ಲಕ್ನೋ: ಸಂಸ್ಕೃತ ಭಾಷೆಯನ್ನು ಉತ್ತೇಜಿಸುವ ಸಲುವಾಗಿ ಉತ್ತರಪ್ರದೇಶ ಸರ್ಕಾರವು, ಹಿಂದಿ, ಇಂಗ್ಲೀಷ್, ಉರ್ದು ಜೊತೆಜೊತೆಗೆ ಸಂಸ್ಕೃತದಲ್ಲೂ ಪತ್ರಿಕಾ ಪ್ರಕಟಣೆಗಳನ್ನು ಹೊರಡಿಸಲು ನಿರ್ಧರಿಸಿದೆ.
ಮೊತ್ತ ಮೊದಲ ಸಂಸ್ಕೃತ ಪತ್ರಿಕಾ ಪ್ರಕಟಣೆಯನ್ನು ಸೋಮವಾರ ಉತ್ತರಪ್ರದೇಶದ ಮಾಹಿತಿ ಇಲಾಖೆಯು ಹೊರಡಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಭಾಷಣ ಮತ್ತು ಸರ್ಕಾರದ ಮಾಹಿತಿಗಳನ್ನು ಒಳಗೊಂಡ ಪತ್ರಿಕಾ ಪ್ರಕಟಣೆಗಳನ್ನು ಇನ್ನು ಮುಂದೆ ಇಂಗ್ಲೀಷ್, ಹಿಂದಿ, ಉರ್ದುಗಳ ಜೊತೆಗೆ ಸಂಸ್ಕೃತದಲ್ಲೂ ಪ್ರಕಟಿಸಲಾಗುವುದು ಎಂದು ಮಾಹಿತಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಭಾಷಣವನ್ನು ಸಂಸ್ಕೃತದಲ್ಲಿ ಭಾಷಾಂತರ ಮಾಡುವ ಕಾಯಕವನ್ನು ಸರ್ಕಾರ ಲಕ್ನೋ ಮೂಲದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನಕ್ಕೆ ವಹಿಸಿದೆ.
“ಇಂತಹ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿರುವುದು ಇದೇ ಮೊದಲ ಬಾರಿ. ಇತ್ತೀಚಿಗೆ ನವದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಡೆಸಿದ ಭಾಷಣವನ್ನು ಸಂಸ್ಕೃತದಲ್ಲಿ ಪ್ರಕಟ ಮಾಡಲಾಗಿದೆ ಮತ್ತು ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದನ್ನು ಇನ್ನಷ್ಟು ವಿಸ್ತರಣೆಗೊಳಿಸಲು ನಾವು ಸಿದ್ಧತೆ ನಡೆಸುತ್ತಿದ್ದೇವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ್ದ ಯೋಗಿ ಅವರು, ಸಂಸ್ಕೃತ ಭಾರತೀಯರ ಡಿಎನ್ಎನಲ್ಲೇ ಇದೆ, ಆದರೆ ಈಗ ಅದು ಅರ್ಚಕರ ಕಾರ್ಯಗಳಿಗೆ ಮಾತ್ರ ಸೀಮಿತಗೊಂಡಿದೆ ಎಂದಿದ್ದರು.
ಉತ್ತರಪ್ರದೇಶದಲ್ಲಿ ಸುಮಾರು 25 ನಿಯತಕಾಲಿಕೆಗಳು ಸಂಸ್ಕೃತದಲ್ಲಿ ಪ್ರಕಟಗೊಳ್ಳುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.