ಮಂಗಳೂರು : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಪ್ರತಿವಾರ ನಿರಂತರವಾಗಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಶ್ರಮದಾನದ 5 ನೇ ವರ್ಷದ 26 ನೇ ಭಾನುವಾರದ ಶ್ರಮದಾನವನ್ನು ಬೊಕ್ಕಪಟ್ಣದಲ್ಲಿ ಆಯೋಜಿಸಲಾಯಿತು. ದಿನಾಂಕ 2-6-2019 ರಂದು ಬೆಳಿಗ್ಗೆ ಬೊಕ್ಕಪಟ್ಣ ಸ್ಪಂದನ ಜನರಲ್ ಆಸ್ಪತ್ರೆಯ ಸಮೀಪದಲ್ಲಿ ಶ್ರಮದಾನಕ್ಕೆ ಮನಪಾ ಮಾಜಿ ಮಹಾಪೌರರಾದ ದಿವಾಕರ್ ಕೆ. ಹಾಗೂ ಸಾಮಾಜಿಕ ಕಾರ್ಯಕರ್ತ ರೋಹನ್ ಸಿರಿ ಜಂಟಿಯಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಸಾ ಹಿರೋ, ಪ್ರೋ. ಸತೀಶ್ ಭಟ್, ನವೀನ್ ದೇವಾಡಿಗ ಬರ್ಕೆ, ಜಾನ್ ಕೆನೆಡಿ, ಶೋಭಾ ಶೆಟ್ಟಿ, ಲತಾಮಣಿ ರೈ, ಮಹೇಶ್ ಕುಮಾರ್, ರಂಜಿತಾ ಗಣೇಶ್ ಕುದ್ರೋಳಿ, ಜಗನ್ ಕೋಡಿಕಲ್, ಸರಿತಾ ಶೆಟ್ಟಿ, ಸೌರಜ್ ಮಂಗಳೂರು ಇನ್ನಿತರ ಸ್ವಯಂ ಸೇವಕರು ಉಪಸ್ಥಿತರಿದ್ದರು.
ಮನಪಾ ಮಾಜಿ ಮಹಾಪೌರ ದಿವಾಕರ್ ಕೆ. ಮಾತನಾಡಿ ಸ್ವಚ್ಛತೆಯ ವಿಷಯದಲ್ಲಿ ಜನರು ರಾಜಿ ಮಾಡಿಕೊಳ್ಳಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕ ಸ್ಥಳಗಳು ಶುಚಿಯಾಗಿಲ್ಲದಿದ್ದರೆ ಪಾಲಿಕೆಯ ಗಮನವನ್ನು ಸೆಳೆಯುವ ಕೆಲಸವನ್ನು ಸಾರ್ವಜನಿಕರು ಮಾಡಬೇಕು; ಇಂತಹ ವಿಷಯದಲ್ಲಿ ಸಹನೆ ಒಳ್ಳೆಯದಲ್ಲ. ನಮ್ಮ ಸಹನೆ ಎಂದಿಗೂ ದೌರ್ಬಲ್ಯವಾಗಬಾರದು. ಇದೀಗ ನಗರದ ಬೀದಿಬೀದಿಗಳು ಸ್ವಚ್ಛವಾಗುತ್ತಿದ್ದರೆ ಅದಕ್ಕೆ ರಾಮಕೃಷ್ಣ ಮಿಷನ್ ಶ್ರಮವೇ ಕಾರಣ. ಅದನ್ನು ಯಥಾಪ್ರಕಾರವಾಗಿ ಸ್ವಚ್ಛವಾಗಿ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಆಯಾ ಪರಿಸರದ ಜನರು ವಹಿಸಿಕೊಂಡಾಗ ಇಂತಹ ಶ್ರಮದಾನಗಳು ಸಾರ್ಥಕವಾಗುತ್ತವೆ. ರಾಮಕೃಷ್ಣ ಮಿಶನ್ನಿನ ಕಾರ್ಯಕರ್ತರ ನಿಸ್ವಾರ್ಥ ಸೇವೆ ಹೀಗೆ ನಿರಂತರವಾಗಿ ಮುಂದುವರೆದು ಮಂಗಳೂರು ಸ್ವಚ್ಛ ನಗರವಾಗಲಿ ಎಂದು ತಿಳಿಸಿ ಶುಭಹಾರೈಸಿದರು.
ಸ್ವಚ್ಛತೆ
ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ನೇತೃತ್ವದಲ್ಲಿ ಸ್ವಯಂಸೇವಕರು ಬೊಕ್ಕಪಟ್ಣ ಮಣ್ಣಗುಡ್ಡೆ ರಸ್ತೆಯಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ಮಧುಚಂದ್ರ ಅಡ್ಯಂತಾಯ, ಮೋಹನ್ ಕೊಟ್ಟಾರಿ ಹಾಗೂ ಹಿರಿಯ ಕಾರ್ಯಕರ್ತರು ಮಳೆಗಾಲವನ್ನು ಗಮನದಲ್ಲಿರಿಸಿಕೊಂಡು ತೋಡುಗಳಲ್ಲಿದ್ದ ಕಸ-ಕಡ್ಡಿ ಮಣ್ಣುಕಲ್ಲುಗಳನ್ನು ತೆರವು ಮಾಡಿದರು. ಸಿಟಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಮೀಳಾ ಇವರ ಮುಂದಾಳತ್ವದಲ್ಲಿ ರಸ್ತೆಗಳನ್ನು ಗುಡಿಸಿ, ಶುಚಿಗೊಳಿಸಿ ಕಸವನ್ನು ಲಾರಿಗೆ ತುಂಬಿಸಿದರು. ಹಾಗೂ ಅಲ್ಲಲ್ಲಿದ್ದ ತ್ಯಾಜ್ಯರಾಶಿಗಳನ್ನು ತೆರವು ಮಾಡಲಾಯಿತು. ಶ್ರೀದೇವಿ ಆರ್ಟ್ಸ್ ಕರ್ಣ ಇವರ ಸಹಕಾರದೊಂದಿಗೆ ಬರ್ಕೆ ಕ್ರಾಸ್ ರಸ್ತೆ ಹಾಗೂ ಬೊಕ್ಕಪಟ್ಣ ಎಂಬ ಎರಡು ಮಾರ್ಗಸೂಚಕ ಫಲಕಗಳನ್ನು ಹಳದಿ ಬಣ್ಣ ಬಳಿದು ಸುಂದರ ಅಕ್ಷರಗಳಿಂದ ಬರೆದು ನವೀಕರಿಸಲಾಯಿತು.
7 ತ್ಯಾಜ್ಯ ಬೀಳುವ ಸ್ಥಳಗಳ ಸ್ವಚ್ಛತೆ
ಬೊಕ್ಕಪಟ್ಣ ಮಣ್ಣಗುಡ್ಡ ರಸ್ತೆಯ ಸುಮಾರು ಸ್ಥಳಗಳಲ್ಲಿ ಕೆಲವರು ತ್ಯಾಜ್ಯವನ್ನು ಬಿಸಾಡುತ್ತಿದ್ದರು. ಪರಿಣಾಮವಾಗಿ ಅಲ್ಲಿನ ಜನರು ಮೂಗುಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಸ ಹಾಕುವುದನ್ನು ತಡೆಯಲು ಸ್ಥಳೀಯರು ಹಲವು ರೀತಿಯಲ್ಲಿ ಪ್ರಯತ್ನಿಸಿದಾಗ್ಯೂ ಅನಾಮಿಕರು ತ್ಯಾಜ್ಯ ಸುರಿಯುವುದನ್ನು ಮುಂದುವರೆಸಿದ್ದರು. ಇದನ್ನರಿತ ರಾಮಕೃಷ್ಣ ಮಿಷನ್ ಕಾರ್ಯಕರ್ತರು ಸಮಸ್ಯೆಯನ್ನು ನಿವಾರಿಸಬೇಕೆಂಬ ನಿಟ್ಟಿನಲ್ಲಿ ಬೈಂದು ಬೆಳಗ್ಗೆಯಿಂದಲೇ ಕಾರ್ಯೋನ್ಮುಖರಾದರು. ಮೊದಲು ತ್ಯಾಜ್ಯ ಬಿಸಾಡುತ್ತಿದ್ದ ಸುಮಾರು ಏಳು ಸ್ಥಳಗಳನ್ನು ಗುರುತಿಸಿದರು. ಬಳಿಕ ದಿಲ್ರಾಜ್ ಆಳ್ವ, ಸತೀಶ್ ಕೆಂಕನಾಜೆ, ಮೆಹಬೂಬ್ ಖಾನ್, ಅನಿರುದ್ಧ ನಾಯಕ್, ಯೋಗೀಶ್ ಕಾಯರ್ತಡ್ಕ, ಧನುಷ್ ಶೆಟ್ಟಿ, ಪ್ರಕಾಶ್ ಎಸ್ ಎನ್ ಇವರುಗಳ ನೇತೃತ್ವದಲ್ಲಿ ಆ ಸ್ಥಳಗಳಲ್ಲಿದ್ದ ವಾಸನೆಯುಕ್ತ ರಾಶಿ ರಾಶಿ ತ್ಯಾಜ್ಯವನ್ನು ತೆಗೆದು ಲಾರಿಗೆ ತುಂಬಿಸಿ ಸ್ವಚ್ಛಗೊಳಿಸಲಾಯಿತು. ಅಗತ್ಯವಿದ್ದಲ್ಲಿ ಜೆಸಿಬಿ ಕೂಡ ಬಳಸಿಕೊಳ್ಳಲಾಯಿತು. ಸ್ವಚ್ಛಗೊಳಿಸಿದ ಬಳಿಕ ಆ ಜಾಗೆಯಲ್ಲಿ ಮಣ್ಣು, ಜಲ್ಲಿ ಹಾಕಿ ಸಮತಟ್ಟುಗೊಳಿಸಲಾಯಿತು. ಹಾಗೂ ಅಲ್ಲಿ ಅಲಂಕಾರಿಕ ಗಿಡಗಳುಳ್ಳ ಕುಂಡಗಳನಿಟ್ಟು ಸ್ಥಳವನ್ನು ಅಂದಗೊಳಿಸಲು ಪ್ರಯತ್ನಿಸಲಾಗಿದೆ. ಇಂದಿನಿಂದ ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಅನಾಮಿಕರು ಕಸ ಹಾಕದಂತೆ ರಾಮಕೃಷ್ಣ ಮಿಷನ್ ಸ್ವಚ್ಛತಾ ಯೋಧರ ಪಡೆ ಕಣ್ಗಾವಲು ಕಾಯಲಿದೆ.
ಸ್ವಚ್ಛತಾ ಜಾಗೃತಿ
ಸಿಟಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ವಾಣಿಶ್ರೀ, ನಿರೀಕ್ಷಾ, ಸ್ವಾತಿ ಹಾಗೂ ಇನ್ನಿತರು ಸ್ವಯಂಸೇವಕರು ಬೊಕ್ಕಪಟ್ಣ ರಸ್ತೆಯ ಮುಖ್ಯ ರಸ್ತೆಯ ಅಂಗಡಿ-ಮುಂಗಟ್ಟುಗಳನ್ನು ಸಂಪರ್ಕಿಸಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಲು ಸಹಕರಿಸುವಂತೆ ವಿನಂತಿಸಿದರು. ಹಾಗೂ ಸ್ಥಳೀಯ ಮನೆಗಳನ್ನು ಸಂಪರ್ಕಿಸಿ ಮನೆಯ ಕಸವನ್ನು ಪಾಲಿಕೆಯ ತ್ಯಾಜ್ಯ ಸಾಗಿಸುವ ವಾಹನಕ್ಕೆ ನೀಡಬೇಕಾಗಿ ಕೋರಿದರು. ಅಭಿಯಾನದ ಪ್ರಮುಖ ಸುರೇಶ್ ಶೆಟ್ಟಿ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿದರು. ಕಿಶೋರ್ ಕುಮಾರ್, ಅವಿನಾಶ್ ಅಂಚನ್, ನಾಗೇಶ್ ಸರಿಪಳ್ಳ, ಜಿ ಕೃಷ್ಣ, ಮುಖೇಶ್ ಆಳ್ವ, ಹಿಮ್ಮತ್ ಸಿಂಗ್ ಇನ್ನಿತರ ಕಾರ್ಯಕರ್ತರು ಶ್ರಮದಾನದಲ್ಲಿ ಪಾಲ್ಗೊಂಡರು. ಶ್ರಮದಾನದ ಬಳಿಕ ಎಲ್ಲ ಕಾರ್ಯಕರ್ತರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಈ ಸ್ವಚ್ಛತಾ ಅಭಿಯಾನದ ಈ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್. ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.