ಒಂದೂರಲ್ಲಿ ಒಬ್ಬ ಸೌದೆ ಕಡಿಯುವನಿದ್ದ. ಅವನು ಊರಲ್ಲಿ ಇರುವ ಒಣ ಮರ ಮತ್ತು ಮುಳ್ಳಿನ ಮರಗಳಷ್ಟನ್ನೇ ಕಡಿಯುತ್ತಿದ್ದ. ಅದಕ್ಕೆ ಏನೋ ಅವನ ಶತ್ರುಗಳಿಗೂ ಅವನು ಅಂದ್ರೆ ಒಳಗೊಳಗೇ ಇಷ್ಟ. ಅಂತೂ ಈಗಲಾದರೂ ನಮ್ಮೂರಿಗೆ ಒಬ್ಬ ಒಳ್ಳೆ ಮನುಷ್ಯ ಬಂದನಲ್ಲ ಅಂತ. ಅವನು ಯಾವುದನ್ನು ತನ್ನ ಲಾಭಕ್ಕಾಗಿ ಮಾಡಿಕೊಳ್ಳದೇ ಒಬ್ಬ ಸಂತನಂತೆ ಬದುಕಿದ ವ್ಯಕ್ತಿ. ತನ್ನ ಊರು ಸ್ವಚ್ಛ ಆಗಿರಲಿ, ಒಳ್ಳೆಯ ದಿನಗಳು ಬರಲಿ ಮತ್ತು ಜನರಿಗೆ ಎಂದೂ ಮುಳ್ಳಿನ ನೋವು ಆಗದೇ ಇರಲಿ ಎನ್ನುತ್ತಿದ್ದ. ಬಹುಶಃ ಇದಕ್ಕಾಗಿ ಅವನು ದಿನಕ್ಕೆ ಹದಿನೆಂಟು ತಾಸು ದುಡಿಯುತ್ತಿದ್ದ.
ಉದ್ಯೋಗ ಸೌದೆ ಕಡಿಯುವುದೇ ಆದರೂ ಅಕ್ಷರಸ್ಥನಾಗಿದ್ದ. ಆದ್ದರಿಂದಲೇ ಎಲ್ಲರೂ ಆತನಿಂದ ಬೇರೆ ಬೇರೆ ರೀತಿಯ ಸಹಾಯ ಮಾಡಿಸಿಕೊಳ್ಳುತ್ತಿದ್ದರು. ಸೌದೆ ಮಾರಲು ಪೇಟೆಗೆ ಹೋಗುವಾಗ ಆ ಊರಿನವರು ತಮ್ಮ ವಿಮೆ ಕಟ್ಟಲು, ತಮ್ಮ ಬ್ಯಾಂಕ್ ಕೆಲಸಗಳನ್ನು ಮಾಡಿಕೊಂಡು ಬರಲು, ಗ್ಯಾಸ್ ಕನೆಕ್ಷನ್ ಬಗ್ಗೆ ವಿಚಾರಿಸಲು, ವಿದ್ಯುತ್ ಬಿಲ್ ಕಟ್ಟಲು, ತಮ್ಮೊಳಗೆ ನಡೆಯುವ ಜಗಳ-ವ್ಯಾಜ್ಯಗಳ ಬಗ್ಗೆ ಕಾನೂನು ತಜ್ಞರನ್ನು ವಿಚಾರಿಸಿಕೊಂಡು ಬರಲು… ಹೀಗೆ ಹಲವಾರು ರೀತಿಯ ಕೆಲಸಗಳನ್ನು ಹೇಳುತ್ತಿದ್ದರು. ಆತನೂ ಕೂಡಾ ಯಾರು ಏನೇ ಸಹಾಯ ಕೇಳಿದರೂ ಬೇಸರಿಸದೆ ಮಾಡುತ್ತಿದ್ದ. ಅಕ್ಕ ಪಕ್ಕದ ಊರುಗಳಲ್ಲಿ ಇವನ ಬಗ್ಗೆ ಕೇಳಿದರೆ ಹೇಳುತ್ತಿದ್ದರು. ಈ ಹಿಂದೆ ಸೌದೆ ಕಡಿಯುತ್ತಿದ್ದವರೆಲ್ಲರೂ ಪ್ರಕೃತಿ ಬಗ್ಗೆ ಯೋಚಿಸದೇ ತಮಗೆ, ತಮ್ಮ ಮನೆಯವರಿಗೆ ಮತ್ತು ತಮ್ಮ ಮುಂದಿನ ಪೀಳಿಗೆಗೆ ಆಗುವಷ್ಟು ಮರಗಳನ್ನು ಕಡಿದು ಹಣ ಆಸ್ತಿ ಮಾಡಿ ದೊಡ್ಡ ದೊಡ್ಡ ಬಂಗಲೆಗಳಲ್ಲಿದ್ದರು. ಆದರೆ ಇವನದು ಇನ್ನೂ ಗುಡಿಸಲು ವಾಸ, ನವರಾತ್ರಿ ಉಪವಾಸ.
ಅವನ ಕೊಡಲಿ ಸುಮಾರು ಐದು ವರ್ಷಗಳಿಂದ ಬದಲಾಯಿಸಿರಲಿಲ್ಲ. ಅದನ್ನು ಊರಿನವರೇ ಅವನಿಗೆ ಕೊಡಿಸಿದ್ದರು. ಅದೇಕೋ ಏನೋ ನದಿ ತೀರದಲ್ಲಿ ಸೌದೆ ಕಡಿಯುವಾಗ ಜಾರಿ ನೀರಿನೊಳಗೆ ಬಿದ್ದು ಹೋಯಿತು. ಆಗ ಆ ವ್ಯಕ್ತಿ ಕಿಂಚಿತ್ತೂ ಭಯ ಪಡದೆ, ನಿಷ್ಕಲ್ಮಶ ಮನಸ್ಸಿನಿಂದ ದೇವರಲ್ಲಿ ಪ್ರಾರ್ಥಿಸಿದ. ದೇವರೇ ಯಾರ ಕೇಡು ಬಯಸದೆ, ಯಾರ ಮನ ನೋಯಿಸದೆ ನಾನು ಎಲ್ಲರ ಒಳಿತಿಗಾಗಿ ನಾನು ಏನೆಲ್ಲಾ ಮಾಡಿದ್ದೇನೆ. ನನ್ನ ಕೊಡಲಿ ಮರಳಿಸಿ ನನ್ನ ಸೇವೆಯ ಮುಂದುವರಿಸಲು ಅನುವು ಮಾಡು ಎಂದು ಬೇಡಿದ.
ಈ ಮಧ್ಯೆ ಕೊಡಲಿ ನೀರಿನಲ್ಲಿ ಬಿದ್ದ ಸುದ್ದಿ ಊರೊಳಗೆ ಕಾಳ್ಗಿಚ್ಚಿನಂತೆ ಹಬ್ಬಿ ಊರಿನ ಜನ ಅಲ್ಲಿ ಬಂದು ಸೇರಿದರು. ಇದೇ ಸುಸಂದರ್ಭ ಅಂತ ಅವನ ಬಗ್ಗೆ ಅಸೂಯೆ ಪಡುತ್ತಿದ್ದ ಶತ್ರುಗಳು ಒಂದಾದರು. ಜನರು ಪ್ರೀತಿಯಿಂದ ಕೊಟ್ಟ ಕೊಡಲಿಯನ್ನು ಅಜಾಗರೂಕತೆಯಿಂದ ಕಳೆದಿದ್ದಾನೆ. ಇವನ ಬೇಜವಾಬ್ದಾರಿಗೆ ಶಿಕ್ಷೆ ಆಗಲಿ. ಅವನು ಊರಿಗೆ ಬಂದು ಯಾವ ರೀತಿಯ ಉಪಯೋಗ ಆಗಿಲ್ಲ. ಮಾತನಾಡಿದ್ದೇ ಬಂತು. ಮುಳ್ಳಿನ ಮರಗಳು ಈಗಲೂ ಸಹ ಇವೆ. ಅವನು ಜನರ ತಲೆ ಕೆಡಿಸಿ ಊರಿನ ವಾತಾವರಣ ಹಾಳು ಮಾಡಿದ್ದಾನೆ ಎಂದು ಗಲಾಟೆ ಎಬ್ಬಿಸಿ ಪಂಚಾಯಿತಿ ಸೇರಿಸಿದರು.
ಊರಿನ ಅರಳಿಕಟ್ಟೆಯಲ್ಲಿ ಜನ ಸೇರಿದರು. ಆಗ ಊರಿನ ಅಧ್ಯಕ್ಷರು, ನಾವು ಜನರ ನಡುವೆ ಹೋಗೋಣ. ಅವರ ಅಭಿಪ್ರಾಯ ಕೂಡ ಕೇಳೋಣ. ನೋಡಪ್ಪಾ ಸೌದೆ ಕಡಿಯುವುದು ನಿನ್ನ ಉದ್ಯೋಗ. ಅದನ್ನು ಬಿಟ್ಟು ಬೇರೆ ಏನೇನನ್ನೋ ಮಾಡ್ತೀಯ ಅಂದ್ರಲ್ಲ ಅದರ ಬಗ್ಗೆ ವಿಚಾರಿಸೋಣ ಎಂದ. ಆಗ ಅಲ್ಲಿ ಸೇರಿದ್ದ ಜನ ಮತ್ತು ಅವನ ಶತ್ರುಗಳಲ್ಲಿ ಗುಸು ಗುಸು ಆರಂಭವಾಯಿತು. ಊರಿನಲ್ಲಿ ಹಿರಿಯರು, ಸಾಹಿತಿಗಳು ಮತ್ತು ಚಿಂತಕರು ಎನಿಸಿಕೊಂಡವರು ಗಂಜಿಯ ಆಸೆಗೆ ಬಿದ್ದು ನೋಡ ನೋಡುತ್ತಲೇ ಸೌದೆಯವನ ಶತ್ರುಗಳಾದರು. ಊರಿನಲ್ಲಿ ನಡೆದ ಪ್ರತಿ ಘಟನೆಗಳಿಗೂ ಬಣ್ಣ ಬಳಿದು ಅವನ ತಲೆಗೆ ಕಟ್ಟಲು ನಿಂತರು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶತ್ರುಗಳು ಸಮಾನ ಮನಸ್ಕ ಸ್ವಾರ್ಥಿಗಳೇ ಹೊರತು, ಸಂಘಟಿತ ಸಭ್ಯಸ್ಥರಲ್ಲ. ಜನರಿಗೆ ಅವರ ನೋಡಿ ಗೊತ್ತಿದ್ದರೂ, ಅದೇನೋ ಹೇಳ್ತಾರಲ್ಲ “ಸಮೂಹದ ನೆನಪಿನ ಶಕ್ತಿ ಕಡಿಮೆ” ಅಂತ. ಹಾಗೆ ಒಂದು ಪಂಚಾಯ್ತಿ ಆಗೇ ಬಿಡಲಿ ಅಂದರು. ಅಲ್ಲಿ ಸೌದೆ ಕಡಿಯುವವ ಏಕಾಂಗಿ ಆದರೆ ಅವನು ತೋರಿಸುತ್ತಿದ್ದ ಧೈರ್ಯ ಮತ್ತು ಅವನಿಗೆ ಅವನ ಮೇಲೆ ಇದ್ದ ನಂಬಿಕೆ ಆತನೇ ಗೆಲ್ಲುವುದು ನಿಶ್ಚಿತ ಅಂತ ಬಹು ಜನರ ನಂಬಿಕೆ.
ಪ್ರಶ್ನೆ – ನೀನು ವಿಮೆ ಮಾಡಿಸುವೆ ಅಂತ ಹೇಳಿ ಊರಲ್ಲಿ ಎಲ್ಲರ ದುಡ್ಡು ಕಿತ್ತು ಓಡಿ ಹೋಗುವ ಯೋಜನೆ ಹಾಕಿದಿಯಾ?
ಉತ್ತರ – ವಿಮೆ ಪಾಲಿಸಿ ದುಡ್ಡು ಎಷ್ಟು, ಎಲ್ಲಿ ಮಾಡಿಸಿರುವುದು ಅದರ ಪ್ರಯೋಜನ ಗೊತ್ತಾ ನಿಮಗೆ? 330ರೂ ಮತ್ತು 12ರೂ ವಾರ್ಷಿಕ ಕಡಿತವಾಗುವ ಸರ್ಕಾರದ ಯೋಜನೆ ಅದು. ದಿನಕ್ಕೆ ಒಂದು ರೂಪಾಯಿಗಿಂತ ಕಡಿಮೆ. ನಾಲ್ಕು ಲಕ್ಷ ರೂಪಾಯಿ ಪಾಲಿಸಿ ಮೊತ್ತ. ಹಣ ಪಡೆಯಲು ಹೆಚ್ಚಿನ ಕೆಲಸ ಇಲ್ಲ. ಮಾಡಿಸುವುದು ಬ್ಯಾಂಕ್ ಮತ್ತು ಅಂಚೆ ಕಛೇರಿಗಳಲ್ಲಿ. ನಾನು ದುಡ್ಡು ಕಿತ್ತು ಎಲ್ಲಿಗೆ ಓಡಲಿ. ಎಲ್ಲಿ ಪ್ರಯೋಜನ ಪಡೆದವರು ಕೈ ಎತ್ತಿ ಅಂದ. ಕೈ ಎತ್ತಿದವರಲ್ಲಿ ಊರಿನ ಅಧ್ಯಕ್ಷರ ವಿಧವೆ ಮಗಳು ಇದ್ದಳು. ಆ ದುಡ್ಡಲ್ಲಿ ಅವಳ ಸ್ವಾವಲಂಬಿ ಬದುಕು ಸಾಗುತ್ತಿತ್ತು.
ಪ್ರಶ್ನೆ – ಪರಂಪರೆಯಿಂದ ಬಂದ ಒಲೆ ಕಿತ್ತು, ಅನಿಲ ಇಂಧನ ಬಳಕೆ ಮಾಡಿ ಅಂತೀಯ?
ಉತ್ತರ – ಪರಂಪರೆಯಲ್ಲಿ ನಮ್ಮ ಪೂರ್ವಜರು ಬಟ್ಟೆ ಧರಿಸುತ್ತಿರಲಿಲ್ಲ. ನಾವು ಹಾಗೆ ಉಳಿದಿಲ್ಲ. ಜೈವಿಕ ಇಂಧನ ಪರಿಸರ ಸ್ನೇಹಿ, ಸರಳ ಹಾಗೂ ವೇಗದ ಕೆಲಸಕ್ಕೆ ಸಹಾಯಕ. ಇದನ್ನು ಬಳಸಿ ಅಂತ ಸರ್ಕಾರ ದರ ರಿಯಾಯಿತಿ ಕೊಡುತ್ತಿದೆ. ಈಗ ಇವತ್ತು ನೀವು ಅನಿಲ ಸೌಲಭ್ಯ ಬೇಕು ಅಂದರೆ ನಾಳೆ ನಿಮ್ಮ ಮನೆಗೆ ಬಂದಿರುತ್ತದೆ. ಯಾಕೆ, ನಿಮ್ಮ ಮನೆಯಲ್ಲಿ ಇಲ್ವ ಎಂದಾಗ ವಿರೋಧಿಗಳ ಮಾತಿಲ್ಲದೆ ಕುಳಿತರು.
ಪ್ರಶ್ನೆ – ದುಡ್ಡನ್ನು ಬ್ಯಾಂಕುಗಳಲ್ಲಿ ಇಡೋಣ, ಅದರಿಂದ ದೇಶಕ್ಕೆ ಕೀರ್ತಿ ಅಂತೀಯ? ನಮ್ಮ ಹಳ್ಳಿಯವರ ದುಡ್ಡನ್ನೆಲ್ಲಾ ಬ್ಯಾಂಕಿಗೆ ಕಟ್ಟಿಸುತ್ತಿದ್ದೀಯಾ?
ಉತ್ತರ – ಬ್ಯಾಂಕುಗಳು ಸರ್ಕಾರೀ ಇಲಾಖೆಗಳಿದ್ದಂತೆ. ಅಲ್ಲಿ ಸಾಲ ಸೌಲಭ್ಯ ಅಷ್ಟೇ ಅಲ್ಲ, ನಿಮ್ಮ ಠೇವಣಿಗಳ ಮೇಲೆ ಹೆಚ್ಚು ಬಡ್ಡಿ ಕೂಡ ನೀಡುತ್ತಾರೆ. ಮನೆಯಲ್ಲಿ ಹಣ ಇದ್ದರೆ ಕಳ್ಳತನದ ಭಯ. ಅದೇ ಬ್ಯಾಂಕಿನಲ್ಲಿ ಭಧ್ರವಾಗಿಡಿ. ಬಾಬಾ ಸಾಹೇಬ ಅಂಬೇಡ್ಕರ್ ಹೆಸರಲ್ಲಿ ಭೀಮ್ ಅಂತ ಒಂದು ಆ್ಯಪ್ ಇದೆ. ಅದನ್ನು ಬಳಸಿ ನೀವು ಒಂದು ರೂಪಾಯಿ ಇಂದ ಇಪ್ಪತ್ತು ಸಾವಿರ ತನಕ ಪಾವತಿ ಮಾಡಬಹುದು. ದೂರ ಊರಿಗೆ ಹೋದಾಗ ಹಣ ಒಯ್ಯುವುದಕ್ಕಿಂತ ಎಟಿಎಂ ಕಾರ್ಡ್ ಬಳಸಿದರೆ ಕಳ್ಳರ ಭಯ ಇಲ್ಲ. ಅದಕ್ಕೂ ಒಂದು ಲಕ್ಷದ ವಿಮೆ ಇದೆ.
ಪ್ರಶ್ನೆ – ಊರಲ್ಲಿರುವ ಯುವಕರ ಜೈಲಿಗೆ ಕಳಿಸಿದೆ. ನಿನ್ನ ಮಿತ್ರನಿಂದ ದಲಿತ ಆತ್ಮಹತ್ಯೆ ಮಾಡಿಕೊಂಡ.
ಉತ್ತರ – ನಾವಿರೋದು ಪುಣ್ಯ ಭೂಮಿ ಭಾರತದಲ್ಲಿ. ತಾಯಿ ಭಾರತಿಯ ಮಡಿಲಲ್ಲಿ. ಕೋಟ್ಯಾಂತರ ಹುತಾತ್ಮರ ಬಲಿದಾನದ ಕೊಡುಗೆಯಲ್ಲಿ. ಭಾರತ ದರ್ಶನದ ಮೂಲಕ ಭಾರತ ದೇಶದ ಘನ ಸಂಸ್ಕೃತಿಯ, ವೀರ ಪರಂಪರೆಯನ್ನು, ಧರ್ಮವನ್ನು ಜನರಿಗೆ ತಿಳಿಸಿಕೊಡುತ್ತಾ ಇಡೀ ದೇಶಾದ್ಯಂತ ಪರಿವ್ರಾಜಕ ಸನ್ಯಾಸಿಯಾಗಿ ಕಳೆದ ವಿದ್ಯಾನಂದ ಶೆಣೈ ಹೇಳುತ್ತಾರೆ.
ಮೂರು ಸಾಗರ, ನೂರು ಮಂದಿರ ದೈವ ಸಾಸಿರವಿದ್ದರೆ,
ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿ ಹಿಮಾಲಯವಿದ್ದರೆ,
ವೇದವಿದ್ದರೆ ಭೂಮಿಯಿದ್ದರೆ ಘನ ಪರಂಪರೆಯಿದ್ದರೆ,
ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ…?
ಇಂಥ ಘನ ಪರಂಪರೆಯ ದೇಶದಲ್ಲಿ ದೇಶ ವಿರೋಧಿ ಧಿಕ್ಕಾರ ಕೂಗುವವ ನನ್ನ ಮಗನಾದರೂ ಸರಿ ಅವನ ನಾಲಿಗೆ ಸೀಳಿ ಹಾಕಿಬಿಡುವೆ. ಭಾರತ ಮೊದಲು. ಇನ್ನು ದಲಿತ ಎಂದು ನೀವು ಹೇಳುವವನ ವಿಷಯ. ಆತನ ಸಾವಿನ ಚೀಟಿಯಲ್ಲಿ ಸಾವಿನ ಕಾರಣ ಇತ್ತು. ಅದನ್ನು ಮುಚ್ಚಿ ಹಾಕಿದಿರಿ. ಅವನು ದಲಿತನಲ್ಲ ಎಂದು ಬಹಿರಂಗವಾದಾಗ ಆ ಸುದ್ದಿಯನ್ನು ಯಾರಿಗೂ ತಿಳಿಯದಂತೆ ಮಾಡಿದಿರಿ ಅಲ್ವ?
ಪ್ರಶ್ನೆ – ಸಾಲಮನ್ನಾ ಬೇಡ ಅಂತೀಯ, ಪ್ರತಿಮೆ ಕಟ್ಟೋಣ, ಶೌಚಾಲಯ ನಮ್ಮ ಹಕ್ಕು ಅಂತೀಯಾ..!?
ಉತ್ತರ – ಇಲ್ಲಿಯವರೆಗೆ ಎಷ್ಟು ಬಾರಿ ಸಾಲಮನ್ನಾ ಆಗಿದೀಯೋ ಆಗೆಲ್ಲ ನಿಮ್ಮ ತೆರಿಗೆ ಮತ್ತಿತರ ದುಡ್ಡನ್ನು ನಿಮಗೆ ಮರಳಿ ಕೊಟ್ಟಿದ್ದಾರೆ ಅಥವಾ ಬೇರೆ ಕಡೆಯಿಂದ ಸಾಲವನ್ನು ತಂದು ನೀಡಿದ್ದಾರೆ ಹೊರತು ಅವರ ಮನೆಯ ದುಡ್ಡನಲ್ಲ. ಈ ಕೈಲಿ ಕಿತ್ತು ಆ ಕೈಲಿ ಕೊಡಲು ಅವರೇ ಆಗಬೇಕೆ, ಪ್ರತಿ ರೈತನ ಬಳಿಯೂ ಸ್ವಂತ ಜಮೀನು ಇರುವುದಿಲ್ಲ, ಆಗ ಆತ ಸಾಲ ಮಾಡಲು ಆಗದೇ ಸಾಲಮನ್ನಾ ಯೋಜನೆಗೆ ಬರುವುದಿಲ್ಲ. ಸುಸ್ತೀದಾರರ ಸಾಲಗಳ ಪದೇ ಪದೇ ಮನ್ನಾ ಮಾಡುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಬ್ಯಾಂಕುಗಳೂ ದೇಶದ ಆಸ್ತಿಯೇ. ಅವುಗಳ ಹಿತ ಕಾಯೋಣ. ಬೆಂಬಲ ಬೆಲೆ ಕೇಳಿ ನಿರಂತರವಾಗಿ ಹೋರಾಡೋಣ. ನಮ್ಮದೇ ಮಾರುಕಟ್ಟೆ ಆರಂಭಿಸೋಣ.
ನಾನು ಪ್ರತಿಮೆ ಎಂದದ್ದು ಸರ್ದಾರ್ ಪಟೇಲರದ್ದು. ಅವರು ನಮ್ಮ ಹೆಮ್ಮೆ. ಅವರ ಪ್ರತಿಮೆಯಿಂದ ಅಲ್ಲೊಂದು ಪ್ರೇಕ್ಷಣೀಯ ಸ್ಥಳ ಆಗುತ್ತದೆ. ನಾಲ್ಕು ಜನರಿಗೆ ಉದ್ಯೋಗ ಸಿಗುತ್ತದೆ. ನಮ್ಮ ಊರಿನ ಕೀರ್ತಿ ಹೆಚ್ಚುತ್ತದೆ.
ನಾವು ಕಾಲಗಳಿಂದ ಬಂಗಲೆಗಳ ಕಟ್ಟಿದ್ದೇವೆಯೇ ಹೊರತು ನಮ್ಮ ಮೂಲ ಸೌಕರ್ಯ, ಸ್ವಚ್ಛತೆ ಮತ್ತು ಆರೋಗ್ಯ ಕುರಿತು ಗಮನ ಕೊಡದೆ ಇರುವುದು ವಿಪರ್ಯಾಸ. ನಡುರಾತ್ರಿಗಳಲ್ಲಿ ನಿಮ್ಮದೇ ಮನೆಯ ಹೆಣ್ಣು ಮಕ್ಕಳು ಶೌಚಕ್ಕೆ ಓಡಬೇಕು, ಅವರಿಗೆ ಏನು ಭದ್ರತೆ? ಬಯಲು ಶೌಚ ಎಷ್ಟು ಕಾಯಿಲೆಗಳ ತಂದಿಟ್ಟಿದೆ. ಸರ್ಕಾರದ ನೆರವಿನಿಂದ ಶೌಚಾಲಯ ಕಟ್ಟಿ, ಆರೋಗ್ಯವಂತ ಮತ್ತು ಸ್ತ್ರೀ ಸುರಕ್ಷಿತ ಊರು ಕಟ್ಟೋಣ.
ಪ್ರಶ್ನೆ – ನಮ್ಮ ತಲಾಕ್ ಥರದ ಧಾರ್ಮಿಕ ನಂಬಿಕೆಗಳ ವಿರುದ್ಧ ಜನರ ಎತ್ತಿ ಕಟ್ಟಿದೆ.
ಉತ್ತರ – ನಾವೆಲ್ಲಾ ಸೇರಿ ಹಣ ಸಂಗ್ರಹಿಸಿ ಅಬ್ದುಲ್ ಚಾಚಾನ ಒಬ್ಬಳೇ ಮಗಳು ಫಾತಿಮಾಳ ಮದುವೆ ಮಾಡಿದೆವು. ಚೆನ್ನಾಗಿ ಊಟ ಮಾಡಿ, ಹರಿಸಿ ಬಂದೆವು. ಈಗ ಚಾಚಾನ ಮಗಳು ಎಲ್ಲಿದ್ದಾಳೆ ಗೊತ್ತಾ? ಅಲ್ಲಾಹು ಬಳಿ. ಅವಳ ಚಂದದ ಗಂಡ ಬರೀ ಹಣದ ಆಸೆಗೆ ಬಿದ್ದು ತಲಾಕ್ ನೀಡಿದ. ಅವನ ಕೇಳಲು ಯಾರಿದ್ದಾರೆ? ಚಾಚಾ ಸಾಯುವ ಕಾಲದಲ್ಲಿ ಇದ್ದ ಒಬ್ಬಳೇ ಮಗಳ ಕೊಂದು ತಿಂದೆ ಎಂದು ಮರುಗುತ್ತಿದ್ದಾನೆ. ಯಾವ ಧರ್ಮವೂ ಸ್ತ್ರೀಯನ್ನು ಈ ಪರಿ ನಡೆಸಿಕೊಳ್ಳದಿರಲಿ.
ಪ್ರಶ್ನೆ – ನೀನು ಕೊಡಿಸಿರುವ ಸವಲತ್ತುಗಳು ನಿಜವಾದ ಸಾಧಕರಿಗೆ ಸಂದಿಲ್ಲ ಎನ್ನುತ್ತಿದ್ದಾರಲ್ಲಾ?
ಉತ್ತರ – ಮತಾಂತರವನ್ನೇ ತನ್ನ ಗುರಿಯಾಗಿಟ್ಟುಕೊಂಡು ಬಂದ ವಿದೇಶೀಯಳನ್ನು ಮಹಾಮಾತೆ ಮಾಡಿದ ದೇಶ ನಮ್ಮದು, ಇಂದು ಅವಳನ್ನು ಮದರ್ ಅನ್ನುತ್ತಾರೆ. ಇಲ್ಲಿ ಎಲ್ಲ ಪ್ರಶಸ್ತಿಗಳಿಗೆ ಏನೂ ಮಾಡದೆ ಪ್ರಧಾನಿ ಹುದ್ದೆಗೇರಿದ ನೀಚನಿಂದ ಹಿಡಿದು ಮೊನ್ನೆ ಕಣ್ ತೆರೆದ ಕೂಸಿನವರೆಗೆ ಅದೇ ಕುಟುಂಬದ ಹೆಸರುಗಳು. ಪಡೆಯುವವರು ಅವರ ಹಿಂಬಾಲಕರು. ಮರಗಳನ್ನು ಮಕ್ಕಳಂತೆ ಸಾಕಿದ ತಾಯಿಗೆ, ಜೀವನ ಪೂರ್ತಿ ಸೂಲಗಿತ್ತಿಯಾದ ದೇವತೆಗೆ ಮತ್ತು ಪ್ರಶಸ್ತಿಯ ಪರಿವೇ ಇಲ್ಲದಂತೆ ದುಡಿದ ಮಹಾನ್ ಚೇತನಗಳಿಗೆ ಪ್ರಶಸ್ತಿ ಸಂದಿದೆ.
ಮುಖಂಡ – ಎಷ್ಟೇ ಪ್ರಶ್ನೆಗಳ ಸುರಿಮಳೆ ಸುರಿಸಿದರೂ ಧೈರ್ಯ ಚಿತ್ತದಿಂದ ಉತ್ತರಿಸುತ್ತಿದ್ದ ಅವನನ್ನು ಜನ ಎಂದೋ ನಂಬಿದ್ದರು. ಆದರೆ ಕಾಲವೇ ಹಾಗೆ ಎಲ್ಲರನ್ನೂ ಪ್ರಶ್ನಿಸುತ್ತದೆ. ಇಲ್ಲಿ ಸಶಕ್ತರಿಗೆ ಮಾತ್ರ ಬದುಕುವ ಅವಕಾಶ. ಹಾಗಾಗಿ ಬದುಕಿನ ಹೋರಾಟಗಳಲ್ಲಿ ಭಾಗವಹಿಸಿ, ತನ್ಮೂಲಕ ಸಾಮರ್ಥ್ಯ ಮೆರೆಯಬೇಕು. ನಾವು ನಿನ್ನ ಪ್ರಶ್ನಿಸಿದೆವು ಎಂಬುದೇ ನೋವಿನ ಸಂಗತಿ. “ಇನ್ನು ನೀವು ಕುತ್ಕೋಳ್ರಯ್ಯ ಕಂಡಿದ್ದೇನೆ. ಇಷ್ಟು ವರ್ಷ ನಿಮ್ಮ ಕುಲಸ್ಥರು ಏನು ಮಾಡಿದಾರೆ ನೋಡಿದೆವು. ಈಗ ನೀವು ಆಮೇಲೆ ನಿಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳು. ನೀವೆಲ್ಲ ಈ ಊರಿಗೆ ಬರಿಗಾಲಲ್ಲಿ, ಸೈಕಲ್ಲಿನಲ್ಲಿ ಬಂದವರು. ನಮ್ಮ ಊರು ಹಾಳು ಮಾಡಿದಿರಿ. ಈಗ ನಿಮ್ಮ ಆಸ್ತಿ ಪಾಸ್ತಿ ನೋಡಿದರೆ ಯಾವ ರಾಜರಿಗಿಂತ ಕಡಿಮೆ ಇಲ್ಲವೆಂಬಂತೆ. ನಮ್ಮಜ್ಜ ಹೇಳುತ್ತಿದ್ದರು ನೂರು ಜನ ಸೇರಿ ಒಬ್ಬನ ಮೇಲೆ ಯುದ್ಧಕ್ಕೆ ಹೋಗುತ್ತಿದ್ದಾರೆ ಎಂದರೆ ಆ ಒಬ್ಬ ವ್ಯಕ್ತಿ ನಿಜವಾದ ಶೂರ ಅಂತ. ಹಾಗೆ ಇವನಿಂದ ನಮಗೆ ತುಂಬಾ ಒಳ್ಳೆಯದು ಆಗಿದೆ. ಇನ್ನು ಮೇಲೆ ಇವನಿಗೆ ಮನೆಯಂಗಳ ಅಷ್ಟೇ ಏಕೆ ಮನಸ್ಸಲ್ಲೂ ಜಾಗ ಕೊಡುತ್ತೇವೆ. ನಮ್ಮ ಮಕ್ಕಳು ಇವನೊಂದಿಗೆ ಊರಿನ ಹಿತಕ್ಕಾಗಿ ದುಡಿಯಲ್ಲಿದ್ದಾರೆ. ಬೇಕಾದರೆ ನೀವು ಈ ಊರಿನಲ್ಲಿ ಇರಬಹುದು. ಪಂಚಾಯಿತಿ ಇಲ್ಲಿಗೆ ಮುಗಿಯಿತು.” ಎಂದು ಊರಿನ ಅಧ್ಯಕ್ಷರು ಹೊರಟುನಿಂತರು.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.