ಚಂಡೀಗಢ: ಓಡಾಡಲು ಅನುಕೂಲವಾಗುವಂತೆ, ನಮ್ಮ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುವಂತೆ ನಮಗೊಂದು ಸೇತುವೆ ನಿರ್ಮಿಸಿಕೊಡಿ ಎಂದು ಆ ಹಳ್ಳಿಗಳ ಜನರು ಮುಖ್ಯಮಂತ್ರಿಗಳಿಂದ ಹಿಡಿದು ಸಂಸದರವರೆಗೆ ಎಲ್ಲರ ಬಳಿಯೂ ಅಂಗಲಾಚಿದರು, ಮನವಿಗಳನ್ನು ಸಲ್ಲಿಸಿದರು. ಆದರೆ ಅವರ ಸಹಾಯಕ್ಕೆ ಯಾವೊಬ್ಬ ರಾಜಕಾರಣಿಯೂ ಮುಂದಾಗಲಿಲ್ಲ. ಅವರತ್ತ ತಿರುಗಿಯೂ ನೋಡಲಿಲ್ಲ. ಇದರಿಂದ ಬೇಸತ್ತ ಹಳ್ಳಿಗರು ಕೊನೆಗೆ ತಾವೇ ಸೇತುವೆ ನಿರ್ಮಿಸುವ ಕಾರ್ಯಕ್ಕೆ ಕೈ ಹಾಕಿದರು.
ಆ ಹಳ್ಳಿಗರ ಪರಿಶ್ರಮದ ಫಲವಾಗಿ ಹರಿಯಾಣದ ಸೆಸಾರ್ ಜಿಲ್ಲೆಯಲ್ಲಿ ಒಂದು ಕೋಟಿ ವೆಚ್ಚದ ಸದೃಢ ಸೇತುವೆಯೊಂದು ಈಗ ತಲೆಯೆತ್ತಿ ನಿಂತಿದೆ. ಸುತ್ತಮುತ್ತಲ 7 ಹಳ್ಳಿಗರು ಒಗ್ಗಟ್ಟಾಗಿ ಸೇರಿ, ಹಣಸಂಗ್ರಹಿಸಿ ನಿರ್ಮಿಸಿದ 216 ಫೀಟ್ ಉದ್ದದ, 16 ಫೀಟ್ ಅಗಲದ ಸೇತುವೆ ಇದಾಗಿದ್ದು, ಪಂಜಾಬ್ ಮತ್ತು ಹರಿಯಾಣವನ್ನೂ ಈ ಸೇತುವೆ ಸಂಪರ್ಕಿಸುತ್ತದೆ.
ಸೇತುವೆ ಕಟ್ಟಿ ಕೊಡದ, ಕನಿಷ್ಠಪಕ್ಷ ಸೇತುವೆ ನಿರ್ಮಿಸುವ ವೇಳೆ ಸಹಾಯ ಹಸ್ತ ಚಾಚದ ರಾಜಕಾರಣಿಗಳಿಗೆ ಈ ಸೇತುವೆಯ ಮೂಲಕ ಓಡಾಡದಂತೆ ನಿಷೇಧ ಹೇರಲಾಗಿದೆ.
ಮಾಜಿ ಮುಖ್ಯಮಂತ್ರಿ ದೇವಿ ಲಾಲ್ರಿಂದ ಹಿಡಿದು ಈಗಿನ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ವರೆಗೆ ಎಲ್ಲಾ ಮಂತ್ರಿಗಳಿಗೂ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದೆವು. ಆದರೆ ಯಾರೊಬ್ಬರು ನಮ್ಮ ಸಹಾಯಕ್ಕೆ ಬರಲಿಲ್ಲ, ಹೀಗಾಗಿ 7 ಹಳ್ಳಿಯ ಜನರು ಒಂದಾಗಿ ಸೇತುವೆ ನಿರ್ಮಿಸಿದೆವು. ಮುದುಕರಿಂದ ಹಿಡಿದು ಯುವಕರವರೆಗೆ, ಮಕ್ಕಳಿಂದ ಹಿಡಿದು ವಿಧವೆಯರವರೆಗೆ ಎಲ್ಲರೂ ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ ಎಂದು ಗ್ರಾಮದ ಮುಖಂಡರು ಹೇಳಿಕೊಳ್ಳುತ್ತಾರೆ.
ಈ ಸೇತುವೆ ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ನಿರ್ಮಾಣಗೊಂಡಿದೆ. ಯಾವೊಬ್ಬ ರಾಜಕಾರಣಿಗೂ ಇಲ್ಲಿ ಪ್ರವೇಶವಿಲ್ಲ ಎನ್ನುವ ಗ್ರಾಮಸ್ಥರು, ಚುನಾವಣೆ ಬಹಿಷ್ಕರಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.