ನವದೆಹಲಿ: ರಾಯ್ ಬರೇಲಿಯ ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿಯನ್ನು ಖಾಸಗೀಕರಣಗೊಳಿಸುವ ಕೇಂದ್ರದ ನಿರ್ಧಾರವನ್ನು ಕಲಾಪದ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು, ಸರ್ಕಾರವು ಫ್ಯಾಕ್ಟರಿಯ ಭೂಮಿಯನ್ನು ಕಡಿಮೆ ಹಣಕ್ಕೆ ನೀಡಿದೆ ಎಂದು ಆರೋಪಿಸಿದ್ದಾರೆ. ಸರ್ಕಾರದ ನಿರ್ಧಾರದಿಂದಾಗಿ 2,000 ಉದ್ಯೋಗಿಗಳ ಭವಿಷ್ಯ ಅಪಾಯಕ್ಕೆ ಸಿಕ್ಕಿದೆ ಎಂದಿದ್ದಾರೆ.
ಸೋನಿಯಾ ಆರೋಪಕ್ಕೆ ತಿರುಗೇಟು ನೀಡಿರುವ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು, ಕಂಪನೀಕರಣಗೊಳಿಸುವುದು ಎಂದರೆ ಖಾಸಗೀಕರಣಗೊಳಿಸುವುದಲ್ಲ ಎಂದಿದ್ದಾರೆ. ಸರ್ಕಾರವು ರೈಲ್ವೆ ಸಚಿವಾಲಯದ ಅಡಿಯಲ್ಲಿ “ಇಂಡಿಯನ್ ರೈಲ್ವೆ ರೋಲಿಂಗ್ ಸ್ಟಾಕ್ ಕಂಪನಿ” ಎಂಬ ಹೆಸರಿನ ಹೊಸ ಸಾರ್ವಜನಿಕ ವಲಯ (ಪಿಎಸ್ಯು-ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್)ದ ಸ್ಥಾಪನೆಗೆ ಯೋಜಿಸುತ್ತಿದೆ ಮತ್ತು MCF, ರಾಯ್ ಬರೇಲಿ ಸೇರಿದಂತೆ ಉತ್ಪಾದನಾ ಘಟಕಗಳನ್ನು ಹೊಸ ಪಿಎಸ್ಯು ಅಡಿಯಲ್ಲಿ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.
ಸ್ಥಳಾಂತರಗೊಂಡ ಕಾರ್ಖಾನೆಗಳು ಸರ್ಕಾರದ ನಿಯಂತ್ರಣದಲ್ಲೇ ಇರುತ್ತವೆ. ಇವುಗಳು ಸಂಪೂರ್ಣ ಕ್ರಿಯಾತ್ಮಕ ಪಿಎಸ್ಯು ಗಳಾಗುವುದರಿಂದ ನಿರ್ವಹಣೆ ಉತ್ತಮಗೊಳ್ಳುತ್ತದೆ ಎನ್ನುವ ಮೂಲಕ ಗೋಯಲ್ ಸೋನಿಯಾಗೆ ತಿರುಗೇಟು ನೀಡಿದ್ದಾರೆ.
“ಈ ಕಾರ್ಖಾನೆಗಳು ಪಿಎಸ್ಯುಗಳ ಸುಪರ್ದಿಗೆ ಬರುವುದರಿಂದ ತಂತ್ರಜ್ಞಾನದ ಪಾಲುದಾರಿಕೆ ಮತ್ತು ಆಧುನೀಕರಣಕ್ಕೆ ಸಹಾಯ ಆಗುತ್ತದೆ. ಪಿಎಸ್ಯುಗಳು ಸರ್ಕಾರಿ ನಿಯಂತ್ರಿತ ಘಟಕಗಳಾಗಿದ್ದರೂ ಕೂಡ ಅವು ಹೆಚ್ಚು ಸ್ವಾಯತ್ತ ಮತ್ತು ಪರಿಣಾಮಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಉತ್ತಮ ಉತ್ಪಾದನೆಯನ್ನು ನೀಡುತ್ತವೆ ಮತ್ತು ಅದರ ಉದ್ಯೋಗಿಗಳಿಗೆ ಸರ್ಕಾರಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಿಂತ ಉತ್ತಮ ಸೌಲಭ್ಯಗಳಿವೆ” ಎಂದಿದ್ದಾರೆ. ತಮ್ಮ ಸಚಿವಾಲಯವು ಒಕ್ಕೂಟಗಳೊಂದಿಗೆ ಸಮಾಲೋಚನೆ ನಡೆಸಿ, ಉದ್ಯೋಗಿಗಳಿಗೆ ಯಾವುದೇ ಹಾನಿ ಆಗದಂತೆ ನೋಡಿಕೊಳ್ಳುತ್ತದೆ ಎಂದು ಗೋಯಲ್ ಭರವಸೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.