ತಪ್ಪು ಮಾಡುವುದು ಮಾನವನ ಸಹಜ ಗುಣ, ಆದರೆ ತಪ್ಪನ್ನು ತಿದ್ದುಕೊಂಡು ಮುನ್ನಡೆಯುವವನು ಮಾತ್ರ ನಿಜವಾದ ಮನುಷ್ಯ ಎನಿಸಿಕೊಳ್ಳುತ್ತಾನೆ. ಒಂದು ಕಾಲದಲ್ಲಿ ನಕ್ಸಲ್ ವಾದದಿಂದ ಪ್ರೇರಿತಗೊಂಡು ಹಿಂಸೆಯ ಹಾದಿಯನ್ನು ತುಳಿದಿದ್ದ ವ್ಯಕ್ತಿಯೊಬ್ಬ ಇಂದು ಸಾಮಾಜಿಕ ಕಾರ್ಯಕರ್ತನಾಗಿ ನೂರಾರು ಜನರ ಸೇವೆಯನ್ನು ಮಾಡಿ ಮಾದರಿ ಎನಿಸಿಕೊಂಡಿದ್ದಾನೆ. ಮಾತ್ರವಲ್ಲ, ನಕ್ಸಲ್ ವಾದವನ್ನು ತೊರೆದು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಎಷ್ಟೋ ಮಂದಿ ಯುವಕರಿಗೆ ಪ್ರೇರಣೆಯಾಗುತ್ತಿದ್ದಾನೆ.
ಅರ್ಜುನ್, ಒಂದು ಕಾಲದ ಅತ್ಯಂತ ಅಪಾಯಕಾರಿ ನಕ್ಸಲ್, ಪೊಲೀಸರು ಇವರ ತಲೆ ಮೇಲೆ 8 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಣೆ ಮಾಡಿದ್ದರು. ದಕ್ಷಿಣ ಬಸ್ತರ್ ಪ್ರದೇಶದಲ್ಲಿ ನಕ್ಸಲರ ಸಾಂಸ್ಕೃತಿಕ ವಿಭಾಗವಾದ ಚೇತ್ನಾ ನಾಟ್ಯ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. 20 ವರ್ಷಗಳ ಕಾಲ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ. ನಕ್ಸಲ್ ಸಿದ್ಧಾಂತವನ್ನು ಪ್ರಚಾರ ಪಡಿಸಲು, ಅದರತ್ತ ಬುಡಕಟ್ಟು ಜನರನ್ನು ಸೆಳೆಯುವ ಸಲುವಾಗಿ ನಾಟಕ, ನೃತ್ಯ ಇತ್ಯಾದಿಗಳನ್ನು ಮಾಡುತ್ತಿದ್ದ.
ಆದರೆ ಬರುಬರುತ್ತಾ ನಕ್ಸಲ ಸಿದ್ಧಾಂತ ಇವನಿಗೆ ಅಪಾಯಕಾರಿ ಎನಿಸತೊಡಗಿತ್ತು, ಆ ಸಿದ್ಧಾಂತವೇ ಸರಿಯಲ್ಲ ಎಂದು ಅನಿಸತೊಡಗಿತ್ತು. ಕೊನೆಗೆ ಸುಕ್ಮಾದಲ್ಲಿ ಪೊಲೀಸರ ಮುಂದೆ ಇವರು ಶರಣಾಗತನಾಗಿದ್ದ. ಅಂದಿನಿಂದ ಇಂದಿನವರೆಗೆ ಇವರ ಜೀವನದ ಗತಿಯೇ ಬದಲಾಗಿದೆ. ನಕ್ಸಲಿಸಂಗೆ ಜನರನ್ನು ಸೆಳೆಯಲು ನಾಟಕಗಳನ್ನು ಮಾಡುತ್ತಿದ್ದ ಈತ, ಇಂದು ಪೊಲೀಸರ ಜೊತೆಗೂಡಿ ನಕ್ಸಲ್ ವಾದದಿಂದ ದೂರವಿರುವಂತೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ನಾಟಕ ಇತ್ಯಾದಿಗಳನ್ನು ಆಯೋಜನೆಗೊಳಿಸುತ್ತಿದ್ದಾನೆ. ನಕ್ಸಲ್ ಅಪಾಯದ ಬಗ್ಗೆ ಹಾಡುಗಳನ್ನು ಹಾಡುತ್ತಿದ್ದಾನೆ.
ತುಂಬಾ ಪ್ರತಿಭಾವಂತನಾಗಿರುವ ಅರ್ಜುನ್ ಅವರ ಪ್ರತಿಭೆಯನ್ನು ಪೊಲೀಸ್ ಇಲಾಖೆ ಉತ್ತಮ ಕಾರ್ಯಗಳಿಗೆ ಬಳಕೆ ಮಾಡುತ್ತಿದೆ. ಸರ್ಕಾರದ ಯೋಜನೆಗಳನ್ನು ನಕ್ಸಲ್ ಪೀಡಿತ ಪ್ರದೇಶಗಳ ಜನರಿಗೆ ತಲುಪಿಸುವಲ್ಲಿಯೂ ಅರ್ಜುನ್ ಅವರು ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದ್ದಾನೆ. ನಕ್ಸಲ್ ಸಿದ್ಧಾಂತಕ್ಕೆ ಮಾರು ಹೋಗದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಈತ ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ನಾಟಕ ಮತ್ತು ಹಾಡುಗಾರಿಕೆಯ ಮೂಲಕ ಮಾಡುತ್ತಿದ್ದಾನೆ.
ಜೂನ್ 5ರಂದು ನಡೆದ ವಿಶ್ವ ಪರಿಸರ ದಿನಾಚರಣೆಯಂದು ಕೂಡ ಅರ್ಜುನ್ ಅವರು, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾನೆ.
ಅರ್ಜುನ್ನ ಪ್ರತಿಭೆಯನ್ನು ಸದ್ಭಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ಸುಕ್ಮಾದ ಎಸ್ ಪಿ ಸಲಭ್ ಸಿನ್ಹಾ ಅವರು, “ಕಾರ್ಯಾಚರಣೆಗಳ ಮೂಲಕ ನಕ್ಸಲರನ್ನು ಸದೆಬಡಿಯುವುದರ ಜೊತೆಜೊತೆಗೆ ನಾವು ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದೇವೆ. ಇದರಿಂದ ಪ್ರೇರಣೆಗೊಂಡು ಹಲವಾರು ಮಂದಿ ನಕ್ಸಲರು ಹಿಂಸೆಯ ಮಾರ್ಗವನ್ನು ತೊರೆದು ಮುಖ್ಯ ವಾಹಿನಿಗೆ ಮರಳಿದ್ದಾರೆ” ಎಂದಿದ್ದಾರೆ.
“ನಾವು ಅರ್ಜುನ್ ಅವರ ತಂಡವನ್ನು ಕಟ್ಟಿದ್ದೇವೆ ಮತ್ತು ಆ ತಂಡ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಈ ಹಿಂದೆ ಆತ ನಕ್ಸಲ್ ಸಿದ್ಧಾಂತವನ್ನು ಪಸರಿಸಲು ನಾಟಕ ಮತ್ತು ಹಾಡುಗಾರಿಕೆಯನ್ನು ಮಾಡುತ್ತಿದ್ದ. ಆತನ ಪ್ರತಿಭೆಯನ್ನು ಸರಿಯಾದ ದಾರಿಯಲ್ಲಿ ಬಳಕೆ ಮಾಡಲು ನಾವು ನಿರ್ಧರಿಸಿದೆವು, ಇಂದು ಆತ ಸರ್ಕಾರದ ಯೋಜನೆಗಳ ಬಗ್ಗೆ, ನಕ್ಸಲಿಸಂ ಅಪಾಯದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾನೆ” ಎಂದಿದ್ದಾರೆ.
ದೇಶದಲ್ಲಿ ನಕ್ಸಲಿಸಂ ನಿಧಾನಕ್ಕೆ ಕ್ಷೀಣಿಸುತ್ತಾ ಬರುತ್ತಿದೆ. ಹಲವಾರು ಮಂದಿ ನಕ್ಸಲರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಅನೇಕ ಮಂದಿ ನಕ್ಸಲ್ ಸಿದ್ಧಾಂತವೇ ಬೇಡ ಎಂದು ಪೊಲೀಸರಿಗೆ ಶರಣಾಗಿದ್ದಾರೆ. ಹೀಗೆ ಶರಣಾಗುವ ಮಾಜಿ ನಕ್ಸಲರು ಸಾಮಾಜಿಕ ಕಾರ್ಯಗಳಲ್ಲಿ ತೊಡಗುವಂತೆ ಪೊಲೀಸ್ ಇಲಾಖೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.