ಬೆಂಗಳೂರು ಎಂಬ ಮಹಾನಗರ ಅಭಿವೃದ್ಧಿಯ ಹೆಸರಿನಲ್ಲಿ ತನ್ನ ಹಸಿರು ಹೊದಿಕೆಯನ್ನು ಕ್ಷಿಪ್ರಗತಿಯಲ್ಲಿ ಕಳೆದುಕೊಂಡು ಬರುತ್ತಿರುವ ಈ ಸಂದರ್ಭದಲ್ಲಿ ಯುವಕನೊಬ್ಬ ಅದರ ಹಸಿರು ಹೊದಿಕೆಯನ್ನು ಪುನಃಸ್ಥಾಪಿಸಲು ಶ್ರಮಿಸುತ್ತಿದ್ದಾನೆ. 19 ವರ್ಷದ ಬಿಕಾಂ ವಿದ್ಯಾರ್ಥಿ ಶಶಾಂಕ್ ಜಿ. ಗಾರ್ಡನ್ ಸಿಟಿ ಎಂಬ ಬೆಂಗಳೂರಿನ ಹೆಗ್ಗಳಿಕೆಯನ್ನು ಉಳಿಸಲು ತನ್ನದೇ ಆದ ಪ್ರಯತ್ನವನ್ನು ನಡೆಸುತ್ತಿದ್ದಾನೆ. ವಿಭಿನ್ನವಾದ ರೀತಿಯಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾನೆ.
ಈತ ಸಾಂಪ್ರದಾಯಿಕವಾದ ವಿಧಾನದಲ್ಲಿ ಮಾತ್ರ ಗಿಡಗಳನ್ನು ನೆಡುತ್ತಿಲ್ಲ, ಬದಲಾಗಿ ಗಿಡ ಬೆಳೆಸಲು ನಾವೀನ್ಯ ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದಾನೆ. ಉಪಯೋಗಿಸಲ್ಪಟ್ಟ ಜೀನ್ಸ್, ಸ್ವೆಟರ್, ಬ್ಯಾಗ್, ಶೂ, ಹೆಲ್ಮೆಟ್, ಪಾತ್ರೆಪಗಡೆಗಳು ಸೇರಿದಂತೆ ಹಲವಾರು ವಸ್ತುಗಳಲ್ಲಿ ಗಿಡಗಳನ್ನು ಶಶಾಂಕ್ ಬೆಳೆಸಿ ಪೋಷಿಸಿದ್ದಾನೆ. ಆತನ ಗಾರ್ಡನಿಂಗ್ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಆಗಿದೆ.
ರಾಜರಾಜೇಶ್ವರಿನಗರದ ನಿವಾಸಿಯಾಗಿರುವ ಶಶಾಂಕ್ನ ಈ ವಿಭಿನ್ನ ರೀತಿಯ ಗಾರ್ಡನಿಂಗ್ ಮೊದಮೊದಲು ವಿಚಿತ್ರ ಎನಿಸುತ್ತಿತ್ತು, ಆದರೀಗ ಅದು ಎಲ್ಲರ ಕಣ್ಮನ ಸೆಳೆಯುತ್ತಿದೆ. ಹಳೆಯದಾದ, ಬಳಸಿದ ವಸ್ತುಗಳನ್ನು ಬಿಸಾಕುವ ಬದಲು ಅದನ್ನು ಉಪಯೋಗಕ್ಕೆ ಬಳಸಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳುವುದರಲ್ಲಿ ಶಶಾಂಕ್ ಎತ್ತಿದ ಕೈ.
ತನ್ನ ಗಿಡಮರಗಳ ಪ್ರೀತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಶಾಂಕ್ “ನನಗೆ ಗಿಡಗಳೆಂದರೆ ತುಂಬಾ ಅಚ್ಚುಮೆಚ್ಚು. ಹಸಿರು ಹೊದಿಕೆಯಿಂದ ತುಂಬಿದ್ದ ಹಿಂದಿನ ಬೆಂಗಳೂರಿನ ಬಗ್ಗೆ ಅಪ್ಪ ಅಮ್ಮ ಮಾತನಾಡುವುದನ್ನು ಕೇಳಿಸಿಕೊಂಡಿದ್ದೇನೆ. ಈಗ ನಗರೀಕರಣವು ಬೆಂಗಳೂರಿನ ಮೇಲೆ ಅಪ್ಪಳಿಸಿದೆ, ಹೀಗಾಗಿ ಅದರ ಹಸಿರು ಹೊದಿಕೆಯೂ ನಾಶವಾಗುತ್ತಾ ಬರುತ್ತಿದೆ. ಈ ಹಸಿರು ಹೊದಿಕೆಯನ್ನು ಪುನಃ ಸ್ಥಾಪಿಸುವ ಉದ್ದೇಶಕ್ಕಾಗಿ ನಾನು ನನ್ನ ಬಾಲ್ಕನಿ, ಅಂಗಳವನ್ನು ಹಸಿರುಮಯವನ್ನಾಗಿಸಿದ್ದೇನೆ” ಎನ್ನುತ್ತಾನೆ.
ವಸ್ತುಗಳಲ್ಲಿ ಗಿಡನೆಡುವ ಆಲೋಚನೆ ಶಶಾಂಕ್ಗೆ ಹೊಳೆದಿದ್ದು 2016ರಲ್ಲಿ. ಆತನ ತಾಯಿ ಹಳೆಯ ಶೂಗಳನ್ನು ಕೊಡಲು ಮುಂದಾದಾಗ ಆತನಿಗೆ ಅದರಲ್ಲಿ ಗಿಡ ನೆಡಬಹುದಲ್ಲ ಎಂಬ ಐಡಿಯಾ ಹೊಳೆದಿತ್ತು. ಆ ಸಮಯದಲ್ಲಿ ತನ್ನ ನೆರೆಯ ಮನೆಯವರಿಂದ ಗಾರ್ಡನಿಂಗ್ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಆತ ಪಡೆದುಕೊಂಡಿದ್ದ. ತಕ್ಷಣವೇ ಬಳಸಿ ಮುಗಿದಿದ್ದ ಶೂನಲ್ಲಿ ಗಿಡ ನೆಡುವ ಕಾರ್ಯವನ್ನು ಆರಂಭಿಸಿಯೇ ಬಿಟ್ಟ. ಮನೆಯವರಿಂದ ಗಿಡವೊಂದನ್ನು ತಂದ, ಶೂ ಅನ್ನು ಸ್ವಚ್ಛಗೊಳಿಸಿ ಅದರೊಳಗೆ ಪೇಪರ್ ಇಟ್ಟು ಮುಚ್ಚಿದ ಬಳಿಕ ಕೆಂಪು ಮಣ್ಣು ಹಾಕಿದ, ಸೆಗಣಿಯ ಗೊಬ್ಬರ ಹಾಕಿದ ಗಿಡ ನೆಟ್ಟ. ಕೆಲವು ದಿನಗಳ ನಂತರ ಅದರಲ್ಲಿ ಗಿಡ ಬೆಳೆಯುವುದನ್ನು ಕಂಡ, ಅಚ್ಚರಿಯ ಜೊತೆಗೆ ಸಂತೋಷವೂ ಆಯಿತು. ಮೊದಲ ಪ್ರಯತ್ನದಲ್ಲಿ ಯಶಸ್ವಿಯಾದ ಆತ, ಎರಡನೇ ಪ್ರಯತ್ನಕ್ಕೆ ಕೈ ಹಾಕಿದ. ಅದೂ ಯಶಸ್ವಿಯಾದ ಬಳಿಕ ಆತನ ಕಾರ್ಯ ನಿರಂತರವಾಯಿತು. ವಿವಿಧ ಜಾತಿಯ ಗಿಡಗಳನ್ನು ಬೆಳೆಯಲಾರಂಭಿಸಿದ. ವಿವಿಧ ವಸ್ತುಗಳಲ್ಲಿ ಗಿಡ ನೆಡುವ ಪ್ರಯೋಗ ಮಾಡಿದ. ಜೀನ್ಸ್ನ ಎರಡೂ ಬದಿ ಹಗ್ಗಗಳನ್ನು ಕಟ್ಟಿ ಅದಕ್ಕೆ ಮಣ್ಣು-ಗೊಬ್ಬರ ತುಂಬಿಸಿ ಅದರಲ್ಲಿ ಆತ ಗಿಡ ನೆಟ್ಟ, ಶರ್ಟ್ಗಳ ಕೆಳ ಭಾಗವನ್ನು ಹೊಲಿದು ಬಳಿಕ ಅದಕ್ಕೆ ಗೊಬ್ಬರ ಹಾಕಿ ಗಿಡವನ್ನು ನೆಟ್ಟ. ಈ ಎಲ್ಲಾ ಪ್ರಯೋಗದಲ್ಲೂ ಆತ ಯಶಸ್ವಿಯಾದ, ಆತನ ಬಾಲ್ಕನಿ ಹಸಿರಿನಿಂದ ಕಂಗೊಳಿಸಿತು.
ತನ್ನ ಯಶಸ್ಸಿನ ಶ್ರೇಯಸ್ಸನ್ನು ಶಶಾಂಕ್ ತನ್ನ ತಾಯಿಗೆ ನೀಡುತ್ತಾನೆ, ಆಕೆಯೇ ಆತನಿಗೆ ವಿಭಿನ್ನ ಮಾದರಿಯಲ್ಲಿ ಗಿಡ ಬೆಳೆಸಲು ಉತ್ತೇಜನವನ್ನು ನೀಡಿದರು. “ಆಕೆ ಹಳೆಯ ಪಾತ್ರೆ ಪಗಡೆಗಳನ್ನು ಉಳಿಸುತ್ತಾರೆ, ನಾನದರಲ್ಲಿ ಗಿಡ ನೆಡುತ್ತೇನೆ” ಎಂದು ಶಶಾಂಕ್ ಹೇಳುತ್ತಾನೆ. ಮನೆಯ ಹಸಿ ತ್ಯಾಜ್ಯಗಳನ್ನೂ ಈತ ಗೊಬ್ಬರವಾಗಿ ಬಳಸುತ್ತಾನೆ.
ತನ್ನ ಕಾಲೇಜಿನಲ್ಲಿ ಶಶಾಂಕ್ ಸಾಮಾಜಿಕ ಕಳಕಳಿ ವಿಭಾಗದಲ್ಲಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾನೆ. ಗಿಡಗಳತ್ತ ಮುಖ ಮಾಡದ ಯುವ ಜನತೆಯೇ ತುಂಬಿರುವ ಈ ಕಾಲದಲ್ಲಿ ನನ್ನ ಮಗ ಅವುಗಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ಎಂದು ಆತನ ತಾಯಿ ತುಂಬಾ ಹೆಮ್ಮೆಪಟ್ಟುಕೊಳ್ಳುತ್ತಾರೆ. “ಆತ ತನ್ನ ಕಾರ್ಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿರುವುದನ್ನು ನೋಡಲು ನನಗೆ ಸಂತೋಷವಾಗುತ್ತದೆ” ಎಂದು ಶಶಾಂಕ್ ತಾಯಿ ಗೀತಾ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.