ಮಂಗಳೂರು : ರಾಮಕೃಷ್ಣ ಮಿಶನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5 ನೇ ಹಂತದ 34ನೇ ಶ್ರಮದಾನ ಕಾರ್ಯಕ್ರಮವನ್ನು ಸ್ಟೇಟ್ಬ್ಯಾಂಕ್ ಹಾಗೂ ಬಂದರ್ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಯಿತು. ದಿನಾಂಕ 28-7-2019 ರವಿವಾರ ಬೆಳಿಗ್ಗೆ ಡಿ. ಮಹೇಶ್ ಕುಮಾರ್ ಪ್ರಧಾನ ವ್ಯವಸ್ಥಾಪಕರು, ಸ್ಮಾರ್ಟ್ ಸಿಟಿ ಮಂಗಳೂರು ಮತ್ತು ಶಿಕ್ಷಕಿ ಶ್ರೀಮತಿ ರಾಜೀವಿ ಚಂದ್ರಶೇಖರ್ ಇವರುಗಳು ಶ್ರಮದಾನಕ್ಕೆ ಹಾಮಿಲ್ಟನ್ ವೃತ್ತದ ಬಳಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಸ್ವಚ್ಛ ಮನಸ್ಸು ಅಭಿಯಾನದ ಸಂಯೋಜಕ ರಂಜನ್ ಬೆಳ್ಳರ್ಪಾಡಿ, ಸತ್ಯಾನಂದ ಭಟ್, ಸುರೇಂದ್ರ ನಾಯಕ್, ಕಿರಣ ಫರ್ನಾಂಡಿಸ್, ಸಂದೀಪ್ ಕೋಡಿಕಲ್, ಮಹೇಶ್ ಕೆ. ಕೆ., ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ. ಮಹೇಶ್ ಕುಮಾರ್ ಕಸದಿಂದ ದೂರವಿರುವುದು ಸ್ವಚ್ಛತೆಯಲ್ಲ ಬದಲಿಗೆ ಕಸವನ್ನು ನಿರ್ವಹಿಸುವುದು ಸ್ವಚ್ಛತೆ. ಸ್ವಚ್ಛತೆಯೇ ದೇವರು ಅನ್ನುವ ಹಾಗೆ ಈ ಕಾರ್ಯ ದೇವತಾ ಕಾರ್ಯಕ್ಕೆ ಸಮಾನವಾದುದು. ನಾವು ಮುಂಬರುವ ಜನಾಂಗವನ್ನು ಗಮನದಲ್ಲಿರಿಸಿಕೊಂಡು ಇವತ್ತು ಕಾರ್ಯೋನ್ಮುಖವಾಗಬೇಕಿದೆ. ಸ್ವಚ್ಛತೆಯನ್ನು ಸಾಧಿಸದೇ ನಗರದ ಅಭಿವೃದ್ಧಿ ಅಸಾಧ್ಯ. ಇಂತಹ ಸ್ವಚ್ಛತೆಯ ನಿಟ್ಟಿನಲ್ಲಿ ರಾಮಕೃಷ್ಣ ಮಿಶನ್ ಮತ್ತು ಸ್ವಯಂಸೇವಕರ ಪರಿಶ್ರಮ ಅಪಾರ. ಈ ಅಭಿಯಾನ ದೇಶಕ್ಕೆ ಮಾದರಿ, ನನ್ನನ್ನೂ ಸೇರಿದಂತೆ ಅನೇಕರಿಗೆ ಈ ಅಭಿಯಾನ ಸ್ಪೂರ್ತಿಯನ್ನು ತುಂಬಿದೆ. ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಹೊಸ ಮಾರ್ಗಗಳನ್ನು ಆವಿಷ್ಕರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ವಾರ್ಟ್ ಸಿಟಿಯಾಗಿ ಬದಲಾಗುತ್ತಿರುವ ನಗರದ ಅಭಿವೃದ್ಧಿಯಲ್ಲಿ ಸರ್ವರ ಸಹಕಾರ ಅಗತ್ಯ ಎಂದು ತಿಳಿಸಿದರು.
ಸ್ವಚ್ಛತೆ: ಸ್ವಯಂಸೇವಕರು ಐದು ಗುಂಪುಗಳಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ತ್ಯಾಜ್ಯ ರಾಶಿಗಳು ತುಂಬಿದ್ದ 5 ಸ್ಥಳಗಳನ್ನು ಇಂದು ತೆರವು ಮಾಡಿ ಶುಚಿ ಮಾಡಲಾಯಿತು. ಮೊದಲಿಗೆ ಹಾಮಿಲ್ಟನ್ ವೃತ್ತದಿಂದ ರೋಸಾರಿಯೋ ಚರ್ಚ್ಗೆ ಸಾಗುವ ಮಾರ್ಗ ಆರಂಭದಲ್ಲಿದ್ದ ಕಸದ ರಾಶಿಯನ್ನು ತೆಗೆದು ಹಸನು ಮಾಡಲಾಯಿತು. ನಂತರ ಹುಲ್ಲು-ಕಳೆಯನ್ನು ತೆಗೆಯಲಾಯಿತು. ಹಾಗೂ ಸ್ಟೇಟ್ಬ್ಯಾಂಕ್ ಬಳಿಯಲ್ಲಿದ್ದ ಕಸದ ರಾಶಿಯನ್ನು ಕಮಲಾಕ್ಷ ಪೈ, ಅಭಿಷೇಕ್ ವಿ ಎಸ್ ಹಾಗೂ ಇನ್ನಿತರರು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಮತ್ತೊಂದೆಡೆ ಹಳೆಯ ಬಂದರು ರಸ್ತೆಯಲ್ಲಿ ಮೊಹಬೂಬ್ ಖಾನ್, ಅವಿನಾಶ್ ಅಂಚನ್ ಹಾಗೂ ಕಾರ್ಯಕರ್ತರು ಶ್ರಮದಾನ ಕೈಗೊಂಡರು. ಆಲ್ಬದ್ರಿಯಾ ಕಾಲೇಜು ಎದುರಿನ ತ್ಯಾಜ್ಯ ರಾಶಿಯನ್ನು ಕಾರ್ಯಕರ್ತರು ಉಮಾಕಾಂತ್ ಸುವರ್ಣ ನೇತೃತ್ವದಲ್ಲಿ ಶುಚಿಗೊಳಿಸಿ ಹೂಕುಂಡಗಳನ್ನಿಟ್ಟರು. ಬಂದರ್ ಪ್ರದೇಶದಲ್ಲಿದ್ದ ತ್ಯಾಜ್ಯರಾಶಿಗಳನ್ನು ಜೆಸಿಬಿ ಸಹಾಯದಿಂದ ತೆರವು ಮಾಡಿ ಟಿಪ್ಪರಿಗೆ ತುಂಬಿಸಲಾಯಿತು. ಆ ಜಾಗವನ್ನು ಅಂದಕಾಣುವಂತೆ ಮಾಡಲು ಅಲ್ಲೀಗ ಅಲಂಕಾರಿಕ ಹೂಕುಂಡಗಳನ್ನಿಡಲಾಗಿದೆ. ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಮತ್ತೆ ಸಾರ್ವಜನಿಕರು ಕಸ ತಂದು ಸುರಿಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಚ್ಛತಾ ಯೋಧರು ಗಸ್ತು ತಿರುಗಲಿದ್ದಾರೆ. ಜೊತೆಗೆ ಹತ್ತಿರದ ಅಂಗಡಿಮುಂಗಟ್ಟುಗಳಿಗೆ ತೆರಳಿ ಮಾರ್ಗಗಳ ಬದಿಯಲ್ಲಿ ಕಸ ಎಸೆಯದಂತೆ ಮನವಿ ಮಾಡಲಿದ್ದಾರೆ.
ಬಸ್ ತಂಗುದಾಣ ನಿರ್ವಹಣೆ: ರಾಮಕೃಷ್ಣ ಮಿಶನ್ನಿಂದ ನಿರ್ಮಿಸಿದ್ದ ಪಡೀಲ್ ಪ್ರಯಾಣಿಕರ ತಂಗುದಾಣವನ್ನು ಸ್ವಯಂಸೇವಕರು ಪುನೀತ್ ಪೂಜಾರಿ ನೇತೃತ್ವದಲ್ಲಿ ಶುಚಿಗೊಳಿಸಿದರು. ಆಸನಗಳಿಗೆ ಬಣ್ಣಬಳಿದು, ನೆಲವನ್ನು ತೊಳೆದು, ಸ್ವಚ್ಛತೆಯ ಸಂದೇಶದ ಪ್ಲೆಕ್ಸ್ ಅಳವಡಿಸಿ, ಸುತ್ತಮುತ್ತಲು ಸ್ವಚ್ಛಗೊಳಿಸಿದರು.
’ಕಸದ ಬುಟ್ಟಿ ಉಪಯೋಗಿಸಿ ಸ್ವಚ್ಛತೆಯಲ್ಲಿ ಕೈಜೋಡಿಸಿ’ ಅಭಿಯಾನ ಸಂಪನ್ನ : ರಾಮಕೃಷ್ಣ ಮಿಷನ್ ವತಿಯಿಂದ ಹಮ್ಮಿಕೊಂಡ ’ಕಸದಬುಟ್ಟಿ ಉಪಯೋಗಿಸಿ ಸ್ವಚ್ಛತೆಯಲ್ಲಿ ಕೈಜೋಡಿಸಿ’ ಅಭಿಯಾನದಡಿ ಒಟ್ಟು 500 ಕಸದ ಬುಟ್ಟಿಗಳನ್ನು ಮಂಗಳೂರಿನ ವಿವಿದೆಡೆಯಲ್ಲಿ ಚಿಕ್ಕ ಮತ್ತು ಮಧ್ಯಮ ವರ್ಗದ ವ್ಯಾಪಾರಿ ಮಳಿಗೆಗಳಿಗೆ ನೀಡಲಾಯಿತು. ಕಸದ ಬುಟ್ಟಿ ವಿತರಣೆಯ ಜೊತೆಗೆ ಜಾಗೃತಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು. ಸತತ ಒಂದು ತಿಂಗಳುಗಳ ಕಾಲ ಈ ಕಾರ್ಯಕ್ರಮ ಜರುಗಿ ಈ ವಾರ ಸಂಪನ್ನವಾಯಿತು. ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.