ಬೆಂಗಳೂರು : ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಕ್ರಮ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರವನ್ನು ಖಂಡಿಸಿ ಎಬಿವಿಪಿ ವತಿಯಿಂದ ಇಂದು (ಜೂನ್ 8) ಮಲ್ಲೇಶ್ವರಂನಲ್ಲಿ ಪ್ರತಿಭಟನೆ ಮಾಡಲಾಯಿತು.
ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ವಿಶ್ವವಿದ್ಯಾಲಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ. ಈ ವಿಶ್ವವಿದ್ಯಾಲಯವು 2011 ರಲ್ಲಿ ಪ್ರಾರಂಭವಾಯಿತು. ಈ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಆಡಳಿತ ನೀಡಬೇಕಾದ ವಿಶ್ವವಿದ್ಯಾಲಯವೇ ಇಂದು ಸಾಕಷ್ಟು ಭ್ರಷ್ಟಾಚಾರ ಹಗರಣಗಳಿಗೆ ಹೆಸರುವಾಸಿಯಾಗುತ್ತಿದೆ. 2016 ರಲ್ಲಿ ಈ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ನೇಮಕಗೊಂಡ ಪ್ರೋ. ಎಮ್. ಎಸ್. ಸುಭಾಷ್ ಅವರು ಆರಂಭದ ದಿನಗಳಿಂದಲೂ ವಿವಿಯನ್ನು ಒಂದಲ್ಲ ಒಂದು ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದಾರೆ. ಕುಲಸಚಿವರ ಹಾಗೂ ಕುಲಪತಿಗಳ ಆಂತರಿಕ ಕಚ್ಚಾಟ, ವಿವಿಯಲ್ಲಿ ದಾಖಲಾದ ಜಾತಿ ನಿಂದನೆ ಪ್ರಕರಣಗಳು, ಬೇಕಾಬಿಟ್ಟಿ ಸಿಬ್ಬಂದಿಗಳ ವರ್ಗಾವಣೆ ಹಾಗೂ ವಜಾಗೊಳಿಸುವಿಕೆ ಇಂತಹ ಅನೇಕ ಏಕ ಪಕ್ಷಿಯ ನಿರ್ಧಾರಗಳಿಂದ ಕುಲಪತಿಗಳು ವಿವಿಯನ್ನು ತನ್ನ ಸ್ವತ್ತಿನಂತೆ ವರ್ತಿಸುತ್ತಿದ್ದಾರೆ.
ಪ್ರಸ್ತುತ 5-6 ತಿಂಗಳುಗಳಿಂದ ಭೋಧಕ ಬೋಧಕೇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯನ್ನು ಧನ ಸಹಾಯ ಆಯೋಗದ ನೀತಿ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ನಡೆಸುತ್ತಿದ್ದು, ಕುಲಪತಿಗಳು ವಿಶ್ವವಿದ್ಯಾಲಯ ಹಾಗೂ ಬಡ ಮತ್ತು ಪ್ರತಿಭಾನ್ವಿತ ಅಭ್ಯರ್ಥಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ವಿವಿಯಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ಭಾರಿ ಭ್ರಷ್ಟಾಚಾರ ನಡೆದಿದ್ದರೂ, ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ, ಸಚಿವರು ಹಾಗೂ ರಾಜ್ಯಪಾಲರು ಮೌನವಹಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಕ್ರಮವನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ.
⭕ ರಾಜ್ಯಪಾಲರ ಆದೇಶದಂತೆ ಕುಲಪತಿಗಳು ನಿವೃತ್ತಿಯಾಗುವ 6 ತಿಂಗಳ ಮುಂಚೆ ಯಾವುದೇ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಬಾರದೆಂದು ನಿಯಮವಿದ್ದರೂ, ನಿವೃತ್ತಿಯಾಗಲು ಕೇವಲ 18 ದಿನಗಳು ಬಾಕಿ ಇರುವಾಗ ನೇಮಕಾತಿ ನಡೆಸಿ ಗೌರವಾನ್ವಿತ ರಾಜ್ಯಪಾಲರ ಆದೇಶವನ್ನುಕುಲಪತಿಗಳು ಧಿಕ್ಕರಿಸಿದ್ದಾರೆ. 2016 ರಲ್ಲಿ ರಾಜ್ಯಪಾಲರು ಕುಲಪತಿಗಳ ಅಧಿಕಾರ ಅವಧಿ ಮುಗಿಯುವ 6 ತಿಂಗಳ ಮುಂಚಿತವಾಗಿ ನೇಮಕಾತಿ ಪ್ರಕ್ರಿಯೆಯನ್ನು ಮುಗಿಸಿಕೊಳ್ಳಲು ಆದೇಶ ಹೊರಡಿಸಿದ್ದರು. ಆದಾದ ನಂತರ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಆದೇಶವನ್ನು ರಾಜ್ಯಪಾಲರು ಈ ವರೆಗೆ ಹೊರಡಿಸಿರುವುದಿಲ್ಲ.
ಸರ್ಕಾರದಿಂದ ಮಂಜೂರಾದ ಮತ್ತು ಅಧಿಸೂಚಿತ ಹುದ್ದೆಗಳನ್ನು ಕುಲಪತಿಗಳು ತಮ್ಮ ವಿವೇಚನೆ ಆಧಾರದಲ್ಲಿ ಬೇರೆ ವಿಭಾಗಕ್ಕೆ ವರ್ಗಾಯಿಸಿದ್ದಾರೆ. ಈ ರೀತಿ ವರ್ಗಾಯಿಸುವುದಕ್ಕೆ ಸರ್ಕಾರದ ಅನುಮತಿ ಪಡೆದಿಲ್ಲ.
⭕ ನೇಮಕಾತಿ ವಿಚಾರದಲ್ಲಿ ಸಿಂಡಿಕೇಟ್ ಸಮಿತಿಯನ್ನು ಕತ್ತಲಲ್ಲಿ ಇಡಲಾಗಿದೆ. ಆಸ್ತಿತ್ವದಲ್ಲಿ ಇಲ್ಲದೇ ಇರುವ ವಿಭಾಗಗಳಿಗೆ ನೇಮಕಾತಿಯನ್ನು ಮಾಡಲಾಗಿದೆ.
⭕ ಭೂ-ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳೇ ಇಲ್ಲ, ಈ ವಿಭಾಗವು ಹಲವು ವರ್ಷಗಳಿಂದ ಕಾರ್ಯನಿರ್ವಹಿಸದೇ ಇದ್ದರೂ, ಒಬ್ಬ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
⭕ ರಾಜ್ಯಪಾಲರ ಆದೇಶದ ಪ್ರಕಾರ 2018 ರಲ್ಲಿ ಸರ್ಕಾರದಿಂದ 3 ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿಸಿ ಎಂದು ಆದೇಶ ಬಂದಿದೆ, ಹಾಗಾಗಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡಿರುವುದಾಗಿ ತಿಳಿಸುತ್ತಿದ್ದಾರೆ. ಆದರೆ ೨೦೧೯ನೇ ಮೇ ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಸರ್ಕಾರದ ಆದೇಶವನ್ನು ಸಹ ಉಲ್ಲಂಘಿಸಿದ್ದಾರೆ.
⭕ ನೇಮಕಾತಿಗೆ ಸಂಬಂಧಿಸಿದಂತೆ 2016 ರಲ್ಲಿ ಹೊರಡಿಸಿದ ಅಧಿಸೂಚನೆಯನ್ನು ಆಧರಿಸಿ 5 ಮರು ಅಧಿಸೂಚನೆಗಳನ್ನು ಹೊರಡಿಸಿದ್ದಾರೆ. ಆದರೆ ಒಂದು ಅಧಿಸೂಚನೆ ಕೇವಲ 6 ತಿಂಗಳು ಮಾತ್ರ ಸಿಂಧುತ್ವ ಹೊಂದಿರುತ್ತದೆ. 6 ತಿಂಗಳ ನಂತರ ಯಾವುದೇ ಅಧಿಸೂಚನೆಯನ್ನು ಹೊರಡಿಸಿದರೆ, ಅದನ್ನು ಹೊಸ ಅಧಿಸೂಚನೆ ಎಂದು ಪರಿಗಣಿಸಲಾಗುತ್ತದೆ. ಯಾವುದೇ 6 ತಿಂಗಳ ಹಿಂದಿನ ಹಳೇ ಅಧಿಸೂಚನೆಯನ್ನು ಆಧರಿಸಿ, ಮರು ಅಧಿಸೂಚನೆ ಎಂದು ಹೊರಡಿಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಏಕೆಂದರೆ, ಪ್ರತಿ 6 ತಿಂಗಳು ಅಥವಾ 1 ವರ್ಷಕ್ಕೊಮ್ಮೆ ಯು.ಜಿ.ಸಿ. ನಿಯಮಗಳು ತಿದ್ದಪಡಿಯಾಗುವುದರಿಂದ, ನೇಮಕಾತಿಯ ಅರ್ಹತೆಗಳು ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಬದಲಾವಣೆಯಾಗುತ್ತಿರುತ್ತವೆ.
⭕ ಹಳೆಯ AICTE -2016 ರ ನಿಯಮದ ಪ್ರಕಾರ ಆಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 5 ವರ್ಷಗಳ ಸೇವಾ ಅನುಭವವಿರುವ ಇರಬೇಕೆಂದು ನಿಯಮವಿದೆ. ಆದರೆ 2019 ರ AICTE ರೆಗ್ಯೂಲೇಷನ್ ಪ್ರಕಾರ ಆಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸಲು 8 ವರ್ಷದ ಸೇವಾನುಭವ ಇರಬೇಕು ಎಂಬ ನಿಯಮವಿದೆ. AICTE ನಿಯಮದ ಪ್ರಕಾರ ಯಾವುದೇ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದ್ದರೂ, ಹೊಸ ಯು.ಜಿ.ಸಿ. ತಿದ್ದುಪಡಿ ನಿಯಮಗಳು ಜಾರಿಯಾದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕೆಂಬ ಕಾನೂನು ಇರುತ್ತದೆ. ಈಗ ನೇಮಕಾತಿಗೊಂಡ ಸಿಬ್ಬಂದಿ ೫ ವರ್ಷ ಸೇವಾನುಭವ ಹೊಂದಿಲ್ಲ. ಇಲ್ಲೂ ಕೂಡ ನಿಯಮವನ್ನು ಉಲ್ಲಂಘಿಸಿರುವುದು ಕಂಡುಬರುತ್ತದೆ.
ಮೇ ತಿಂಗಳಲ್ಲಿ ನಾನ್ 371 ಜೆ ಎಂದು ನಮೂದಿಸಿ, 5 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇದು ಯಾವುದೇ ಹಳೆಯ ಮರು ಅಧಿಸೂಚನೆಯಾಗಿರುವುದಿಲ್ಲ, ಹೊಸ ಅಧಿಸೂಚನೆಯಾಗಿರುತ್ತದೆ ಮತ್ತು ನಾನ್ 371 ಜೆ ಹುದ್ದೆಗಳೆಂದು ಅಧಿಸೂಚನೆಯಲ್ಲಿ ನಮೂದಿಸಿ, 371 ಜೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಗೊಂದಲ ಉಂಟಾಗುವಂತೆ ಉದ್ದೇಶ ಪೂರ್ವಕವಾಗಿ ಈ ಅಧಿಸೂಚನೆಯನ್ನು ಹೊರಡಿಸಿ, ತಮಗೆ ಬೇಕಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ನೋಡಿಕೊಂಡಿದ್ದಾರೆ. ಹಾಗೂ ಅರ್ಜಿ ಸಲ್ಲಿಸಿದ ಹಲವಾರು ಅಭ್ಯರ್ಥಿಗಳಿಗೆ ವಿಳಂಬ ಹಾಗೂ ಹಾಲ್ ಟಿಕೇಟ್ ತಲುಪದೇ ಇರುವುದು ಕೂಡ ಮೇಲ್ನೋಟಕ್ಕೆ ವಿವಿಯ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬರುತ್ತದೆ.
ಈ ಮೇಲಿನ ಎಲ್ಲಾ ಅಂಶಗಳು ಸೇರಿದಂತೆ ಇನ್ನೂ ಅನೇಕ ನೇಮಕಾತಿಗೆ ಸಂಬಂಧಿಸಿದ ಗೊಂದಲಗಳು, ಅನುಮಾನಗಳು ರಾಜ್ಯಾದ್ಯಂತ ಚರ್ಚೆಯಾಗುತ್ತಿರುವುದು ತಮಗೆ ತಿಳಿಸಿದ ವಿಷಯ. ಆದರೆ ಕುಲಪತಿಗಳು ನಿಯಮಗಳನ್ನು ಗಾಳಿಗೆ ತೂರಿ, ಎಲ್ಲಾ ಪ್ರಕ್ರಿಯೆಗಳು ಕಾನೂನು ಪ್ರಕಾರ ನಡೆಯುತ್ತಿರುವುದಾಗಿ ಸಾರ್ವಜನಿಕರನ್ನು ದಾರಿ ತಪ್ಪಿಸಿ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ. ಸರ್ಕಾರದಲ್ಲಿನ ಕೆಲವು ಅಧಿಕಾರಿಗಳು ಕೂಡ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದರಿಂದ ಕುಲಪತಿಗಳಿಗೆ ನೈತಿಕ ಬಲ ದೊರೆತಂತಾಗಿ, ತಮಗೆ ಇಷ್ಟ ಬಂದ ಹಾಗೇಭೋಧಕ ಸಿಬ್ಬಂದಿಯನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದು, ಭೋಧಕೇತರ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುತ್ತಿರುವುದು ದುರದುಷ್ಟಕರ ಸಂಗತಿ. ಈ ಕೂಡಲೇ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರು ಮಧ್ಯ ಪ್ರವೇಶಿಸಿ ವಿವಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ.
ಈ ಪ್ರತಿಭಟನೆಯಲ್ಲಿ ಬೆಂಗಳೂರು ಮಹಾನಗರ ಕಾರ್ಯದರ್ಶಿಯಾದ ಶ್ರೀ ಸೂರಜ್ ಪಂಡಿತ್ ಮಾತನಾಡಿ ಶ್ರೀ ಕೃಷ್ಣ ದೇವರಾಯ ವಿವಿಯಲ್ಲಿ ನಡೆದಿರುವ ಪ್ರತಿಯೊಂದು ಹಗರಣಗಳನ್ನು ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರಾದ ಶ್ರೀ ಸುಭಾಷ, ಶ್ರೀ ತೇಜಸ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಪ್ರಶಾಂತ, ಕಾರ್ಯಕರ್ತರಾದ ಮೋಹನ, ಮನೋಜ, ಶಶಾಂಕ, ವರುಣ್, ಹರ್ಷಿತ್, ರಕ್ಷಿತ್ ವಿದ್ಯಾರ್ಥಿನಿಯರಾದ ಯಶಶ್ವಿನಿ, ಶಿವಾನಿ ಸೇರಿದಂತೆ 150 ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.