ಭಾರತದ ರಾಜಕೀಯ ಚರಿತ್ರೆಗೆ ನಿರ್ಣಾಯಕ ತಿರುವು ಕೊಟ್ಟ 1975 ರ ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯಕ್ಕೆ ಈಗ ಬರೋಬ್ಬರಿ 44 ವರ್ಷ. 1975ರ ಜೂನ್ 25ರ ರಾತ್ರಿಯಾಗುತ್ತಿದ್ದಂತೆ ಒಂದು ಕರಾಳ ಸಂಚಿನ ಚಕ್ರ ವೇಗವಾಗಿ ತಿರುಗತೊಡಗಿತ್ತು. ಭಾರತದ 60 ಕೋಟಿ ಜನ ಗಾಢ ನಿದ್ದೆಯಲ್ಲಿದ್ದಾಗ ಅವರ ಮೇಲೆ ನಡೆಸಿದ ಆಕಸ್ಮಿಕ ಗುಪ್ತ ದಾಳಿ ಆದಾಗಿತ್ತು.
ಹೌದು, ಆಗ ಜನರ ಎಲ್ಲ ಮೂಲಭೂತ ಹಕ್ಕುಗಳು ರದ್ದು. ಪತ್ರಿಕೆಗಳ ಬಾಯಿಗೆ ಬೀಗ. ನ್ಯಾಯಾಂಗದ ಕೈಕಾಲುಗಳಿಗೆ ಬೇಡಿ. ಸಂಘಸಂಸ್ಥೆಗಳ ಸ್ವಾತಂತ್ರ್ಯಕ್ಕೆ ಕೊಡಲಿಯೇಟು – ಇದು ತುರ್ತುಪರಿಸ್ಥಿತಿಯ ಆದೇಶದ ತಾತ್ಪರ್ಯ. ಆದರೆ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದಾದರೂ ಏಕೆ? ಈ ಪ್ರಶ್ನೆ ಈಗಿನ ಯುವಪೀಳಿಗೆಯ ತಲೆಯಲ್ಲಿ ಕೊರೆಯುವ ಹುಳು. 1977 ರ ನಂತರ ಜನಿಸಿದವರಿಗೆ ಈ ಬಗ್ಗೆ ಕಿಂಚಿತ್ತು ಅರಿವೂ ಇಲ್ಲದಿರುವುದು ಸಹಜವೇ. ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅಲಹಾಬಾದ್ ಉಚ್ಚನ್ಯಾಯಾಲಯ ನೀಡಿದ ತೀರ್ಪಿನಿಂದ ಕಂಗಾಲಾಗಿದ್ದರು. ಆ ತೀರ್ಪಿನ ಪ್ರಕಾರ, ಅವರು ಚುನಾವಣೆಯಲ್ಲಿ ಭ್ರಷ್ಟಾಚಾರವೆಸಗಿ ಗೆದ್ದಿದ್ದು ಸಾಬೀತಾಗಿತ್ತು. ಅದೇ ಕಾರಣಕ್ಕೆ ಅವರ ಲೋಕಸಭಾ ಸದಸ್ಯತ್ವ ರದ್ದಾಗಿತ್ತು. ಮುಂದೆ 6 ವರ್ಷಗಳವರೆಗೆ ಇಂದಿರಾಗಾಂಧಿ ಚುನಾವಣೆಗೆ ಸ್ಪರ್ಧಿಸುವಂತಿರಲಿಲ್ಲ. ಅಧಿಕಾರದಾಹದ ತುತ್ತತುದಿಯಲ್ಲಿ ಕುಳಿತಿದ್ದ ಇಂದಿರಾ ಅವರಿಗೆ ಈ ತೀರ್ಪನ್ನು ಅರಗಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಅಷ್ಟು ಸುಲಭವಾಗಿ ಅಧಿಕಾರವನ್ನು ತ್ಯಜಿಸಲು ಅವರಿಗೆ ಮನಸ್ಸಿರಲಿಲ್ಲ. ಅದಕ್ಕಾಗಿಯೇ ತುರ್ತುಪರಿಸ್ಥಿತಿ ಘೋಷಿಸಿ ಸರ್ವಾಧಿಕಾರಕ್ಕೆ ನಾಂದಿ ಹಾಡಿದರು. ತಮಗಾಗದ, ತಮ್ಮ ವಿರೋಧಿಗಳನ್ನು ಸೆರೆ ಹಿಡಿದು ಜೈಲಿಗಟ್ಟಿದರು. ಪ್ರಜಾತಂತ್ರದ ಪರವಾಗಿ ಧ್ವನಿಯೆತ್ತಿದ ವ್ಯಕ್ತಿಗಳು, ಸಂಘಸಂಸ್ಥೆಗಳು, ಪತ್ರಿಕೆಗಳ ಸಂಪಾದಕರನ್ನು ಮುಲಾಜಿಲ್ಲದೇ ಸೆರೆಗೆ ತಳ್ಳಿದರು. ದೇಶಾದ್ಯಂತ 20 ತಿಂಗಳು ಸರ್ವಾಧಿಕಾರದ ಕಾರ್ಮೋಡ ಮುಸುಕಿತ್ತು. ಆದರೆ ಅನಂತರ ಆ ಕಾರ್ಮೋಡ ಸರಿಯಿತು. ಭಾರತದ ಮತದಾರ ಜನತಾಂತ್ರಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದ ಇಂದಿರಾಗಾಂಧಿ ಅವರಿಗೆ 1977 ರ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ, ಮನೆಗೆ ಕಳುಹಿಸಿದ್ದ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲೊಪ್ಪಿತ್ತು. ಇಂದಿರಾ, ಅವರ ಪುತ್ರ ಸಂಜಯ್ ಮುಂತಾದವರೂ ಸೋತು ಸುಣ್ಣವಾಗಬೇಕಾಯಿತು.
ಆದರೆ ತುರ್ತುಪರಿಸ್ಥಿತಿ ತೊಲಗಿದ್ದಾದರೂ ಹೇಗೆ? ವಿರೋಧಿಗಳ ಬಂಧನ, ಪತ್ರಿಕೆಗಳ ಬಾಯಿಗೆ ಬೀಗ, ನ್ಯಾಯದೇವತೆಗೆ ಬೇಡಿ… ಹೀಗೆ ದೇಶದಲ್ಲಿ ಉಸಿರುಗಟ್ಟುವ ವಾತಾವರಣವಿದ್ದಾಗಲೂ ಹೋರಾಡಿದವರು ಯಾರು? ಇದು ಈಗಿನ ಅನೇಕರಿಗೆ ತಿಳಿಯದು. ಪ್ರಮುಖ ವಿರೋಧ ಪಕ್ಷಗಳ ನಾಯಕರು, ಬುದ್ಧಿಜೀವಿಗಳು ತುರ್ತುಪರಿಸ್ಥಿತಿಗೆ ಹೆದರಿ ಮೌನಕ್ಕೆ ಶರಣಾಗಿದ್ದಾಗ ತುರ್ತುಪರಿಸ್ಥಿತಿ ವಿರುದ್ಧದ ಅಹಿಂಸಾತ್ಮಕ ಸಮರಕ್ಕೆ ಚಾಲನೆ ನೀಡಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ. ವಿಪರ್ಯಾಸವೆಂದರೆ, ಸಂಘವನ್ನೂ ಆ ಸಂದರ್ಭದಲ್ಲಿ ನಿಷೇಧಿಸಲಾಗಿತ್ತು. ಸಂಘದ ಪ್ರಮುಖ ನಾಯಕರನ್ನು ಸೆರೆಯಲ್ಲಿಡಲಾಗಿತ್ತು. ಹಾಗಿದ್ದಾಗಲೂ ಹೊರಗಿದ್ದ ಸಂಘದ ಪ್ರಮುಖರು, ಕಾರ್ಯಕರ್ತರು ತುರ್ತುಪರಿಸ್ಥಿತಿ ವಿರುದ್ಧ ಭೂಗತ ಹೋರಾಟವನ್ನು ಸಂಘಟಿಸಿದರು. ಸಂಘ ಪರಿವಾರದ ಜನಸಂಘ, ಎಬಿವಿಪಿ, ಬಿಎಂಎಸ್, ವಿಹಿಂಪ ಇತ್ಯಾದಿ ಸಂಘಟನೆಗಳಲ್ಲದೇ ಸಂಸ್ಥಾ ಕಾಂಗ್ರೆಸ್, ಸಮಾಜವಾದಿ ಪಕ್ಷ, ಸರ್ವೋದಯ, ಲೋಕದಳ ಮೊದಲಾದ ಹೊರಗಿನ ಪಕ್ಷಗಳ ನಾಯಕರನ್ನು ಹುರಿದುಂಬಿಸಿ ಈ ಎರಡನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಶ್ರೇಯಸ್ಸು ನಿಸ್ಸಂಶಯವಾಗಿಯೂ ಆರೆಸ್ಸೆಸ್ನದ್ದು. ಸಂಘ ಪರಿವಾರದವರಲ್ಲದೆ ಜಮಾತ್ – ಎ – ಇಸ್ಲಾಂ, ಸಿಪಿಎಂ, ಆನಂದಮಾರ್ಗದ ನಾಯಕರೂ ಮೀಸಾಬಂದಿಗಳಾಗಿದ್ದರೂ ಹೋರಾಟದಲ್ಲಿ ಈ ಸಂಸ್ಥೆಗಳ ಪಾತ್ರ ನಗಣ್ಯವಾಗಿತ್ತು.
ಪತ್ರಿಕೆಗಳ ಬಾಯಿಗೆ ಬೀಗಹಾಕಲಾಗಿದ್ದರೂ ಭೂಗತ ಪತ್ರಿಕೆಗಳು ದೇಶದ ಜನರಿಗೆ ಆಗಿನ ದಿನಮಾನದ ನೈಜ ಪರಿಸ್ಥಿತಿಯನ್ನು ತಿಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು. ಆ ಪತ್ರಿಕೆಗಳು ಎಲ್ಲಿಂದ ಪ್ರಕಟವಾಗುತ್ತಿದ್ದವು, ಯಾರು ಪ್ರಕಟಿಸುತ್ತಿದ್ದರು, ವಿತರಕರು ಯಾರು… ಇವೆಲ್ಲ ಪೊಲೀಸರಿಗೂ ಬೇಧಿಸಲಾಗದಷ್ಟು ರಹಸ್ಯವಾಗಿತ್ತು. ಕಂಪ್ಯೂಟರ್ ತಂತ್ರಜ್ಞಾನ, ಇ-ಮೇಲ್, ಮೊಬೈಲ್, ಇಂಟರ್ನೆಟ್ ಇತ್ಯಾದಿ ಏನೊಂದೂ ಆಧುನಿಕ ಸೌಲಭ್ಯವಿರದ ಆ ದಿನಗಳಲ್ಲಿ ಭೂಗತ ಪತ್ರಿಕೆಯೊಂದು ಪ್ರಕಟವಾಗಿ, ಅದು ಓದುಗರಿಗೆ ತಲುಪುತ್ತಿದ್ದುದು ನಿಜಕ್ಕೂ ರೋಮಾಂಚಕಾರಿ! ಕಹಳೆ, ರಣದುಂದುಭಿ ಅಂತಹ ಭೂಗತ ಪತ್ರಿಕೆಗಳು. ಆ ಪತ್ರಿಕೆಗಳಿಗೆ ಆಗ ನಾನು ಸಂಪಾದಕನಾಗಿದ್ದೆ ಎಂಬುದು ನನ್ನ ಪಾಲಿಗೆ ಹೆಮ್ಮೆಯ ಸಂಗತಿ. ಅದಕ್ಕೆ ತಕ್ಕ ಪ್ರತಿಫಲವಾಗಿ ಮಡಿಕೇರಿ ಸೆರೆಮನೆಯಲ್ಲಿ ಮೂರು ತಿಂಗಳ ಸೆರೆವಾಸ! ನನ್ನ ಪತ್ರಿಕೋದ್ಯಮ ಪ್ರಾರಂಭವಾಗಿದ್ದು ಆಗಲೇ ಎನ್ನಬಹುದು. ಆದರೆ ಅಷ್ಟು ಬೇಗ ಸೆರೆವಾಸದಂತಹ ಪ್ರಶಸ್ತಿ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ!
ಸಂಘದ ಭೂಗತ ಪತ್ರಿಕೆಗಳಲ್ಲದೆ ಇತರೆ ಕೆಲವರು ತಮ್ಮ ಮಿತಿಯಲ್ಲಿ ಅಂತಹ ಪತ್ರಿಕೆಗಳನ್ನು ಪ್ರಕಟಿಸಿದ್ದೂ ಉಂಟು. ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಕವಿ, ಸಾಹಿತಿ ಸುಬ್ರಾಯ ಚೊಕ್ಕಾಡಿ `ಅಜ್ಞಾತ ಪರ್ವ’ ಎಂಬ ಕೈಬರಹದ ಭೂಗತ ಪತ್ರಿಕೆ ಹೊರಡಿಸುತ್ತಿದ್ದರು. ಅದರ ಕಾರ್ಬನ್ ಪ್ರತಿಗಳನ್ನು ಮಾಡಿ ಸಮಾನ ಮನಸ್ಕರಿಗೆ ತಲುಪಿಸುತ್ತಿದ್ದ ಆ `ಅಜ್ಞಾತ ಬಳಗ’ದ ನಿಃಸ್ವಾರ್ಥ ಸಾಹಸ ನಿಜಕ್ಕೂ ಮನನೀಯ. ಸೈದ್ಧಾಂತಿಕ ಭಿನ್ನಮತವಿದ್ದರೂ ಸಂಘ ತುರ್ತುಪರಿಸ್ಥಿತಿ ವಿರುದ್ಧ ನಡೆಸುತ್ತಿರುವ ಹೋರಾಟದ ಬಗ್ಗೆ ಅವರಲ್ಲೊಂದು ಅಭಿಮಾನವಿತ್ತು. ಅವರನ್ನು ನಾನು ಭೇಟಿಯಾದಾಗಲೆಲ್ಲ ಅವರ ಮಾತುಗಳಲ್ಲಿ ಈ ಭಾವನೆ ವ್ಯಕ್ತವಾಗಿದ್ದಂಟು. ಸಾಹಿತಿಗಳು, ಬುದ್ಧಿಜೀವಿಗಳು ತುರ್ತುಪರಿಸ್ಥಿತಿ ವಿರುದ್ಧ ಪ್ರತಿಭಟಿಸುವ ಧೈರ್ಯ ಕಳೆದುಕೊಂಡಿದ್ದಾಗಲೂ ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಸಾಗರದ ಕೆ.ವಿ. ಸುಬ್ಬಣ್ಣ, ರಸಿಕಪುತ್ತಿಗೆಯಂತಹ ಸಾಹಿತಿಗಳು ಪತ್ರಿಕೆಗಳಲ್ಲಿ ಲೇಖನ, ಕವನಗಳ ಮೂಲಕ ಪ್ರತಿಭಟನೆಯ ಕಹಳೆ ಮೊಳಗಿಸಿದ್ದರೆಂಬುದು ಈಗಲೂ ಸ್ಮರಣೀಯ. ಅಡಿಗರು ಪ್ರಜಾವಾಣಿಯಲ್ಲಿ ‘ನಿನ್ನ ಗದ್ದೆಗೆ ನೀರು’ ಎಂಬ ಕವನದ ಮೂಲಕ ಇಂದಿರಾಗಾಂಧಿಯ ಸರ್ವಾಧಿಕಾರವನ್ನು ಟೀಕಿಸಿದ್ದರು. ಉದಯವಾಣಿ ಪತ್ರಿಕೆಯಲ್ಲಿ ಏರ್ಯರು ‘ಕತ್ತೆ ಸತ್ತು ಹೋಯಿತು’ ಎಂಬ ಕವನದಲ್ಲಿ ಪ್ರಜಾತಂತ್ರಕ್ಕೆ ಸಮಾಧಿ ತೋಡಿದ್ದನ್ನು ಮಾರ್ಮಿಕವಾಗಿ ಕುಟುಕಿದ್ದರು. ಕೆ.ವಿ. ಸುಬ್ಬಣ್ಣ ‘ತುರ್ತು ಕರೆ’ಯೆಂಬ ಭೂಗತ ಪತ್ರಿಕೆಯ ಒಂದು ಸಾವಿರ ಪ್ರತಿಗಳನ್ನು ಕಲ್ಲಚ್ಚು ಮಾಡಿ ಹಂಚುತ್ತಿದ್ದರು. ಬೆಂಗಳೂರು ಕಾರಾಗೃಹದಲ್ಲಿದ್ದುಕೊಂಡೇ ಎಲ್.ಕೆ. ಆಡ್ವಾಣಿ ಬರೆದ ಕಿರು ಪುಸ್ತಕ ‘A tale of two Emergencies’ (ಅಂದು ಹಿಟ್ಲರ್, ಇಂದು ಇಂದಿರಾ)ವನ್ನು ಹೇಗೋ ಹೊರಗೆ ತಂದು ಪ್ರಕಟಿಸಿದಾಗ ಅದು ಬಿಸಿದೋಸೆಯಂತೆ ಖರ್ಚಾಗಿತ್ತು. ಭಾರತದ ಬಹುತೇಕ ಭಾಷೆಗಳಲ್ಲಿ ಪ್ರಕಟಗೊಂಡು ಇಂದಿರಾ ಸರ್ವಾಧಿಕಾರದ ಹಿಟ್ಲರ್ ಬಣ್ಣವನ್ನು ಪದರ ಪದರವಾಗಿ ಎತ್ತಿ ತೋರಿಸಿತ್ತು. ಉಡುಪಿಯ ಪೇಜಾವರಶ್ರೀಗಳು ಇಂದಿರಾಗಾಂಧಿಗೆ ಬರೆದ ಪತ್ರದಲ್ಲಿ ‘ಲಕ್ಷಾಂತರ ಮಂದಿ ಮತ್ತೆ ಬಲಿದಾನ ಮಾಡಬೇಕೇ? ಪ್ರಜಾತಂತ್ರದ ವಿಡಂಬನೆಯನ್ನು ಈಗಲಾದರೂ ಅಂತ್ಯಗೊಳಿಸಿ’ ಎಂದು ಖಾರವಾಗಿ ಟೀಕಿಸಿದ್ದರು.
ಆದರೆ ಪ್ರಜಾತಂತ್ರ, ಸ್ವಾತಂತ್ರ್ಯದ ಬಗ್ಗೆ ಭಾರೀ ಮಾತನಾಡುತ್ತಿದ್ದ ಲಂಕೇಶ್, ಚಂಪಾ ಮೊದಲಾದವರು ಬಾಯಿಗೆ ಬೀಗಬಡಿದುಕೊಂಡು ತೆಪ್ಪಗಿದ್ದರೆನ್ನುವುದೂ ಈಗ ಸ್ಮರಣಾರ್ಹ! ತುರ್ತುಪರಿಸ್ಥಿತಿ ಹೋರಾಟದ ಕುರಿತು 1977 ರಲ್ಲಿ ರಾಷ್ಟ್ರೋತ್ಥಾನ ಪರಿಷತ್ ‘ಭುಗಿಲು’ ಎಂಬ ಗ್ರಂಥ ರಚಿಸುತ್ತಿರುವ ಸಂದರ್ಭದಲ್ಲಿ ಹಲವು ಸಾಹಿತಿಗಳ ಅಭಿಪ್ರಾಯ ಸಂಗ್ರಹಿಸಲಾಯಿತು. ಆಗ ಲಂಕೇಶ್ ಅವರು ‘ನಾವೆಲ್ಲ ತುರ್ತುಪರಿಸ್ಥಿತಿಯಲ್ಲಿ ಹೇಡಿಗಳಾಗಿದ್ದೆವು. ನಿಜವಾಗಿ ಹೋರಾಡಿದವರು ನೀವೇ (ಆರೆಸ್ಸೆಸ್)’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ತಮ್ಮ ಈ ಅಭಿಪ್ರಾಯವನ್ನು ‘ಭುಗಿಲು’ ಗ್ರಂಥದಲ್ಲಿ ದಾಖಲಿಸದಂತೆಯೂ ಎಚ್ಚರಿಸಿದ್ದರು!
ಹೀಗೆ ತುರ್ತುಪರಿಸ್ಥಿತಿ ಅವಧಿಯ ಅದೆಷ್ಟೋ ಸಿಹಿ – ಕಹಿ ನೆನಪುಗಳು ಈಗಲೂ ಕಾಡುತ್ತಿವೆ. ತುರ್ತುಪರಿಸ್ಥಿತಿ ಮುಗಿದು 4 ದಶಕಗಳೇ ಸಂದಿವೆ. ದೇಶದ ನದಿಗಳಲ್ಲಿ ಸಾಕಷ್ಟು ನೀರು ಹರಿದಿದೆ. ಭಾರತದ ರಾಜಕೀಯ ಅಖಾಡದಲ್ಲಿ ಸಾಕಷ್ಟು ಸ್ಥಿತ್ಯಂತರಗಳು ಸಂಭವಿಸಿದೆ. ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡಿ, ಕಷ್ಟನಷ್ಟ ಅನುಭವಿಸಿದ ಹಲವರು ಈ 4 ದಶಕಗಳಲ್ಲಿ ಯಾವುದೇ ಸರ್ಕಾರದ ಕೃಪೆಗೆ ಪಾತ್ರರಾಗದೆ ಕಾಲಗರ್ಭದಲ್ಲಿ ಹೂತುಹೋಗಿದ್ದಾರೆ. ಇನ್ನು ಕೆಲವರು ತುರ್ತುಪರಿಸ್ಥಿತಿಯ ಲಾಭ ಪಡೆದು ಅಧಿಕಾರದ ಏಣಿಯೇರಿ ಮಿಂಚಿದ್ದಾರೆ. ಅಂದು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವರು ಕಾಲಗರ್ಭದಲ್ಲಿ ಹೂತುಹೋಗಿದ್ದರು. ಇಂದು, 1975ರಲ್ಲಿ ಸ್ವಕೀಯರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ!
✍ ದು. ಗು. ಲಕ್ಷ್ಮಣ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.