ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್ಡಿಎ ಸರ್ಕಾರವು 50 ದಿನಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು, “ಮೊದಲ ಅವಧಿಗೆ ಹೋಲಿಸಿದರೆ ಈ ಅವಧಿಯಲ್ಲಿ ಸುಧಾರಣೆಗಳ ವೇಗ ಹೆಚ್ಚಾಗಿದೆ ಮತ್ತು ಈ ಸರ್ಕಾರ ಸಮಾಜದ ಎಲ್ಲಾ ವರ್ಗಗಳನ್ನೂ ತಲುಪುತ್ತಿದೆ” ಎಂದಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಾವ್ಡೇಕರ್, ಭಾರತದ ಚಂದ್ರಯಾನ-2 ಮಿಷನ್ ಅತ್ಯಂತ ಯಶಸ್ವಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿಯು 50 ದಿನಗಳನ್ನು ಪೂರೈಸಿದ ನಂತರ, ಮೊದಲ ಅಧಿಕಾರಾವಧಿಗೆ ಹೋಲಿಸಿದರೆ ಸುಧಾರಣೆಗಳು, ಕಲ್ಯಾಣ ಕ್ರಮಗಳು ಮತ್ತು ನ್ಯಾಯ ಒದಗಿಸುವಿಕೆಯ ವೇಗವು ಈ ಅವಧಿಯಲ್ಲಿ ಹೆಚ್ಚಾಗಿದೆ ಎಂಬ ಭರವಸೆ ದೇಶಕ್ಕೆ ಸಿಕ್ಕಿದೆ. 50 ದಿನಗಳಲ್ಲಿ ಸರ್ಕಾರ ರೈತರು, ವ್ಯಾಪಾರಿಗಳು, ಸಣ್ಣ ಉದ್ಯಮಗಳು, ನಿರುದ್ಯೋಗಿ ಯುವಕರು ಮತ್ತು ಮಧ್ಯಮ ವರ್ಗದವರಿಗೆ ಮೂಲಸೌಕರ್ಯ, ಸಾಮಾಜಿಕ ನ್ಯಾಯ ಮತ್ತು ಶಿಕ್ಷಣದಲ್ಲಿ ವೇಗದ ಅಭಿವೃದ್ಧಿಯ ಸ್ಪಷ್ಟ ಮಾರ್ಗಸೂಚಿಯನ್ನು ತೋರಿಸುವ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇದು ಸಮಾಜದ ಎಲ್ಲಾ ವರ್ಗಗಳ ಆಶೋತ್ತರವನ್ನು ಪೂರೈಸುತ್ತಿದೆ. ವಿಶ್ವ ವೇದಿಕೆಯಲ್ಲಿ ಪ್ರಧಾನ ಮಂತ್ರಿಗಳ ಉಪಸ್ಥಿತಿಯು ವಿಶ್ವ ರಾಜಕಾರಣದ ಮೇಲೆ ಭಾರತದ ಪ್ರಭಾವವನ್ನು ಹೆಚ್ಚಿಸಿದೆ” ಎಂದಿದ್ದಾರೆ.
“ರಸ್ತೆಗಳು, ರೈಲ್ವೆಗಳು, ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಇತರ ಮೂಲಸೌಕರ್ಯಗಳಲ್ಲಿ 100 ಲಕ್ಷ ಕೋಟಿ ರೂ.ಗಳ ಹೂಡಿಕೆ ಮಾಡಲಾಗಿದೆ. ಜಲಶಕ್ತಿ ಸಚಿವಾಲಯದ ರಚನೆಯನ್ನು ಮಾಡಲಾಗಿದೆ ಮತ್ತು 2024 ರ ವೇಳೆಗೆ ಪ್ರತಿ ಮನೆಗೆ ಶುದ್ಧ ಕುಡಿಯು ನೀರು ಸರಬರಾಜು ಮಾಡುವ ದೊಡ್ಡ ಗುರಿಯನ್ನು ಹೊಂದಲಾಗಿದೆ. ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಎರಡನೇ ಅವಧಿಯು ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದನ್ನು ಈ 50 ದಿನಗಳು ಸಾಬೀತುಪಡಿಸಿವೆ. ಈ ಸರ್ಕಾರ ಮೊದಲ ಅವಧಿಯ ಸರ್ಕಾರದ ಯಶಸ್ಸಿನ ಮೇಲೆ ನಿರ್ಮಿಸಲ್ಪಟ್ಟಿದೆ ಮತ್ತು ಎಲ್ಲರಿಗೂ ನ್ಯಾಯ ದೊರಕಿಸಿಕೊಡುತ್ತದೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.