ಹಿಂದೆ ಪ್ರತಿ ಭಾರತೀಯನ ಮನೆ ಕೂಡ ಮಣ್ಣಿನಿಂದಲೇ ನಿರ್ಮಾಣವಾಗುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಮನೆಗಾಗಿ ಜೀವನದ ಎಲ್ಲಾ ಉಳಿತಾಯವನ್ನು ವ್ಯಯ ಮಾಡುವ ಜನರು ಕಲ್ಲಿನ ಗಟ್ಟಿ ಮುಟ್ಟಾದ, ಅತ್ಯಾಧುನಿಕ ಸೌಲಭ್ಯವುಳ್ಳ ಮನೆಗಳನ್ನೇ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಪರಿಸರ ಸ್ನೇಹಿ ಆಗಿರುವ ಮಣ್ಣಿನ ಮನೆಗಳಲ್ಲಿನ ವಾಸದ ಅನುಭವ ನಿಜಕ್ಕೂ ಭಿನ್ನವಾಗಿರುತ್ತದೆ. ಗ್ರಾಮೀಣ ಭಾಗಗಳಲ್ಲಿ ಕೆಲವು ಕಡೆ ಮಾತ್ರ ಈಗಲೂ ಇಂತಹ ಮನೆಗಳು ಕಾಣಸಿಗುತ್ತವೆ. ಪ್ರಸ್ತುತ ಆಧುನಿಕತೆಯ ಯುಗದಲ್ಲಿ ಮಣ್ಣಿನಿಂದಲೂ ಅತ್ಯಾಧುನಿಕ ಮನೆಗಳನ್ನು ನಿರ್ಮಾಣ ಮಾಡಬಹುದು ಎಂಬುದನ್ನು ತೋರಿಸಿಕೊಡುತ್ತಿದ್ದಾರೆ ಕೇರಳದ ವಾಸ್ತುಶಿಲ್ಪಿ.
1996ರಿಂದಲೂ ಕಡಿಮೆ ದರದ ಹಸಿರು ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಕೇರಳ ಯುಗೇನು ಪಾಂಡಲ ಎಂಬ ವಾಸ್ತುಶಿಲ್ಪಿ. ಈ ಮೂಲಕ ಅವರು ಭಾರತದಲ್ಲಿ ಮಣ್ಣಿನ ಮನೆಗಳ ಗತ ವೈಭವವನ್ನು ಮರಳಿ ಸ್ಥಾಪಿಸುತ್ತಿದ್ದಾರೆ. ಕೇರಳದ ಒಬ್ಬರು ಐಎಎಸ್ ಅಧಿಕಾರಿಗೆ ಇವರು ನಿರ್ಮಾಣ ಮಾಡಿಕೊಟ್ಟ ಮನೆ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಹಲವಾರು ಪತ್ರಿಕೆಗಳಲ್ಲಿ ಇದು ಪ್ರಕಟಗೊಂಡಿತ್ತು. ‘ಬೋಧಿ’ ಎಂಬ ಹೆಸರಿನ ಈ ಪರಿಸರ ಸ್ನೇಹಿ ಮನೆ ಹಲವಾರು ಮಂದಿಗೆ ಪ್ರೇರಣೆಯಾಯಿತು.
ರೆಸಾರ್ಟ್ಗಳು, ಫಿಲ್ಮ್ ಅಕಾಡೆಮಿಗಳು, ಆಸ್ಪತ್ರೆಗಳಿಂದ ಹಿಡಿದು, ಪಝಾಸಿ ರಾಜಾ ಸ್ಮಾರಕದಂತಹ ಪಾರಂಪರಿಕ ತಾಣಗಳವರೆಗೆ, ಪಾಂಡಲ ಅವರು 1996 ರಿಂದ ಭಾರತದಾದ್ಯಂತ ಪರಿಸರ ಸ್ನೇಹಿ ನಿರ್ಮಾಣಗಳನ್ನು ಮಾಡುತ್ತಿದ್ದಾರೆ. ದೇಶದ ವೈಭೋವೋಪೇತ ಮಣ್ಣಿನ ಮನೆಗಳನ್ನು ಜನಪ್ರಿಯಗೊಳಿಸಿರುವ ಇವರು, ಪ್ರಶಸ್ತಿ ವಿಜೇತ ವಾಸ್ತುಶಿಲ್ಪಿಯೂ ಹೌದು. ಒಣಹುಲ್ಲು, ಬಿದಿರು, ಮರ, ಉಕ್ಕಿನಂತಹ ಯಾವುದೇ ಸ್ಥಳೀಯ ಸಂಪನ್ಮೂಲಗಳನ್ನು ಸಲೀಸಾಗಿ ಸಂಯೋಜಿಸಿ ವಿನ್ಯಾಸಪಡಿಸಿ ಅವರು ಅದನ್ನು ತಮ್ಮ ನಿರ್ಮಾಣಗಳಲ್ಲಿ ಬಳಕೆ ಮಾಡುತ್ತಾರೆ.
ಕೇರಳದ ಕೊಲ್ಲಂನ ಮಲಬಾರ್ ಕರಾವಳಿಯಲ್ಲಿ ಹುಟ್ಟಿ ಬೆಳೆದ ಪಾಂಡಲ ಅವರಿಗೆ ಸುಸ್ಥಿರ ಮನೆಗಳ ಮೇಲೆ ಮೋಹ ಬಾಲ್ಯದಿಂದಲೂ ಇದೆ.
”ಸರೋವರಗಳು, ಪರ್ವತಗಳು, ವಿಶಾಲವಾದ ಹಸಿರು ಹೊಲಗಳು ಮತ್ತು ಹಿನ್ನೀರಿನಿಂದ ಆವೃತವಾದ ಸಮುದ್ರದ ಮಡಿಲಲ್ಲಿ ಸುಣ್ಣ ಬಳಿಯಲಾದ ಮಣ್ಣಿನ ಮನೆಯಲ್ಲಿ ನಾನು ಬೆಳೆದಿದ್ದೇನೆ. ನನ್ನ ತಂದೆ ಒಬ್ಬ ಕಲಾವಿದ, ಆಗಾಗ್ಗೆ ಜೇಡಿಮಣ್ಣನ್ನು ಅವರು ಸಂಗ್ರಹಿಸುತ್ತಿದ್ದರು. ಹಾಗಾಗಿ ಪುಟ್ಟ ಆಟದ ಮನೆಗಳನ್ನು ಮಾಡಲು ನಾನು ಜೇಡಿಮಣ್ಣನ್ನು ಬಳಸುತ್ತಿದ್ದೆ. ಜೀವನಕ್ಕಾಗಿ ಪ್ರಕೃತಿಗೆ ಹತ್ತಿರವಾಗಬೇಕೆಂದು ನಾನು ಬಯಸುತ್ತೇನೆ” ಎಂದು 65 ವರ್ಷದ ಪಾಂಡಲ ಹೇಳುತ್ತಾರೆ.
ವಾಸ್ತುಶಿಲ್ಪವನ್ನು ಅಧ್ಯಯನದ ವಿಷಯವಾಗಿ ಆಯ್ಕೆ ಮಾಡಿದ ನಂತರ ಅವರ ಆಶಯವು ದೃಢವಾದ ಆಕಾರವನ್ನು ಪಡೆದುಕೊಂಡಿತು. ಅವರು ನವದೆಹಲಿಯ ಸ್ಕೂಲ್ ಆಫ್ ಪ್ಲಾನಿಂಗ್ ಆ್ಯಂಡ್ ಆರ್ಕಿಟೆಕ್ಚರ್ನಿಂದ ಸ್ನಾತಕೋತ್ತರ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ನಂತರ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಯುಕೆ ಹೆರಿಟೇಜ್ ಕನ್ಸರ್ವೇಶನ್ ಆ್ಯಂಡ್ ಫೋರ್ಟ್ ಬ್ರಾಕ್ಹರ್ಸ್ಟ್ ಇಂಗ್ಲಿಷ್ ಹೆರಿಟೇಜ್ ಟ್ರೈನಿಂಗ್ ಸೆಂಟರಿನಲ್ಲಿ ಫೆಲೋಶಿಪ್ ಪಡೆದುಕೊಂಡಿದ್ದಾರೆ.
ನನಗೆ ಮಣ್ಣಿನ ಮೇಲೆ ಪ್ರೀತಿ ಹುಟ್ಟಲು ‘ಆರ್ಕಿಟೆಕ್ಚರ್ ಫಾರ್ ದಿ ಪೂರ್: ಆನ್ ಎಕ್ಸ್ಪರಿಮೆಂಟ್ ಇನ್ ರೂರಲ್ ಈಜಿಪ್ಟ್’ ಎಂಬ ಪುಸ್ತಕವನ್ನು ಬರೆದ ಪ್ರಖ್ಯಾತ ಈಜಿಪ್ಟಿನ ವಾಸ್ತುಶಿಲ್ಪಿ ಹಸನ್ ಫಾತಿ ಅವರು ಕೂಡ ಕಾರಣ ಎಂದು ಪಾಂಡಲ ಹೇಳುತ್ತಾರೆ. ಈ ಪುಸ್ತಕದಲ್ಲಿದ್ದ ನಿರ್ಮಾಣದ ತಂತ್ರಗಳು ಅವರನ್ನು ಪ್ರೇರೇಪಿಸಿದವು ಮತ್ತು ಪ್ರಕೃತಿಗೆ ತೊಂದರೆಯಾಗದಂತೆ ತಲೆ ಮೇಲೊಂದು ಸೂರು ನಿರ್ಮಿಸುವ ಪರಿಕಲ್ಪನೆಯನ್ನು ಅವರಿಗೆ ಈ ಪುಸ್ತಕ ಪರಿಚಯಿಸಿತು.
ಕಟ್ಟಡ ನಿರ್ಮಾಣದ ಪರಿಸರದ ಜೀವವೈವಿಧ್ಯತೆಯನ್ನು ಅಧ್ಯಯನ ಮಾಡುವುದು ಪಾಂಡಲರ ನಿರ್ಮಾಣ ಪ್ರಕ್ರಿಯೆಯ ಮೊದಲ ಮತ್ತು ಅತ್ಯಂತ ನಿರ್ಣಾಯಕ ಭಾಗವಾಗಿದೆ.
ಪ್ರಕೃತಿಗೆ ನಮ್ಮ ಕಡೆಯಿಂದ ಹಸ್ತಕ್ಷೇಪ ಕನಿಷ್ಠವಾಗಿರಬೇಕು. ಮರಗಳು ಮತ್ತು ಜಲಮೂಲಗಳಿಗೆ ತೊಂದರೆಯಾಗದಂತೆ ಮನೆ ನಿರ್ಮಿಸುವುದು ನಮ್ಮ ನೀತಿಯಾಗಬೇಕು. ಮನೆಯಲ್ಲಿ ಎಸಿಗಳು, ಫ್ಯಾನ್ಗಳು ಮತ್ತು ಹೀಟರ್ಗಳ ಬಳಕೆಯನ್ನು ಕಡಿಮೆ ಮಾಡಲು ಮನೆ ಕಟ್ಟುವ ಜಾಗದಲ್ಲಿನ ಗಾಳಿಯ ದಿಕ್ಕು ಮತ್ತು ನೈಸರ್ಗಿಕ ಬೆಳಕನ್ನು ಅಧ್ಯಯನ ಮಾಡುವುದು ಬಹುಮುಖ್ಯ ಎಂದು ಇವರು ಅಭಿಪ್ರಾಯಿಸುತ್ತಾರೆ.
ಅವರು ತಮ್ಮ ನಿರ್ಮಾಣದಲ್ಲಿ ಹಳೆಯ ನಿರ್ಮಾಣ ಕಾಬ್ ತಂತ್ರವನ್ನು ಬಳಸುತ್ತಾರೆ. ಕಾಬ್ ಎಂಬುದು ಮಣ್ಣು, ಜೇಡಿಮಣ್ಣು ಮತ್ತು ಒಣಹುಲ್ಲಿನ ಸಂಯೋಜನೆಯಾಗಿದ್ದು, ನೀರಿನೊಂದಿಗೆ ಬೆರೆಸಲ್ಪಟ್ಟಿರುತ್ತದೆ.
ಮನೆಯನ್ನು ಸದೃಢವಾಗಿಸಲು ಪಾಂಡಲ ಅವರು ಶೇಕಡಾ 20 ಕ್ಕಿಂತ ಹೆಚ್ಚು ಜೇಡಿಮಣ್ಣನ್ನು ಬಳಸುತ್ತಾರೆ. ಮಿಶ್ರಣವನ್ನು ಯಂತ್ರಗಳಿಂದ ಅಥವಾ ಡಿಗ್ಗರ್ ಗಳಿಂದ ಕೈಯ್ಯಾರೆ ಮಾಡಬಹುದು.
ಕಾಬ್ ವಿಧಾನದ ಹೊರತಾಗಿ, ಅವರು ಅಡಿಪಾಯ, ಮಹಡಿಗಳು ಮತ್ತು ಗೋಡೆಗಳನ್ನು ನಿರ್ಮಿಸಲು ರಾಮ್ಡ್ ಅರ್ಥ್ ತಂತ್ರವನ್ನು ಬಳಸುತ್ತಾರೆ, ಅಲ್ಲಿ ನೈಸರ್ಗಿಕ ಕಚ್ಚಾ ವಸ್ತುಗಳಾದ ಸೀಮೆಸುಣ್ಣ, ಸುಣ್ಣ ಅಥವಾ ಜಲ್ಲಿಯನ್ನು ಒಟ್ಟಿಗೆ ಸಂಯೋಜಿಸಲಾಗುತ್ತದೆ.
ರಾಮ್ಡ್ ಅರ್ಥ್ ಮತ್ತು ಕಾಬ್ ಗೋಡೆಗಳನ್ನು ಸ್ಥಳದಲ್ಲೇ ನಿರ್ಮಿಸಲಾಗಿರುವುದರಿಂದ, ಉತ್ಪಾದನೆ ಮತ್ತು ಸಾರಿಗೆ ವೆಚ್ಚ ಇರುವುದಿಲ್ಲ. ಇದು ಇಂಗಾಲವನ್ನು ಕಡಿಮೆ ಮಾಡುತ್ತದೆ.
ಕಾಬ್ ಮನೆಯ ದಪ್ಪ ಗೋಡೆಗಳು ಉಷ್ಣ ನಿಯಂತ್ರಣವನ್ನು ಕೂಡ ಒದಗಿಸುತ್ತವೆ, ಅಂದರೆ ಅವು ಬೇಸಿಗೆಯಲ್ಲಿ ತಂಪಾಗಿರುತ್ತವೆ ಮತ್ತು ಚಳಿಗಾಲದಲ್ಲಿ ಶಾಖವನ್ನು ಹೀರಿಕೊಳ್ಳುತ್ತವೆ.
ಗೋಡೆಗಳು ಮಣ್ಣಿನಿಂದ ಮಾಡಲ್ಪಟ್ಟಿರುವುದರಿಂದ ಅವುಗಳು ಮರುಬಳಕೆ ಮಾಡಬಹುದಾಗಿವೆ ಮತ್ತು ಮಾಲಿನ್ಯ ಮುಕ್ತವಾಗಿವೆ. ಮಳೆಯಿಂದ ಗೋಡೆಗಳನ್ನು ರಕ್ಷಿಸುವಂತೆ ಛಾವಣಿಗಳನ್ನು ನಿರ್ಮಿಸಿದರೆ ಮಣ್ಣಿನ ಗೋಡೆಯ ಮನೆಗಳು ಸಾವಿರಾರು ವರ್ಷಗಳ ಕಾಲ ಬಾಳಿಕೆಯೂ ಬರುತ್ತವೆ. “ಛಾವಣಿಯನ್ನು ನಿರ್ಮಿಸುವಾಗ ನಾವು ಅದನ್ನು ಮನೆಯ ಹೊರಗೆ ಎರಡು ಅಡಿಗಳವರೆಗೆ ವಿಸ್ತರಿಸುತ್ತೇವೆ. ಹೀಗೆ ಮಾಡುವುದರಿಂದ, ಮಳೆನೀರು ನಿರ್ಮಾಣವನ್ನು ಸೋಕದಂತೆ ಕಾಪಾಡಬಹುದು” ಎಂದು ಪಾಂಡಲ ಹೇಳುತ್ತಾರೆ.”
“ಮಣ್ಣಿನ ಮನೆಗಳು ಮಳೆಗಾಲದ ಸಮಯದಲ್ಲಿ ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂಬುದು ನಿಜ, ಆದರೆ ನಿರ್ಮಾಣದ ಸಮಯದಲ್ಲೇ ಈ ಸಮಸ್ಯೆಗಳನ್ನು ಮುನ್ನೆಚ್ಚರಿಕೆಯಾಗಿ ಬಗೆಹರಿಸಬಹುದು. ಯಾವುದೇ ರೀತಿಯ ಹಾನಿಯನ್ನು ತಡೆಗಟ್ಟಲು ಗೋಧಿ ಹೊಟ್ಟು, ಒಣಹುಲ್ಲು, ಸುಣ್ಣ ಮತ್ತು ಸೆಗಣಿಯಂತಹ ವಸ್ತುಗಳನ್ನು ಬಳಕೆ ಮಾಡಬಹುದಾಗಿದೆ” ಎಂದು ಅವರು ಹೇಳುತ್ತಾರೆ.
ಸಾಮಾನ್ಯ ಮನೆಯ 1 ಚದರ ಅಡಿಗೆ 1,000 ರೂ ವ್ಯಯವಾಗುತ್ತದೆ. ಆದರೆ ಅದೇ ಪ್ರದೇಶದಲ್ಲಿ ಪರಿಸರ ಸ್ನೇಹಿ ಮನೆ ನಿರ್ಮಾಣ ಮಾಡಲು ತಗಲುವ ವೆಚ್ಚ 600 ರೂಪಾಯಿ ಎಂದು ಅವರು ಹೇಳುತ್ತಾರೆ.
ತಮ್ಮ ಕೆಲಸಗಳಿಗಾಗಿ ಯುಗೇನ್ ಪಾಂಡಲ ಅವರು ಲಲಿತ್ ಕಲಾ ಅಕಾಡೆಮಿಯಿಂದ ಲಾರಿ ಬೇಕರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕೇವಲ ಮೋಹವಾಗಿ ಪ್ರಾರಂಭವಾದ ಅವರ ಮಣ್ಣಿನ ರಚನೆಯ ಮೇಲಿನ ಆಸಕ್ತಿ ಈಗ ವಸತಿ ನಿರ್ಮಾಣದವರೆಗೂ ಮುಂದುವರೆದಿದೆ. ವಸತಿ ಪ್ರದೇಶಗಳ ಇಂಗಾಲವನ್ನು ಕಡಿಮೆಗೊಳಿಸುವವರೆಗೂ ಸಾಗಿದೆ.
ಮಧ್ಯಪ್ರದೇಶದ ತೆಂಡೂ ಲೀಫ್ ಜಂಗಲ್ ರೆಸಾರ್ಟ್ ಅನ್ನು ಇವರು ತ್ಯಾಜ್ಯ ವಸ್ತುಗಳಿಂದ ನಿರ್ಮಾಣ ಮಾಡಿದ್ದಾರೆ. ಇವರ ಪ್ರಕಾರ, ಈ ರೆಸಾರ್ಟ್ನ ಸುಂದರವಾದ ಕುಟೀರಗಳನ್ನು ಮಾಡಲು ಬಿಸಾಕಲಾದ ಮರ ಮತ್ತು ಮರುಬಳಕೆ ಮಾಡಿದ ಉಕ್ಕನ್ನು ಬಳಸಲಾಗಿದೆ. ಈ ನಿರ್ಮಾಣಗಳನ್ನು ಅವರು ‘ಅಗ್ಗದ ಸುಸ್ಥಿರ ಕಟ್ಟಡಗಳು’ ಎಂದು ಕರೆಯುತ್ತಾರೆ.
ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸುವುದು ಇನ್ನು ಮುಂದೆ ಆಶಯವಾಗುವುದಿಲ್ಲ, ಅದು ಅಗತ್ಯವಾಗುತ್ತದೆ. ಇಂದು ನಿರ್ಮಿಸುವ ದೊಡ್ಡ ದೊಡ್ಡ ಮನೆಗಳಿಂದಾಗಿ ಶೇ.40 ಇಂಗಾಲ ಪರಿಸರಕ್ಕೆ ಬಿಡುಗಡೆಯಾಗುತ್ತಿದೆ. ನೀರಿನ ಬಿಕ್ಕಟ್ಟು ಮತ್ತು ಪ್ರವಾಹವನ್ನು ತಡೆಗಟ್ಟಲು ಜೀವನಶೈಲಿಯಲ್ಲಿ ಮಾರ್ಪಾಡು ಮಾಡುವ ಅಗತ್ಯವಿದೆ ಎಂದು ಪಾಂಡಲ ಹೇಳುತ್ತಾರೆ.
ಪರಿಸರಕ್ಕೆ ಪೂರಕವಾಗಿ ಮನುಷ್ಯನ ಜೀವನಶೈಲಿಗಳು ಇರಬೇಕಾದುದು ಭವಿಷ್ಯದ ಅನಿವಾರ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಕೇರಳದ ವಾಸ್ತುಶಿಲ್ಪಿಯೊಬ್ಬರು, ಪರಿಸರಸ್ನೇಹಿ ಮಣ್ಣಿನ ಮನೆಗಳನ್ನು ಇಂದಿನ ಕಲ್ಲು ಸಿಮೆಂಟ್ ಮನೆಗಳಿಗಿಂತ ವೈಭವೋಪೇತವಾಗಿ ನಿರ್ಮಾಣ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.