ಲಕ್ನೋ: ಉತ್ತರ ಪ್ರದೇಶದ ಬುಂದೇಲ್ಖಂಡ್ ಭಾಗದಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಇಸ್ರೇಲ್ ಸಹಾಯದೊಂದಿಗೆ ಯೋಜನೆಯೊಂದನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಿದೆ.
ನೀರಿನ ನಿರ್ವಹಣೆಯಲ್ಲಿ ಇಸ್ರೇಲ್ ರಾಷ್ಟ್ರದ ಪರಿಣತಿಯನ್ನು ಪಡೆದುಕೊಂಡು ಬರಗಾಲ ಪೀಡಿತ ಬುಂದೇಲ್ಖಂಡ್ ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸುವ ಅದ್ಭುತಗಳನ್ನು ಮಾಡಲಿದ್ದೇವೆ ಎಂದು ಯೋಗಿ ಸರ್ಕಾರ ಮಾಹಿತಿ ನೀಡಿದೆ.
ಇಸ್ರೇಲ್ನ ತಂತ್ರಜ್ಞಾನ ಮತ್ತು ಉತ್ತರಪ್ರದೇಶ ಮಾನವಶಕ್ತಿಯ ಸಂಯೋಜನೆ ಮೂಲಕ ಹೊಸ ಕಾರ್ಯ ಸಂಸ್ಕೃತಿಯನ್ನು ಆರಂಭಿಸುವಂತೆ ಯೋಗಿ ಕರೆ ನೀಡಿದ್ದು, “ಇಸ್ರೇಲ್ ಮತ್ತು ಬುಂದೇಲ್ಖಂಡ್ ಅನೇಕ ಭೌಗೋಳಿಕ ಹೋಲಿಕೆಗಳನ್ನು ಹೊಂದಿವೆ. ಬುಂದೇಲ್ಖಂಡ್ನಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸಲು ಇಸ್ರೇಲ್ ಸಹಾಯಕವಾಗಬಲ್ಲದು. ಬುಂದೇಲ್ಖಂಡ್ನಲ್ಲಿ ಇಸ್ರೇಲ್ ಸಹಾಯದೊಂದಿಗೆ ನಾವು ಒಂದು ಪ್ರಮುಖ ಯೋಜನೆಯನ್ನು ಸ್ಥಾಪಿಸಲು ಬಯಸುತ್ತಿದ್ದೇವೆ ಮತ್ತು ಇದು ಯಶಸ್ವಿಯಾದ ನಂತರ ನಾವು ಇದನ್ನು ರಾಜ್ಯದ ಇತರ ಭಾಗಗಳಿಗೆ ವಿಸ್ತರಿಸುತ್ತೇವೆ” ಎಂದಿದ್ದಾರೆ.
ಭಾರತದ ಇಸ್ರೇಲ್ ರಾಯಭಾರಿ ರಾನ್ ಮಲ್ಕಾ ಅವರೊಂದಿಗಿನ ಸಭೆಯ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ ಅವರು, ತಮ್ಮ ರಾಜ್ಯದ ಪೊಲೀಸ್ ಬಲವನ್ನು ಆಧುನೀಕರಿಸಲು ಇಸ್ರೇಲ್ ಬೆಂಬಲವನ್ನು ಕೋರಿದ್ದಾರೆ. ಕೃಷಿ, ರಕ್ಷಣೆ, ಆಹಾರ ಸಂಸ್ಕರಣೆ ಮತ್ತು ಮಾರುಕಟ್ಟೆ, ಕುಡಿಯುವ ನೀರು ಮತ್ತು ನೀರಾವರಿ ಮುಂತಾದ ಹಲವಾರು ವಿಷಯಗಳ ಬಗ್ಗೆಯೂ ಅವರು ಚರ್ಚಿಸಿದ್ದಾರೆ.
ಇಸ್ರೇಲ್ನ ಆಹ್ವಾನದ ಮೇರೆಗೆ ಸೆಪ್ಟೆಂಬರ್ ಮತ್ತು ನವೆಂಬರ್ನಲ್ಲಿ ಕ್ರಮವಾಗಿ ರಕ್ಷಣಾ ಮತ್ತು ನೀರಿನ ಕುರಿತ ಎರಡು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ತಮ್ಮ ಸರ್ಕಾರ ಭಾಗವಹಿಸಲಿದೆ ಎಂದು ಯೋಗಿ ಹೇಳಿದ್ದಾರೆ.
ಇದೇ ವೇಳೆ ರಾನ್ ಮಲ್ಕಾ ಅವರು, 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಇಸ್ರೇಲ್ ತನ್ನ ಕಾರ್ಯತಾಂತ್ರಿಕ ಪಾಲುದಾರ ಭಾರತಕ್ಕೆ ಸಹಾಯ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.