ಇಸ್ಲಾಮಾಬಾದ್: ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿರುವ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಭಾರತದ ಕ್ರಮವನ್ನು ಪಾಕಿಸ್ಥಾನ ತೀವ್ರವಾಗಿ ವಿರೋಧಿಸಿದ್ದು, ಇಸ್ಲಾಮಾಬಾದಿನಲ್ಲಿ ಭಾರತೀಯ ಹೈಕಮಿಷನರ್ ಅನ್ನು ಉಚ್ಛಾಟನೆಗೊಳಿಸಿದೆ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಕಡಿತಗೊಳಿಸಿದೆ.
“ನಾವು ದೆಹಲಿಯಿಂದ ನಮ್ಮ ರಾಯಭಾರಿಯನ್ನೂ ವಾಪಸ್ ಕರೆಸಿಕೊಳ್ಳುತ್ತೇವೆ ಮತ್ತು ಭಾರತದ ರಾಯಭಾರಿಯನ್ನು ವಾಪಸ್ ಕಳುಹಿಸುತ್ತೇವೆ” ಎಂದು ಪಾಕಿಸ್ಥಾನದ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿ ಮಾಧ್ಯಮಗಳ ಮುಂದೆ ಘೋಷಣೆ ಮಾಡಿದ್ದಾರೆ. ಅಲ್ಲದೇ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು, ವ್ಯಾಪಾರವನ್ನು ಸ್ಥಗಿತಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ನಡೆಸಿದ ರಾಷ್ಟ್ರೀಯ ಭದ್ರತಾ ಸಮಿತಿಯ (ಎನ್ಎಸ್ಸಿ) ನಿರ್ಣಾಯಕ ಸಭೆಯ ನಂತರ ಈ ನಿರ್ಧಾರವನ್ನು ಆ ದೇಶ ತೆಗೆದುಕೊಂಡಿದೆ. ಈ ಸಭೆಯಲ್ಲಿ ಅಲ್ಲಿನ ಉನ್ನತ ನಾಗರಿಕ ಮತ್ತು ಮಿಲಿಟರಿ ನಾಯಕರು ಭಾಗವಹಿಸಿದ್ದರು ಎನ್ನಲಾಗಿದೆ. ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸಲು ಮತ್ತು “ದ್ವಿಪಕ್ಷೀಯ ವ್ಯವಸ್ಥೆಗಳನ್ನು” ಪರಿಶೀಲಿಸಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ. ನಾಗರಿಕ ಮತ್ತು ಮಿಲಿಟರಿ ಉನ್ನತ ನಾಯಕತ್ವವನ್ನು ಒಟ್ಟುಗೂಡಿಸಲು ಮತ್ತು ರಾಷ್ಟ್ರೀಯ ಭದ್ರತೆಯ ಪ್ರಮುಖ ವಿಷಯಗಳನ್ನು ಚರ್ಚಿಸಲು ಎನ್ಎಸ್ಸಿ ಪಾಕಿಸ್ಥಾನದ ಅತ್ಯುನ್ನತ ವೇದಿಕೆಯಾಗಿದೆ.
“ಇಂದು ರಾಷ್ಟ್ರೀಯ ಭದ್ರತಾ ಸಮಿತಿಯು ತೆಗೆದುಕೊಂಡ ನಿರ್ಧಾರಕ್ಕೆ ಅನುಗುಣವಾಗಿ, ಪಾಕಿಸ್ಥಾನದಲ್ಲಿನ ತನ್ನ ಹೈಕಮಿಷನರ್ ಅನ್ನು ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರಕ್ಕೆ ತಿಳಿಸಲಾಗಿದೆ” ಎಂದು ಎನ್ಎಸ್ಸಿ ಸಭೆಯ ನಂತರ ಬಿಡುಗಡೆಗೊಳಿಸಲಾದ ಪ್ರಕಟನೆಯಲ್ಲಿ ಅಲ್ಲಿನ ವಿದೇಶಾಂಗ ಕಚೇರಿಯ ತಿಳಿಸಿದೆ. “ಪಾಕಿಸ್ಥಾನ ತನ್ನ ಹೈಕಮಿಷನರ್ ಅನ್ನೂ ಭಾರತದಿಂದ ಹಿಂದಕ್ಕೆ ಕರೆಯಿಸಿಕೊಳ್ಳುತ್ತದೆ ಎಂದು ಭಾರತ ಸರ್ಕಾರಕ್ಕೂ ತಿಳಿಸಲಾಗಿದೆ” ಎಂದಿದೆ.
ಪಾಕಿಸ್ಥಾನದ ಈ ನಿರ್ಧಾರವನ್ನು ದೂರದೃಷ್ಟಿಯಿಲ್ಲದ ಮತ್ತು ಅರ್ಥಹೀನ ನಿರ್ಧಾರ ಎಂದು ಭಾರತೀಯ ನಾಯಕರುಗಳು ಬಣ್ಣಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.