2006ರ ಜೂನ್ 5 ರಂದು ಆಕೆ ತನ್ನ ಅಗಲಿದ ಪತಿಯ ಸ್ಮರಣಾರ್ಥ ಮನೆಯ ಸಮೀಪ ಒಂದು ಹೊಂಗೆ ಗಿಡವನ್ನು ನೆಟ್ಟರು. ಅಂದಿನಿಂದ ಇಂದಿನವರೆಗೆ ಅವರು ಬರೋಬ್ಬರಿ 73 ಸಾವಿರ ಮರಗಳನ್ನು ಬೆಂಗಳೂರು ಮತ್ತು ಕರ್ನಾಟಕದ ನಾನಾ ಭಾಗಗಳಲ್ಲಿ ನೆಟ್ಟಿದ್ದಾರೆ. ಕಳೆದ 13 ವರ್ಷಗಳಿಂದ ತಾನು ನೆಟ್ಟು ಬೆಳೆಸಿದ ಮರಗಳನ್ನು, ಅದು ಪ್ರಕೃತಿಯ ಮೇಲೆ ಬೀರುತ್ತಿರುವ ಪ್ರಭಾವವನ್ನು ಇಂದು 68 ವರ್ಷದ ಜಾನೆಟ್ ಯಗ್ನೇಶ್ವರನ್ ಹೆಮ್ಮೆಯಿಂದ ನೋಡುತ್ತಾರೆ. ಇವರನ್ನು ಈಜಿಪುರದ ‘ಸಾಲು ಮರದ ತಿಮ್ಮಕ್ಕ’ ಅಂತಲೇ ಕರೆಯಲಾಗುತ್ತದೆ. ಜಾನೆಟ್ ಅವರು ಬೆಂಗಳೂರು ದಕ್ಷಿಣದ ಈಜಿಪುರ ನಿವಾಸಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಅವರು 75,000 ಗಿಡಗಳನ್ನು ಮೆಟ್ಟ ಮೈಲಿಗಲ್ಲನ್ನು ಸಾಧಿಸಲಿದ್ದಾರೆ.
2005ರ ಸೆಪ್ಟಂಬರ್ ತಿಂಗಳಲ್ಲಿ ತಮ್ಮ ಪತಿ ಆರ್ ಎಸ್ ಯಗ್ನೇಶ್ವರನ್ ಅವರನ್ನು ಕಳೆದುಕೊಂಡ ಜಾನೆಟ್ ಅವರು ಅಲ್ಲಿಂದ ತಮ್ಮ ಗಿಡ ಬೆಳಸುವ ಅಭಿಯಾನವನ್ನು ಆರಂಭಿಸಿದರು. ಆ ಸಮಯದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಬೆಂಗಳೂರಿನಲ್ಲಿ ಮರಗಳ ಮಾರಣ ಹೋಮವೇ ನಡೆಯುತ್ತಿತ್ತು. ಜಾನೆಟ್ ಇದರಿಂದ ಸಾಕಷ್ಟು ನೊಂದು ಹೋಗಿದ್ದರು. ಗೆಳತಿಯರೆಲ್ಲಾ ಧರಣಿ ಕೂರೋಣ ಎಂದು ಒತ್ತಾಯಪಡಿಸುತ್ತಿದ್ದರು, ಆದರೆ ಅವರು ಮಾತ್ರ ಬೇರೆಯದ್ದೇ ಮಾರ್ಗ ಹಿಡಿಯುವ ಬಗ್ಗೆ ಚಿಂತನೆ ನಡೆಸಿದರು. ತಮ್ಮ ಪತಿಯ ಹೆಸರಿನಲ್ಲಿ ರಾಜನೆಟ್ ಯಗ್ನೇಶ್ವರನ್ ಚಾರಿಟೇಬಲ್ ಟ್ರಸ್ಟ್ ಆರಂಭಿಸಿದರು, ನೆರೆಹೊರೆಯಲ್ಲಿ ಗಿಡ ನೆಡುವ ಕಾರ್ಯವನ್ನು ಆರಂಭಿಸಿದರು.
ಉತ್ತಮ ಪರಿಸರ ರಚನೆಗೆ ಮನೆಯ ಗಾರ್ಡನಿನಲ್ಲಿ ಗಿಡ ಬೆಳೆಸಿದರೆ ಸಾಕಾಗುವುದಿಲ್ಲ, ಸುತ್ತಲಿನ ಪರಿಸರದಲ್ಲಿ ಗಿಡ ಬೆಳೆಸಬೇಕು ಎಂಬುದನ್ನು ಅರಿತುಕೊಂಡಿದ್ದ ಜಾನೆಟ್, ಕೆಲವು ಸ್ವಯಂಸೇವಕರ ಜೊತೆಗೂಡಿ ನೆರೆಹೊರೆಯ ಸ್ಥಳಗಳಿಗೆ ತೆರಳಿ ಗಿಡಗಳನ್ನು ನೆಡಲು ಅಲ್ಲಿನ ಜನರ ಅನುಮತಿ ಕೇಳಿದರು. ಕೆಲವರು ಅವರ ಮನವಿಗೆ ಒಪ್ಪಿಕೊಂಡರೆ ಇನ್ನೂ ಕೆಲವರು ರಸ್ತೆ ಬದಿಯಲ್ಲಿ ಮರ ಬೆಳೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆದರೂ ಛಲ ಬಿಡದೆ ಜಾನೆಟ್ ತಮ್ಮ ಕಾರ್ಯವನ್ನು ಮುಂದುವರೆಸುತ್ತಲೇ ಹೋದರು.
ಲ್ಯಾಂಡ್ ಸ್ಕೇಪ್ ವಿನ್ಯಾಸಕಿಯಾಗಿ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯನಿರ್ವಹಿಸಿದ ಅನುಭವ ಜಾನೆಟ್ ಅವರ ಕೈಹಿಡಿಯಿತು. ಪ್ರದೇಶವನ್ನು ಆಧರಿಸಿ ಗಿಡಗಳನ್ನು ಆಯ್ಕೆ ಮಾಡುವಲ್ಲಿ ಅವರು ಪರಿಣತರಾಗಿದ್ದರು. 2006ರಲ್ಲಿ ಗಿಡ ನೆಡುವಿಕೆ ಆರಂಭಿಸಿದ ಅವರು ಇಂದಿಗೂ ತಮ್ಮ ಕಾರ್ಯವನ್ನು ಮುಂದುವರೆಸುತ್ತಲೇ ಇದ್ದಾರೆ. ಬೆಂಗಳೂರು ಮಾತ್ರವಲ್ಲ, ತಮಿಳುನಾಡು ಮತ್ತು ಕರ್ನಾಟಕದ ಇತರ ಭಾಗಗಳಿಗೂ ತೆರಳಿ ಅವರು ಗಿಡಗಳನ್ನು ನೆಟ್ಟಿದ್ದಾರೆ.
ಕೃಷ್ಣರಾಜಪುರ, ಪೈ ಲೇಔಟ್, ಬೇಗೂರ್, ಎಲೆಕ್ಟ್ರಾನಿಕ್ಸ್ ಸಿಟಿ, ಟಾಟಗುನಿ, ತಲ್ಘಟ್ ಪುರ, ಕ್ಯಾಂಬ್ರಿಡ್ಜ್ ಲೇಔಟ್, ಕೋರಮಂಗಲ, ಜಕ್ಕೂರ್ ಕ್ರಾಸ್ ಮತ್ತು ಬೆಂಗಳೂರಿನ ಇತರ ಕಡೆಗಳಲ್ಲಿ ಇವರು ಸಾವಿರಾರು ಗಿಡಗಳನ್ನು ನೆಟ್ಟಿದ್ದಾರೆ. ಆ ಗಿಡಗಳು ಮರವಾಗಿರುವುದನ್ನು ನೋಡಿ ಆನಂದಿಸುತ್ತಾರೆ. ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ 5,000 ಗಿಡಗಳನ್ನು ಅವರು ನೆಟ್ಟಿದ್ದಾರೆ. ಮನವಿಗಳು ಬಂದರೆ ರಾಜ್ಯದ ಇತರ ಭಾಗಗಳಲ್ಲೂ ಗಿಡ ನೆಡಲು ಅವರು ಸಿದ್ಧರಿದ್ದಾರೆ.
ಪ್ರಸ್ತುತ ಕೊಡಗಿನಲ್ಲಿ 1,000 ಗಿಡಗಳನ್ನು ನೆಡಲು ಮತ್ತು ತಮಿಳುನಾಡಿನ ತಂಜಾವೂರ್ ಜಿಲ್ಲೆಯಲ್ಲಿ 1,000 ತೆಂಗಿನ ಗಿಡಗಳನ್ನು ನೆಡಲು ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸೈಕ್ಲೋನ್ ಗಜಾದಿಂದ ತತ್ತರಿಸಿ ಹೋಗಿರುವ ತಂಜಾವೂರಿನಲ್ಲಿ ನಾಗರಿಕ ಅರಿವು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಅವರು, ಅದರ ಭಾಗವಾಗಿ 1,000 ತೆಂಗಿನ ಮರ ನೆಡುತ್ತಿದ್ದಾರೆ. ಇದಕ್ಕಾಗಿ 100 ಬಡ ಕುಟುಂಬಗಳನ್ನು ಗುರುತಿಸಲಾಗಿದ್ದು, ಒಂದೊಂದು ಕುಟುಂಬಕ್ಕೆ ತಲಾ 10 ತೆಂಗಿನ ಗಿಡ ನೆಡಲಿದ್ದಾರೆ.
ಕೆಪಿಎಂಜಿ, ಸೋನಿ, ಸ್ಯಾಮ್ಸಂಗ್ ಮತ್ತು ನೋಕಿಯಾ ಮುಂತಾದ ಕಾರ್ಪೋರೇಟ್ ಕಂಪನಿಗಳೂ ತಾವು ಆಯ್ದ ಜಾಗದಲ್ಲಿ ಗಿಡ ನೆಡಲು ಇವರನ್ನು ಆಹ್ವಾನಿಸುತ್ತದೆ. ಅದಕ್ಕೆ ಇವರಿಗೆ ಹಣವನ್ನು ನೀಡುತ್ತದೆ. ಆದರೆ ರೈತರು, ಬಡವರಿಗೆ ಗಿಡಗಳನ್ನು ನೆಟ್ಟು ಕೊಡಲು ಇವರು ಯಾವುದೇ ಹಣವನ್ನು ಪಡೆದುಕೊಳ್ಳುವುದಿಲ್ಲ.
ಗಿಡಗಳನ್ನು ಪಾಲನೆ ಪೋಷಣೆ ಮಾಡುತ್ತೇವೆ ಎಂದು ನಿವಾಸಿಗಳು ಭರವಸೆ ನೀಡಿದ ತರುವಾಯವೇ ಇವರು ಗಿಡ ನೆಡುತ್ತಾರೆ. ಮೊದಮೊದಲು ಜಾನೆಟ್ ತಮ್ಮದೇ ಹಣದಲ್ಲಿ ಗಿಡಗಳನ್ನು ತಂದು ನೆಡುತ್ತಿದ್ದರು, ಆದರೆ ಈಗ ಅವರಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ದಾನಿಗಳನ್ನು ಅವರು ಅವಲಂಬಿಸಬೇಕಾಗುತ್ತದೆ. ಕೆಲವರು ತಮ್ಮ ಹುಟ್ಟುಹಬ್ಬ ಮತ್ತು ವಿಶೇಷ ಹಬ್ಬಗಳಂದೂ ಗಿಡ ನೆಡಲು ಬಯಸುತ್ತಾರೆ. ಒಬ್ಬ ಯುವಕ ಪ್ರತಿ ವರ್ಷ ತನ್ನ ಹುಟ್ಟುಹಬ್ಬದ ದಿನ 111 ಗಿಡಗಳನ್ನು ಇವರಿಂಡ ನೆಡಿಸುತ್ತಾನೆ. ಹಲವು ವರ್ಷಗಳಿಂದ ಈ ಕಾರ್ಯವನ್ನು ಆತ ಮಾಡುತ್ತಾ ಬರುತ್ತಿದ್ದಾನೆ.
ಆಕಾಶ ಮಲ್ಲಿಗೆ, ಹೊಂಗೆ, ನೀಮ್ ಮತ್ತು ನೂರಾರು ವಿಧದ ಗಿಡಗಳನ್ನು ನೆಡುವ ಜಾನೆಟ್, ದೊಮ್ಮಲೂರು ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್ ಸಮೀಪ ನರ್ಸರಿಯನ್ನೂ ನಡೆಸುತ್ತಿದ್ದಾರೆ. ಆದರೆ ಇಲ್ಲಿ ನೀರಿನ ಅಭಾವ ಇರುವ ಕಾರಣ ನರ್ಸರಿ ನಡೆಸುವುದೇ ಅವರಿಗೆ ದುಸ್ತರವಾಗಿದೆ. ಹೀಗಾಗಿ ಮಹಾನಗರ ಪಾಲಿಕೆ ತನ್ನ ನರ್ಸರಿಗೆ ಬೇರೆ ಜಾಗವೊಂದನ್ನು ಕಲ್ಪಿಸಿಕೊಡಬೇಕು ಎಂಬ ಮನವಿಯನ್ನೂ ಅವರು ಮಾಡಿಕೊಳ್ಳುತ್ತಿದ್ದಾರೆ.
ನಿಜವಾದ ಅರ್ಥದಲ್ಲಿ ಜಾನೆಟ್ ಅವರು ಪ್ರಕೃತಿ ಸಂರಕ್ಷಕಿಯಾಗಿದ್ದು, ಗಿಡಗಳನ್ನು ನೆಟ್ಟು ಅದರ ಪಾಲನೆ ಪೋಷಣೆಯಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.