ನವದೆಹಲಿ: ಸರ್ಕಾರಿ ಸ್ವಾಮ್ಯದ ಆರ್ಡನೆನ್ಸ್ ಫ್ಯಾಕ್ಟರಿಗಳ ಏಕಸ್ವಾಮ್ಯತೆಯನ್ನು ಕೊನೆಗೊಳಿಸುವ ಸಲುವಾಗಿ ಕೇಂದ್ರ ರಕ್ಷಣಾ ಸಚಿವಾಲಯವು ಈ ವಲಯದಲ್ಲಿ ಖಾಸಗಿ ಪಾಲುದಾರರನ್ನು ಆಹ್ವಾನಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳಿಗೆ ಉತ್ಪಾದನಾ ಗುರಿಗಳನ್ನು ಮತ್ತು ಗುಣಮಟ್ಟದ ಮಿಲಿಟರಿ ಯಂತ್ರಾಂಶವನ್ನು ಪೂರೈಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ವರದಿ ಹೇಳಿದೆ.
ರಕ್ಷಣಾ ಸಚಿವಾಲಯವು ಕಳೆದ ಏಪ್ರಿಲ್ನಲ್ಲಿ, ಟ್ಯಾಂಕ್ಗಳು ಮತ್ತು ಹೌವಿಟ್ಜರ್ಗಳಿಗೆ ಒಂಬತ್ತು ಬಗೆಯ ಮದ್ದುಗುಂಡುಗಳನ್ನು ಪೂರೈಸುವ ಟೆಂಡರ್ಗಳಿಗೆ ಖಾಸಗಿ ವಲಯದವರಿಗೂ ಆಹ್ವಾನವನ್ನು ನೀಡಿತ್ತು. ಸೇನೆಗೆ ಮುಕ್ತ ಮಾರುಕಟ್ಟೆಯಿಂದ ಖರೀದಿಸಬಹುದಾದಂತಹ ಸಮವಸ್ತ್ರ ಮತ್ತು ಸ್ಲೀಪಿಂಗ್ ಬ್ಯಾಗ್ ಮುಂತಾದ 143 ನಾನ್-ಕೋರ್ ವಸ್ತುಗಳಿಗಾಗಿ ಎಪ್ರಿಲ್ 27 ರಂದು ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್(ಒಎಫ್ ಬಿ)ಗೆ ‘ಶೇಪ್-ಅಪ್ ಅಥವಾ ಶೇಪ್ ಔಟ್’ ಸರ್ಕ್ಯುಲರ್ ಅನ್ನು ಹೊರಡಿಸಲಾಗಿತ್ತು.
ಹೆಚ್ಚುವರಿ ಕಂಟ್ರೋಲರ್ ಜನರಲ್ ಆಫ್ ಡಿಫೆನ್ಸ್ ಅಕೌಂಟ್ಸ್ (ಸಿಜಿಡಿಎ) ಎ. ಕೆ. ಸಕ್ಸೇನಾ ಅವರು ಈ ಹಿಂದೆ ಸಲ್ಲಿಸಿದ ವರದಿಯು, ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡಿನ ಗಂಭೀರ ಅಸಮರ್ಥತೆಗಳನ್ನು ಎತ್ತಿ ತೋರಿಸಿದೆ ಮತ್ತು ಯುದ್ಧ ಟ್ಯಾಂಕ್ಗಳಿಂದ ಹಿಡಿದು ಬಟ್ಟೆಯಂತಹ ಸಾಮಾನ್ಯ ವಸ್ತುಗಳಿಗೆ ಇದು ಹೆಚ್ಚುವರಿ ಹಣವನ್ನು ವಿಧಿಸಿದೆ ಎಂದು ಆರೋಪಿಸಿದೆ.
“ಆರ್ಡನೆನ್ಸ್ ಫ್ಯಾಕ್ಟರಿಗಳು ಸಾಂಸ್ಥೀಕರಣಗೊಳ್ಳದ ಹೊರತು ಮೇಕ್ ಇನ್ ಇಂಡಿಯಾ ಯಶಸ್ಸನ್ನು ಕಾಣುವುದಿಲ್ಲ ಅಥವಾ ಇನ್ನೂ ಉತ್ತಮ ರೀತಿಯಲ್ಲಿ ಖಾಸಗಿ ವಲಯದೊಂದಿಗೆ ಸಹಭಾಗಿತ್ವಕ್ಕೆ ಇಳಿಯುವುದಿಲ್ಲ. ಸಾಂಸ್ಥೀಕರಣಗೊಂಡರೆ ಆಗ ಅವರಿಗೆ ಸ್ಪರ್ಧೆ ನಡೆಸುವುದನ್ನು ಬಿಟ್ಟು ಬೇರೆ ದಾರಿ ಇರುವುದಿಲ್ಲ” ಎಂದು ಸಕ್ಸೇನಾ ವರದಿ ತಿಳಿಸಿದೆ.
ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ ಅಧ್ಯಕ್ಷ ಎಸ್ ಸಿ ಬಾಜ್ಪೈ ಮತ್ತು ಕಾರ್ಯದರ್ಶಿ ಅಶೋಕ್ ಕುಮಾರ್ ಗುಪ್ತಾ ಅವರು, ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕಾಗಿ (ಪಿಪಿಪಿ) ನಾಲ್ಕು ಕಾರ್ಖಾನೆಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ ರೈಫಲ್ ಫ್ಯಾಕ್ಟರಿ ಇಶಾಪೋರ್, ಸ್ಮಾಲ್ ಆರ್ಮ್ಸ್ ಫ್ಯಾಕ್ಟರಿ ಕಾನ್ಪುರ್, ಆರ್ಡನೆನ್ಸ್ ಫ್ಯಾಕ್ಟರಿ ಪ್ರಾಜೆಕ್ಟ್ ಕೊರ್ವಾ ಮತ್ತು ಆರ್ಡನೆನ್ಸ್ ಫ್ಯಾಕ್ಟರಿ ತ್ರಿಚ್ಚಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.