ನವದೆಹಲಿ: ರಕ್ಷಣಾ ಸಚಿವರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡುವುದಕ್ಕೂ ಮುನ್ನ ರಾಜನಾಥ್ ಸಿಂಗ್ ಅವರು ಶನಿವಾರ ದೆಹಲಿಯಲ್ಲಿನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಸ್ವಾತಂತ್ರ್ಯ ನಂತರ ದೇಶಕ್ಕಾಗಿ ಪ್ರಾಣಾರ್ಪಣೆಗೈದ ಯೋಧರಿಗೆ ಗೌರವ ನಮನಗಳನ್ನು ಸಲ್ಲಿಸಿದರು.
ಈ ವೇಳೆ ಸ್ಮಾರಕದಲ್ಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯುಸೇನಾ ಮುಖ್ಯಸ್ಥ ಮಾರ್ಷಲ್ ಬಿಎಸ್ ಧನೋವಾ ಮತ್ತು ನೌಕಾ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಉಪಸ್ಥಿತರಿದ್ದರು.
ಗುರುವಾರ ಸಂಪುಟ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶುಕ್ರವಾರ ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆಯನ್ನು ವಹಿಸಲಾಗಿತ್ತು. ಇಂದು ಅವರು ತಮ್ಮ ಅಧಿಕಾರವನ್ನು ಅಧಿಕೃತವಾಗಿ ವಹಿಸಿಕೊಳ್ಳಲಿದ್ದಾರೆ. ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ರಾಜನಾಥ್ ಸಿಂಗ್ ಗೃಹ ಖಾತೆ ನಿರ್ವಹಿಸಿದ್ದರು.
ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಇದೇ ವರ್ಷ ಫೆಬ್ರವರಿ 24 ರಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದ್ದರು. ರಾಷ್ಟ್ರ ರಾಜಧಾನಿಯ ಹೃದಯ ಭಾಗದಲ್ಲಿ ಇರುವ ಇಂಡಿಯಾ ಗೇಟ್ನ ಪಕ್ಕದಲ್ಲೇ ಈ ಸ್ಮಾರಕ ಇದೆ.
ಸ್ವಾತಂತ್ರ್ಯ ನಂತರ ನಡೆದ ಚೀನಾದೊಂದಿಗಿನ ಯುದ್ಧ, ಪಾಕಿಸ್ಥಾನದೊಂದಿಗಿನ ಯುದ್ಧ, ಶ್ರೀಲಂಕಾ ಶಾಂತಿ ಪಾಲನೆ ಮುಂತಾದ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದ ಯೋಧರಿಗೆ ಅರ್ಪಿಸಿ ಈ ಸ್ಮಾರಕವನ್ನು ರಚನೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.