ಬೆಂಗಳೂರು: ಕ್ರಿಕೆಟ್ ಅಂದ ಕೂಡಲೇ ಅದು ಪುರುಷರಿಗೆ ಮೀಸಲಾಗಿರುವ ಕ್ರೀಡೆ, ಹೆಣ್ಣುಮಕ್ಕಳು ಬ್ಯಾಟ್ ಬೀಸುವಷ್ಟು, ಬೌಲ್ ಎಸೆಯುಷ್ಟು ಸಮರ್ಥರಲ್ಲ ಎಂಬ ತಪ್ಪು ಕಲ್ಪನೆಯಿತ್ತು. ಆದರೀಗ ವನಿತೆಯರು ಆ ಕಲ್ಪನೆಯನ್ನು ಹೊಡೆದೋಡಿಸಿದ್ದಾರೆ. ಪುರುಷರಿಗಿಂತ ನಾವೇನು ಕಮ್ಮಿಯಿಲ್ಲ ಎಂಬುದನ್ನು ಮೈದಾನದಲ್ಲಿ ತೋರಿಸಿಕೊಟ್ಟಿದ್ದಾರೆ.
ಸ್ಟೇಡಿಯಂನಲ್ಲಿ ಅಭಿಮಾನಿಗಳ ಚಪ್ಪಾಳೆ, ಶಿಳ್ಳೆಯ ಅಬ್ಬರ ಇಲ್ಲದೇ ಇದ್ದರೂ ಬ್ಯಾಟ್ ಬೀಸುವ, ಬೌಲ್ ಎಸೆಯುವ ನಮ್ಮ ವನಿತೆಯರ ಉತ್ಸಾಹಕ್ಕೆ ಮಾತ್ರ ಯಾವುದೇ ಕುಂದು ಬಂದಿಲ್ಲ. ಅಭಿಮಾನಿಗಳಿಲ್ಲದಿದ್ದರೇನು? ಆಡುವ ತುಡಿತ ಇದೆಯಲ್ಲವೇ.
ಕಳೆದ ಹಲವಾರು ದಿನಗಳಿಂದ ಬೆಂಗಳೂರಿನಲ್ಲಿ ನ್ಯೂಜಿಲ್ಯಾಂಡ್ ಮತ್ತು ಭಾರತದ ನಡುವೆ ಐದು ಏಕದಿನ ಸರಣಿ ಮತ್ತು 3 ಟ್ವೆಂಟಿ ಟ್ವೆಂಟಿ ಸರಣಿ ನಡೆಯುತ್ತಿದೆ. ಮಿಥಿಲ್ ರಾಜ್ ನೇತೃತ್ವದ ಭಾರತದ ವನಿತೆಯರ ಪ್ರದರ್ಶನ ತೀರ ಮಂಕಾಗಿದೆ. ವನಿತೆಯರ ಕ್ರಿಕೆಟ್ಗೆ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿರುವ ಬಿಸಿಸಿಐ ಹೆಚ್ಚಿನ ಪ್ರಾಮುಖ್ಯ ನೀಡದೇ ಇರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಬಹುದು.
ಹೆಚ್ಚಿನ ಟೂರ್ನಿಗಳನ್ನು ಆಯೋಜಿಸಲೂ ಬಿಸಿಸಿಐ ಆಸಕ್ತಿ ತೋರಿಸುತ್ತಿಲ್ಲ, ಆದರೆ ಐಸಿಸಿನ ಕೆಲವೊಂದು ನಿಯಮಗಳು ವನಿತೆಯರ ಪಾಲಿಗೆ ತುಸು ನೆಮ್ಮದಿ ತಂದಿದೆ. ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ೮ ಸ್ಥಾನ ಪಡೆದಿರುವ ತಂಡಗಳು 2017ರ ವಿಶ್ವಕಪ್ನ ವೇಳೆ ಪರಸ್ಪರ ಅಂತಾರಾಷ್ಟ್ರೀಯ ಪಂದ್ಯ ಆಡಿರಲೇ ಬೇಕು ಎಂಬ ನಿಯಮವನ್ನು ಐಸಿಸಿ ವಿಧಿಸಿದ್ದು, ಇದು ಹೆಚ್ಚಿನ ಮಹಿಳಾ ಕ್ರಿಕೆಟ್ ಟೂರ್ನಿ ಆಯೋಜನೆಗೆ ಅವಕಾಶ ಕಲ್ಪಿಸಿದೆ.
ವನಿತೆಯರ ಕ್ರಿಕೆಟ್ ಪ್ರಚಲಿತಕ್ಕೆ ಬಂದು ಅದೆಷ್ಟೋ ವರ್ಷಗಳು ಉರುಳಿದೆ, ಮೈದಾನದಲ್ಲಿ ಹಲವಾರು ವನಿತೆಯರು ತಮ್ಮ ಕ್ರಿಕೆಟ್ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಕ್ರಿಕೆಟ್ ಮಂಡಳಿಗಳು, ಕ್ರಿಕೆಟ್ ಪ್ರಿಯರು ಪುರುಷರ ಕ್ರಿಕೆಟ್ಗೆ ನೀಡುವ ಬೆಂಬಲವನ್ನು ವನಿತೆಯರ ಕ್ರಿಕೆಟ್ಗೆ ನೀಡುತ್ತಿಲ್ಲ ಎಂಬುದೇ ಬೇಸರದ ವಿಷಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.