ನವದೆಹಲಿ: ದಾಖಲೆ ಎಂಬಂತೆ ಗುರುವಾರ ಸಂಸತ್ತಿನಲ್ಲಿ ಮಧ್ಯರಾತ್ರಿಯವರೆಗೂ ಚರ್ಚೆ ಮುಂದುವರೆದಿದ್ದು, ಸುಮಾರು 100 ಮಂದಿ ಸಂಸದರು ಇದರಲ್ಲಿ ಭಾಗಿಯಾಗಿದ್ದರು, ಭಾರತೀಯ ರೈಲ್ವೇ ಮತ್ತು ರೈಲ್ವೇ ಸಚಿವಾಲಯಕ್ಕೆ ಅನುದಾನ ನೀಡುವ ಬೇಡಿಕೆಗಳ ವಿಷಯದ ಮೇಲೆ ಈ ಸುದೀರ್ಘ ಚರ್ಚೆ ನಡೆದಿದೆ.
ಲೋಕಸಭೆಯು ರಾತ್ರಿ 11:58 ರವರೆಗೆ ಕಾರ್ಯನಿರ್ವಹಣೆ ಮಾಡಿದೆ. “ಸುಮಾರು 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಲೋಕಸಭೆಯು ಇಷ್ಟು ಸುದೀರ್ಘ ಸಮಯದವರೆಗೆ ಕಾರ್ಯನಿರ್ವಹಿಸಿದೆ” ಎಂದು ಅಧಿವೇಶನ ಮುಗಿದ ನಂತರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
“ಗುರುವಾರ ಮಧ್ಯಾಹ್ನ ಪ್ರಾರಂಭವಾದ ಚರ್ಚೆಯಲ್ಲಿ ಸುಮಾರು 100 ಸದಸ್ಯರ ಸಕ್ರಿಯವಾಗಿ ಭಾಗವಹಿಸಿದರು ಮತ್ತು ಮಧ್ಯರಾತ್ರಿಯಾಗಲು ಎರಡೇ ನಿಮಿಷಗಳ ಮುಂಚಿತವಾಗಿ ಚರ್ಚೆ ಮುಕ್ತಾಯಗೊಂಡಿದೆ. ಇದು ಒಂದು ದಾಖಲೆ” ಎಂದು ಜೋಶಿ ಹೇಳಿದ್ದಾರೆ.
ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಇಂದು ಮಧ್ಯಾಹ್ನ ಚರ್ಚೆಯ ಬಗ್ಗೆ ಸಂಸತ್ತಿನಲ್ಲಿ ಪ್ರತಿಕ್ರಿಯೆಯನ್ನು ನೀಡುವ ಸಾಧ್ಯತೆಯಿದೆ, ಅದರ ನಂತರ ರೈಲ್ವೆ ಸಚಿವಾಲಯಕ್ಕೆ ಅನುದಾನ ನೀಡುವ ಬೇಡಿಕೆಗಳನ್ನು ಮತದಾನಕ್ಕೆ ತರಲಾಗುತ್ತದೆ ಎನ್ನಲಾಗಿದೆ.
1996ರಲ್ಲೂ, ರೈಲ್ವೆ ಬಜೆಟ್ ಕುರಿತ ಚರ್ಚೆ ಜುಲೈ 25 ರಂದು ಬೆಳಿಗ್ಗೆ ಪ್ರಾರಂಭವಾಗಿ, ಜುಲೈ 26 ರಂದು ಬೆಳಿಗ್ಗೆ 7.17 ರವರೆಗೆ ಮುಂದುವರೆದಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಮಧ್ಯರಾತ್ರಿಯವರೆಗೆ ಸುದೀರ್ಘವಾದ ಚರ್ಚೆಯನ್ನು ನಡೆಸಲಾಗಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮೊದಲೇ ತಮ್ಮ ಕಾರ್ಯದರ್ಶಿಗೆ, ಸಮರ್ಪಕ ಆಹಾರ ಮತ್ತು ನೀರು ಸದಸ್ಯರಿಗೆ, ಸಿಬ್ಬಂದಿಗಳಿಗೆ ಮಧ್ಯರಾತ್ರಿಯವರೆಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದರು. ಅಲ್ಲದೇ ಸದಸ್ಯರು, ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಗಳ ಸಾರಿಗೆ ಸೌಲಭ್ಯಕ್ಕೂ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳುವಂತೆ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.