ನವದೆಹಲಿ: ಸಾರ್ವಜನಿಕರ ಮನೋಭಾವವನ್ನು ಬದಲಾಯಿಸುವ ಸಲುವಾಗಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ತನ್ನ ಶಾಲೆಗಳಿಗೆ ‘ನಗರ ಪಾಲಿಕಾ ಸ್ಕೂಲ್’ ಬದಲಾಗಿ ‘ಅಟಲ್ ಆದರ್ಶ್ ವಿದ್ಯಾಲಯ’ ಎಂದು ಮರುನಾಮಕರಣ ಮಾಡಿದೆ.
ಶಾಲೆಗಳಿಗೆ ಮರುನಾಮಕರಣವನ್ನು ಮಾಡುವ ನಿರ್ಧಾರವನ್ನು ಮುನ್ಸಿಪಲ್ ಕೌನ್ಸಿಲ್ ಕಳೆದ ವಾರ ತೆಗೆದುಕೊಂಡಿದ್ದು, ಅದಕ್ಕೆ ಅನುಗುಣವಾಗಿ ನಿರ್ಣಯವನ್ನು ಈಗಾಗಲೇ ಅಂಗೀಕರಿಸಲಾಗಿದೆ.
“ಎನ್ಡಿಎಂಸಿ ಶಾಲೆಗಳಲ್ಲಿನ ದಾಖಲಾತಿಗಳ ಸಂಖ್ಯೆಯನ್ನು ಹೆಚ್ಚಿಸುವ ಮತ್ತು ಸಾರ್ವಜನಿಕ ಮನೋಭಾವವನ್ನು ಬದಲಾಯಿಸುವ ಸಲುವಾಗಿ 2019-20ರ ಶೈಕ್ಷಣಿಕ ವರ್ಷದಿಂದ ಎಲ್ಲಾ ನಗರ ಪಾಲಿಕಾ ಶಾಲೆಗಳ ಹೆಸರನ್ನು ಅಟಲ್ ಆದರ್ಶ್ ವಿದ್ಯಾಲಯ ಎಂದು ಬದಲಾಯಿಸುವ ನಿರ್ಣಯವನ್ನು ನಾವು ಅಂಗೀಕರಿಸಿದ್ದೇವೆ” ಎಂದು ಎನ್ಡಿಎಂಸಿಯ ಶಿಕ್ಷಣ ನಿರ್ದೇಶಕ ಆರ್.ಪಿ.ಗುಪ್ತಾ ತಿಳಿಸಿದ್ದಾರೆ.
31 ಶಾಲೆಗಳನ್ನು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ನಡೆಸುತ್ತಿದ್ದು, ಈ ಶಾಲೆಗಳನ್ನು ನಗರ ಪಾಲಿಕಾ ಸ್ಕೂಲ್ ಎಂದು ಕರೆಯಲಾಗುತ್ತದೆ. ದೊಡ್ಡ ದೊಡ್ಡ ಖಾಸಗಿ ಶಾಲೆಗಳು ಅಪಾರ ಸಂಖ್ಯೆಯಲ್ಲಿ ತಲೆ ಎತ್ತುತ್ತಿರುವುದರಿಂದ ನಗರ ಪಾಲಿಕಾ ಶಾಲೆಗಳ ಬಗ್ಗೆ ಜನರಲ್ಲಿ ಕೀಳರಿಮೆಯ ಭಾವವಿದೆ. ಆ ಭಾವವನ್ನು ಹೊಡೆದೋಡಿಸುವ ಸಲುವಾಗಿ ಹೆಸರು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
“ಎಲ್ಲಾ ದಾಖಲೆಗಳಲ್ಲಿ ಮತ್ತು ಪತ್ರವ್ಯವಹಾರಗಳಲ್ಲಿ ಶಾಲೆಯ ಹೆಸರನ್ನು ಬದಲಾಯಿಸುವಂತೆ ಈ ಶಾಲೆಗಳ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ” ಎಂದು ಗುಪ್ತಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.