ನವದೆಹಲಿ: ಕುಲಭೂಷಣ್ ಜಾಧವ್ ಅವರ ಮರಣದಂಡನೆಯನ್ನು ಪಾಕಿಸ್ಥಾನ ಮರುಪರಿಶೀಲನೆ ನಡೆಸಬೇಕು ಮತ್ತು ಅವರಿಗೆ ರಾಜತಾಂತ್ರಿಕ ನೆರವನ್ನು ನೀಡಲು ಭಾರತಕ್ಕೆ ಅನುವು ಮಾಡಿಕೊಡಬೇಕು ಎಂದು ಅಂತಾರಾಷ್ಟ್ರೀಯ ನ್ಯಾಯಾಲಯವು ನೀಡಿದ ತೀರ್ಪು, ಭಾರತಕ್ಕೆ ಜಾಧವ್ ಪ್ರಕರಣದಲ್ಲಿ ಭಾರಿ ದೊಡ್ಡ ಗೆಲುವು ತಂದುಕೊಟ್ಟಿದೆ. ಈ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸಿದೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು ಸತ್ಯಗಳನ್ನು ಆಧರಿಸಿದೆ ಮತ್ತು ಪ್ರತಿಯೊಬ್ಬ ಭಾರತೀಯರ ಸುರಕ್ಷತೆಗಾಗಿ ನಮ್ಮ ಸರ್ಕಾರ ಸದಾ ಕೆಲಸ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಐಸಿಜೆ ನೀಡಿದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಸತ್ಯ ಮತ್ತು ನ್ಯಾಯವು ಮೇಲುಗೈ ಸಾಧಿಸಿದೆ. ಸತ್ಯಗಳ ಅಧ್ಯಯನವನ್ನು ಆಧರಿಸಿ ನೀಡಿದ ತೀರ್ಪಿಗಾಗಿ ಐಸಿಜೆಗೆ ಅಭಿನಂದನೆಗಳು. ಕುಲಭೂಷಣ್ ಜಾಧವ್ ಅವರಿಗೆ ನ್ಯಾಯ ದೊರಕುತ್ತದೆ ಎಂದು ನನಗೆ ಭರವಸೆ ಇದೆ. ಪ್ರತಿಯೊಬ್ಬ ಭಾರತೀಯರ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಯಾವಾಗಲೂ ಕೆಲಸ ಮಾಡುತ್ತದೆ ”ಎಂದು ಟ್ವೀಟ್ ಮಾಡಿದ್ದಾರೆ.
ಪಾಕಿಸ್ಥಾನವು ಅಪರಾಧ ಮತ್ತು ಶಿಕ್ಷೆಯನ್ನು ಪರಿಣಾಮಕಾರಿಯಾಗಿ ಮರು ಪರಿಶೀಲಿಸುವವರೆಗೂ ಕುಲಭೂಷಣ್ ಜಾಧವ್ ಅವರ ಮರಣದಂಡನೆಯನ್ನು ಅಮಾನತುಗೊಳಿಸಬೇಕು ಎಂದು ಯುಎನ್ ನ್ಯಾಯಾಲಯ ಹೇಳಿದೆ. ಜಾಧವ್ ಅವರಿಗೆ ರಾಜತಾಂತ್ರಿಕ ನೆರವನ್ನು ನಿರಾಕರಿಸುವ ಮೂಲಕ ಪಾಕಿಸ್ಥಾನವು ವಿಯೆನ್ನಾ ಕನ್ವೆನ್ಷನ್ ಅನ್ನು ಉಲ್ಲಂಘಿಸಿದೆ ಎಂಬ ಭಾರತದ ವಾದವನ್ನು ಅದು ಒಪ್ಪಿಕೊಂಡಿದೆ.
ಜಾಧವ್ ಅವರ ಹಕ್ಕುಗಳ ಬಗ್ಗೆ ಪಾಕಿಸ್ಥಾನ ಅವರಿಗೆ ತಿಳಿಸಿಲ್ಲ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿದೆ. “ಕುಲಭೂಷಣ್ ಸುಧೀರ್ ಜಾಧವ್ ಅವರೊಂದಿಗೆ ಸಂವಹನ ನಡೆಸುವ ಮತ್ತು ಸಂಪರ್ಕವನ್ನು ಹೊಂದುವ, ಬಂಧನದಲ್ಲಿರುವ ಅವರನ್ನು ಭೇಟಿ ಮಾಡುವ ಮತ್ತು ಅವರ ಕಾನೂನು ಪ್ರಾತಿನಿಧ್ಯಕ್ಕೆ ವ್ಯವಸ್ಥೆ ಮಾಡುವ ಭಾರತದ ಹಕ್ಕನ್ನು ಪಾಕಿಸ್ಥಾನ ಕಸಿದುಕೊಂಡಿದೆ” ಎಂದು ಯುಎನ್ ನ್ಯಾಯಾಲಯವು ತೀರ್ಪು ನೀಡಿದೆ.
ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿನ 16 ನ್ಯಾಯಾಧೀಶರುಗಳ ಪೈಕಿ 15 ಮಂದಿ ಭಾರತದ ಪರವಾದ ತೀರ್ಪನ್ನು ನೀಡಿದ್ದಾರೆ. ಚೀನಾದ ನ್ಯಾಯಾಧೀಶರು ಕೂಡ ಭಾರತದ ಪರ ತೀರ್ಪು ನೀಡಿದ್ದಾರೆ. ಪಾಕಿಸ್ಥಾನದ ನ್ಯಾಯಾಧೀಶರೊಬ್ಬರು ಮಾತ್ರ ಭಾರತದ ವಿರುದ್ಧ ನಿಲುವು ತಳೆದಿದ್ದಾರೆ. ಇದು ಭಾರತಕ್ಕೆ ಸಂದ ಬಹುದೊಡ್ಡ ರಾಜತಾಂತ್ರಿಕ ಗೆಲುವೂ ಆಗಿದೆ.
We welcome today’s verdict in the @CIJ_ICJ. Truth and justice have prevailed. Congratulations to the ICJ for a verdict based on extensive study of facts. I am sure Kulbhushan Jadhav will get justice.
Our Government will always work for the safety and welfare of every Indian.
— Narendra Modi (@narendramodi) July 17, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.