ಹವಮಾನ ವೈಪರೀತ್ಯದ ಬಗ್ಗೆ ಎಲ್ಲರೂ ಆತಂಕ ವ್ಯಕ್ತಪಡಿಸುತ್ತಾರೆ ಆದರೆ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಸಲು ಯಾರೋ ಮುಂದಾಗುವುದಿಲ್ಲ. ಆದರೆ ಗುಜರಾತಿನ ವ್ಯಕ್ತಿಯೊಬ್ಬರು ಜಾಗತಿಕ ತಾಪಮಾನದ ಬಗ್ಗೆ ಸಕ್ರಿಯವಾಗಿ ಅಧ್ಯಯನವನ್ನು ನಡೆಸಿದ್ದಾರೆ, ಮಾತ್ರವಲ್ಲ ಶುದ್ಧ ಅಡುಗೆ ಅನಿಲಕ್ಕೆ ಪರ್ಯಾಯವಾಗಿ ಮತ್ತೊಂದು ವಿಧಾನವನ್ನು ಕಂಡುಕೊಂಡಿದ್ದಾರೆ. ಅದುವೇ ಸೋಲಾರ್ ಸ್ಟವ್!
ಧವಲ್ ಥಕ್ಕರ್ ಅವರು ಉತ್ತರ ಗುಜರಾತಿನ ಬನಸ್ಕಾಂತಿನ ದೀಸಾದವರಾಗಿದ್ದು ಮಧ್ಯಮ ಕುಟುಂಬದಲ್ಲಿ ಜನಿಸಿದರು. ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಅವರು, ಸಣ್ಣ ಪುಟ್ಟದರಲ್ಲಿ ಹೆಚ್ಚು ಖುಷಿ ಕಾಣುತ್ತಿದ್ದರು. ಸಣ್ಣ ಪುಟ್ಟ ಪ್ರಯೋಗಗಳನ್ನೂ ಆಗಾಗ ಮಾಡುತ್ತಿದ್ದರು.
ಅಹ್ಮದಾಬಾದಿನಲ್ಲಿ ಕಂಪ್ಯೂಟರ್ ಅಪ್ಲಿಕೇಶನಿನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ ವೇಳೆ ಸಬರ್ಮತಿ ನದಿಗೆ ಪ್ರವಾಸಕ್ಕೆ ತೆರಳಿದ್ದರು, ಅದು ಅವರ ಜೀವನದ ಮೇಲೆ ಗಾಢವಾದ ಪ್ರಭಾವವನ್ನು ಬೀರಿತ್ತು.
“ನರ್ಮದೆಯ ಮಾಲಿನ್ಯ ಕಂಡು ನನಗೆ ಶಾಕ್ ಆಗಿತ್ತು. ಅದು ನನ್ನ ಜೀವನದ ಟರ್ನಿಂಗ್ ಪಾಯಿಂಟ್, ಪರಿಸರ ಮತ್ತು ಭೂಶಾಸ್ತ್ರದ ವಿಷಯಗಳ ಬಗ್ಗೆ ನಾನು ಅಲ್ಲಿಂದ ಕಲಿಯಲು ಆರಂಭಿಸಿದೆ. ಪರಿಸರಕ್ಕೆ ಪೂರಕವಾದ ಪರಿಹಾರವನ್ನು ಕಂಡುಕೊಳ್ಳಲು ಆರಂಭಿಸಿದೆ” ಎಂದು ಧವಲ್ ಹೇಳುತ್ತಾರೆ.
ಬಳಿಕ ಅವರು ಐಟಿ ವೃತ್ತಿಪರರಾದರು. ಎಂಎನ್ಸಿ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಪರಿಸರಕ್ಕೆ ಏನಾದರು ಮಾಡಲೇಬೇಕು ಎಂಬ ಅದಮ್ಯ ಆಶಯ ಅವರಿಗಿತ್ತು.
ಭಾರತದ ಶೇ.70ರಷ್ಟು ಮಂದಿ ಮತ್ತು ವಿಶ್ವದ ಶೇ.50ರಷ್ಟು ಮಂದಿ ಆಹಾರವನ್ನು ಬೇಯಿಸಲು ಒಲೆ, ಕಟ್ಟಿಗೆಯನ್ನೇ ಅವಲಂಬಿಸಿದ್ದ ಸಂದರ್ಭದಲ್ಲಿ, ಮರಗಳು ರಾಶಿ ರಾಶಿಯಾಗಿ ಕಡಿಯಲ್ಪಟ್ಟವು. ನಿಧಾನಕ್ಕೆ ಅಡುಗೆ ಅನಿಲ ಪ್ರಸಿದ್ಧಿಗೆ ಬಂತು. ಆದರೆ ಅಡುಗೆ ಅನಿಲವು ಪರಿಸರಕ್ಕೆ ಕಡಿಮೆ ಹಾನಿ ಮಾಡುತ್ತದೆ ಎಂದಾದರೂ ಅದು ಹವಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನಕ್ಕೆ ಶೇ.20ರಷ್ಟು ಪ್ರಮಾಣ ನೀಡುತ್ತದೆ.
ಕಟ್ಟಿಗೆ, ಸೆಗಣಿಯಿಂದ ಅಡುಗೆ ಮಾಡುವುದು ಒಳಾಂಗಣ ಮಾಲಿನ್ಯವನ್ನು ಹೆಚ್ಚಿಸುತ್ತದೆ. ಈ ಹೊಗೆಯನ್ನು ಸೇವಿಸುವುದು 400 ಸಿಗರೇಟು ಸೇದುವುದಕ್ಕೆ ಸಮ ಎಂದು ಪ್ರೊ. ಕಿರ್ಕ್ ಸ್ಮಿತ್ ಹೇಳುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯು 2014ರ ತನ್ನ ವರದಿಯಲ್ಲಿ, ಹೊಗೆಯಿಂದಾಗಿ ಭಾರತದಲ್ಲಿ 1.2 ಮಿಲಿಯನ್ ಜನ ಸಾಯುತ್ತಿದ್ದಾರೆ ಎಂದಿತ್ತು.
ಈ ಎಲ್ಲಾ ಅಂಶಗಳು ಧವಲ್ ಅವರಿಗೆ ಸೋಲಾರ್ ಸ್ಟವ್ ಆವಿಷ್ಕಾರ ಮಾಡಲು ಪ್ರೇರಣೆಯನ್ನು ನೀಡಿತು. ಎಲ್ಪಿಜಿಗೆ ಹೋಲಿಸಿದರೆ ಇದು ಶೇ.80ರಷ್ಟು ವೆಚ್ಚವನ್ನು ಉಳಿಸುತ್ತದೆ. ಸುರಕ್ಷಿತ ಮತ್ತು ಉತ್ತಮ ಅಡುಗೆ ಅನುಭವವನ್ನು ನೀಡುತ್ತದೆ. ಎಲ್ಲದಕ್ಕೂ ಮಿಗಿಲಾಗಿ ಮಾಲಿನ್ಯ ರಹಿತವಾಗಿರುತ್ತದೆ.
ಈ ಸೋಲಾರ್ ಸ್ಟವ್ ಅನ್ನು ಅಭಿವೃದ್ಧಿಪಡಿಸಲು ಅವರು ಬರೋಬ್ಬರಿ 8 ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಮುಂದಿನ 72 ಗಂಟೆಗಳ ಕಾಲ ಬಳಸಲ್ಪಡುವ ಸೋಲಾರ್ ಎನರ್ಜಿಯನ್ನು ಈ ಸ್ಟವ್ ಥರ್ಮಲ್ ಸ್ಟೋರೇಜ್ ಯುನಿಟ್ ಬಳಸಿ ಶೇಖರಿಸುತ್ತದೆ.
“ನಮ್ಮ ತಂತ್ರಜ್ಞಾನ ಅಡುಗೆ ಮನೆಯಲ್ಲಿ ಶಾಖದ ಶಕ್ತಿಯ ಶೇಖರಣೆಯನ್ನು ಅನುಮತಿಸುತ್ತದೆ. ಈ ಸ್ಟವ್ನಲ್ಲಿ ರೊಟ್ಟಿ ಮಾಡಬಹುದು, ಬೇಯಿಸಬಹುದು, ಫ್ರೈ ಮಾಡಬಹುದು, ದಿನದಲ್ಲಿ ಮೂರು ಹೊತ್ತು ಯಾವುದೇ ಅಡುಗೆಯನ್ನೂ ಇದರಲ್ಲಿ ಮಾಡಬಹುದು” ಎಂದು ಧವಲ್ ಹೇಳುತ್ತಾರೆ.
ಈ ಸ್ಟವ್ನ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು ಇಂತಿವೆ:
1) ಸೋಲಾರ್ ಚಾರ್ಜಿಂಗ್ ನಂತರ ಇದರಲ್ಲಿ ಸಂಗ್ರಹವಾಗಿರುವ ಶಕ್ತಿಯು 72 ಗಂಟೆಗಳ ಕಾಲ ಇರುತ್ತದೆ ಮತ್ತು ಕುಟುಂಬದ ಮೂರು ಹೊತ್ತಿನ ಊಟಕ್ಕೆ ಇದು ಬಳಕೆಯಾಗುತ್ತದೆ. ಮಳೆಗಾಲದಲ್ಲಿ ವಿದ್ಯುತ್ ಚಾರ್ಜಿಂಗ್ ಆಯ್ಕೆಯೂ ಸಹ ಇದರಲ್ಲಿ ಇದೆ.
2) ಇದರ ದಕ್ಷತಾಶಾಸ್ತ್ರದ ವಿನ್ಯಾಸ ಮತ್ತು ಹಗುರವಾದ ವ್ಯವಸ್ಥೆಯು ಒಳಾಂಗಣ ಮತ್ತು ಹೊರಾಂಗಣ ಅಡುಗೆಗಾಗಿ ಸ್ಥಳಾಂತರಿಸಲು ಸುರಕ್ಷಿತವಾಗಿದೆ.
3) ಇದು ಅಪಾಯಕಾರಿಯಾದವಲ್ಲ, ಎಲ್ಪಿಜಿ ಸಿಲಿಂಡರ್ನಂತೆ ವಿಷಯುಕ್ತ ಅನಿಲಗಳನ್ನು ಅಥವಾ ವಿದ್ಯುತ್ಕಾಂತೀಯ ತರಂಗಗಳಂತೆ ಯಾವುದೇ ಹೆಚ್ಚುವರಿ ಅಡುಗೆ ಉಷ್ಣವನ್ನು ಹೊರಹಾಕುವುದಿಲ್ಲ ಮತ್ತು ಇದು ಶುದ್ಧವಾದ ಅಡುಗೆ ಶಕ್ತಿಯ ರೂಪವಾಗಿದೆ.
4) ಇದು ಸ್ವಯಂಚಾಲಿತವಾಗಿ ಸೂರ್ಯನನ್ನು ಹೆಚ್ಚು ನಿಖರವಾಗಿ ಟ್ರ್ಯಾಕ್ ಮಾಡುತ್ತದೆ.
5) ಉಷ್ಣ ಶೇಖರಣೆಯು ಸುರಕ್ಷಿತ ಪ್ಲಗ್-ಮತ್ತು-ಲಾಕ್ ಡಾಕಿಂಗ್ ಸಿಸ್ಟಮ್ನೊಂದಿಗೆ ಬರುತ್ತದೆ. ಆದ್ದರಿಂದ, ಯಾವುದೇ ಸ್ಫೋಟ, ಶಾರ್ಟ್ ಸರ್ಕ್ಯೂಟ್ ಅಥವಾ ಬೆಂಕಿಯ ಅಪಘಾತಗಳು ಆಗುವುದಕ್ಕೆ ಅವಕಾಶಗಳಿಲ್ಲ.
6) ಇದು ಸರಳ ಮತ್ತು ಸುಲಭ ಆಪರೇಟ್ ಕಂಟ್ರೋಲ್ ಸಿಸ್ಟಮ್ ಮತ್ತು ಯೂಸರ್ ಆ್ಯಕ್ಷನ್ ಅಲರ್ಟ್ ಸಿಸ್ಟಮ್ ಹೊಂದಿದೆ ಮತ್ತು ಸೂರ್ಯನ ನೇರ ಬೆಳಕಿನಲ್ಲಿ (DNI) ಕಾರ್ಯನಿರ್ವಹಿಸುತ್ತದೆ.
7) ಇದು ಅಂತ್ಯದಲ್ಲಿ ವಿದ್ಯುತ್ ಬ್ಯಾಟರಿಗಳನ್ನು ಬಳಸಿಕೊಳ್ಳುವ ರೂಪಾಂತರಗಳಿಗೆ ಉತ್ತಮ ಪರ್ಯಾಯವಾಗಿದೆ.
9) ಇದರಲ್ಲಿ ಯಾವುದೇ ಸಾಮಾನ್ಯ ಫ್ಲ್ಯಾಟ್ ಬಾಟಮ್ ಪಾತ್ರೆಗಳನ್ನಿಟ್ಟು ಅಡುಗೆ ಮಾಡಬಹುದು.
10) ಎಲ್ಪಿಜಿ ಸಿಲಿಂಡರ್ಗೆ ಹೋಲಿಸಿದರೆ ಸೋಲಾರ್ ಸ್ಟವ್ ಶೇ. 80 ರಷ್ಟು ವೆಚ್ಚವನ್ನು ಉಳಿಸುತ್ತದೆ, ಇದು ಮಾರುಕಟ್ಟೆಯಲ್ಲಿ ಯಾವುದೇ ಪರ್ಯಾಯ ಪರಿಹಾರಕ್ಕಿಂತಲೂ ದೀರ್ಘಾವಧಿಯಲ್ಲಿ ಹತ್ತು ಪಟ್ಟು ಅಗ್ಗವಾಗಿದೆ.
ಈ ಸೋಲಾರ್ ಸ್ಟವ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಸಲುವಾಗಿ ಧವಲ್ ಅವರು ವಡೋದರದಲ್ಲಿ ಯುನೇಸರ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯನ್ನು ಸ್ಥಾಪನೆ ಮಾಡಿದ್ದಾರೆ. ಯು ಅಂದರೆ ನೀವು, ನೇಸರ್ ಅಂದರೆ ಸೂರ್ಯ. ಎಚ್ಪಿಸಿಎಲ್ ಅವರ ಕಾರ್ಯಕ್ಕೆ ಉತ್ತೇಜನವನ್ನೂ ನೀಡುತ್ತಿದೆ.
ಪ್ರಕೃತಿದತ್ತವಾಗಿ ನಮಗೆ ದೊರಕುವ ಶಕ್ತಿಗಳನ್ನೇ ಬಳಸಿಕೊಂಡು ನಮ್ಮ ಅವಶ್ಯಕತೆಗಳನ್ನು ನೀಗಿಸಿಕೊಂಡರೆ ಜಾಗತಿಕ ತಾಪಮಾನದಂತಹ ಸಮಸ್ಯೆಗಳು ಉದ್ಭವಿಸುವುದೇ ಇಲ್ಲ. ಪ್ರಕೃತಿಗೆ ವಿಮುಖವಾಗಿ ಚಲಿಸಿದಾಗ ಮಾತ್ರ ಪ್ರಕೃತಿ ನಮಗೆ ತಿರುಗಿ ಬೀಳುತ್ತದೆ. ಈ ನಿಟ್ಟಿನಲ್ಲಿ ಧವಲ್ ನಡೆಸಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.