ಮಂಗಳೂರು : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 30ನೇ ಭಾನುವಾರದ ಶ್ರಮದಾನವನ್ನು ಹಂಪಣಕಟ್ಟೆಯಲ್ಲಿ ಹಮ್ಮಿಕೊಳ್ಳಲಾಯಿತು. ದಿನಾಂಕ 30-6-2019 ರಂದು ಹಳೆಯ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 7.30 ಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ರಾಜಶೇಖರ್ ಪುರಾಣಿಕ್ ಹಾಗೂ ಜಯಪ್ರಕಾಶ ನಾಯಕ್ ಶ್ರಮದಾನಕ್ಕೆ ಚಾಲನೆ ನೀಡಿದರು. ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಹರೀಶ್ ಆಚಾರ್, ಮೋಹನ್ ಕೊಟ್ಟಾರಿ, ಶ್ರೀಕಾಂತ್ ರಾವ್, ಅನಿರುದ್ಧ ನಾಯಕ್, ರಾಜೇಶ್ವರಿ, ಯಶೋಧರ ಚೌಟ್, ಶ್ರೀಕರ ಕಲ್ಲೂರಾಯ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಾಲನೆ ನೀಡಿದ ರಾಜಶೇಖರ್ ಪುರಾಣಿಕ್ ಮಾತನಾಡಿ ಸ್ವಚ್ಛತೆ ನಮ್ಮ ಉಸಿರಾಗಬೇಕು. ಸ್ವಚ್ಛ ಪರಿಸರ ಸ್ವಚ್ಛ ಗಾಳಿ ಮನುಷ್ಯನಿಗೆ ಅತ್ಯವಶ್ಯ. ಇಂದಿನ ದಿನಗಳಲ್ಲಿ ಎಲ್ಲವೂ ಕಲುಷಿತಗೊಂಡು ಮಾನವನ ಬದುಕು ದುಸ್ತರವಾಗುತ್ತಿದೆ. ಇದೇ ರೀತಿ ಮುಂದುವರೆದರೆ ಭವಿಷ್ಯದಲ್ಲಿ ಆಮ್ಲಜನಕ ನಳಿಕೆಗಳನ್ನು ಬಳಸುವ ಪ್ರಮೇಯ ಬಂದೊದಗಬಹುದು. ಆದ್ದರಿಂದ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾಳಜಿವಹಿಸಬೇಕಾದ ಅಗತ್ಯವಿದೆ. ಸರಕಾರದ ಅನೇಕ ಯೋಜನೆಗಳು ಯಶಸ್ವಿಯಾಗಬೇಕಿದ್ದರೆ ಜನರು ಸ್ಪಂದಿಸಬೇಕು. ರಾಮಕೃಷ್ಣ ಮಿಷನ್ ಸ್ವಚ್ಛತಾ ಕಾರ್ಯ ಅತ್ಯಂತ ಯಶಸ್ವಿಯಾಗಿ ಐದನೇ ವರ್ಷವೂ ಮುಂದುವರೆಯುತ್ತಿರುವುದು ಜನಸ್ಪಂದನಕ್ಕೆ ಸಾಕ್ಷಿಯಾಗಿದೆ. ಸ್ವಚ್ಛತೆಯ ಜೊತೆಗೆ ಗಿಡಮರಗಳನ್ನೂ ಉಳಿಸಿ-ಬೆಳೆಸುವ ಕಾರ್ಯವೂ ಈ ದಿನದ ತುರ್ತುಗಳಲ್ಲೊಂದು. ಜನಸಂಖ್ಯೆ ಬೆಳೆದಂತೆ ನಗರ ವೃದ್ಧಿಯಾಗುತ್ತಿದೆ. ಅದಕ್ಕೆ ಸರಿಸಮನಾಗಿ ಮರಗಿಡಗಳು ನಗರದಲ್ಲಿರಬೇಕು. ಅದಕ್ಕೆ ಇಂತಹ ಅಭಿಯಾನಗಳನ್ನು ಹಮ್ಮಿಕೊಳ್ಳೊಣ ಎಂದು ತಿಳಿಸಿ ಶುಭಹಾರೈಸಿದರು.
ಸ್ವಚ್ಛತೆ
ಪ್ರಥಮದಲ್ಲಿ ನಾಲ್ಕು ತ್ಯಾಜ್ಯರಾಶಿ ತುಂಬಿದ್ದ ಸ್ಥಳಗಳನ್ನು ಗುರುತಿಸಲಾಯಿತು. ತದನಂತರ ಸ್ವಯಂಸೇವಕರು ನಾಲ್ಕು ತಂಡಗಳಾಗಿ ವಿಭಾಗಿಸಿಕೊಂಡು ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಮೊದಲ ತಂಡದಲ್ಲಿ ಸೌರಜ್ ಮಂಗಳೂರು ನೇತೃತ್ವದಲ್ಲಿ ಬಸ್ ನಿಲ್ದಾಣದಲ್ಲಿದ್ದ ದೊಡ್ಡದಾದ ತ್ಯಾಜ್ಯ ರಾಶಿಯನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು. ಅನೇಕ ದಿನಗಳ ತ್ಯಾಜ್ಯದ ಪರಿಣಾಮ ಅಲ್ಲಿನ ಪರಿಸರ ದುರ್ನಾತ ಬೀರಿ ಸಾರ್ವಜನಿಕರಿಗೆ ಅಸಹ್ಯ ಹುಟ್ಟಿಸುತ್ತಿತ್ತು. ಅಂತಹುದರ ಮಧ್ಯದಲ್ಲಿ ಅದನ್ನಿಂದು ಶುಚಿಗೊಳಿಸಿ ವಾಸನೆ ಬಾರದಂತೆ ಉತ್ತಮ ಮಣ್ಣು ಹಾಕಲಾಯಿತು. ಮೆಹಬೂಬ್ ಖಾನ್ ಮುಂದಾಳತ್ವದ ಎರಡನೇ ತಂಡ ಕೆ ಎಸ್ ರಾವ್ ರಸ್ತೆಯ ಮೂಲೆಯಲ್ಲಿದ್ದ ತ್ಯಾಜ್ಯ ಹಾಗೂ ಕಟ್ಟಡಗಳ ತ್ಯಾಜ್ಯವನ್ನು ತೆಗೆದು ಹಸನು ಮಾಡಿದರು. ಸಂದೀಪ ಕೋಡಿಕಲ್, ಸತೀಶ್ ಕೆಂಕನಾಜೆ ಹಾಗೂ ಇನ್ನಿತರ ಕಾರ್ಯಕರ್ತರು ಆರೋಗ್ಯ ಇಲಾಖೆಯ ಉಪಕಚೇರಿಯ ಮುಂಭಾಗದಲ್ಲಿದ್ದ ಗಲೀಜನ್ನು ತೆಗೆದು ಟಿಪ್ಪರಿಗೆ ತುಂಬಿಸಿದರು. ಸ್ವಚ್ಛ ಯಕ್ಕೂರ ತಂಡದ ಸದಸ್ಯರಾದ ಶುಭಕರ ಶೆಟ್ಟಿ, ಪ್ರಶಾಂತ ಯಕ್ಕೂರು ಹಾಗೂ ಉಳಿದ ಸದಸ್ಯರು ಬಸ್ ನಿಲ್ದಾಣದ ಒಳಭಾಗದಲ್ಲಿ ಬಿದ್ದಿದ್ದ ಕಸಕಡ್ಡಿ ಪ್ಲಾಸ್ಟಿಕ್, ಬಾಟಲ್, ಗಾಜುಗಳನ್ನು ತೆಗೆದು ಶ್ರಮದಾನ ಮಾಡಿದರು. ಕೊನೆಯದಾಗಿ ದಿಲ್ ರಾಜ್ ಆಳ್ವ ಹಾಗೂ ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ದಿಯಾಗಿ ನಿಲ್ಲಿಸಿದ್ದ ಹಳೆಯ ವಾಹನ ಹಾಗೂ ರಿಕ್ಷಾಗಳನ್ನು ತೆಗೆದು ಬದಿಗೆ ಹಾಕಿ ಹೆಚ್ಚಿನ ಪಾರ್ಕಿಂಗ್ ಅನುಕೂಲ ಮಾಡಿಕೊಟ್ಟರು. ಸ್ವಚ್ಛ ಮಾಡಿದ ಆಯ್ದ ಸ್ಥಳಗಳಲ್ಲಿ ಅಲಂಕಾರಿಕ ಹೂಗಿಡಗಳ ಕುಂಡಗಳನ್ನಿಡಲಾಗಿದೆ. ಇಂದಿನಿಂದ ಅಲ್ಲಿ ಸ್ವಚ್ಛತಾ ಯೋಧರು ಹಗಲಿರುಳು ಕಾವಲು ಕಾಯಲಿದ್ದಾರೆ. ಕಸ ಹಾಕುವವರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದಾರೆ. ಕಳೆದ ಹಲವಾರು ವಾರಗಳಿಂದ ಈ ಸ್ವಚ್ಛತಾ ಯೋಧರ ಪಡೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ನಗರದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ಶ್ರಮದಾನದ ಉಸ್ತುವಾರಿ ನೋಡಿಕೊಂಡರು.
ಕರಪತ್ರ ಹಂಚಿಕೆ
ಶ್ರೀಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಹಂಪಣಕಟ್ಟೆ ಕೆ.ಎಸ್.ಆರ್ ರಾವ್ ರಸ್ತೆಯ ಅಂಗಡಿಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಕುರಿತು ಮಾಹಿತಿ ನೀಡಿ ನಗರದ ಸ್ವಚ್ಛತೆಗೆ ಸಹಕಾರ ನೀಡುವಂತೆ ಕೋರಿದರು. ಜೊತೆಗೆ ’ಸ್ವಚ್ಛ ಮಂಗಳೂರು ಕನಸಲ್ಲ’ ಎಂಬ ಮಾಹಿತಿ ಪತ್ರವನ್ನು ಹಂಚಿಕೆ ಮಾಡಿದರು. ಪ್ರೊ. ಸತೀಶ್ ಭಟ್ ಹಾಗೂ ಕೋಡಂಗೆ ಬಾಲಕೃಷ್ಣ ನಾಕ್ ವಿದ್ಯಾರ್ಥಿನಿಯರನ್ನು ಮಾರ್ಗದರ್ಶಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರವೀಣ ಶೆಟ್ಟಿ ಹಾಗೂ ಸ್ವಯಂ ಸೇವಕರು ಸಸಿಗಳನ್ನು ನೆಟ್ಟರು. ಶ್ರಮದಾನದ ಬಳಿಕ ಎಲ್ಲರಿಗೂ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೆ.ಎಂ.ಎಫ್. ವತಿಯಿಂದ ಶ್ರಮದಾನದಲ್ಲಿ ಪಾಲ್ಗೊಂಡವರಿಗೆ ಮಜ್ಜಿಗೆಯನ್ನು ವಿತರಿಸಲಾಯಿತು.
ಮಾಹಿತಿ ಕಾರ್ಯಾಗಾರ
ಅಶೋಕ ನಗರದಲ್ಲಿರುವ ಸೇಂಟ್ ಡೋಮಿನಿಕ್ ಚರ್ಚ್ನಲ್ಲಿ ಸ್ವಚ್ಛತೆಯ ಕುರಿತು ಇಂದು ವಿಶೇಷ ಕಾರ್ಯಾಗಾರ ಜರುಗಿತು. ವಂದನೀಯ ಫಾ. ಅಕ್ವೀನ್ ನರೋಹ್ನ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಸಂದೇಶ ನೀಡಿದರು. ಕ್ಯಾ. ಗಣೇಶ್ ಕಾರ್ಣಿಕ್ ಸ್ವಚ್ಛತೆಯ ಮಹತ್ವದ ಕುರಿತು ಭಾಷಣ ಮಾಡಿದರು. ನಲ್ಲೂರು ಸಚಿನ ಶೆಟ್ಟಿ ಸಾವಯವ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ನೀಡಿ, ಮನೆ ಮಟ್ಟದಲ್ಲಿ ಹಸಿಕಸ ನಿರ್ವಹಿಸುವ ಕುರಿತು ಮಾತನಾಡಿದರು. ರಿಚರ್ಡ್ ಗೋನ್ಸಾಲ್ವಿಸ್, ಸುಧೀರ್ ನರೋಹ್ನ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಂಜನ್ ವಂದಿಸಿದರು. ಭಾರತೀಯ ಕೆಥೋಲಿಕ್ ಯುವ ಸಂಚಲನ ಅಶೋಕ ನಗರದ ಘಟಕ ಈ ಕಾರ್ಯಕ್ರಮವನ್ನು ಸಂಘಟನೆ ಮಾಡಿದ್ದರು. ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.