಬಡ ವರ್ಗಕ್ಕೆ ಕಲ್ಯಾಣ ಹಲವು ಯೋಜನೆಗಳನ್ನು ರೂಪಿಸುತ್ತದೆ. ಆದರೂ, ಜನಸಾಮಾನ್ಯರಿಗೆ ಅದರ ಬಗ್ಗೆ ಮಾಹಿತಿ ಸಿಗುತ್ತಿಲ್ಲ, ಅವುಗಳನ್ನು ಬಳಸಿಕೊಳ್ಳುವ ಬಗ್ಗೆ ಅರಿವೂ ಮೂಡಿಸುವ ಕಾರ್ಯಗಳೂ ನಡೆಯುತ್ತಿಲ್ಲ. ಆದರೆ ಪ್ರಜ್ಞಾವಂತ ನಾಗರಿಕರಾದವರು ಕಲ್ಯಾಣ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕಾಗಿದೆ.
ಸರ್ಕಾರದ ವತಿಯಿಂದ ಜನರಿಗಾಗಿ ರೂಪಿಸಲಾದ ಐದು ಪ್ರಮುಖ ಕಲ್ಯಾಣ ಯೋಜನೆಗಳ ಮಾಹಿತಿ ಇಲ್ಲಿದೆ.
1) ಪ್ರಧಾನ ಮಂತ್ರಿ ಜನ್ ಧನ್ ಯೋಜನಾ
ಭಾರತದ ಎಲ್ಲಾ ಕುಟುಂಬಗಳನ್ನು ಆರ್ಥಿಕವಾಗಿ ಒಗ್ಗೂಡಿಸಲು ಕೇಂದ್ರ ಸರ್ಕಾರ ಈ ರಾಷ್ಟ್ರೀಯ ಅಭಿಯಾನವನ್ನು ಆಗಸ್ಟ್ 28, 2014 ರಂದು ಆರಂಭಿಸಿತು. ಇದರಿಂದ ಆರ್ಥಿಕ ಸೇವೆಗಳಾದ ಬ್ಯಾಂಕಿಂಗ್/ಉಳಿತಾಯ ಮತ್ತು ಹಣವನ್ನು ಠೇವಣಿಯಿಡುವುದು, ಹಣದ ರವಾನೆ, ಜಮೆ ಮಾಡುವುದು, ವಿಮೆ, ಪಿಂಚಣಿ ಮೊದಲಾದವುಗಳನ್ನು ಕೈಗೆಟುಕುವ ದರದಲ್ಲಿ ಪಡೆದುಕೊಳ್ಳಬಹುದು.
ಸರ್ಕಾರದ ಪ್ರಕಾರ, ತೆರೆಯಲಾದ ಒಟ್ಟು ಖಾತೆಗಳಲ್ಲಿ, ಶೇ. 60 ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಶೇ. 40 ರಷ್ಟು ನಗರ ಪ್ರದೇಶಗಳಲ್ಲಿವೆ. ಮಹಿಳಾ ಖಾತೆದಾರರ ಪಾಲು ಶೇ. 51 ರಷ್ಟಿದೆ.
ಪ್ರಮುಖ ಅಂಶಗಳು:
🔹 ಕನಿಷ್ಠ ಠೇವಣಿಗೆ ಯಾವುದೇ ಮಾನದಂಡಗಳಿಲ್ಲ
🔹 ಓವರ್ಡ್ರಾಫ್ಟ್ ರೂ.10,000 ಪ್ರತಿ ಮನೆಯ ಒಂದು ಖಾತೆಗೆ ಲಭ್ಯವಿದೆ, ಪ್ರಮುಖವಾಗಿ ಮನೆಯ ಮಹಿಳೆಗೆ.
🔹 ಖಾತೆ ತೆರೆಯುವಾಗ ವಾರ್ಷಿಕ ಬಡ್ಡಿದರ ಶೇ.4
🔹 ಆಕಸ್ಮಿಕ ವಿಮಾ ರಕ್ಷಣೆ 1 ಲಕ್ಷ ರೂ
🔹 ಜೀವ ವಿಮಾ ರಕ್ಷಣೆ ರೂ. 30,000
ಅರ್ಹತಾ ಮಾನದಂಡಗಳು: ಸಮಾಜದ ದುರ್ಬಲ ವರ್ಗದ ಯಾರಾದರೂ ಖಾತೆ ತೆರೆಯಬಹುದು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ವಯಸ್ಕರು ಖಾತೆಯನ್ನು ನಿರ್ವಹಿಸಲು ಪೋಷಕರ ಲಭ್ಯತೆಯಿದ್ದರೆ ಯೋಜನೆಗೆ ಸೇರಿಕೊಳ್ಳಬಹುದು.
ಎಲ್ಲಿ ಅರ್ಜಿ ಸಲ್ಲಿಸಬೇಕು: ಯಾವುದೇ ಬ್ಯಾಂಕ್ ಶಾಖೆಯಲ್ಲಿ ಅಥವಾ ಬಿಸಿನೆಸ್ ಕರೆಸ್ಪಾಂಡೆಂಟ್ (ಬ್ಯಾಂಕ್ ಮಿತ್ರ) ಔಟ್ಲೆಟ್ನಲ್ಲಿ ಖಾತೆಯನ್ನು ತೆರೆಯಬಹುದು.
2) ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ
ಇದು ಭಾರತದ ಸರ್ಕಾರಿ ಪ್ರಾಯೋಜಿತ ಜೀವ ವಿಮಾ ಯೋಜನೆಯಾಗಿದ್ದು, , 2015ರ ಮೇ 9 ರಂದು ಕೇಂದ್ರ ಸರ್ಕಾರ ಬಹಳಷ್ಟು ಮಹತ್ವಾಕಾಂಕ್ಷೆಯೊಂದಿಗೆ ಇದನ್ನು ಆರಂಭಿಸಿದೆ. ಇದರ ಮುಖ್ಯ ಉದ್ದೇಶ ಎಲ್ಲಾ ಭಾರತೀಯ ನಾಗರೀಕರಿಗೆ ಜೀವವಿಮೆ ಒದಗಿಸುವುದು. ವಾರ್ಷಿಕವಾಗಿ 330 ರೂಪಾಯಿಯನ್ನು ಪಾವತಿಸಿದರೆ, ರೂ.2 ಲಕ್ಷದವರೆಗಿನ ಜೀವವಿಮೆ ಇದರಿಂದ ಸಿಗುತ್ತದೆ.
ಪ್ರಮುಖ ಅಂಶಗಳು
🔹 ಕಾಲಕಾಲಕ್ಕೆ ಬದಲಾವಣೆಗೆ ಒಳಪಡುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಪ್ರಯೋಜನಗಳು ಮತ್ತು ವಿನಾಯಿತಿಗಳು ಇದರಲ್ಲಿ ಲಭ್ಯವಿರುತ್ತವೆ.
🔹 ಯಾವುದೇ ಹಂತದಲ್ಲಿ ಒಬ್ಬರು ಯೋಜನೆಯಿಂದ ನಿರ್ಗಮಿಸಲು ಬಯಸಿದರೆ, ನಿಗದಿತ ಪ್ರೊಫಾರ್ಮಾದಲ್ಲಿ ಉತ್ತಮ ಆರೋಗ್ಯದ ಘೋಷಣೆಯನ್ನು ಸಲ್ಲಿಸುವ ಮೂಲಕ ಅವಳು / ಅವನು ಭವಿಷ್ಯದಲ್ಲಿ ಯೋಜನೆಗೆ ಮತ್ತೆ ಸೇರಬಹುದು.
🔹 ಈ ಯೋಜನೆಯಡಿಯಲ್ಲಿ ಯಾವುದೇ ಮೆಚ್ಯೂರಿಟಿ ಅಥವಾ ಸರೆಂಡರ್ ಪ್ರಯೋಜನವಿಲ್ಲ.
🔹 ಅವಳು / ಅವನು 55 ನೇ ವಯಸ್ಸನ್ನು ತಲುಪಿದ ನಂತರ ಖಾತೆದಾರರ ವಿಮೆಯನ್ನು ಕೊನೆಗೊಳಿಸಲಾಗುತ್ತದೆ
🔹 ಪ್ರೀಮಿಯಂ ಡೆಬಿಟ್ ಮಾಡಲು ಠೇವಣಿ ಕೊರತೆಯಿದ್ದ ಸಂದರ್ಭದಲ್ಲಿ ಅಥವಾ ಬ್ಯಾಂಕ್ ಸ್ಥಗಿತಗೊಂಡ ಸಂದರ್ಭದಲ್ಲಿ ಖಾತೆಯನ್ನು ಮುಚ್ಚಬಹುದು.
ಅರ್ಹತಾ ಮಾನದಂಡಗಳು: ಉಳಿತಾಯ ಖಾತೆಯನ್ನು ಹೊಂದಿರುವ 18-50 ವರ್ಷದೊಳಗಿನ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಎಲ್ಲಿ ಅರ್ಜಿ ಸಲ್ಲಿಸಬೇಕು: ಫಾರ್ಮ್ ಅನ್ನು ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಬಹುದು ಮತ್ತು ಅದನ್ನು ನಿಮ್ಮ ಬ್ಯಾಂಕ್ಗೆ ಸಲ್ಲಿಸಬಹುದು. ಕೆಲವು ಬ್ಯಾಂಕುಗಳು ಎಸ್ಎಂಎಸ್ ಮತ್ತು ನೆಟ್ ಬ್ಯಾಂಕಿಂಗ್ ಆಧಾರಿತ ದಾಖಲಾತಿಯನ್ನು ಸಹ ನೀಡುತ್ತವೆ.
3) ಸುಕನ್ಯಾ ಸಮೃದ್ಧಿ ಯೋಜನೆ
ಬೇಟಿ ಬಚಾವೊ ಬೇಟಿ ಪಡಾವೂ ಯೋಜನೆಯ ಭಾಗವಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಹೆಣ್ಣು ಮಗುವಿನ ಶಿಕ್ಷಣ ಮತ್ತು ಮದುವೆ ಸಂಬಂಧಿತ ವೆಚ್ಚಗಳನ್ನು ಪೂರೈಸುವ ಗುರಿಯನ್ನು ಇದು ಹೊಂದಿದೆ.
ಪ್ರಮುಖ ಅಂಶಗಳು
🔹 1.5 ಲಕ್ಷ ರೂ.ಗಳವರೆಗೆ ತೆರಿಗೆ ಕಡಿತ ಸೌಲಭ್ಯಗಳು
🔹 ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 1,000 ರೂ ಮತ್ತು ಗರಿಷ್ಠ 1.5 ಲಕ್ಷ ರೂ.ಠೇವಣಿ ಮಾಡಬಹುದು
🔹 ಹೆತ್ತವರು ಅಥವಾ ಪೋಷಕರು ಖಾತೆ ತೆರೆಯುವ ದಿನಾಂಕದಿಂದ 15 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ನಂತರ ಖಾತೆಯು ಮುಕ್ತಾಯವಾಗುವವರೆಗೆ ಬಡ್ಡಿಯನ್ನು ಗಳಿಸುವುದು ಮುಂದುವರಿಯುತ್ತದೆ.
🔹 ಹುಡುಗಿ ಬಯಸಿದರೆ, ಉನ್ನತ ಶಿಕ್ಷಣದ ಉದ್ದೇಶಗಳಿಗಾಗಿ 18 ವರ್ಷ ವಯಸ್ಸನ್ನು ತಲುಪಿದ ನಂತರ ಅವಳು ಶೇಕಡಾ 50 ರಷ್ಟು ಮೊತ್ತವನ್ನು ಖಾತೆಯಿಂದ ತೆಗೆದುಹಾಕಬಹುದು.
ಅರ್ಹತಾ ಮಾನದಂಡಗಳು: ಖಾತೆ ತೆರೆಯುವ ಸಮಯದಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಮಾತ್ರ ಖಾತೆಯನ್ನು ತೆರೆಯಬಹುದಾಗಿದೆ. ಪ್ರತಿ ಕುಟುಂಬಕ್ಕೆ ಎರಡು ಖಾತೆಗಳನ್ನು ಮಾತ್ರ ಅನುಮತಿಸಲಾಗಿದೆ.
ಎಲ್ಲಿ ಅರ್ಜಿ ಸಲ್ಲಿಸಬೇಕು: ಅರ್ಜಿ ನಮೂನೆಯನ್ನು ಆನ್ ಲೈನಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಅದನ್ನು ಹತ್ತಿರದ ಅಂಚೆ ಕಚೇರಿ ಅಥವಾ ಸಾರ್ವಜನಿಕ / ಖಾಸಗಿ ಬ್ಯಾಂಕಿನಿಂದ ಪಡೆಯಬಹುದು.
4) ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ABPMJAY)
ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ ಎಂದು ಹೆಸರಿಸಲ್ಪಟ್ಟ ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ನಗರ ಮತ್ತು ಗ್ರಾಮೀಣ ಪ್ರದೇಶದ ಹತ್ತು ಕೋಟಿ ಬಡ ಕುಟುಂಬಗಳನ್ನು ಒಳಗೊಳ್ಳಲಿರುವ ಮಹತ್ವಪೂರ್ಣ ಯೋಜನೆ. ಇದು ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನು ಒದಗಿಸುತ್ತದೆ.
ಪ್ರಮುಖ ಅಂಶಗಳು
🔹 ಈ ಪ್ರಕ್ರಿಯೆಯು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕಾಗದರಹಿತ ಮತ್ತು ನಗದುರಹಿತವಾಗಿರುತ್ತದೆ
🔹 ಇದರಡಿ ಅಗತ್ಯವಿರುವ ಸಮಯದಲ್ಲಿ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ (ಸರ್ಕಾರದಿಂದ ಪಟ್ಟಿ ಮಾಡಲ್ಪಟ್ಟಲ್ಲಿ) ಉಚಿತ ಚಿಕಿತ್ಸೆ ಲಭ್ಯವಿದೆ.
🔹 ಯೋಜನೆಗೊಳಪಡಲು ಕುಟುಂಬ ಸದಸ್ಯರ ವಯಸ್ಸು ಮತ್ತು ಕುಟುಂಬದ ಗಾತ್ರಕ್ಕೆ ಯಾವುದೇ ಮಿತಿಯಿಲ್ಲ
🔹 ಯೋಜನೆ ಜಾರಿಗೆ ಬಂದ ಸಮಯದಿಂದ ಮೊದಲೇ ಅಸ್ತಿತ್ವದಲ್ಲಿರುವ ಎಲ್ಲಾ ಷರತ್ತುಗಳನ್ನು ಸ್ಕೀಮ್ ಒಳಗೊಂಡಿದೆ.
🔹 ಆಸ್ಪತ್ರೆಯ ಪೂರ್ವ ಮತ್ತು ನಂತರದ ವೆಚ್ಚಗಳನ್ನು ವಿಮೆ ಒಳಗೊಂಡಿದೆ.
ಅರ್ಹತಾ ಮಾನದಂಡಗಳು: ಯಾವುದೇ ಬೇಧವಿಲ್ಲದೆ ಎಲ್ಲಾ ಕಡಿಮೆ ಆದಾಯದ ಕುಟುಂಬಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
5) ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ (NSAP)
ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮವು ವೃದ್ಧರು, ಅಂಗವಿಕಲರು, ವಿಧವೆಯರು ಮತ್ತು ಕುಟುಂಬಗಳ ಕಲ್ಯಾಣಕ್ಕಾಗಿನ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಭಾರತೀಯ ಸಂವಿಧಾನದ 41 ನೇ ವಿಧಿಯ ಇರಾದೆಗಳನ್ನು ಪೂರೈಸುವ ಯೋಜನೆ ಇದಾಗಿದೆ. ಈ ವಿಧಿಯು ನಿರುದ್ಯೋಗಿಗಳು, ವೃದ್ಧರು, ಅನಾರೋಗ್ಯ ಮತ್ತು ಅಂಗವಿಕಲ ನಾಗರಿಕರನ್ನು ಬೆಂಬಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳುತ್ತದೆ.
ಇದು ಈ ಕೆಳಗಿನ ಉಪ-ಯೋಜನೆಗಳನ್ನು ಒಳಗೊಂಡಿದೆ:
🔹 ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ : ಮಾಸಿಕವಾಗಿ ಫಲಾನುಭವಿಗೆ 79 ವರ್ಷ ಆಗುವವರೆಗೆ 200 ರೂ. ಮತ್ತು ಫಲಾನುಭವಿಗೆ 80 ವರ್ಷ ತುಂಬಿದ ನಂತರ 500 ರೂ.ಸಿಗುತ್ತದೆ.
🔹 ಇಂದಿರಾ ಗಾಂಧಿ ರಾಷ್ಟ್ರೀಯ ವಿಧವೆ ಪಿಂಚಣಿ ಯೋಜನೆ: ವಿಧವೆ (40-49 ರ ವಯಸ್ಸಿನಲ್ಲಿದ್ದರೆ) ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 200 ರೂ.ಸಿಗುತ್ತದೆ.
🔹 ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವೈಕಲ್ಯ ಪಿಂಚಣಿ ಯೋಜನೆ: ಶೇ .80 ರಷ್ಟು ಅಂಗವೈಕಲ್ಯ ಹೊಂದಿರುವ ಬಿಪಿಎಲ್ ಕಾರ್ಡುದಾರ ವಯಸ್ಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 200 ರೂ.ಸಿಗುತ್ತದೆ
🔹 ಅನ್ನಪೂರ್ಣ ಯೋಜನೆ: ಫಲಾನುಭವಿಗೆ ಪ್ರತಿ ತಿಂಗಳು ಅಕ್ಕಿ ಮತ್ತು ಗೋಧಿಯಂತಹ 10 ಕಿಲೋ ಆಹಾರ ಧಾನ್ಯಗಳು ಸಿಗುತ್ತವೆ.
🔹 ರಾಷ್ಟ್ರೀಯ ಕುಟುಂಬ ಲಾಭ ಯೋಜನೆ: ಮನೆಯ ಅನ್ನದಾರ (18-64 ರ ನಡುವೆ ವಯಸ್ಸಿನವರು) ಸತ್ತರೆ ಬಿಪಿಎಲ್ ಕುಟುಂಬವು 20,000 ರೂ.ಪಡೆಯುತ್ತದೆ.
ಅರ್ಹತಾ ಮಾನದಂಡಗಳು: ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಜನರು ಈ ಯೋಜನೆಯನ್ನು ಪಡೆಯಬಹುದು. ಉಪ-ಯೋಜನೆಯನ್ನು ಅವಲಂಬಿಸಿ, ಮಾನದಂಡಗಳು ಬದಲಾಗುತ್ತವೆ.
ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಜನರು ಪಡೆಯಬಹುದು. ಈ ಯೋಜನೆಗಳ ಬಗ್ಗೆ ಒಬ್ಬರಿಗೆ ತಿಳಿಸುವ ಮೂಲಕ ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲಗೊಳಿಸುವ ಹೊಣೆ ಎಲ್ಲರ ಮೇಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.