ಗ್ರಾಮ ಮುಖ್ಯಸ್ಥರಾಗಿ ಆದರ್ಶಪ್ರಾಯ ಕೆಲಸ ಮಾಡಿದ್ದಕ್ಕಾಗಿ 2016 ರಲ್ಲಿ ಉಚ್ಛ ಶಿಕ್ಷಿತ್ ಆದರ್ಶ್ ಯುವ ಸರಪಂಚ್ ಪ್ರಶಸ್ತಿಯನ್ನು ಗೆದ್ದ ಬಿಹಾರದ ಏಕೈಕ ಮುಖಿಯಾ ರಿತು ಜೈಸ್ವಾಲ್.
ಆದರೆ ದೆಹಲಿಯ ಐಷಾರಾಮಿ ಪ್ರದೇಶವಾದ ಖೇಲ್ಗಾಂವ್ನಲ್ಲಿ ವಾಸಿಸುತ್ತಿರುವ ಈ ಮಹಿಳೆ ಬಿಹಾರದ ಸಿಂಗ್ವಾಹಿನಿ ಎಂಬ ಹಳ್ಳಿಯ ಸರಪಂಚ್ ಆಗಲು ಹೇಗೆ ಸಾಧ್ಯವಾಯಿತು?
ಅದನ್ನು ತಿಳಿಯಬೇಕಾದರೆ ಈ ಕಥೆಯನ್ನು ಓದಲೇಬೇಕು.
ಬಾಲ್ಯದಿಂದಲೇ, ರಿತು ಅವರಿಗೆ ಸಾಮಾಜಿಕ ಕಾರ್ಯಗಳ ಬಗ್ಗೆ ಒಲವು ಇತ್ತು ಮತ್ತು ದೀನದಲಿತ ಜನರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದ್ದ ಸ್ಥಳೀಯ ಅಭಿಯಾನಗಳಲ್ಲಿ ಸಕ್ರಿಯವಾಗಿ ಅವರು ಪಾಲ್ಗೊಳ್ಳುತ್ತಿದ್ದರು.
1996 ರಲ್ಲಿ, ರಿತು ಐಎಎಸ್ ಅಧಿಕಾರಿ ಅರುಣ್ ಕುಮಾರ್ ಅವರನ್ನು ವಿವಾಹವಾದರು. ಕೆಲವು ವರ್ಷಗಳ ನಂತರ, ಸೀತಾಮರ್ಹಿಯ ಸೋನ್ಬರ್ಷಾ ಬ್ಲಾಕ್ನಲ್ಲಿರುವ ತನ್ನ ಗಂಡನ ಕುಟುಂಬದವರ ಪೂರ್ವಜರ ಮನೆಗೆ ಭೇಟಿ ನೀಡಿದಾಗ, ಅವರು ಅನೇಕ ಸಮಸ್ಯೆಗಳನ್ನು ಎದುರಿಸಿದರು. ಅಲ್ಲಿ ವಿದ್ಯುತ್, ಸಮರ್ಪಕ ಕುಡಿಯುವ ನೀರು ಮತ್ತು ಮೂಲಭೂತ ಸೌಲಭ್ಯಗಳು ಇರಲಿಲ್ಲ.
ಈ ಪರಿಸ್ಥಿತಿಯನ್ನು ಕಂಡು ಆಘಾತಕ್ಕೊಳಗಾದ ರಿತು ತಾನು ಏನನ್ನಾದರೂ ಮಾಡಲೇ ಬೇಕು ಎಂದು ನಿರ್ಧರಿಸಿದರು.
ಆ ಗ್ರಾಮ ಶಿಕ್ಷಣದ ಸ್ಥಿತಿಯನ್ನು ಸುಧಾರಣೆಗೊಳಿಸುವ ಮೂಲಕ ಅವರು ತಮ್ಮ ಕಾಯಕವನ್ನು ಪ್ರಾರಂಭಿಸಿದರು. ಸಿಂಗ್ವಾಹಿನಿಯ ಯುವತಿಯೊಬ್ಬಳು ತನ್ನ ಬಿಎಡ್ ಮುಗಿಸಿ ಬೊಕಾರೊದಲ್ಲಿ ಬೋಧಿಸುತ್ತಿದ್ದಳು. ಆಕೆಗೆ ಹಳ್ಳಿಗೆ ಹಿಂದಿರುಗಿ ಹಳ್ಳಿಯ ಶಾಲೆಯಲ್ಲಿ ಪಾಠ ಮಾಡುವಂತೆ ಮನವಿ ಮಾಡಿದ ಇವರು, ಹೆಚ್ಚಿನ ಸಂಬಳವನ್ನೂ ನೀಡಿದರು. ಯುವತಿ ಇದಕ್ಕೆ ಒಪ್ಪಿಕೊಂಡು ಶಾಲೆಯಿಂದ ಹೊರಗುಳಿದ 25 ಹುಡುಗಿಯರಿಗೆ ಪಾಠ ಕಲಿಸಲು ಪ್ರಾರಂಭಿಸಿದಳು.
ಹೀಗೆ ಕಲಿತ ಮಕ್ಕಳ ಪೈಕಿ 12 ಮಂದಿ 2015 ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ ರಿತು ಅವರ ಪ್ರಯತ್ನಗಳಿಗೆ ಪ್ರತಿಫಲ ಸಿಕ್ಕಲಾರಂಭವಾಯಿತು.
ರಿತು ನಂತರ ಬಯಲು ಶೌಚ, ಕೌಟುಂಬಿಕ ಹಿಂಸೆ, ಹೆಣ್ಣು ಭ್ರೂಣ ಹತ್ಯೆ ಮತ್ತು ಸಾವಯವ ಕೃಷಿಯಂತಹ ಇತರ ಪ್ರಮುಖ ವಿಷಯಗಳತ್ತ ತಮ್ಮ ಗಮನವನ್ನು ಹರಿಸಿದರು. ಅವರು ಸೆಮಿನಾರ್ಗಳನ್ನು ಮತ್ತು ಸಭೆಗಳನ್ನು ನಡೆಸಿದರು ಮತ್ತು ಗ್ರಾಮಸ್ಥರಿಗೆ ಇನ್ಫೋಟೈನ್ಮೆಂಟ್ ಸೆಮಿನಾರ್ಗಳನ್ನು ಕೂಡ ಆಯೋಜನೆಗೊಳಿಸಿದರು.
ರಿತು ಈ ವೇಳೆಗಾಗಲೇ ತಮ್ಮ ಸಮಯವನ್ನು ಸಿಂಗ್ವಾಹಿನಿಯಲ್ಲಿ ಕಳೆಯ ತೊಡಗಿದರು. ಆ ಗ್ರಾಮವನ್ನು ಪರಿವರ್ತಿಸುವ ತನ್ನ ಕನಸನ್ನು ಈಡೇರಿಸಿಕೊಳ್ಳಲು ಅವರಿಗೆ ಆ ಗ್ರಾಮದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದು ಅನಿವಾರ್ಯವೇ ಆಗಿತ್ತು. ಈ ವಿಷಯವನ್ನು ರಿತು ಮನದಟ್ಟು ಮಾಡಿಕೊಂಡಿದ್ದರು.
ಅವರ ಪತಿ ಮತ್ತು ಇಬ್ಬರು ಮಕ್ಕಳು ಅವರ ಈ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸಿದರು ಮತ್ತು ಸಾಕಷ್ಟು ಬೆಂಬಲವನ್ನೂ ನೀಡಿದರು. ಬಳಿಕ ಶೀಘ್ರದಲ್ಲೇ ರಿತು ಅದೇ ಗ್ರಾಮದಲ್ಲಿ ಶಾಶ್ವತವಾಗಿರುವ ನಿರ್ಧಾರವನ್ನೂ ತೆಗೆದುಕೊಂಡರು.
ಆಗ ಸಿಂಘವಾಹಿನಿ ಗ್ರಾಮಸ್ಥರು ಗ್ರಾಮ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅವರನ್ನು ವಿನಂತಿಸತೊಡಗಿದರು. ರಾಜಕೀಯವು ಆರಂಭದಲ್ಲಿ ಅವರ ಯೋಜನೆಯ ಭಾಗವಾಗಿರದಿದ್ದರೂ ಕೂಡ ಜನರ ನಂಬಿಕೆಯಿಂದಾಗಿ ಅವರು ರಾಜಕೀಯಕ್ಕೆ ಹೋಗಲು ನಿರ್ಧರಿಸಿದರು.
ಗ್ರಾಮ ಚುನಾವಣೆಯಲ್ಲಿ ಶೇ. 72 ರಷ್ಟು ಮತಗಳ ಅಂತರದಿಂದ ಗೆದ್ದ ರಿತು, ಈ ಸ್ಥಾನವನ್ನು ಗ್ರಾಮಸ್ಥರ ಅನುಕೂಲಕ್ಕಾಗಿ ಬಳಸಿಕೊಂಡರು. ಗ್ರಾಮಸ್ಥರ ಮತ್ತು ಜಿಲ್ಲಾಧಿಕಾರಿಗಳ ಸಹಾಯದಿಂದ ಅವರು ಬಯಲು ಶೌಚ ಸಮಸ್ಯೆಯನ್ನು ನಿರ್ಮೂಲನೆ ಮಾಡುವತ್ತ ದಾಪುಗಾಲಿಟ್ಟರು. ಎರಡು ಸಾವಿರ ಶೌಚಾಲಯಗಳನ್ನು ಅವರ ನೇತೃತ್ವದಲ್ಲಿ ನಿರ್ಮಿಸಲಾಯಿತು ಮತ್ತು ಅಂತಿಮವಾಗಿ 2016 ಅಕ್ಟೋಬರ್ನಲ್ಲಿ ಸಿಂಗ್ವಾಹಿನಿ ಗ್ರಾಮವನ್ನು ಬಯಲು ಶೌಚ ಮುಕ್ತ ಗ್ರಾಮ ಎಂದು ಘೋಷಿಸಲಾಯಿತು.
ಬಳಿಕ ಅವರು ಮಣ್ಣಿನ ರಸ್ತೆಗಳ ಸಮಸ್ಯೆಯನ್ನು ನಿಭಾಯಿಸಲು ನಿರ್ಧರಿಸಿದರು.
ಗ್ರಾಮಸ್ಥರು ತಮ್ಮ ಉಳಿತಾಯವನ್ನು ಕೊಡಲು ಹಿಂಜರಿಯುತ್ತಾರೆ ಮತ್ತು ಸರ್ಕಾರದ ನೆರವು ಸಿಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅರಿತುಕೊಂಡ ರಿತು ಅವರು, ಗ್ರಾಮದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ತಮ್ಮ ಜೇಬಿನಿಂದ ಹಣವನ್ನು ನೀಡಿದರು. ಅವರ ಉತ್ಸಾಹವು ಹಳ್ಳಿಗರನ್ನೂ ಪ್ರೇರೇಪಿಸಿತು ಮತ್ತು ಅವರೂ ಹಣಕಾಸು ಕೊಡುಗೆಗಳನ್ನು ನೀಡಲು ಪ್ರಾರಂಭಿಸಿದರು. ಇಂದು, ಸಿಂಗ್ವಾಹಿನಿಯ ಎಲ್ಲಾ ರಸ್ತೆಗಳು ಸಂಚಾರಕ್ಕೆ ಸುಗಮವಾಗಿದೆ.
ಚುನಾವಣೆಯಲ್ಲಿ ಗೆದ್ದದ್ದರಿಂದ ರಿತು ಅವರಿಗೆ ಮತ್ತೊಂದು ದೊಡ್ಡ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಯಿತು. ಅದುವೇ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಸಮರ್ಥತೆ.
ತಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಬಿಡಿಒ (ಬ್ಲಾಕ್ ಡೆವಲಪ್ಮೆಂಟ್ ಆಫೀಸರ್) ಮತ್ತು ವಿತರಕರಿಂದ ಕುಪಿತಗೊಂಡ ಅವರು ಮತ್ತು ಅವರ ಸಣ್ಣ ತಂಡವು ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ 14000 ಗ್ರಾಮಸ್ಥರ ಪಡಿತರ ಚೀಟಿಗಳನ್ನು ಸಂಗ್ರಹಿಸುವ ಮಹತ್ತರ ಪ್ರಯತ್ನವನ್ನು ಕೈಗೊಂಡಿತು. ನಂತರ ಅವುಗಳನ್ನು ವಿಶ್ಲೇಷಣೆಗೊಳಪಡಿಸಲಾಯಿತು ಮತ್ತು ಯಾವುದೇ ವಂಚನೆ ನಡೆದಿದೆಯೇ ಎಂದು ನೋಡಲು ಕ್ರಾಸ್ ಚೆಕ್ ಮಾಡಲಾಯಿತು. ಇದರಿಂದಾಗಿ ಭ್ರಷ್ಟ ಅಧಿಕಾರಿಗಳು ಮತ್ತು ವಿತರಕರನ್ನು ಶಿಕ್ಷೆಗೊಳಪಡಿಸಲು ಅವರಿಗೆ ಸಹಾಯವಾಯಿತು.
ಅವರು ಹಳ್ಳಿಗರಿಗಾಗಿ ವೃತ್ತಿಪರ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದರು, ಇದರಿಂದಾಗಿ ಗ್ರಾಮದ ಹಲವರು ಉದ್ಯಮಿಗಳು ಅಥವಾ ಸ್ವಯಂ ಉದ್ಯೋಗಿಗಳಾದರು, ಅಂಗಡಿಗಳನ್ನು ತೆರೆದರು.
2017ರ ಆಗಸ್ಟ್ನಲ್ಲಿ ಸೀತಾಮರ್ಹಿ ಜಿಲ್ಲೆಯಲ್ಲಿ ಭಾರಿ ಪ್ರವಾಹ ಉಂಟಾದಾಗ ರಿತು ಅವರಿಗೆ ದೆಹಲಿಗೆ ಮರಳುವ ಅವಕಾಶವಿತ್ತು. ಆದರೆ ಈ ಧೈರ್ಯಶಾಲಿ ಮುಖಿಯಾ ಆ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ, ಸಂತ್ರಸ್ಥರಿಗೆ ಸಹಾಯ ಮಾಡಲು ಮತ್ತು ರಕ್ಷಣಾ ಕಾರ್ಯಕರ್ತರಿಗೆ ಸಹಾಯ ಮಾಡಲು ಅವರು ಹಗಲು-ರಾತ್ರಿ ದಣಿವರಿಯಿಲ್ಲದೆ ಕೆಲಸ ಮಾಡಿದರು.
ಭ್ರಷ್ಟಾಚಾರ ಮತ್ತು ಅಸಮರ್ಥತೆಯಿಂದ ಬಳಲುತ್ತಿರುವ ದೇಶದಲ್ಲಿ ಉತ್ತಮ ತಳಮಟ್ಟದ ನಾಯಕತ್ವವು ಹೇಗೆ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂಬುದನ್ನು ರಿತು ಅವರ ಸ್ಪೂರ್ತಿದಾಯಕ ಕಥೆ ತಿಳಿಸುತ್ತದೆ.
ಆದರೂ, ಇತ್ತೀಚಿನ ವರ್ಷಗಳಲ್ಲಿ, ಜನರು, ವಿಶೇಷವಾಗಿ ಯುವಕರು ಚುನಾವಣೆಗಳಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಅವುಗಳನ್ನು ನಿರರ್ಥಕ ಅಥವಾ ಅರ್ಥಹೀನವೆಂದು ನೋಡುತ್ತಾರೆ. ಆದರೆ ಮತದಾನ ಮಾಡದಿರುವುದು ಮತದಾನ ವ್ಯವಸ್ಥೆಯಲ್ಲಿ ಅಪನಂಬಿಕೆಯನ್ನು ಘೋಷಿಸುವುದಿಲ್ಲ. ಬದಲಾಗಿ ಅದು ನಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.
ಚುನಾವಣೆಯ ವಿಷಯಕ್ಕೆ ಬಂದಾಗ ಸತ್ಯಗಳನ್ನು ಅನುಸರಿಸುವುದು ಮುಖ್ಯ. ನಮ್ಮ ಸಂಸದರು ಮತ್ತು ಶಾಸಕರು ಮತ್ತು ಅವರ ಹಿನ್ನೆಲೆಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಚೆನ್ನಾಗಿ ಓದಿ ಅಭಿಪ್ರಾಯವನ್ನು ಹೊಂದುವುದು ಬಹಳ ಮುಖ್ಯ. ಯಾಕೆಂದರೆ ಸಾಕಷ್ಟು ನಕಲಿ ಸಂಗತಿಗಳು ನಮ್ಮ ಸುತ್ತಮುತ್ತ ಹಾರುತ್ತಿರುತ್ತದೆ ಮತ್ತು ನಾವು ಸತ್ಯಗಳನ್ನೇ ಅನುಸರಿಸಿ ಮತ ಚಲಾಯಿಸುವುದು ನಿರ್ಣಾಯಕವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.