ತಿರುವನಂತಪುರಂ: ಮೂವರು ಮಹಿಳೆಯರು ನಕಲಿ ಮತದಾನ ಮಾಡುವ ಸಿಸಿಟಿವಿ ದೃಶ್ಯಾವಳಿಗಳನ್ನು ಮಲಯಾಳಂ ಟಿವಿ ಚಾನೆಲ್ಗಳು ಬಿತ್ತರಿಸಿವೆ. ಸಿಪಿಎಂ ಪಕ್ಷಕ್ಕೆ ಸೇರಿದವರು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಣ್ಣೂರು ಮತ್ತು ಕಾಸರಗೋಡು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ದೂರನ್ನೂ ನೀಡಿದ್ದಾರೆ.
ಪಿಲ್ಲತರ, ತ್ರಿಕ್ಕರಿಪ್ಪೂರ್ ಮತ್ತು ಪಯ್ಯಣ್ಣುರ್ಗಳಲ್ಲಿ ಈ ನಕಲಿ ಮತದಾನ ಜರುಗಿದೆ. ಕಣ್ಣೂರು ಜಿಲ್ಲೆ ಮತ್ತು ಕಾಸರಗೋಡ್ ಕ್ಷೇತ್ರಗಳೊಳಗೆ ಈ ಪ್ರದೇಶಗಳು ಬರುತ್ತವೆ. ಮತದಾರರ ಪಟ್ಟಿಯಲ್ಲಿ ಇರುವ ವ್ಯಕ್ತಿಯ ಬದಲಾಗಿ ಇನ್ನೊಬ್ಬ ವ್ಯಕ್ತಿ ಮತದಾನ ಮಾಡಿರುವುದು, ಒರ್ವ ವ್ಯಕ್ತಿ ಎರಡು ಬಾರಿ ಮತದಾನ ಮಾಡುವುದು ಇಲ್ಲಿ ಸ್ಪಷ್ಟವಾಗಿದೆ. ಇದಕ್ಕಾಗಿ ನಕಲಿ ವೋಟರ್ ಐಡಿಗಳನ್ನು ಬಳಕೆ ಮಾಡಿರುವ ಆರೋಪ ಕೇಳಿಬರುತ್ತಿದೆ. ಸಿಪಿಎಂ ಪಕ್ಷದ ಗ್ರಾಮ ಪಂಚಾಯತ್ ಸದಸ್ಯೆಯರು ಈ ನಕಲಿ ಮತದಾನ ಮಾಡಿದ್ದಾರೆ ಎನ್ನಲಾಗಿದೆ.
ಪದ್ಮಿಣಿ ಎಂಬಾಕೆ ಪಿಲತಾರ ಯುಪಿ ಸ್ಕೂಲ್ ಕಣ್ಣೂರಿನಲ್ಲಿ ಎರಡು ಬಾರಿ ಮತದಾನ ಮಾಡಿದ್ದಾರೆ. ಒಮ್ಮೆ ಮತದಾನ ಮಾಡಿದ ತಕ್ಷಣ ಬೆರಳಿನ ಶಾಯಿಯನ್ನು ಅವರು ಉಜ್ಜುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಇನ್ನೊಂದೆಡೆ ಸಲೀನಾ ಎಂಬಾಕೆ, 17ನೇ ಮತಗಟ್ಟೆಯ ಮತದಾರಳಾಗಿದ್ದರೂ ಆಕೆ ವೋಟ್ ಮಾಡಿದ್ದು ಮಾತ್ರ 19ನೇ ಮತಗಟ್ಟೆಯಲ್ಲಿ. ಆಕೆಗೆ ಸಿಪಿಎಂ ಬೂತ್ ಏಜೆಂಟ್ ಐಡಿ ಕಾರ್ಡ್ ನೀಡುತ್ತಿರುವ ಮತ್ತು ವಾಪಾಸ್ ಪಡೆಯುತ್ತಿರುವ ದೃಶ್ಯ ಸೆರೆಯಾಗಿದೆ. ಈ ಇಬ್ಬರು ಮಹಿಳೆಯರು ಕೂಡ ಸಿಪಿಎಂ ಪಕ್ಷದವರಾಗಿದ್ದಾರೆ.
ಇನ್ನಿತರ ಕಡೆಗಳಲ್ಲೂ ಇದೇ ರೀತಿಯ ಚಿತ್ರಣ ಕಂಡು ಬಂದಿದೆ. ಸಿಪಿಎಂ ಪಕ್ಷದವರು ಅನಾಚಾರದಲ್ಲಿ ತೊಡಗಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.
ಮತದಾನ ನಡೆಯುತ್ತಿರುವ ವೇಳೆ ಸಿಪಿಎಂ ಕಾರ್ಯಕರ್ತರು ಮತಗಟ್ಟೆಗೆ ಪ್ರವೇಶಿಸಿದ್ದು ಕೂಡ ವರದಿಯಾಗಿದೆ. ಹಲವಾರು ಕಡೆಗಳಲ್ಲಿ ಸಿಪಿಎಂ ಪರವಾಗಿರುವ ಸರ್ಕಾರಿ ಉದ್ಯೋಗಿಗಳನ್ನೇ ಮತಗಟ್ಟೆಗಳಲ್ಲಿ ನೇಮಕ ಮಾಡಲಾಗಿದೆ. ಸಿಪಿಎಂ ಪಕ್ಷ ಕಳೆದ ಹಲವಾರು ವರ್ಷಗಳಿಂದ ಕಾಸರಗೋಡು ಕ್ಷೇತ್ರವನ್ನು ಗೆಲ್ಲಲು ನಕಲಿ ಮತದಾನವೇ ಕಾರಣ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಆರೋಪ ಮಾಡುತ್ತಿವೆ.
ಪಶ್ಚಿಮಬಂಗಾಳದಲ್ಲೂ ಸಿಪಿಎಂ ಇದೇ ತಂತ್ರವನ್ನು ಅನುಸರಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.