ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5 ನೇ ಹಂತದ 28 ನೇ ಭಾನುವಾರದ ಶ್ರಮದಾನವನ್ನು ದಿನಾಂಕ 16-6-2019 ರಂದು ನಗರದ ಬೋಳೂರು ಪ್ರದೇಶದಲ್ಲಿ ಆಯೋಜಿಸಲಾಗಿತ್ತು. ಮಾತಾ ಅಮೃತಾನಂದಮಯಿ ಮಠದ ಎದುರುಗಡೆ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಹಾಗೂ ಲೆಕ್ಕಪರಿಶೋಧಕ ರಾಮನಾಥ್ ನಾಯಕ್ ಇವರು ಶ್ರಮದಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮನಪಾ ಆರೋಗ್ಯ ನಿರೀಕ್ಷಕಿ ಆಶ್ವಿನಿ, ದಾಮೋದರ್ ಭಟ್, ಪ್ರಶಾಂತ ಪಿ, ಸೂರಜ್ ಸೋಲಂಕಿ, ಸುರೇಶ್ ಅಮೀನ್, ಎ ವಿ ಸುಗುಣನ್, ರಾಜನ್, ಪ್ರಸಾದರಾಜ್ ಕಾಂಚನ್, ಶ್ರೀಮತಿ ಶ್ರುತಿ ಹೆಗ್ಡೆ, ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಚಾಲನೆ ನೀಡಿದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಮಾತನಾಡಿ ಅಂತರಂಗ ಶುದ್ಧವಾಗದೇ ಬಹಿರಂಗದ ಪರಿಸರ ಸ್ವಚ್ಛವಾಗದು; ಆದ್ದರಿಂದ ಜನರಿಗೆ ಸ್ವಚ್ಛತೆಯ ಅರಿವನ್ನು ಮೂಡಿಸಬೇಕಿದೆ. ಸ್ವಚ್ಛತಾ ಅಭಿಯಾನಗಳು ಮಾಡುತ್ತಿರುವ ಈ ಕಾರ್ಯವು ಕರ್ಮಯೋಗಕ್ಕೆ ಸಮಾನವಾದುದು. ನಿಸ್ವಾರ್ಥದಿಂದ ಮಾಡಿದ ಯಾವುದೇ ಕಾರ್ಯಕ್ಕೆ ಉನ್ನತವಾದ ಪ್ರತಿಫಲ ದೊರೆಯುತ್ತದೆ. ಪ್ರಸ್ತುತ ಗಡಿಬಿಡಿಯ ಒತ್ತಡ ಜೀವನ ಕ್ರಮದ ನಡುವೆಯೂ ಇಷ್ಟೊಂದು ಜನ ಸೇವೆಗಾಗಿ ಸಮಯವನ್ನು ಮೀಸಲಿಡುತ್ತಿರುವುದು ಹೆಮ್ಮೆಯ ಸಂಗತಿ. ಅಲ್ಲದೇ ಸಮಾನ ಮನಸ್ಕ ವ್ಯಕ್ತಿಗಳು ಹಾಗೂ ಸಂಘಟನೆಗಳು ಒಂದೆಡೆ ಸೇರಿ ಶ್ರಮದಾನ ಮಾಡುತ್ತಿರುವುದು ಇದಕ್ಕೆ ಮತ್ತಷ್ಟು ಮೆರಗು ನೀಡಿದೆ ಎಂದರು.
ಸ್ವಚ್ಛತೆ
ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಎದುರು ರಸ್ತೆಯಿಂದ ಬೊಕ್ಕಪಟ್ಣ ಸಾಗುವ ರಸ್ತೆಯಲ್ಲಿರುವ ಸುಮಾರು 10 ಕ್ಕೂ ಅಧಿಕ ತ್ಯಾಜ್ಯ ಸುರಿಯುತ್ತಿದ್ದ ಜಾಗಗಳನ್ನು ಗುರುತಿಸಿ, ಸ್ವಚ್ಛಗೊಳಿಸಲಾಯಿತು. ಒಟ್ಟು ಎಂಟು ತಂಡಗಳನ್ನು ರಚಿಸಿಕೊಂಡು ಶ್ರಮದಾನ ಮಾಡಲಾಯಿತು. ದಿಲ್ರಾಜ್ ಆಳ್ವ, ಸುಧೀರ್ ವಾಮಂಜೂರು, ಬಾಲಕೃಷ್ಣ ಭಟ್, ಜಯಕೃಷ್ಣ ಬೇಕಲ್, ಸಂದೀಪ್ ಕೋಡಿಕಲ್, ಪ್ರವೀಣ ಶೆಟ್ಟಿ, ಭರತ್ ಸದಾನಂದ, ಅವಿನಾಶ್ ಅಂಚನ್ ಇವರುಗಳ ನೇತೃತ್ವದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಮನೆ ತ್ಯಾಜ್ಯದ ಜೊತೆಗೆ ಕಲ್ಲುಮಣ್ಣುಗಳ ರಾಶಿ, ಪ್ಲಾಸ್ಟಿಕ್ ಚೀಲಗಳ ರಾಶಿಗಳು ಇಡೀ ಪರಿಸರವನ್ನು ಗಲೀಜುಗೊಳಿಸಿದ್ದವು. ಕೆಲವು ಸ್ಥಳಿಯರು ತ್ಯಾಜ್ಯ ಬಿಸಾಡುವುದನ್ನು ತಡೆಯಲು ಪ್ರಯತ್ನಿಸಿದಾಗ್ಯೂ ಸಫಲತೆ ಕಂಡಿರಲಿಲ್ಲ. ಇದೀಗ ಅಲ್ಲಿದ್ದ ಸುಮಾರು ಮೂರು ಟಿಪ್ಪರ್ ಕಸವನ್ನು ತೆಗೆದು ಆಲಂಕಾರಿಕ ಗಿಡಗಳನ್ನಿಟ್ಟು ಮತ್ತೆ ಅಲ್ಲಿ ಯಾರೂ ತ್ಯಾಜ್ಯ ಬಿಸಾಡದಂತೆ ಮಾಡಲಾಗಿದೆ. ಎಂದಿನಂತೆ ಅಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಛತಾ ಯೋಧರ ಪಡೆ ಕಸ ಹಾಕುವವರನ್ನು ತಡೆದು, ರಸ್ತೆಗೆ ತ್ಯಾಜ್ಯ ಸುರಿಯದಂತೆ ಮನವೊಲಿಸುವ ಕಾರ್ಯವನ್ನು ಮಾಡಲಿದೆ. ಸರಿತಾ ಶೆಟ್ಟಿ ಹಾಗೂ ಕೋಡಂಗೆ ಬಾಲಕೃಷ್ಣ ನಾಕ್ ಮಾರ್ಗದರ್ಶನದಲ್ಲಿ ರಸ್ತೆಯ ಬದಿಗಳಲ್ಲಿ ಗಿಡಗಳನ್ನು ನೆಡಲಾಯಿತು. ಶ್ರಮದಾನದ ಜೊತೆಗೆ ಸುಭೋದಯ ಆಳ್ವ ಹಾಗೂ ಯುವ ಕಾರ್ಯಕರ್ತರು ಬೋಳೂರು ಪರಿಸರದ ಮನೆಗಳಿಗೆ ತೆರಳಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಮಾಡಿದರು. ಮಾರ್ಗಬದಿಯಲ್ಲಿ ತ್ಯಾಜ್ಯ ಸುರಿಯದಂತೆ ಅವರನ್ನು ವಿನಂತಿಸಲಾಯಿತು. ಮಾತಾ ಅಮೃತಾನಂದಮಯಿ ಮಠದ ’ಆಯುಧ’ ಸಂಘಟನೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರಮದಾನ ಮಾಡಿದರು.
ಸ್ವಚ್ಛ ಮನಸ್ಸು-2019 ಹಾಗೂ ಸ್ವಚ್ಛತೆಗಾಗಿ ಜಾದೂ ಅಭಿಯಾನಗಳಿಗೆ ಚಾಲನೆ
ರಾಮಕೃಷ್ಣ ಮಠದಲ್ಲಿ 15-6-2019 ರಂದು ಬಿ ಎಚ್ ವಿ ಪ್ರಸಾದ್, ಜಿ.ಜಿ.ಎಂ, ಎಂಆರ್ಪಿಎಲ್ ಇವರು ಸ್ವಚ್ಛ ಮನಸ್ಸು ಅಭಿಯಾನಕ್ಕೆ ದೀಪ ಪ್ರಜ್ವಲನದ ಮೂಲಕ 600 ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯ ವಹಿಸಿದ್ದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಚ್ಛತೆಗಾಗಿ ಜಾದೂ ಕಾರ್ಯಕ್ರಮವನ್ನು ಚಾಲನೆಗೊಳಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀ ಶಿವರಾಮಯ್ಯ ಸ್ವಚ್ಛತಾ ಶಪಥ ಕಾರ್ಡ್ ಹಾಗೂ ಸ್ವಚ್ಛತಾ ಸೇನಾನಿ ಬಾಡ್ಜ್ ಲೋಕಾರ್ಪಣಗೊಳಿಸಿದರು. ಜಾದೂಗಾರ್ ಕುದ್ರೋಳಿ ಗಣೇಶ್ 100 ಪ್ರದರ್ಶನಗಳ ಪ್ರಥಮ ಪ್ರದರ್ಶನವನ್ನು ನೀಡಿದರು. ಸುಮಾರು 700 ಕ್ಕೂ ಅಧಿಕ ನಗರದ ಬೇರೆ ಬೇರೆ ಶಾಲೆಗಳಿಂದ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ವಾಮಿ ಜಿತಕಾಮಾನಂದಜಿ ಸ್ವಚ್ಛತಾ ಶಪಥ ಬೋಧಿಸಿದರು. ಸ್ವಚ್ಛ ಮನಸ್ಸು ಅಭಿಯಾನದ ಪ್ರಧಾನ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪನ್ಯಾಸಕಿ ಸ್ಮಿತಾ ಶೆಣೈ ನಿರೂಪಿಸಿದರು.
ಸ್ವಚ್ಛ ಗ್ರಾಮ ಅಭಿಯಾನ
ರಾಮಕೃಷ್ಣ ಮಿಷನ್ ಮಂಗಳೂರು ಹಾಗೂ ಜಿಲ್ಲಾ ಪಂಚಾಯತ್ ಉಡುಪಿ- ದಕ್ಷಿಣ ಕನ್ನಡ ಸಹಯೋಗದಲ್ಲಿ ದಿನಾಂಕ 16-6-2019 ರಂದು ಸುಮಾರು 75ಕ್ಕೂ ಅಧಿಕ ಗ್ರಾಮಗಳಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ಶ್ರಮದಾನದ ಪ್ರಯುಕ್ತ ಗ್ರಾಮಗಳಲ್ಲಿ ರಸ್ತೆಗಳ ಸ್ವಚ್ಛತೆ, ತೊಡುಗಳಲ್ಲಿದ್ದ ತ್ಯಾಜ್ಯ ತೆರವು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ ಸಂಯೋಜಕಿ ಮಂಜುಳಾ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ ಸಂಯೋಜಕ ಸುಧೀರ್ ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಸಂಯೋಜಿಸಿದರು. ಈ ಸ್ವಚ್ಛತಾ ಅಭಿಯಾನದ ಈ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.