ಕಲ್ಬುರ್ಗಿ: ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯನ್ನು ಮಾಡಿ ಖ್ಯಾತರಾಗಿರುವ ಕಲ್ಬುರ್ಗಿಯ ಅತ್ಯಂತ ಕಿರಿಯ ವೈದ್ಯ ಡಾ. ವಿನಾಯಕ್ ಎಸ್ ಹಿರೇಮಠ್ ಅವರಿಗೆ ‘ಪ್ರೈಡ್ ಆಫ್ ದಿ ನೇಷನ್ ಅವಾರ್ಡ್’ ನೀಡಿ ಗೌರವಿಸಲಾಗಿದೆ.
ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ನವದೆಹಲಿಯ ಎನ್ಸಿಸಿ ಅಡಿಟೋರಿಯಂ ಪೆರೇಡ್ ಗ್ರೌಂಡ್ಸ್ನಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಡಾ.ವಿನಾಯಕ್ ಎಸ್ ಹಿರೇಮಠ್ ಅವರಿಗೆ ಪ್ರಶಸ್ತಿಯನ್ನು ಪ್ರದಾನಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರೋಗ್ಯ ಮತ್ತು ರಕ್ಷಣಾ ವಲಯದ ಅನೇಕ ಗಣ್ಯರು ಇದರಲ್ಲಿ ಭಾಗವಹಿಸಿದ್ದರು. ಸೇನಾಧಿಕಾರಿ ಮತ್ತು ಕಾರ್ಗಿಲ್ ಯುದ್ಧದ ಕಮಾಂಡಿಂಗ್ ಬೆಟಾಲಿಯನ್ ಮೇಜರ್ ಜನರಲ್ ಬಕ್ಷಿ, ಹರಿಯಾಣ ಸಾರ್ವಜನಿಕ ಸೇವಾ ಆಯೋಗದ ಮಾಜಿ ಮುಖ್ಯಸ್ಥರಾದ ಮತ್ತು ರಾಜ್ಯಸಭಾ ಸದಸ್ಯರಾದ (ಡಾ) ಡಿಪಿ ವ್ಯಾಟ್ಸ್, ದೆಹಲಿ ಸಂಸದೆ ಮೀನಾಕ್ಷಿ ಲೇಖಿ, ತ್ರಿಪುರ ವಿಶ್ವವಿದ್ಯಾಲಯದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಪ್ರೊ.ವಿಜಯ್ ಕುಮಾರ್, ಜೆಎನ್ಯು ಉಪಕುಲಪತಿ ಪ್ರೊ.ಎಂ.ಜಗದೀಶ್ ಕುಮಾರ್, ಸುದರ್ಶನ್ ನ್ಯೂಸ್ ಚಾನೆಲ್ನ ಎಂಡಿ ಮತ್ತು ಸಂಪಾದಕ ಸುರೇಶ್ ಚಾವಂಕೆ ಮುಂತಾದ ಗಣ್ಯರು ಇದರಲ್ಲಿ ಭಾಗಿಯಾಗಿದ್ದರು.
“ಪ್ರೈಡ್ ಆಫ್ ದಿ ನೇಷನ್ ಅವಾರ್ಡ್” ಭಾರತದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಸಾಧಕರಿಗೆ ಇದನ್ನು ನೀಡಲಾಗುತ್ತದೆ. ಹಲವು ಮಾನದಂಡಗಳನ್ನು ಅನುಸರಿಸಿ ತೀರ್ಪುಗಾರರು ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತಾರೆ.
30 ವರ್ಷದ ಡಾ.ವಿನಾಯಕ್ ಎಸ್ ಹಿರೇಮಠ್ ಅವರು, ಗರ್ಭಧಾರಣೆಯ ವೇಳೆ ಮಧುಮೇಹ ಸಮಸ್ಯೆಯನ್ನು ಹೊಂದಿರುವ ತಾಯಂದಿರಿಗೆ ಮತ್ತು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಕುಟುಂಬ ಸದಸ್ಯರಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿರುವ ದಕ್ಷಿಣ ಭಾರತದ ಮೊದಲ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ನೀಡುತ್ತಿರುವ ಕೊಡುಗೆ ಸಮಾಜದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಡಾ. ವಿನಾಯಕ್ ಅವರು ಭಾರತದ ಆರೋಗ್ಯ ಕ್ಷೇತ್ರದ ಅಗ್ರ ಹತ್ತು ಸಾಧಕರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಉಚಿತ ಚಿಕಿತ್ಸೆ ನೀಡುವುದರ ಜೊತೆಗೆ ಗ್ರಾಮೀಣ ಭಾಗದಲ್ಲಿ ತಿಂಗಳಿಗೆ ಒಂದು ಬಾರಿ ಉಚಿತ ಆರೋಗ್ಯ ಶಿಬಿರಗಳನ್ನೂ ಇವರು ಆಯೋಜನೆಗೊಳಿಸುತ್ತಾರೆ. ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್, ಸ್ಪಿರೋಮೆಟ್ರಿ ಮತ್ತು ಇತರ ಜೀವನಶೈಲಿ ಕಾಯಿಲೆಗಳಿಗೆ ಸಂಬಂಧಿಸಿದಂತೆ ರೋಗಿಗಳನ್ನು ಸಂಪರ್ಕಿಸಿ ಅವರಿಗೆ ಸೂಕ್ತ ಸಲಹೆಗಳನ್ನು ನೀಡುತ್ತಾರೆ. ವನಮಹೋತ್ಸವದಂತಹ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುತ್ತಾರೆ. ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಾರೆ.
ಡಾ. ವಿನಾಯಕ್ ಅವರು ಪ್ರಸ್ತುತ ಕೇರಳದ ಕೊಚ್ಚಿನ್ನ ಕೆಎಂಕೆ ಆಸ್ಪತ್ರೆಯಲ್ಲಿ ಚೀಫ್ ಕನ್ಸಲ್ಟೆಂಟ್ ಫಿಝಿಶಿಯನ್ ಡಯಬೆಟಾಲಜಿಸ್ಟ್ ಆ್ಯಂಡ್ ಇಂಟೆನ್ಸಿವಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.