ನವದೆಹಲಿ: ಸಾಂಪ್ರದಾಯಿಕವಾಗಿ ಸರ್ಕಸ್ಗಳಲ್ಲಿ ಜನರಿಗೆ ಮನೋರಂಜನೆಯನ್ನು ನೀಡುವ ಸಲುವಾಗಿ ಪ್ರಾಣಿಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಪ್ರಾಣಿಗಳಿಗೆ ಈ ಸರ್ಕಸ್ಗಳಲ್ಲಿ ನೀಡಲಾಗುವ ಚಿತ್ರಹಿಂಸೆಗಳಿಗೆ ವ್ಯಾಪಕವಾದ ವಿರೋಧ ವ್ಯಕ್ತವಾಗುತ್ತಲೇ ಇದೆ. ಹೀಗಾಗಿ ನೆದರ್ ಲ್ಯಾಂಡ್, ಐರ್ಲೆಂಡ್ ಮತ್ತು ಮೆಕ್ಸಿಕೋದಂತಹ ದೇಶಗಳು ಪ್ರಾಣಿಗಳ ಬಳಕೆಯನ್ನು ಸಂಪೂರ್ಣ ನಿಷೇಧ ಮಾಡಿವೆ. ಇದೀಗ ಜರ್ಮನಿ ಕೂಡ, ಸರ್ಕಸ್ಗಳಲ್ಲಿ ಪ್ರಾಣಿ ಬಳಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ನಾವೀನ್ಯ ವಿಧಾನವನ್ನು ಕಂಡುಹಿಡಿದಿದೆ.
ಜರ್ಮನಿಯ ಸರ್ಕಸ್ ರೊನಕಲ್ಲಿ ಎಂಬ ಸರ್ಕಸ್ ಕಂಪನಿಯು ನಿಜವಾದ ಪ್ರಾಣಿಗಳ ಬದಲು 3ಡಿ ಹೊಲೊಗ್ರಾಮ್ (ಲೇಸರ್ ಕಿರಣಗಳಿಂದ ಮಾಡಿದ ಮೂರು ಆಯಾಮಗಳಿರುವ ಚಿತ್ರ) ಬಳಸಿ ನಿಜವಾದ ಪ್ರಾಣಿಗಳಂತೆಯೇ ಇರುವ ನಕಲಿ ಪ್ರಾಣಿಗಳನ್ನು ಜನರ ಮುಂದೆ ಪ್ರಸ್ತುತಪಡಿಸಲಿದೆ.
ತನ್ನ ಪ್ರದರ್ಶನದಲ್ಲಿ ಪ್ರಾಣಿಗಳ 3ಡಿ ಹೊಲೊಗ್ರಾಮ್ ಬಳಸಿದ ವಿಶ್ವದ ಮೊತ್ತ ಮೊದಲ ಸಂಸ್ಥೆಯಾಗಿ ಸರ್ಕಸ್ ರೊನಕಲ್ಲಿ ಹೊರಹೊಮ್ಮಿದೆ. ಸಾಂಪ್ರದಾಯಿಕ ಸರ್ಕಸ್ಗಳಲ್ಲಿ ಕಾಣ ಸಿಗುವ ಪ್ರಾಣಿಗಳ ವರ್ತನೆಯನ್ನು ಇಲ್ಲೂ ತರುವ ಸಲುವಾಗಿ ಅಭೂತಪೂರ್ವ ಪ್ರೊಜೆಕ್ಷನ್ ಅನ್ನು ನಿರ್ಮಾಣ ಮಾಡಲು ಸಂಸ್ಥೆ ಬ್ಲೂಬಾಕ್ಸ್ ಮತ್ತು ಓಪ್ಟೊಮದೊಂದಿಗೆ ಕೈಜೋಡಿಸಿದೆ.
ಸಾಂಪ್ರದಾಯಿಕ ಸರ್ಕಸ್ಗಳು ಈಗ ಜನಾಕರ್ಷಣೆಯನ್ನು ಕಳೆದುಕೊಂಡಿದೆ, ಆದರೆ ಇಂತಹ ನಾವೀನ್ಯ ಕ್ರಮಗಳು ಮತ್ತೆ ಜನರನ್ನು ಸರ್ಕಸಿನತ್ತ ತರಲು ಹೆಚ್ಚು ಸಹಕಾರಿಯಾಗಲಿದೆ ಎಂಬುದು ಸರ್ಕಸ್ ರೊನಕಲ್ಲಿ ನಂಬಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.