ನವದೆಹಲಿ: ವಿದೇಶದಲ್ಲಿ ಭಾರತೀಯರು ಮತ್ತು ಭಾರತೀಯ ಹಿತಾಸಕ್ತಿಗಳಿಗೆ ಸಂಬಂಧಿಸಿದ ಭಯೋತ್ಪಾದನಾ ಕೃತ್ಯಗಳನ್ನು ತನಿಖೆಗೊಳಪಡಿಸುವ ಅಧಿಕಾರದ ಅಗತ್ಯ ರಾಷ್ಟ್ರೀಯ ತನಿಖಾ ದಳ (ಎನ್ಐಎ)ಗೆ ಇದೆ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಲೋಕಸಭೆಯಲ್ಲಿ ಎನ್ಐಎ(ತಿದ್ದುಪಡಿ) ಮಸೂದೆ, 2019ರ ಬಗೆಗಿನ ಚರ್ಚೆಯ ವೇಳೆ ಅವರು ಈ ಮಾತನ್ನಾಡಿದ್ದಾರೆ. ಎನ್ಐಎಗೆ ಹೆಚ್ಚಿನ ಶಕ್ತಿಯನ್ನು ನೀಡುವ ಸಲುವಾಗಿ ಈ ಮಸೂದೆಯನ್ನು ಪರಿಚಯಿಸಲಾಗಿದೆ.
ಎನ್ಐಎ ಅಡಿಯಲ್ಲಿನ ಪ್ರಕರಣಗಳ ತನಿಖೆ ಚುರುಕುಗೊಂಡಿವೆ ಮತ್ತು ಶೇ.90ರಷ್ಟು ಪ್ರಕರಣಗಳು ಅಂತಿಮ ಘಟ್ಟವನ್ನು ತಲುಪಿದೆ ಎಂದು ಶಾ ಹೇಳಿದ್ದಾರೆ. ಭಯೋತ್ಪಾದನೆಯನ್ನು ನಿಯಂತ್ರಿಸುವಲ್ಲಿ ಎನ್ಐಎ ಅತ್ಯುತ್ತಮ ಕೆಲಸ ಮಾಡುತ್ತಿದೆ ಮತ್ತು ದೇಶದಿಂದ ಭಯೋತ್ಪಾದನೆಯನ್ನು ತೊಡೆದುಹಾಕಲು ಹೆಚ್ಚು ಬಲಿಷ್ಠ ಎನ್ಐಎನ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಎನ್ಐಎ ಮತ್ತು ಇತರ ಭದ್ರತಾ ಸಂಸ್ಥೆಗಳ ದುರುಪಯೋಗದ ಬಗ್ಗೆ ಪ್ರತಿಪಕ್ಷಗಳ ಆತಂಕವನ್ನು ನಿವಾರಿಸಲು ಪ್ರಯತ್ನಿಸಿದ ಶಾ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಕಾನೂನಿನ ನಿಯಮದಿಂದ ನಿಯಂತ್ರಿಸಲ್ಪಟ್ಟಿದೆ ಮತ್ತು ಎಲ್ಲಾ ತನಿಖಾ ಸಂಸ್ಥೆಗಳು ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನವನ್ನು ಅನುಸರಿಸುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ. ಎನ್ಐಎಯನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಅವರು ಸದನಕ್ಕೆ ಭರವಸೆ ನೀಡಿದರು.
ಭಯೋತ್ಪಾದನೆ ವಿರುದ್ಧ ‘ಶೂನ್ಯ ಸಹಿಷ್ಣುತೆ’ ಎಂಬ ಪ್ರಧಾನಿ ಮೋದಿಯವರ ನೀತಿಯನ್ನು ಪುನರುಚ್ಚರಿಸಿದ ಗೃಹ ಸಚಿವರು, “ಭಯೋತ್ಪಾದನೆಯೆಂದರೆ ಭಯೋತ್ಪಾದನೆಯಷ್ಟೇ, ಅದಕ್ಕೆ ಬಲ ಅಥವಾ ಎಡ ಎಂಬುದಿಲ್ಲ” ಎಂದಿದ್ದಾರೆ. ಭಯೋತ್ಪಾದಕ ಕೃತ್ಯ ಎಸಗುವವರಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸುವ ಅಗತ್ಯವಿದೆ ಮತ್ತು ಖಂಡಿತವಾಗಿಯೂ ಅವರನ್ನು ಶಿಕ್ಷಿಸಲಾಗುತ್ತದೆ ಎಂದು ಶಾ ಪ್ರತಿಪಾದಿಸಿದ್ದಾರೆ.
“ನಮ್ಮ ಹುತಾತ್ಮ ಸೈನಿಕರ ವಿಧವೆಯರ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ, ಅವರ ತ್ಯಾಗದ ಬಗ್ಗೆ ನಮಗೆ ಕಾಳಜಿ ಇದೆ. ಹೀಗಾಗಿ, ವಿದೇಶದಲ್ಲಿ ಭಯೋತ್ಪಾದನೆ ಸಂಬಂಧಿತ ಅಪರಾಧಗಳ ಬಗ್ಗೆ ತನಿಖೆ ನಡೆಸಲು ಮತ್ತು ಆ ವಿಧವೆಯರಿಗೆ ನ್ಯಾಯ ಒದಗಿಸಲು ಎನ್ಐಎಗೆ ಹೆಚ್ಚಿನ ಅಧಿಕಾರವನ್ನು ನೀಡುವುದು ಮುಖ್ಯ” ಎಂದು ಶಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.