ನವದೆಹಲಿ: ಪ್ರತಿಷ್ಠಿತ ರಾಯಲ್ ಸೊಸೈಟಿ ಲಂಡನ್ಗೆ ಆಯ್ಕೆಯಾಗುವ ಮೂಲಕ ಡಾ.ಗಗನದೀಪ್ ಕಾಂಗ್ ಅವರು ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊತ್ತ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.
ಕಾಂಗ್ ಅವರು, ಪ್ರಸ್ತುತ ಫರಿದಾಬಾದಿನಲ್ಲಿನ ಟ್ರಾನ್ಸ್ಸ್ಲೇಶನಲ್ ಹೆಲ್ತ್ ಸೈನ್ಸ್ ಆಂಡ್ ಟೆಕ್ನಾಲಜಿ ಇನ್ಸ್ಟಿಟ್ಯೂಟ್ (THSTI)ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ 359 ವರ್ಷ ಹಳೆಯ ಸೈಂಟಿಫಿಕ್ ಅಕಾಡಮಿಯಾದ ರಾಯಲ್ ಸೊಸೈಟಿ ಲಂಡನ್ನ ಫೆಲೋ ಆಗಿ ಆಯ್ಕೆಯಾಗುವ ಮೂಲಕ ಅವರು ಮಹತ್ವದ ಸಾಧನೆ ಮಾಡಿದ್ದಾರೆ.
2019ರ ಸಾಲಿನಲ್ಲಿ ಜಗತ್ತಿನ 51 ಖ್ಯಾತ ವಿಜ್ಞಾನಿಗಳು ರಾಯಲ್ ಸೊಸೈಟಿಗೆ ಆಯ್ಕೆಯಾಗಿದ್ದಾರೆ. ಅದರಲ್ಲಿ ಕಾಂಗ್ ಕೂಡ ಒಬ್ಬರಾಗಿದ್ದಾರೆ.
ಇಂಟರ್-ಡಿಸಿಪ್ಲಿನರಿ ರಿಸರ್ಚ್ಗೆ ಹೆಸರಾಗಿರುವ ಕಾಂಗ್ ಅವರು, ರಾಷ್ಟ್ರೀಯ ರೋಟವೈರಸ್ ಮತ್ತು ಟೈಫಾಯಿಡ್ ಕಣ್ಗಾವಲು ಜಾಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಲಸಿಕೆ ಪ್ರಯೋಗಗಳನ್ನು ಬೆಂಬಲಿಸಲು ಪ್ರಯೋಗಾಲಯಗಳನ್ನು ಸ್ಥಾಪಿಸುವಲ್ಲಿ ಸಹಾಯ ಮಾಡಿದ್ದಾರೆ ಮತ್ತು ಲಸಿಕೆಗಳ 1-3 ಹಂತಗಳ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದ್ದಾರೆ.
ಫೆಲೋಗಳ ಪಟ್ಟಿಯಲ್ಲಿ ಕೆನಡಿಯನ್-ಅಮೇರಿಕನ್ ಗಣಿತಶಾಸ್ತ್ರಜ್ಞ ಮಂಜುಲ್ ಭಾರ್ಗವ್ ಕೂಡ ಇದ್ದಾರೆ. ಅವರು ಯು.ಎಸ್ನ ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದ ಆರ್ ಬ್ರ್ಯಾಂಡನ್ ಫ್ರಡ್ ಪ್ರೊಫೆಸರ್ ಆಗಿದ್ದಾರೆ.
ಸೊಸೈಟಿಯ ಫೆಲೋಶಿಪ್ ವೈಜ್ಞಾನಿಕ ಜಗತ್ತಿನ ಮಹಾನ್ ಗೌರವಗಳಲ್ಲಿ ಒಂದಾಗಿದೆ. ಐಸಾಕ್ ನ್ಯೂಟನ್ (1672), ಚಾರ್ಲ್ಸ್ ಡಾರ್ವಿನ್ (1839), ಮೈಕೇಲ್ ಫ್ಯಾರಡೆ (1824), ಅರ್ನೆಸ್ಟ್ ರುದರ್ಫೋರ್ಡ್ (1903), ಆಲ್ಬರ್ಟ್ ಐನ್ಸ್ಟೀನ್ (1921) ಮೊದಲಾದ ಇತಿಹಾಸದ ಮಹಾನ್ ವಿಜ್ಞಾನಿಗಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಭಾರತದ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿರುವ ಪ್ರೊಫೆಸರ್ ಕೆ.ವಿಜರಾಘವನ್ ಅವರು ಟ್ವಿಟರ್ ಮೂಲಕ ಗಗನ್ ದೀಪ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.