ಹೈದರಾಬಾದ್ : ಉದ್ಯೋಗದ ಆಮಿಷದಲ್ಲಿ ಒಮನ್ ದೇಶಕ್ಕೆ ಕಳ್ಳಸಾಗಾಣೆಯಾಗಿದ್ದ ಹೈದರಾಬಾದ್ ಮೂಲದ ಮಹಿಳೆಯೊಬ್ಬರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವಿನಿಂದಾಗಿ ಐದು ತಿಂಗಳುಗಳ ಬಳಿಕ ಭಾರತಕ್ಕೆ ವಾಪಾಸ್ಸಾಗಿದ್ದಾರೆ.
ಕುಲ್ಸಮ್ ಭಾನು ಅವರು ಒಮನ್ಗೆ ಕಳ್ಳಸಾಗಾಣೆಯಾಗಿದ್ದ ಮಹಿಳೆಯಾಗಿದ್ದು, ಮೇ 8ರಂದು ಹೈದರಾಬಾದಿಗೆ ವಾಪಾಸ್ಸಾಗಿದ್ದಾರೆ. ತನ್ನನ್ನು ಸುರಕ್ಷಿತವಾಗಿ ಕರೆ ತಂದಿರುವುದಕ್ಕೆ ಅವರು ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಲ್ಸಮ್ ಭಾನು ಅವರು, ” ನನ್ನ ಮಗಳು ಘಟನೆಯ ಬಗ್ಗೆ ಸುಷ್ಮಾ ಸ್ವರಾಜ್ ಅವರಿಗೆ ದೂರ ನೀಡಿದ್ದಳು. ಆ ಬಳಿಕ ಭಾರತೀಯ ರಾಯಭಾರ ಅಧಿಕಾರಿಗಳು ನನ್ನ ಮೇಲೆ ವಿಧಿಸಲಾಗಿದ್ದ ಸುಮಾರು ಐದು ಸಾವಿರ ರಿಯಾಲ್ ಮೊತ್ತ ದಂಡವನ್ನು ಪಾವತಿಸಿ ನನ್ನನ್ನು ಭಾರತಕ್ಕೆ ಕರೆತಂದಿದ್ದಾರೆ. ಒಮನ್ನಲ್ಲಿನ ಭಾರತೀಯ ರಾಯಬಾರ ಕಛೇರಿ ಹಾಗೂ ಸುಷ್ಮಾ ಸ್ವರಾಜ್ ಅವರ ನೆರವಿನಿಂದಾಗಿ ಮೇ 8 ರಂದು ಹೈದರಾಬಾದಿಗೆ ನಾನು ತಲುಪಿದೆ. ಅವರಿಗೆ ನನ್ನ ಧನ್ಯವಾದಗಳು” ಎಂದು ಹೇಳಿದ್ದಾರೆ.
“ನಾನು ಕೆಲಸ ಹುಡುಕುತ್ತಿದ್ದ ಸಂದರ್ಭದಲ್ಲಿ ಅಬ್ರಾರ್ ಎಂಬ ಮಧ್ಯವರ್ತಿಯೊಬ್ಬನ ಪರಿಚಯವಾಯಿತು, ಆತ ಮಸ್ಕತ್ನಲ್ಲಿ ತಿಂಗಳಿಗೆ 30 ಸಾವಿರ ರೂಪಾಯಿ ಸಂಬಳ ಇರುವ ಪಾರ್ಲರ್ನಲ್ಲಿ ಬ್ಯೂಟಿಷಿಯನ್ ಕೆಲಸ ಕೊಡಿಸುವುದಾಗಿ ನಂಬಿಸಿದ. ನಂತರ ಡಿಸೆಂಬರ್ 17, 2018ರಂದು ನನ್ನನ್ನು ಮಸ್ಕತ್ಗೆ ಕರೆದುಕೊಂಡು ಹೋದ. ಅಲ್ಲಿ ಮನೆ ಕೆಲಸಕ್ಕೆ ಸೇರಿಸಿದ್ದಾನೆ. ಆ ಕೆಲಸ ಮಾಡಲು ನಿರಾಕರಿಸಿದಾಗ ಮಧ್ಯವರ್ತಿ ನನ್ನ ಮೇಲೆ ಹಲ್ಲೆ ನಡೆಸಿ ಊಟ ನೀರು ಕೊಡದೆ ಕೊಠಡಿಯೊಂದರಲ್ಲಿ ಕೂಡಿಹಾಕಿದ” ಎಂದು ಆಕೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ನಂತರ ಭಾರತೀಯ ರಾಯಭಾರಿ ಅಧಿಕಾರಿಗಳು ಇವರನ್ನು ಭೇಟಿಯಾಗಿದ್ದಾರೆ. ಸುಮಾರು 4 ತಿಂಗಳುಗಳ ಕಾಲ ಅವರು ರಾಯಭಾರ ಕಛೇರಿಯಲ್ಲೇ ಇದ್ದರು. ಬಳಿಕ ಇವರನ್ನು ಹೈದರಾಬಾದಿಗೆ ಕರೆತರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.