ನವದೆಹಲಿ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೂ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಚಿಂತನೆ ಆರಂಭಿಸಿರುವ ನರೇಂದ್ರ ಮೋದಿ ಸರ್ಕಾರ, ಸಂಸತ್ತಿನಲ್ಲಿ ಈ ಬಗೆಗಿನ ಮಸೂದೆಯನ್ನು ಪರಿಚಯಿಸಲಿದೆ.
ಅನಿವಾಸಿ ಭಾರತಿಯರು ಭಾರತದಲ್ಲಿ ಪ್ರಾಕ್ಸಿ ವೋಟಿಂಗ್ (ಪ್ರಾತಿನಿಧಿಕ ಮತದಾನ) ಮತ ಚಲಾಯಿಸುವ ಅವಕಾಶವನ್ನು ಈ ಪ್ರಸ್ತಾಪಿತ ಮಸೂದೆ ನೀಡಲಿದೆ ಎನ್ನಲಾಗಿದೆ.
ಇದೂವರೆಗೆ ನಿಯಮಗಳ ಅನ್ವಯ, ಭಾರತದ ಯಾವುದೇ ಕ್ಷೇತ್ರದಲ್ಲಿ ನೋಂದಾಯಿತರಾಗಿದ್ದ ಅನಿವಾಸಿ ಭಾರತೀಯರು ಚುನಾವಣೆ ವೇಳೆ ಕ್ಷೇತ್ರಕ್ಕೆ ಬಂದು ಮತಚಲಾಯಿಸಬಹುದಾಗಿತ್ತು. ಆದರೆ, ಇದಕ್ಕಾಗಿ ಅವರು ಲಕ್ಷಾಂತರ ಹಣವನ್ನು ವೆಚ್ಚ ಮಾಡಿ ಭಾರತಕ್ಕೆ ಬರಬೇಕಿತ್ತು. ಆದರೆ, ಪ್ರಾತಿನಿಧಿಕ ಮತದಾನದ ಅವಕಾಶ ಸಿಕ್ಕರೆ ವಿದೇಶದಲ್ಲಿರುವ ಅನಿವಾಸಿ ಭಾರತೀಯರ ಪರವಾಗಿ ಅವರಿಂದ ಆರಿಸಲ್ಪಟ್ಟ ಯಾವುದೇ ವ್ಯಕ್ತಿ, ಅವರ ನೋಂದಾಯಿತರಾಗಿರುವ ಕ್ಷೇತ್ರದಲ್ಲಿ ಹೋಗಿ ಮತ ಚಲಾಯಿಸಬಹುದಾಗಿದೆ.
ವಿದೇಶಾಂಗ ಸಚಿವಾಲಯದ ಮಾಹಿತಿಯ ಪ್ರಕಾರ ವಿದೇಶಗಳಲ್ಲಿ ಸುಮಾರು 3.1 ಕೋಟಿ ಭಾರತೀಯರು ವಾಸಿಸುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸಿ ಮತವನ್ನು ಚಲಾಯಿಸುವುದು ಇವರೆಲ್ಲರಿಗೂ ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರಾತಿನಿಧಿಕ ಮತದಾನದ ಅವಕಾಶ ನೀಡುವುದರಿಂದ ಪ್ರತಿನಿಧಿಗಳ ಮೂಲಕ ಇವರಿಗೆ ಮತದಾನದ ವ್ಯವಸ್ಥೆ ಕಲ್ಪಿಸಲು ಮೋದಿ ಸರ್ಕಾರ ಮುಂದಾಗಿದೆ.
ಚುನಾವಣಾ ಆಯೋಗದ ಸಮಿತಿಯು 2015 ರಿಂದಲೇ ಚುನಾವಣಾ ಕಾನೂನಿಗೆ ತಿದ್ದುಪಡಿಯನ್ನು ತಂದು ಅನಿವಾಸಿ ಭಾರತೀಯರಿಗೆ ಮತದಾನದ ಅವಕಾಶವನ್ನು ಕಲ್ಪಿಸುವ ಪ್ರಯತ್ನ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.