ನಮ್ಮ ದೇಶದಲ್ಲಿ ಗೋವು ಕಳ್ಳರ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ ದುರಾದೃಷ್ಟಕರವೆಂದರೆ, ರೈತರ, ಬಡವರ ಗೋವುಗಳನ್ನು ಕದ್ದುಕೊಂಡು ಹೋಗುವ ಕಳ್ಳರ ವಿರುದ್ಧ ಧ್ವನಿ ಎತ್ತುವವರನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ, ಗೋವು ಕಳ್ಳರನ್ನು ಹೀರೋಗಳಂತೆ ನೋಡಲಾಗುತ್ತಿದೆ. ಗೋವು ಕಳ್ಳರು ಸತ್ತರೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುವ ಮಾಧ್ಯಮಗಳು, ಗೋವು ಕಳ್ಳರಿಂದ ಸತ್ತವರ ಬಗ್ಗೆ ಒಂದು ಬಾರಿಯೂ ವರದಿ ಮಾಡುವುದಿಲ್ಲ.
10 ದಿನಗಳ ಹಿಂದೆಯಷ್ಟೇ ಹರಿಯಾಣದ ರೈತ ನರೇಶ್ ಅಪರಿಚಿತ ಗೋವು ಕಳ್ಳರಿಂದ ಕೊಲೆಯಾಗಿ ಹೋಗಿದ್ದಾರೆ. ದುಷ್ಕರ್ಮಿಗಳು ಇವರ ಮೂರು ಜಾನುವಾರುಗಳೊಂದಿಗೆ ಎಸ್ಕೇಪ್ ಆಗಿದ್ದಾರೆ. ಇದೇ ರಾಜ್ಯದಲ್ಲಿ ಮತ್ತೋರ್ವ ಗೋಪಾಲ್ ಎಂಬ ವ್ಯಕ್ತಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿರುವವರನ್ನು ತಡೆಯಲು ಹೋಗಿ ಜೀವ ಕಳೆದುಕೊಂಡಿದ್ದಾರೆ.
ನರೇಶ್ ಮತ್ತು ಗೋಪಾಲ್ ಗೋವು ಕಳ್ಳರಿಗೆ ಬಲಿಯಾದ ಹಲವಾರು ಮಂದಿಯಲ್ಲಿ ಇಬ್ಬರು ಅಷ್ಟೇ. ಬೀಫ್ ಮಾಫಿಯಾದ ಕೈಯಲ್ಲಿ ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ, ಮಾಧ್ಯಮ ವರದಿಯ ಪ್ರಕಾರ ಈ ಮಾಫಿಯಾಗೆ 20 ಮಂದಿ ಬಲಿಯಾಗಿದ್ದಾರೆ. ಕೆಲವರು ಗೋ ಕಳ್ಳತನಕ್ಕೆ ವಿರೋಧಿಸಿ ಕೊಲೆಯಾಗಿ ಹೋಗಿದ್ದರೆ, ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕಾಗಿ ಕೊಲೆಯಾಗಿದ್ದಾರೆ. ಕೆಲವರು ಅಕ್ರಮ ಜಾನುವಾರ ಸಾಗಾಟದ ವಾಹನಗಳ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಈ ಸಾವುಗಳ ಬಗ್ಗೆ ಯಾರೊಬ್ಬರೂ ಗಮನವನ್ನು ಹರಿಸುವುದಿಲ್ಲ. ಇವರು ಅಕ್ರಮ ಬೀಫ್ ಮಾರಾಟದ ಬಲಿಪಶುಗಳು.
1. ಜುಲೈ 2019: ದನ ಕಳ್ಳರಿಂದ ಗ್ರಾಮಸ್ಥನಿಗೆ ಗುಂಡು
ಹರಿಯಾಣದ ಪಾಲ್ವಾಲ್ ಜಿಲ್ಲೆಯಲ್ಲಿ ಜುಲೈ 29 ರಂದು ಗೋಪಾಲ್ ಎಂಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ವರದಿಗಳ ಪ್ರಕಾರ, ಕದ್ದ ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು ನಿಲ್ಲಿಸಲು ಗೋಪಾಲ್ ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಆತನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ರಾತ್ರಿ 7.30 ರ ಸುಮಾರಿಗೆ ಈ ಘಟನೆ ನಡೆದಿದೆ.
2. ಜುಲೈ 2019: ರೈತ ನರೇಶ್ ಸೈನಿ ಮಧ್ಯರಾತ್ರಿ ತನ್ನ ಜಮೀನಿನಲ್ಲಿ ಕೊಲ್ಲಲ್ಪಟ್ಟರು
ನರೇಶ್ ಸೈನಿ ಎಂಬ ರೈತನನ್ನು 2019ರ ಜುಲೈ 21ರಂದು ಬೆಳಿಗ್ಗೆ ಅವರ ಜಮೀನಿನಲ್ಲಿ ಹಿಡಿದು ಕೊಂದುಹಾಕಲಾಯಿತು. ಸೈನಿ ಅವರ ಎರಡು ಎಮ್ಮೆಗಳು ಮತ್ತು ಒಂದು ಕರುವನ್ನು ದನ ಕಳ್ಳರು ಎಗರಿಸಿದ್ದಾರೆ. ದನ ಎಗರಿಸಿದವರೇ ಅವರನ್ನು ಕೊಂದು ಹಾಕಿದ್ದಾರೆ ಎಂಬ ಬಲವಾದ ಶಂಕೆಯಿದೆ. ಹರಿಯಾಣದ ಹಿಸಾರ್ ಜಿಲ್ಲೆಯ ಬಾರ್ವಾಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಈ ಗ್ರಾಮದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಸಾಹು ಗ್ರಾಮದಲ್ಲಿ ಇಂದರ್ಪಾಲ್ ಬಿಷ್ಣೋಯ್ ಎಂಬ ಮತ್ತೊಬ್ಬ ರೈತನನ್ನು ಒಂದು ವರ್ಷದ ಹಿಂದೆ ದನ ಕಳ್ಳರು ಗುಂಡಿಕ್ಕಿ ಕೊಂದಿದ್ದರು. ಫರ್ಮನ್, ಫೈಜಾನ್, ಎಹ್ಸಾನ್, ಅಫ್ಜಲ್ ಮತ್ತು ಉಸ್ಮಾನ್ ಎಂಬ ಐದು ಮಂದಿ ಕೊಲೆ ಪ್ರಕರಣದಲ್ಲಿ ವಿಚಾರಣೆಗೆ ಒಳಗಾಗಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿಗೆ ಜಾನುವಾರುಗಳನ್ನು ಕದ್ದೊಯ್ಯಲು ಪ್ರಯತ್ನಿಸಿದಾಗ ಬೊಬ್ಬೆ ಹೊಡೆದು ಅವರನ್ನು ಹಿಡಿಯಲು ಪ್ರಯತ್ನಿಸಿದ ಸಂದರ್ಭದಲ್ಲಿ ಬಿಷ್ಣೋಯಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳುತ್ತಾರೆ.
3. ಜುಲೈ 2019: ರೈತ ದೇವಿಲಾಲ್ ರಾತ್ರಿ ತನ್ನ ಮನೆಯಲ್ಲಿ ಕೊಲ್ಲಲ್ಪಟ್ಟರು
ಮಧ್ಯಪ್ರದೇಶದ ದಬ್ರಾ ಪಟ್ಟಣದಲ್ಲಿ ರಾತ್ರಿಯಲ್ಲಿ ಜಾನುವಾರುಗಳನ್ನು ಕದ್ದೊಯ್ತಿದ್ದವರನ್ನು ವಿರೋಧಿಸಿದಾಗ, 53 ವರ್ಷದ ದೇವಿಲಾಲ್ ಬಾಥಮ್ ಎಂಬ ರೈತ ಮತ್ತು ಕಾವಲುಗಾರನನ್ನು ಅವರ ಜಮೀನಿನಲ್ಲಿ ಕೊಲ್ಲಲಾಯಿತು. ಕಳ್ಳರು ಅವರ ಬಾಯಿಗೆ ಮರಳನ್ನು ತುಂಬಿಸಿ ಕೊಡಲಿಯಿಂದ ಹಲ್ಲೆ ಮಾಡಿ ಕೊಂದು ಹಾಕಿದ್ದರು ಎಂದು ವರದಿಯಾಗಿದೆ. ಕಳ್ಳರು ಅವರ ಎಮ್ಮೆಗಳನ್ನು ಕದ್ದು ಪರಾಯಾಗಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಆರು ಜನರಾದ – ಮೋನು ಖಾನ್, ಅಮ್ಜದ್ ಖಾನ್, ಇಶ್ತಿಯಾಕ್, ಮುನಬ್ಬರ್ ಖಾನ್, ವಾಹಿದ್ ಮತ್ತು ರಾಮ್ನಿವಾಸ್ ನನ್ನು ಬಂಧಿಸಿದ್ದಾರೆ.
4. ಜನವರಿ 2019: ನಿವೃತ್ತ ಸೈನಿಕ ಮತ್ತು ರೈತ ತನ್ನ ಮನೆಯಲ್ಲಿ ಕೊಲ್ಲಲ್ಪಟ್ಟರು
ಬಿಹಾರದ ಬಕ್ತಿಯಾರ್ಪುರದ ಘಾನ್ಶ್ಯಾಂಪೂರ್ ಪ್ರದೇಶದಲ್ಲಿ, ಕಳ್ಳರು ಮುಂಜಾನೆ 2.30 ರ ಸುಮಾರಿಗೆ ಸೇನಾಪಡೆಯ ನಿವೃತ್ತ ಸೈನಿಕ ನವಲ್ ಸಿಂಗ್ ಅವರ ಮನೆಗೆ ನುಗ್ಗಿದ್ದರು. ಆ ಪ್ರದೇಶದಲ್ಲಿ ಆಗಲೇ 6 ಜಾನುವಾರುಗಳನ್ನು ಕದ್ದಿದ್ದ ಕಳ್ಳರ ಗುಂಪು, ಸಿಂಗ್ ಅವರ ಎಮ್ಮೆಯನ್ನು ಕದಿಯಲು ಬಂದಿತ್ತು. ಸಿಂಗ್ ಒಬ್ಬ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾದರು, ಆದರೆ ಆತನ ಸಹಚರರು ಸಿಂಗ್ ಅವರನ್ನು ಹೊಡೆದುರುಳಿಸಿ ಕೊಂದರು. ಸಿಂಗ್ ಅವರ ಸೋದರಳಿಯ ಚಂದನ್ ಅವರಿಗೆ ತೀವ್ರವಾದ ಗಾಯಗಳಾಗಿತ್ತು.
5. ಜನವರಿ 2019: ದನ ಕಳ್ಳರ ವಾಹನದಡಿಯಲ್ಲಿ ಧ್ವಂಸವಾದ ಏಳು ಮಂದಿಯ ಕುಟುಂಬ
ಉತ್ತರ ಪ್ರದೇಶ-ಬಿಹಾರ ಗಡಿಯಲ್ಲಿರುವ ಒಂದು ಗುಡಿಸಲಿಗೆ ಅಕ್ರಮವಾಗಿ ಜಾನುವಾರುಗಳನ್ನು ತುಂಬಿ ವೇಗದಲ್ಲಿ ಬರುತ್ತಿದ್ದ ಟ್ರಕ್ ನುಗ್ಗಿ, ಒಂದು ಕುಟುಂಬದ ಏಳು ಸದಸ್ಯರ ಸಾವಿಗೆ ಕಾರಣವಾಯಿತು. ಘಟನೆಯಲ್ಲಿ ಮೃತಪಟ್ಟವರೆಂದರೆ, ರಾಮ್ಕಿಶನ್, ಸುಹಾಗಿನ್, ಗೋಲು, ನಿಶಾ, ಮೋನಿ, ಮೋಲು ಮತ್ತು ಸಾಮ ದೇವಿ. ಕಲ್ಲು ರಾಮ್ ಎಂಬ ಒಬ್ಬ ಸದಸ್ಯ ಮಾತ್ರ ಬೇರೆಡೆ ಮಲಗಿದ್ದರಿಂದ ಭೀಕರ ಅಪಘಾತದಿಂದ ಬದುಕುಳಿದರು.
ಈ ಘಟನೆ ಯುಪಿಯ ಚಂದೌಲಿ ಜಿಲ್ಲೆಯ ಮಾಲ್ಡಾ ಗ್ರಾಮದಲ್ಲಿ ಸಂಭವಿಸಿತ್ತು. ಟ್ರಕ್ ಅನ್ನು ಬಿಹಾರದ ಕಡೆಗೆ ಕೊಂಡೊಯ್ಯಲಾಗುತ್ತಿತ್ತು. ಘಟನೆ ನಡೆದ ಬಳಿಕ ಟ್ರಕ್ ಚಾಲಕ ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದ. ಟ್ರಕ್ ಅನ್ನು ಅಲ್ಲೇ ನಿಲ್ಲಿಸಿ ಓಡಿಹೋಗಿದ್ದ. ಆ ಟ್ರಕ್ ಒಳಗೆ ಜಾನುವಾರುಗಳನ್ನು ಅಮಾನವೀಯವಾಗಿ ಕಟ್ಟಿಹಾಕಲಾಗಿತ್ತು.
6. ಜನವರಿ 2019: ಪೊಲೀಸ್ ಮೇಲೆ ಹರಿದ ದನ ಕಳ್ಳರ ಟ್ರಕ್
12 ಎತ್ತುಗಳನ್ನು ಹೊತ್ತ ಟ್ರಕ್ ಅನ್ನು ತಡೆಯಲು ಪ್ರಯತ್ನಿಸಿದ ಪೊಲೀಸ್ ಕಾನ್ಸ್ಟೆಬಲ್ ಮೇಲೆಯೇ ಟ್ರಕ್ ಹರಿಸಿ ಕೊಲೆ ಮಾಡಲಾಗಿದೆ. ಈ ಘಟನೆ ಮಹಾರಾಷ್ಟ್ರದ ಚಂದ್ರಪುರದಲ್ಲಿ ನಡೆದಿದೆ. ಪ್ರಕಾಶ್ ಮೆಶ್ರಮ್ ಎಂಬ ಪೋಲಿಸ್ ಗೋ ಕಳ್ಳರ ವಾಹನವನ್ನು ನಿಲ್ಲಿಸಲು ಸನ್ನೆ ಮಾಡಿದ ಸಂದರ್ಭದಲ್ಲಿ, ಕಳ್ಳರು ವೇಗವಾಗಿ ಗಾಡಿಯನ್ನು ಓಡಿಸಿ ಅವರ ಮೇಲೆ ಹತ್ತಿಸಿದ್ದಾರೆ.
ಮೆಶ್ರಮ್ ಸ್ಥಳದಲ್ಲೇ ಮೃತಪಟ್ಟರು. ಟ್ರಕ್ನಲ್ಲಿದ್ದ ಇಮ್ತಿಯಾಜ್ ಅಹ್ಮದ್ ಫಯಾಜ್ ಅಹ್ಮದ್ ಮತ್ತು ಮೊಹಮ್ಮದ್ ರಾ ಅಬ್ದುಲ್ ಜಬ್ಬರ್ ಖುರೇಷಿಯನ್ನು ಬಂಧಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದಾರೆ.
7. ನವೆಂಬರ್ 2018: ರೈತ ಅಕ್ಬರ್ ಅಲಿ ತಮ್ಮ ಮನೆಯಲ್ಲೇ ಕೊಲ್ಲಲ್ಪಟ್ಟರು
ನವೆಂಬರ್ 14 ಮತ್ತು 15 ರ ಮಧ್ಯರಾತ್ರಿಯಲ್ಲಿ, ಕಳ್ಳರು ಅಕ್ಬರ್ ಅಲಿಯ ಮನೆಗೆ ಪ್ರವೇಶಿಸಿ, ಪಿಸ್ತೂಲ್ ತೋರಿಸಿ ಕುಟುಂಬಕ್ಕೆ ಬೆದರಿಕೆ ಹಾಕಿದರು, ಬಳಿಕ ಅವರ ದನಗಳೊಂದಿಗೆ ಪರಾರಿಯಾಗಲು ಪ್ರಯತ್ನಿಸಿದರು. ಅಲಿ ಇದನ್ನು ವಿರೋಧಿಸಿ ಸಹಾಯಕ್ಕಾಗಿ ಕಿರುಚುತ್ತಾ, ಗ್ರಾಮಸ್ಥರನ್ನು ಸ್ಥಳಕ್ಕೆ ಬರುವಂತೆ ಮಾಡಿದರು. ಈ ವೇಳೆ ಕಳ್ಳರು ಗುಂಡು ಹಾರಿಸಿ, ಅಕ್ಬರ್ನನ್ನು ಕೊಂದು ಹಾಕಿದರು ಮತ್ತು ಇಬ್ಬರು ಗ್ರಾಮಸ್ಥರನ್ನು ಗಾಯಗೊಳಿಸಿದರು. ಗ್ರಾಮಸ್ಥರು ಕಳ್ಳರಲ್ಲಿ ಒಬ್ಬನಾದ ನೂರ್ ಅಲಿಯನ್ನು ಹಿಡಿಯುವಲ್ಲಿ ಯಶಸ್ವಿಯಾದರು, ಇನ್ನೊಬ್ಬರು ತಪ್ಪಿಸಿಕೊಂಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಶಹಜಹಾನಪುರ ಜಿಲ್ಲೆಯ ಜಲಾಲಾಬಾದ್ನಲ್ಲಿ ನಡೆದಿದೆ.
8. ಸೆಪ್ಟೆಂಬರ್ 2018: ದನ ಕಳ್ಳರ ವಾಹನಕ್ಕೆ ಸಿಕ್ಕಿ ಪೊಲೀಸ್ ಹತ್ಯೆ
ಬರೇಲಿಯ ಫತೇಗಂಜ್ ವೆಸ್ಟ್ ಟೋಲ್ ಪ್ಲಾಜಾ ಬಳಿ ಗೋವು ಕಳ್ಳಸಾಗಾಣಿಕೆದಾರರನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಪೊಲೀಸ್ ಕಾನ್ಸ್ಟೆಬಲ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಾಂಪುರ್ ರಸ್ತೆಯಲ್ಲಿ ಜಾನುವಾರು ಕಳ್ಳಸಾಗಾಣಿಕೆಗೆ ಮಾಡಲಾಗುತ್ತಿದೆ ಎಂಬ ಸುಳಿವು ಪಡೆದುಕೊಂಡ ಸಂಜೀವ್ ಗುರ್ಜರ್ ಎಂಬ ಪೋಲೀಸ್ ತಕ್ಷಣ ಅಲ್ಲಿಗೆ ಬಂದು ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಅವರು ತಮ್ಮ ಕಾರಿನಿಂದ ಇಳಿಯುತ್ತಿದ್ದಂತೆ, ವಾಹನ ಚಾಲಕನು ತನ್ನ ವಾಹನವನ್ನು ಅವರ ಕಡೆಗೆ ತಿರುಗಿಸಿದ್ದಾನೆ. ವಾಹನವು ಅವರಿಗೆ ಬಂದು ಬಡಿದಿದೆ.
ಮತ್ತೊಬ್ಬ ಪೋಲಿಸ್ ಮನೋಜ್ ಮಿಶ್ರಾ 2015 ರಲ್ಲಿ ಅದೇ ಪ್ರದೇಶದಲ್ಲಿ ಜಾನುವಾರು ಕಳ್ಳರ ಕೈಯಲ್ಲಿ ಮೃತಪಟ್ಟಿದ್ದಾರೆ. ಈ ಪ್ರಕರಣದಲ್ಲಿ ಜಾಫ್ರುದ್ದೀನ್ ಎಂಬ ಜಾನುವಾರು ಕಳ್ಳಸಾಗಾಣಿಕೆದಾರನನ್ನು ಬಂಧಿಸಲಾಗಿದೆ.
9. ಆಗಸ್ಟ್ 2018: ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕಾಗಿ ಮೂವರು ದೇಗುಲದ ಸಾಧುಗಳ ಹತ್ಯೆ
2018 ರ ಆಗಸ್ಟ್ 15ರ ಬೆಳಿಗ್ಗೆ, ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಕುಡಾರ್ಕೋಟ್ ಗ್ರಾಮದಲ್ಲಿರುವ ಶತಮಾನಗಳಷ್ಟು ಹಳೆಯ ಶಿವ ದೇವಸ್ಥಾನದಲ್ಲಿನ ಮೂವರು ಸಾಧುಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರ ಕೈ ಮತ್ತು ಕಾಲುಗಳನ್ನು ಅವರ ಕೋಟುಗಳಿಗೆ ಕಟ್ಟಲಾಗಿತ್ತು. ಅವರ ಕುತ್ತಿಗೆ ಮತ್ತು ದೇಹದ ಇತರ ಭಾಗಗಳಲ್ಲಿ ಅನೇಕ ಇರಿತದ ಗಾಯಗಳಾಗಿದ್ದವು.
ಈ ಘಟನೆಗೆ ಸಂಬಂಧಿಸಿದಂತೆ ಪಕ್ಕದ ‘ಕಸಾಯಿ ಮೊಹಲ್ಲಾ’ದ ಸಲ್ಮಾನ್, ನದೀಮ್, ಶಹಜಾದ್, ನಜೀಮ್ ಮತ್ತು ಜಬ್ಬರ್ ಎಂಬ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ಅಕ್ರಮ ಗೋ ಕಳ್ಳಸಾಗಣೆ ಮತ್ತು ಗೋ ವಧೆ ಚಟುವಟಿಕೆಗಳ ಬಗ್ಗೆ ಸಾಧುಗಳು ಪೊಲೀಸರಿಗೆ ಸೂಚನೆ ನೀಡಿದ್ದರಿಂದ ಸೇಡು ತೀರಿಸಿಕೊಳ್ಳಲು ಈ ರೀತಿಯ ಅನಾಗರಿಕ ಕೊಲೆಗಳನ್ನು ಮಾಡಿದ್ದಾಗಿ ಕೊಲೆಗಾರರು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ.
10. ಆಗಸ್ಟ್ 2018: ದನ ಕಳ್ಳರ ವಾಹನದಡಿಯಲ್ಲಿ ಜೀವ ಕಳೆದುಕೊಂಡ ಇಬ್ಬರು ಪೊಲೀಸರು
ಉತ್ತರ ಪ್ರದೇಶದ ಹಾರ್ಡೊಯ್ ಜಿಲ್ಲೆಯಲ್ಲಿ, ಗೋಕಳ್ಳರು ತಮ್ಮ ವಾಹನವನ್ನು ಹತ್ತಿಸಿ ಇಬ್ಬರು ಪೊಲೀಸರನ್ನು ಕೊಲೆ ಮಾಡಿದ್ದಾರೆ. ಪೊಲೀಸರಲ್ಲಿ ಒಬ್ಬರಾದ ವಿಪಿನ್ ಕುಮಾರ್ ಅವರು ದನಗಳನ್ನು ಸಾಗಿಸುತ್ತಿದ್ದ ವಾಹನಕ್ಕೆ ನಿಲ್ಲಿಸುವಂತೆ ಸೂಚಿಸಿದರು. ಅದು ನಿಲ್ಲದಿದ್ದಾಗ, ಅವರು ಮತ್ತು ಸುಮರ್ ಎಂಬ ಇನ್ನೊಬ್ಬ ಪೋಲೀಸ್ ಅವರನ್ನು ಬೈಕಿನಲ್ಲಿ ಬೆನ್ನಟ್ಟಲು ಪ್ರಾರಂಭಿಸಿದರು. ದನ ಕಳ್ಳರು ಚಾಣಾಕ್ಷತನ ಮೆರೆದು ವಾಹನದ ವೇಗವನ್ನು ಕಡಿಮೆ ಮಾಡಿದರು ಮತ್ತು ಪೊಲೀಸರು ಅವರನ್ನು ಓವರ್ ಟೇಕ್ ಮಾಡಿದಾಗ ಹಿಂದಿನಿಂದ ಗುದ್ದಿ ಅವರನ್ನು ಸಾಯಿಸಿದ್ದಾರೆ. ಟ್ರಕ್ ಚಾಲಕರಾದ ಜೀಶನ್ ಮತ್ತು ಮುಮ್ತ್ಯಾಜ್ ರನ್ನು ಪೊಲೀಸರು ಬಂಧಿಸಿದ್ದಾರೆ.
11. ಜನವರಿ 2018: ರೈತ ಜೋಗೇಂದ್ರ ಅವರ ಮನೆಯಲ್ಲಿ ಕೊಲ್ಲಲ್ಪಟ್ಟರು
ಉತ್ತರ ಪ್ರದೇಶದ ಬಾದಾನ್ ಜಿಲ್ಲೆಯ ಉಘೈತಿ ಗ್ರಾಮದಲ್ಲಿ, ದನ ಕಳ್ಳರು ಮಧ್ಯರಾತ್ರಿ 12.00 ರ ಸುಮಾರಿಗೆ ಗಜರಾಜ್ ಅವರ ಮನೆಗೆ ಪ್ರವೇಶಿಸಿದ್ದರು. ಅವರ ಮಕ್ಕಳಾದ ಜೋಗೇಂದ್ರ ಮತ್ತು ಸರ್ವೇಶ್ ಎಚ್ಚರಗೊಂಡು ಕಳ್ಳರನ್ನು ತಡೆಯಲು ಮುಂದಾದಾಗ ಅವರುಗಳ ಮೇಲೆ ಗುಂಡು ಹಾರಿಸಲಾಯಿತು. ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ ಜೋಗೇಂದ್ರ ಘಟನೆಯಲ್ಲಿ ಸಾವನ್ನಪ್ಪಿದರು. ಕಳ್ಳರು ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಘಟನೆಯಲ್ಲಿ ಪೊಲೀಸರು ಯಾರನ್ನು ಬಂಧಿಸಿದರು ಎಂಬ ಮಾಹಿತಿ ಇನ್ನೂ ಲಭ್ಯವಿಲ್ಲ.
ಕಳೆದ ಒಂದು ವರ್ಷದಲ್ಲಿ ಒಟ್ಟು ಇಪ್ಪತ್ತು ಜೀವಗಳು ಗೋಮಾಂಸ ಮಾಫಿಯಾಗೆ ಬಲಿಯಾಗಿ ಹೋಗಿವೆ. ಕೆಲವು ಪ್ರಕರಣಗಳಲ್ಲಿ ದುಷ್ಕರ್ಮಿಗಳನ್ನು ಬಂಧಿಸಲಾಗಿದ್ದರೆ, ಇನ್ನೂ ಅನೇಕ ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ. ಗೋಕಳ್ಳಸಾಗಣೆ ಮುಗ್ಧ ಜೀವಗಳಿಗೆ ಹಾನಿಯಾಗುತ್ತಿದೆ. ಇಂತಹ ಮಾಫಿಯಾವನ್ನು ತಡೆಗಟ್ಟಲು ಸರ್ಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸಮಯ ಈಗ ಬಂದಿದೆ.
ನಮ್ಮ ದೇಶದಲ್ಲಿ ಗುಂಪು ಹಲ್ಲೆಗಳು ನಡೆಯುತ್ತಿರುವ ಬಗ್ಗೆ ದೊಡ್ಡ ಮಟ್ಟದ ಸುದ್ದಿಗಳಾಗುತ್ತಿವೆ, ಆದರೆ ಬೀಫ್ ಮಾಫಿಯಾದ ಕಪಿಮುಷ್ಠಿಗೆ ಬಲಿಯಾದ ಜೀವಗಳ ಬಗ್ಗೆ ಯಾವ ಮಾಧ್ಯಮಗಳು ವರದಿ ಮಾಡುತ್ತಿಲ್ಲ. ತಮಗೆ ಜೀವನೋಪಾಯವಾಗಿದ್ದ ಗೋವುಗಳ ಕಳ್ಳತನವನ್ನು ವಿರೋಧಿಸಲು ಹೋಗಿ ಬಲಿಯಾದ ರೈತರ, ಅಮಾಯಕರ ಸಂಖ್ಯೆ ಬಹಳಷ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.