ನವದೆಹಲಿ: ಅನಿಲ್ ಅಂಬಾನಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅವರನ್ನು ಅಪ್ರಾಮಾಣಿಕ ಉದ್ಯಮಿ ಎಂದು ಬಿಂಬಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಿಲಾಯನ್ಸ್ ಗ್ರೂಪ್ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದೆ. ಯುಪಿಎ ಆಡಳಿತದ 10 ವರ್ಷಗಳ ಅವಧಿಯಲ್ಲಿ ರೂ.1 ಲಕ್ಷ ಕೋಟಿ ಮೊತ್ತದ ಪ್ರಾಜೆಕ್ಟ್ಗಳನ್ನು ನಾವು ಪಡೆದುಕೊಂಡಿದ್ದಾಗಿ ಸಂಸ್ಥೆ ರಾಹುಲ್ ಅವರಿಗೆ ಜ್ಞಾಪಿಸಿದೆ.
“ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರು ತನ್ನ ವಿಶಿಷ್ಟವಾದ ಶೈಲಿಯಲ್ಲಿ ಮಾಹಿತಿ ರಹಿತವಾದ, ಅಸ್ಪಷ್ಟತೆ ಮತ್ತು ದುರುದ್ದೇಶಪೂರಿತ ಸುಳ್ಳಿನ ಅಭಿಯಾನವನ್ನು ಮುಂದುವರೆಸಿದ್ದಾರೆ. ನಮ್ಮ ಗ್ರೂಪ್ನ ಮುಖ್ಯಸ್ಥ ಅನಿಲ್ ಡಿ ಅಂಬಾನಿ ಅವರು, ಒಬ್ಬ ಕ್ರೋನಿ ಬಂಡವಾಳಶಾಹಿ ಮತ್ತು ಅಪ್ರಾಮಾಣಿಕ ಉದ್ಯಮಿ ಎಂದು ಹೇಳಿದ್ದಾರೆ. ಇದೆಲ್ಲವೂ ಸ್ಪಷ್ಟವಾಗಿ ಸತ್ಯಕ್ಕೆ ದೂರವಾದಂತಹ ಹೇಳಿಕೆಗಳು” ಎಂದು ರಿಲಾಯನ್ಸ್ ಗ್ರೂಪ್ ಪ್ರಕಟನೆಯಲ್ಲಿ ತಿಳಿಸಿದೆ.
“ರಾಹುಲ್ ಗಾಂಧಿಯವರಿಗೆ ಸಾರ್ವಜನಿಕ ಸಮಾರಂಭಗಳಲ್ಲಿ ಈ ಹೇಳಿಕೆಗಳನ್ನು ನೀಡುವುದು ಈಗ ರೂಢಿಯಾಗಿರುವಂತಿದೆ, ಈ ಹೇಳಿಕೆಗಳಿಗೆ ಯಾವುದೇ ಆಧಾರವನ್ನು ಅವರು ಇದುವರೆಗೆ ನೀಡಿಲ್ಲ. ತಮ್ಮ ಅವಹೇಳನಕಾರಿಯಾದಂತಹ ಹೇಳಿಕೆಗಳಿಗೆ ಸಮರ್ಥನೆಯನ್ನು ನೀಡುವ ಯಾವುದೇ ವಿಶ್ವಾಸಾರ್ಹ ಪುರಾವೆಗಳನ್ನು ಅವರು ಒದಗಿಸಿಲ್ಲ” ಎಂದಿದೆ.
“2004 ರಿಂದ 2014 ರವರೆಗೆ ಅನಿಲ್ ಅಂಬಾನಿ ಒಡೆತನದ ರಿಲಾಯನ್ಸ್ ಗ್ರೂಪ್ಗೆ ರೂ.1 ಲಕ್ಷ ಕೋಟಿ ಮೌಲ್ಯದ ರಾಷ್ಟ್ರ ನಿರ್ಮಾಣ ಮಾಡುವ ಮೂಲಸೌಕರ್ಯ ವಲಯಗಳಾದ ವಿದ್ಯುತ್, ಟೆಲಿಕಾಂ, ರಸ್ತೆ, ಮೆಟ್ರೋ ಇತ್ಯಾದಿಗಳ ಬಗೆಗಿನ ಪ್ರಾಜೆಕ್ಟ್ಗಳನ್ನು ನೀಡಲಾಗಿದೆ. ರಾಹುಲ್ ಗಾಂಧಿ ಅವರ ಸ್ವಂತ ಪಕ್ಷದ ನೇತೃತ್ವದ ಸರ್ಕಾರವೇ ಈ ಪ್ರಾಜೆಕ್ಟ್ಗಳನ್ನು ನಮಗೆ ನೀಡಿರುವುದು ಎಂಬುದನ್ನು ಅವರಿಗೆ ನೆನಪಿಸಲು ನಾವು ಬಯಸುತ್ತೇವೆ” ಎಂದಿದೆ.
“ಹಾಗಾದರೆ 10 ವರ್ಷಗಳಲ್ಲಿ ನಿಮ್ಮ ಸರ್ಕಾರ ಒಬ್ಬ ಕ್ರೋನಿ ಬಂಡವಾಳಶಾಹಿಗೆ, ಅಪ್ರಾಮಾಣಿಕ ಉದ್ಯಮಿಗೆ ಬೆಂಬಲವನ್ನು ನೀಡಿತೇ ಎಂಬುದನ್ನು ಸ್ಪಷ್ಟಪಡಿಸಿ” ಎಂಬುದಾಗಿ ರಿಲಾಯನ್ಸ್ ಸಂಸ್ಥೆ ರಾಹುಲ್ ಅವರಿಗೆ ತಿರುಗೇಟು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.