2019 ರ ಲೋಕಸಭಾ ಚುನಾವಣೆಯ ಮೊದಲ ಮೂರು ಹಂತಗಳು ಪೂರ್ಣಗೊಂಡಿವೆ. 303 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಗುಜರಾತ್, ಜಮ್ಮು ಕಾಶ್ಮೀರ ಮತ್ತು ಉತ್ತರ ಪ್ರದೇಶದ ಕೆಲವೊಂದು ಕ್ಷೇತ್ರಗಳನ್ನು ಹೊರತುಪಡಿಸಿ, ಈ ಮೂರು ಹಂತಗಳು ಪೂರ್ವ ಮತ್ತು ದಕ್ಷಿಣ ಭಾರತದ ಭಾಗಗಳಿಗೆ ಮೀಸಲಾಗಿದ್ದವು.
ಚುನಾವಣಾ ಯುದ್ಧ ಈಗ ಹಿಂದಿ ಹೃದಯ ಭಾಗಕ್ಕೆ ಪ್ರವೇಶಿಸುತ್ತಿದೆ. ಈಶಾನ್ಯ ಭಾರತ, ಬಂಗಾಳ ಮತ್ತು ಒರಿಸ್ಸಾ ಮುಂತಾದ ಭಾರತದ ಭಾಗಗಳಲ್ಲಿ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ನೇರ ಹಣಾಹಣಿ ಇದೆ. ಈಶಾನ್ಯದಲ್ಲಿ ಬಿಜೆಪಿಯು ಮಹತ್ವದ ಗಳಿಕೆಯನ್ನು ಪಡೆಯುವ ಸೂಚನೆ ಸಿಗುತ್ತಿದೆ.
ಇನ್ನು ದಕ್ಷಿಣ ಭಾರತದ ವಿಷಯಕ್ಕೆ ಬಂದರೆ, ಕರ್ನಾಟಕ ಬಿಜೆಪಿ ಹಾದಿಯಲ್ಲಿ ಸಾಗುವುದು ಬಹುತೇಕ ಖಚಿತ. ಆಂಧ್ರ ಮತ್ತು ತೆಲಂಗಾಣಗಳಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಮೆರೆಯಲಿದ್ದು, ಟಿಡಿಪಿ ಮತ್ತು ಕಾಂಗ್ರೆಸ್ ನೆಲಕಚ್ಚುವಂತೆ ಗೋಚರಿಸುತ್ತಿದೆ.
ಇನ್ಮುಂದೆ ಚುನಾವಣೆ ನಡೆಯಬೇಕಾಗಿರುವ ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಕಾಂಗ್ರೆಸ್ ಪಕ್ಷವು ಪ್ರಾದೇಶಿಕ ಪಕ್ಷಗಳನ್ನು ಅಥವಾ ಬಿಜೆಪಿಯನ್ನು ಸೋಲಿಸುವ ಸ್ಥಿತಿಯಲ್ಲಿ ಪ್ರಸ್ತುತ ಇಲ್ಲ, ಹೀಗಾಗಿ ಮುಂದಿನ ಹಂತಗಳಲ್ಲಿ ಬಿಜೆಪಿಯ ಗೆಲುವಿನ ಅಂತರ ಮಾತ್ರ ಪ್ರಮುಖ ವಿಷಯವಾಗಿರುತ್ತದೆ. 2014 ರ ಗೆಲುವು ಮರುಕಳಿಸುತ್ತದೆಯೇ ಅಥವಾ ಅದಕ್ಕಿಂತಲೂ ಹೆಚ್ಚಿನ ಮತಗಳನ್ನು ಪಡೆದು ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುತ್ತದೆಯೇ ಎಂಬುದನ್ನು ನೋಡಬೇಕಷ್ಟೇ.
ಪ್ರಸ್ತುತ ತಳಮಟ್ಟದಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳಿಂದ, 2014 ಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಜನಾದೇಶ ಹೊರಬರುವಂತೆ ಕಾಣುತ್ತಿದೆ. ಪ್ರಧಾನಿಯವರ ಪರವಾಗಿ ಶೇ. 65 ರಿಂದ 70 ರಷ್ಟು ಜನರು ಅನುಮೋದನೆಯನ್ನು ನೀಡುತ್ತಿದ್ದಾರೆ. ಇದು ಸಕಾರಾತ್ಮಕತೆಯನ್ನು ಬಿಂಬಿಸುತ್ತಿದೆ.
2019 ರಲ್ಲಿ ಕಾಂಗ್ರೆಸ್
ಚುನಾವಣೆ ನಡೆಯುತ್ತಿರುವ ಹಾದಿ ಮತ್ತು ಇತ್ತೀಚಿನ ಕೆಲವೊಂದು ಬೆಳವಣಿಗೆಗಳನ್ನು ಗಮನಿಸಿದರೆ ಆಸಕ್ತಿಕರ ಅಂಶಗಳು ಗೋಚರಿಸುತ್ತವೆ.
ಕಾಂಗ್ರೆಸ್ 424 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದೆ. ಈ ಸಂಖ್ಯೆ ಹೆಚ್ಚಾಗಲೂಬಹುದು. ಮಹಾಘಟಬಂಧನ ಹುಟ್ಟುವ ಮುನ್ನವೇ ರಾಷ್ಟ್ರಮಟ್ಟದಲ್ಲಿ ಸತ್ತು ಹೋಗಿದೆ.
ರಾಹುಲ್ ಗಾಂಧಿ ಅವರು ಕಳೆದ ಒಂದು ವರ್ಷಗಳಿಂದ ರಫೇಲ್ ಒಪ್ಪಂದ ಮತ್ತು ಉದ್ಯಮಿಗಳ ಸಾಲ ಮನ್ನದ ಬಗ್ಗೆ ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ಸತ್ಯಕ್ಕೆ ದೂರವಾದುದನ್ನು ಸತ್ಯ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ನಕಲಿ ವಿಷಯಗಳನ್ನು ದೊಡ್ಡದು ಮಾಡಿದ್ದಾರೆ. ಆದರೆ ಚುನಾವಣೆ ಮೇಲೆ ಇದು ಯಾವುದೇ ಪ್ರಭಾವವನ್ನು ಬೀರುವಂತೆ ಕಾಣುತ್ತಿಲ್ಲ. ರಫೆಲ್ ಒಪ್ಪಂದದ ಬಗೆಗಿನ ಆದೇಶವನ್ನು ತಿರುಚಿದ್ದಕ್ಕೆ ಈಗಾಗಲೇ ಸುಪ್ರೀಂಕೋರ್ಟ್ ಬಳಿ ರಾಹುಲ್ ಕ್ಷಮಾಪಣೆಯನ್ನು ಕೇಳಿದ್ದಾರೆ. ಇದು ರಾಜಕೀಯ ನಾಯಕನಾಗಿ ಅವರ ವಿಶ್ವಾಸಾರ್ಹತೆಯನ್ನು ಕುಗ್ಗಿಸಿದೆ. ತನ್ನದೇ ಸುಳ್ಳುಗಳ ಸಂತ್ರಸ್ತನಂತೆ ರಾಹುಲ್ ಗಾಂಧಿ ಕಾಣುತ್ತಿದ್ದಾರೆ.
ಕೇಜ್ರಿವಾಲ್ ಅವರು ಆಟ ಆಡುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳದೆ, ದೆಹಲಿ ಕಾಂಗ್ರೆಸ್ ಘಟಕದ ವಿರೋಧದ ನಡುವೆಯೂ ರಾಹುಲ್ ಗಾಂಧಿ ಅವರು, ಆಮ್ ಆದ್ಮಿ ಪಕ್ಷಕ್ಕೆ 4 ಸ್ಥಾನಗಳನ್ನು ನೀಡುವುದಾಗಿ ಹೇಳಿದ್ದು ಅವರ ಹತಾಶೆ ಯಾವ ಮಟ್ಟದಲ್ಲಿದೆ ಎಂಬುದನ್ನು ತೋರಿಸುತ್ತದೆ. ಇಲ್ಲಿ ಅವರು ತಮ್ಮ ಸೋಲಿನ ಹತಾಶೆಯನ್ನು ಹೊರಹಾಕಿದ್ದಾರೆ.
ಬಾಲಕೋಟ ವೈಮಾನಿಕ ದಾಳಿಯ ಬಳಿಕ ದೇಶದಲ್ಲಿನ ರಾಷ್ಟ್ರೀಯತೆಯ ಮೂಡ್ ಅನ್ನು ಗಮನಿಸದೆ ಅವರು ರಾಷ್ಟ್ರೀಯ ಹಿತಾಸಕ್ತಿ ಮತ್ತು ರಾಷ್ಟ್ರೀಯ ಚಿಂತನೆಗೆ ವಿರುದ್ಧವಾಗಿ ತಮ್ಮ ಪಕ್ಷವನ್ನು ಬಿಂಬಿಸಿದ್ದಾರೆ. ವೈಮಾನಿಕ ದಾಳಿ ಪಾಕಿಸ್ತಾನ ಮತ್ತು ಅದರ ಪ್ರಾಯೋಜಿತ ಭಯೋತ್ಪಾದನೆಗೆ ಹೊಡೆತ ಎಂಬುದನ್ನು ಪರಿಗಣಿಸದೆ, ಅದು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಹೊಡೆತ ಎಂಬುದನ್ನು ಅವರು ಪರಿಗಣಿಸಿದ್ದು ದುರಾದೃಷ್ಟವೇ.
ಕಾಶ್ಮೀರಿ ಪಕ್ಷಗಳು ಪ್ರತ್ಯೇಕತೆಯ ಬಗ್ಗೆ ಮೃದು ಧೋರಣೆಯನ್ನು ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸದೆ ಇದ್ದದ್ದು ಮತ್ತು ಅವರ ವಿರುದ್ಧ ನಿಲ್ಲದೆ ಇದ್ದದ್ದು ಆ ಪಕ್ಷಕ್ಕೆ ದೊಡ್ಡ ಹೊಡೆತವನ್ನು ನೀಡಲಿದೆ.
ಮೋದಿಯನ್ನು ಟಾರ್ಗೆಟ್ ಮಾಡುವ ಕೆಲಸವನ್ನು ರಾಜ್ ಠಾಕ್ರೆ ಅವರಿಗೆ ನೀಡುವ ಮೂಲಕ ಕಾಂಗ್ರೆಸ್ ತನ್ನ ಹತಾಶೆ ಉತ್ತುಂಗಕ್ಕೇರಿದೆ ಎಂಬುದನ್ನು ತೋರಿಸಿದೆ. ಇಂತಹ ತಂತ್ರಗಾರಿಕೆ ಉತ್ತರ ಪ್ರದೇಶ, ಬಿಹಾರ, ಉತ್ತರ ಭಾರತೀಯ ರಾಜ್ಯಗಳಲ್ಲಿ ವಿಫಲವಾಗಿದೆ ಎಂಬುದನ್ನು ತಿಳಿದರೂ ಈ ರೀತಿಯ ವರ್ತನೆಯನ್ನು ಮುಂದುವರಿಸುತ್ತಿರುವುದು ದುರಾದೃಷ್ಟವೇ ಸರಿ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಭದ್ರತೆಯ ಬಗೆಗಿನ ಪ್ರಣಾಳಿಕೆ ದೇಶದ ರಾಷ್ಟ್ರೀಯತೆಯ ಭಾವನೆಗೆ ಸಂಪೂರ್ಣ ವಿರುದ್ಧವಾದುದಾಗಿದೆ.
ರಾಹುಲ್ ಗಾಂಧಿಯವರು ವಯನಾಡಿನಲ್ಲಿ ಸುರಕ್ಷಿತ ನೆಲೆಯನ್ನು ಕಂಡುಕೊಳ್ಳುತ್ತಿದ್ದಾರೆ, ಮತ್ತೊಂದಡೆ ಪ್ರಿಯಾಂಕಾ ಅವರು ವಾರಣಾಸಿಯನ್ನು ಬಿಡಬೇಕಾಯಿತು. ಯಾಕೆಂದರೆ ಅಲ್ಲಿ ಅವರಿಗೆ ಯಾವುದೇ ವಯನಾಡ್ ಲಭ್ಯವಿಲ್ಲ.
ನವ ಭಾರತ ಧನಾತ್ಮಕ ಭಾರತವಾಗಿದೆ, ಅದು ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಮತ್ತು ಟಿಡಿಪಿಯ ನಕಾರಾತ್ಮಕತೆಯನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ, ತನ್ನ ದೇಶದ ಬಗೆಗಿನ ಟೀಕೆ ಟಿಪ್ಪಣಿಗಳಿಗಿಂತಲೂ ಹೆಚ್ಚಿನದನ್ನು ನೋಡಲು ನವಭಾರತ ಬಯಸುತ್ತದೆ. ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ತಮ್ಮ ಕಾಲಕ್ಕಿಂತ 48 ವರ್ಷ ಹಿಂದಿದ್ದಾರೆ. 2019 ಮತ್ತು 1971 ರ ನಡುವೆ 48 ವರ್ಷಗಳ ಅಂತರವಿದೆ. ಭಾರತದ ಸಾಮಾಜಿಕ ಸಂಯೋಜನೆ ಮತ್ತು ಆರ್ಥಿಕ ಆಯಾಮ ಸಂಪೂರ್ಣ ಬದಲಾಗಿದೆ. ಕಾಂಗ್ರೆಸ್ 2019ರ ಚುನಾವಣೆಯನ್ನು 1971ರ ಅಜೆಂಡಾದೊಂದಿಗೆ ಸ್ಪರ್ಧಿಸುತ್ತಿದೆ. ಇದು ಸಮಯದೊಂದಿಗೆ ತಾಳೆ ಆಗುತ್ತಿಲ್ಲ. ಗೋಡೆ ಮೇಲಿನ ಬರಹ ಸ್ಪಷ್ಟ ಮತ್ತು ದೃಢವಾಗಿದ್ದು, ಈ ಚುನಾವಣಾ ಫಲಿತಾಂಶ ಕಾಂಗ್ರೇಸ್ ಪಕ್ಷಕ್ಕೆ ದೊಡ್ಡ ಪಾಠವನ್ನೇ ಕಲಿಸಲಿದೆ ಎಂದೆನಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.