News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ತಕ್ಷಶಿಲೆಯ ಪುನರವತರಣಕ್ಕೆ ಧಾರಾ ರಾಮಾಯಣ ; ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ಸಂಕಲ್ಪ

ಬೆಂಗಳೂರು: ವಿಷ್ಣುಗುಪ್ತ (ಚಾಣಕ್ಯ) ಹೆಸರಿನ ವಿಶ್ವವಿದ್ಯಾಪೀಠದ ಮಹಾಸಂಕಲ್ಪದ ಸಾಕಾರಕ್ಕಾಗಿ ಶ್ರೀಮದಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳು ಈ ತಿಂಗಳ 20ರಿಂದ ಸಮಗ್ರ ರಾಮಾಯಣ ಪ್ರವಚನ ಆರಂಭಿಸಲಿದ್ದಾರೆ.

ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಪೀಠಾರೋಹಣ ಮಾಡಿ 25 ವಸಂತಗಳು ತುಂಬಿದ್ದು, ಸುವರ್ಣಯುಗ ಆರಂಭದ ನೆನಪಿಗಾಗಿ ಈ ವಿಶಿಷ್ಟ ಕೊಡುಗೆಯನ್ನು ಶ್ರೀರಾಮಚಂದ್ರಾಪುರಮಠ ಸಮಾಜಕ್ಕೆ ನೀಡುತ್ತಿದೆ. ದೇಸಿ ಗೋವಂಶ ರಕ್ಷಣೆಗಾಗಿ ಕಳೆದ ವರ್ಷ ವಿಶ್ವದ ಏಕೈಕ ಗೋಸ್ವರ್ಗವನ್ನು ಸಮಾಜಕ್ಕೆ ಧಾರೆ ಎರೆದ ಶ್ರೀಮಠ ಇದೀಗ ಆದಿಗುರು ಶಂಕರಾಚಾರ್ಯರಿಗೆ ಕಿರುಗಾಣಿಕೆಯಾಗಿ ದೇಸಿ ವಿದ್ಯೆಗಳ ಪುನರುತ್ಥಾನಕ್ಕೆ ಮುಡಿಪಾಗಿರುವ ವಿಶ್ವವಿದ್ಯಾಪೀಠವನ್ನು ಸಮರ್ಪಿಸುತ್ತಿದೆ.

“ಬಾಳದಾರಿಗೆ ರಾಮದೀವಿಗೆ” ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರು ಗಿರಿನಗರದಲ್ಲಿರುವ ರಾಮಾಶ್ರಮದಲ್ಲಿ ಪ್ರತಿದಿನ ಸಂಜೆ 6.45 ರಿಂದ 8.15 ರ ವರೆಗೆ ಆರು ತಿಂಗಳ ಕಾಲ ಎಡೆಬಿಡದೇ ಸಮಗ್ರ ರಾಮಾಯಣ ಪ್ರವಚನವನ್ನು ಶ್ರೀಗಳು ಅನುಗ್ರಹಿಸುವರು.

ಶ್ರೀಕರಾರ್ಚಿತ ಶ್ರೀರಾಮದೇವರ ಸನ್ನಿಧಿಯಲ್ಲೇ ಶ್ರೀಗಳು ಸಮಗ್ರ ರಾಮಾಯಣ ಅನುಗ್ರಹಿಸುತ್ತಿರುವುದು ಶ್ರೀಮಠದ ಇತಿಹಾಸದಲ್ಲೇ ಪ್ರಥಮ. ಧಾರಾ ರಾಮಾಯಣದ ಮೂಲಕ ಇಡೀ ಸಮಾಜದಲ್ಲಿ ಧರ್ಮಜಾಗೃತಿ ಹಾಗೂ ದೇಶದ ಸಂಸ್ಕೃತಿಯ ಪುನರುತ್ಥಾನಕ್ಕೆ ನಾಂದಿ ಹಾಡುವ ವಿಶ್ವವಿದ್ಯಾಪೀಠವೊಂದರ ಸ್ಥಾಪನೆಯ ಅಗತ್ಯತೆ- ಅನಿವಾರ್ಯತೆ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಸಂಕಲ್ಪ ಶ್ರೀಗಳದ್ದು. ಧಾರಾ ರಾಮಾಯಣದ ಮೂಲಕ ಈ ಸಂದೇಶವನ್ನು ಸಮಸ್ತ ಕನ್ನಡ ಕುಲಕೋಟಿಗೆ ತಲುಪಿಸುವ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ.

ಭರತಖಂಡದ ಸುವರ್ಣಯುಗದ ಕುರುಹಾಗಿ ಉಳಿದಿರುವ ತಕ್ಷಶಿಲೆ ವಿಶ್ವವಿದ್ಯಾನಿಲಯದ ಪುನರವತರಣ ಮತ್ತು ಧರ್ಮಯೋಧರ ಸೃಷ್ಟಿ ಈ ಯೋಜಿತ ವಿಶ್ವವಿದ್ಯಾಪೀಠದ ಮೂಲಧ್ಯೇಯವಾಗಿದೆ.

ಉದಾಹರಣೆಗೆ ಸಾಮವೇದ ಒಂದು ಕಾಲದಲ್ಲಿ ಸಹಸ್ರಶಾಖೆಗಳನ್ನು ಹೊಂದಿತ್ತು. ಆದರೆ ಈಗ ಉಳಿದಿರುವುದು ಮೂರು ಶಾಖೆಗಳು ಮಾತ್ರ. ಇಂದು ಭಾರತೀಯ ಮೂಲದ ಪ್ರತಿಯೊಂದು ವಿದ್ಯೆಯ ಕಥೆಯೂ ಹೀಗೆಯೇ ಆಗಿದೆ. ನಮ್ಮ ಪೂರ್ವಜರು ಕಂಡುಕೊಂಡ ಒಂದೊಂದು ವಿದ್ಯೆಯೂ ಪಾಶ್ಚಿಮಾತ್ಯ ದಾಳಿಯ ಪ್ರಭಾವಕ್ಕೆ ಸಿಲುಕಿ ರೂಪುಗೆಟ್ಟಿದೆ ಅಥವಾ ಅರ್ಥ ಕಳೆದುಕೊಂಡಿದೆ. ಉಳಿದವು ಅಳಿವಿನ ಅಂಚಿನಲ್ಲಿವೆ. ಅಳಿದುಳಿದ ವಿದ್ಯೆಗಳ ಪುನರುಜ್ಜೀವನ ಉದ್ದೇಶಿತ ವಿಶ್ವವಿದ್ಯಾಪೀಠದ ಉದ್ದೇಶ.

25 ವರ್ಷಗಳ ಹಿಂದೆ ಪೀಠಾರೋಹಣದ ದಿನವೇ ಶ್ರೀಶಂಕರರ ನೆನಪಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸುವ ಘೋಷಣೆಯನ್ನು ಶ್ರೀಗಳು ಮಾಡಿದ್ದರು. ಶ್ರೀಗಳ ಸಂಕಲ್ಪ ಸಾಕಾರವಾಗುವ ಕಾಲ ಇದೀಗ ಸನ್ನಿಹಿತವಾಗಿದೆ. ಆದ್ಯಶಂಕರರು ನಮ್ಮ ಮೂಲಮಠವನ್ನು ಸ್ಥಾಪಿಸಿದ ಅಶೋಕೆಯಲ್ಲಿ ಕುಲಗುರುಗಳ ವಾಸಕ್ಕಾಗಿಯೇ ಶಿಷ್ಯರು ಕಲಾತ್ಮಕ ರೀತಿಯಲ್ಲಿ ವಿಶಿಷ್ಟವಾಗಿ ಪಾರಂಪರಿಕ ಸ್ವಯಂ ನಿವಾಸವನ್ನೇ ಶ್ರೀಗಳು ವಿಶ್ವವಿದ್ಯಾಪೀಠಕ್ಕೆ ಮೊದಲ ಸಮರ್ಪಣೆಯಾಗಿ ಸಲ್ಲಿಸಲು ಶ್ರೀಗಳು ಸಂಕಲ್ಪಿಸಿದ್ದಾರೆ.

ವಿಶ್ವವಿದ್ಯಾಪೀಠ
ದಾಖಲೆ ಹತ್ತು ತಿಂಗಳ ಅವಧಿಯಲ್ಲಿ ಪರಿಪೂರ್ಣ ವಿಶ್ವವಿದ್ಯಾಪೀಠವನ್ನು ಸಮಾಜಕ್ಕೆ ಸಮರ್ಪಿಸಲು ಉದ್ದೇಶಿಸಲಾಗಿದೆ. ಭಾರತೀಯ ವಿದ್ಯೆಗಳನ್ನು ಉಳಿಸಿ ಬೆಳೆಸುವುದು ಹಾಗೂ ದೇಶರಕ್ಷಣೆ- ಧರ್ಮರಕ್ಷಣೆಗೆ ಬದ್ಧರಾದ, ಸಂಸ್ಕøತಿಯ ಆಳ ಅರಿವು ಇರುವ ಧರ್ಮಯೋಧರನ್ನು ಸಿದ್ಧಪಡಿಸುವುದು ಈ ವಿಶ್ವವಿದ್ಯಾಪೀಠದ ಉದ್ದೇಶ. ತಕ್ಷಶಿಲೆ ವಿಶ್ವವಿದ್ಯಾನಿಲಯದಲ್ಲಿ ಆಚಾರ್ಯ ವಿಷ್ಣುಗುಪ್ತ ಚಾಣಕ್ಯನು ಧರ್ಮಯೋಧ ಚಂದ್ರಗುಪ್ತನನ್ನು ಸೃಷ್ಟಿಸಿ ಆತನ ಮೂಲಕ ನಂದನ ಅಂಧಕಾರಶಾಸನವನ್ನು ಕೊನೆಗೊಳಿಸಿ ಧರ್ಮಸಾಮ್ರಾಜ್ಯ ಉದಯಕ್ಕೆ ಕಾರಣನಾದಂತೆ ವಿಶ್ವವಿದ್ಯಾಪೀಠದ ಮಡಿಲಲ್ಲಿ ವಿಶ್ವವಿಜಯೀ ವಿದ್ಯಾವೀರರನ್ನು ಸೃಜಿಸುವ ಮೂಲಕ ಭಾರತವರ್ಷದಲ್ಲಿ ಮತ್ತೊಮ್ಮೆ ರಾಮರಾಜ್ಯವನ್ನು ಉದಯಗೊಳಿಸುವುದು, ಧರ್ಮಪ್ರಭುತ್ವವನ್ನು ಮರಳಿ ಸ್ಥಾಪಿಸುವುದು ಯೋಜಿತ ವಿಶ್ವವಿದ್ಯಾಪೀಠದ ಧ್ಯೇಯವಾಗಿದೆ.

ಎಲ್ಲಿ?
ಶಂಕರಾಚಾರ್ಯರು ಮೂರು ಬಾರಿ ಭೇಟಿ ನೀಡಿದ ಮತ್ತು ಹಲವು ತಿಂಗಳ ಕಾಲ ವಾಸವಿದ್ದ, ಶಂಕರರ ಜ್ಞಾನಶಿಶು ಎನಿಸಿದ ಶ್ರೀರಾಮಚಂದ್ರಾಪುರಮಠದ ಮೂಲಸ್ಥಾನ, ಗೋಕರ್ಣ ಸಮೀಪದ ಅಶೋಕೆಯ ಸ್ವಚ್ಛ, ಸುಂದರ ಪರಿಸರದಲ್ಲಿ ನೂತನ ವಿಶ್ವವಿದ್ಯಾಪೀಠ ತಲೆ ಎತ್ತಲಿದೆ. ವಿಶ್ವದಲ್ಲಿ ಎಲ್ಲೂ ಇಲ್ಲದಂಥ ಅಪೂರ್ವ ವಿದ್ಯಾಪೀಠ ಆದಿಶಂಕರರ ನೆನಪಿನಲ್ಲಿ ಅವರಿಗೇ ಸಮರ್ಪಣೆಯಾಗಲಿದೆ.

ಪಾರಂಪರಿಕ ವಾಸ್ತುಶಿಲ್ಪವನ್ನು ಒಳಗೊಂಡ ಈ ವಿಶಿಷ್ಟ ವಿದ್ಯಾಪೀಠದಲ್ಲಿ ಭಾರತೀಯ ವಿದ್ಯಾವಿಶ್ವವೇ ಅಧ್ಯಯನ ವಸ್ತು. ಭಾರತೀಯ ಸಂಸ್ಕೃತಿಯ ಮೂಲಾಧಾರ ಎನಿಸಿದ ನಾಲ್ಕು ವೇದಗಳು, ಜ್ಯೋತಿಷ್ಯವನ್ನು ಒಳಗೊಂಡ ವೇದದ ಆರು ಅಂಗಗಳು, ಆಯುರ್ವೇದವೇ ಮೊದಲಾದ ನಾಲ್ಕು ಉಪವೇದಗಳು, ರಾಮಾಯಣ ಮಹಾಭಾರತ ಒಳಗೊಂಡಂತೆ ಇತಿಹಾಸ- ಪುರಾಣಗಳು, ಆರು ದರ್ಶನಗಳು, ಸಕಲ ಕಲೆಗಳು, ಸಮಯುಗದ ಜಗತ್ತಿನ ಸಾಮಾನ್ಯ ಜ್ಞಾನ, ಆಧುನಿಕ ತಂತ್ರಜ್ಞಾನ, ದೇಶದ ಚರಿತ್ರೆ, ಸಂವಹನ ಕೌಶಲ, ಕಾನೂನು, ಧರ್ಮಯೋಧನಿಗೆ ಎದುರಾಗಬಹುದಾದ ವಿಪತ್ತುಗಳನ್ನು ಮನಸ್ಸಿನಲ್ಲಿರಿಸಿಕೊಂಡು ಆತ್ಮರಕ್ಷಣೆಯ ಸಮರ ವಿದ್ಯೆಗಳು ವಿದ್ಯಾವಿನ್ಯಾಸದಲ್ಲಿ ಸೇರಿವೆ. ವಿಶ್ವವಿದ್ಯಾಪೀಠದಲ್ಲಿ ವಿಕಾಸಗೊಂಡ ವಿದ್ಯಾರ್ಥಿ ಬಾಹ್ಯಜಗತ್ತಿನಲ್ಲಿ ಅಪ್ರಸ್ತುತನಾಗಬಾರದು ಎಂಬ ಕಾರಣಕ್ಕೆ ಇಂಗ್ಲಿಷ್, ಹಿಂದಿ ಮೊದಲಾದ ಆಧುನಿಕ ಸಮಾಜ ಭಾಷೆಗಳ ಅಧ್ಯಯನಕ್ಕೂ ಅವಕಾಶ ಇರುತ್ತದೆ. ಸಮಾಜದ ಎಲ್ಲ ವರ್ಗದವರಿಗೂ ಇಲ್ಲಿ ಅವಕಾಶವಿದ್ದು, ಅವರವರಿಗೆ ಸಲ್ಲುವ ವಿದ್ಯೆಗಳನ್ನು ಅವರು ಪಡೆದುಕೊಳ್ಳಬಹುದಾಗಿದೆ. ಒಂದು ವಿಷಯದಲ್ಲಿ ವಿದ್ಯಾರ್ಥಿ ಪರಿಪೂರ್ಣ ಪರಿಣತಿ ಪಡೆಯುವಂತೆ ರೂಪಿಸುವ ಜತೆಜತೆಗೆ ಬಾಕಿ ವಿದ್ಯೆಗಳ ಪರಿಚಯ ಇಲ್ಲಿನ ವಿದ್ಯಾವಿನ್ಯಾಸ.

ಅಂದು ಸಕಲ ಭಾರತೀಯ ವಿದ್ಯೆಗಳ ತವರುಮನೆ ಎನಿಸಿದ್ದ, ವಿಶ್ವದ ಉದ್ದಗಲಗಳಿಂದ ವಿದ್ಯೆಯನ್ನರಸಿ ಬರುವ ಹತ್ತಾರು, ಸಹಸ್ರಾರು ಜ್ಞಾನಾರ್ಥಿಗಳ ಬುದ್ಧಿಯನ್ನು ಬೆಳಕಾಗಿಸುತ್ತಿದ್ದ ತಕ್ಷಶಿಲೆಯನ್ನು ಸತತ ಪ್ರಯತ್ನಗಳಿಂದ ನಾಶಪಡಿಸಲಾಯಿತು. ಆದರೆ ಇಂದು ಅದಕ್ಕೆ ತದ್ವಿರುದ್ಧವಾಗಿ ಆದಿಗುರು ಶಂಕರರಿಂದ ಸ್ಫೂರ್ತಿ ಪಡೆದು, ಧರ್ಮನಿಷ್ಠರ- ದೇಶಪ್ರೇಮಿಗಳ ತ್ಯಾಗ-ಸೇವೆಯನ್ನು ಮೂಲಾಧಾರವಾಗಿರಿಸಿಕೊಂಡು, ಅದೇ ತಕ್ಷಶಿಲೆ ವಿಶ್ವವಿದ್ಯಾನಿಲಯದ ಪುನರ್ ಸೃಷ್ಟಿಯ ಪ್ರಯತ್ನ ಇದಾಗಿದೆ.

ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ ಮೂಲಕ ದೇಶದ ಮೂಲೆಮೂಲೆಗಳ ತಜ್ಞ ವಿದ್ವಾಂಸರಿಂದ ಅಧ್ಯಾಪನ ವ್ಯವಸ್ಥೆಯೊಂದಿಗೆ ಆಧುನಿಕ ತಂತ್ರಜ್ಞಾನದ ಸೌಲಭ್ಯವನ್ನೂ ಸಮರ್ಥವಾಗಿ ಬಳಸಿಕೊಳ್ಳಲಾಗುತ್ತದೆ.

ಸರ್ಕಾರದ ಅನುದಾನಕ್ಕೆ ಕೈಚಾಚದೇ, ಸಂಪನ್ಮೂಲ ಹಾಗೂ ಮಾನ್ಯತೆ ಎರಡೂ ವಿಶ್ವವಿದ್ಯಾಪೀಠದ್ದೇ ಆಗಿರುತ್ತದೆ. ಸರ್ಕಾರದ ಮಾನ್ಯತೆಯ ಅವಶ್ಯಕತೆ ಇರುವಲ್ಲಿ ಪರೀಕ್ಷೆಗಳನ್ನು ಅಧಿಕೃತ ವ್ಯವಸ್ಥೆಯಿಂದ ಪಡೆದುಕೊಳ್ಳಲು ಪರ್ಯಾಯ ಕ್ರಮ ಅನುಸರಿಸಲಾಗುತ್ತದೆ.

ವೇದ- ಶಾಸ್ತ್ರಗಳು, ಪರಂಪರೆ- ಪದ್ಧತಿಗಳನ್ನು ಒಳಗೊಂಡ ಸಮಗ್ರ ಭಾರತೀಯ ಸಂಸ್ಕೃತಿಯಲ್ಲಿ ಹುದುಗಿರುವ ಅದೆಷ್ಟೋ ಮಹತ್ವದ ಸಂಗತಿಗಳ ಕುರಿತು ಸಂಶೋಧನಾಲಯವೊಂದು ಇಲ್ಲಿ ಅನಾವರಣಗೊಳ್ಳಲಿದ್ದು, ಅದು ವಿಶ್ವವಿದ್ಯಾಪೀಠದ ಮುಕುಟಮಣಿಯಾಗಲಿದೆ.

ಶ್ರೀಶಂಕರ ಥೀಂಪಾರ್ಕ್
ಭಗವತ್ಪಾದರ ಪಾದಸ್ಪರ್ಶದ ಧನ್ಯತೆಯನ್ನು ಕಂಡ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪರಿಸರದಲ್ಲಿ ಅವರ ಜೀವನ ಸಾಧನೆಗಳನ್ನು ಜೀವಲೋಕಕ್ಕೆ ಮನೋಜ್ಞವಾಗಿ ಬಿಂಬಿಸುವ ಥೀಮ್ ಪಾರ್ಕ್ ನೂತನ ವಿಶ್ವವಿದ್ಯಾಪೀಠದ ಆವರಣದಲ್ಲಿ ತಲೆ ಎತ್ತಲಿದೆ. ದಿವ್ಯೌಷಧವನದ ನಡುವೆ ಶಂಕರರ ಪಾವನ ಜೀವನದ ಶಿಲ್ಪ ಕಲ್ಪ, ಭವ್ಯಭವನದಲ್ಲಿ ಶ್ರೀಶಂಕರರ ಹೆಸರಿನಲ್ಲಿ ಭಾರತೀಯ ಸಂಸ್ಕೃತಿ ಸಂಶೋಧನಾಲಯ, ಆಡಿಯೊ ವಿಡಿಯೊ ಪ್ರದರ್ಶಿನಿ, ವಸ್ತುಸಂಗ್ರಹಾಲಯ, ಬೃಹತ್ ಶಾಂಕರ ಗ್ರಂಥ ಸಂಗ್ರಹಾಗಾರ ಇರುತ್ತದೆ.

ಶ್ರೀಮಠದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಜಿ.ಭಟ್, ಧಾರಾ ರಾಮಾಯಣ ಕ್ರಿಯಾ ಸಮಿತಿ ಅಧ್ಯಕ್ಷೆ ಡಾ.ಶಾರದಾ ಜಯಗೋವಿಂದ್, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಶಿ ಉಪಸ್ಥಿತರಿದ್ದರು. ಉದ್ದೇಶಿತ ವಿಶ್ವವಿದ್ಯಾಪೀಠಕ್ಕೆ ಹೊರನಾಡು ಕ್ಷೇತ್ರದ ವತಿಯಿಂದ 5 ಲಕ್ಷ ರೂಪಾಯಿ ದೇಣಿಗೆಯನ್ನು ಜೋಶಿಯವರು ಸಮರ್ಪಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top