ನವದೆಹಲಿ: ದೆಹಲಿ ಮೆಟ್ರೋ ರೈಲ್ ಕಾರ್ಪೋರೇಶನ್ 2021ರ ವೇಳಗೆ ತನಗೆ ಅಗತ್ಯವಿರುವ ಶಕ್ತಿಯನ್ನು ಸೋಲಾರ್ ಮೂಲದಿಂದ ಮತ್ತು ಇತರ ಶುದ್ಧ ಶಕ್ತಿ ಮೂಲದಿಂದ ಪಡೆಯಲು ಯೋಜನೆ ರೂಪಿಸುತ್ತಿದೆ ಎಂದು ಸೌರ್ ಎನರ್ಜಿ ಇಂಟರ್ನ್ಯಾಷನಲ್ ವರದಿ ಮಾಡಿದೆ. ಈಗಾಗಲೇ ದೆಹಲಿ ಮೆಟ್ರೋ ರೈಲ್ ಕಾರ್ಪೋರೇಶನ್ ತನಗೆ ಅಗತ್ಯವಿರುವ ಶೇ.60 ರಷ್ಟು ಶಕ್ತಿಯನ್ನು ಸೋಲಾರ್ ಶಕ್ತಿಯಿಂದಲೇ ಪಡೆದುಕೊಳ್ಳುತ್ತಿದೆ.
ವರದಿಯ ಪ್ರಕಾರ, ಈ ಗುರಿಯನ್ನು ಮುಟ್ಟಲು ದೆಹಲಿ ಮೆಟ್ರೋ ರೈಲ್ ಕಾರ್ಪೋರೇಶನ್ ಸಫಲವಾದರೆ, ಶೇ.100ರಷ್ಟು ಗ್ರೀನ್ ಎನರ್ಜಿಯನ್ನು ಬಳಕೆ ಮಾಡುವ ವಿಶ್ವದ ಮೊತ್ತ ಮೊದಲ ಮೆಟ್ರೋ ರೈಲ್ ನೆಟ್ವರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಪ್ರಸ್ತುತ ದೆಹಲಿ ಮೆಟ್ರೋ ರೈಲ್ ಕಾರ್ಪೋರೇಶನ್ 21 ಮೆಗಾವ್ಯಾಟ್ ಸೋಲಾರ್ ಎನರ್ಜಿಯನ್ನು ದೇಶದಾದ್ಯಂತದ ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಸೋಲಾರ್ ಪ್ಯಾನಲ್ಗಳಿಂದ ಪಡೆದುಕೊಳ್ಳುತ್ತದೆ. ಅಲ್ಲದೇ, 2019ರ ಮೇ ತಿಂಗಳಿನಿಂದ ಇದು ಮಧ್ಯಪ್ರದೇಶದ ರೇವಾದಲ್ಲಿ ಸ್ಥಾಪನೆ ಮಾಡಲಾಗಿರುವ 750 ಮೆಗಾವ್ಯಾಟ್ ಸೋಲಾರ್ ಪವರ್ ಪಾರ್ಕ್ನಿಂದ 99 ಮೆಗಾವ್ಯಾಟ್ ಸೋಲಾರ್ ಎನರ್ಜಿಯನ್ನು ಪಡೆದುಕೊಳ್ಳಲಿದೆ.
ಸೋಲಾರ್ ಪವರ್ ಪಾರ್ಕ್ ಅನ್ನು 1590 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದ್ದು, ವಿಶ್ವದ ಅತೀದೊಡ್ಡ ಸಿಂಗಲ್ -ಸೈಟ್ ಸೋಲಾರ್ ಪವರ್ ಪ್ಲಾಂಟ್ ಇದಾಗಿದೆ. 2018ರಲ್ಲಿ ಈ ಪಾರ್ಕ್ನಿಂದ ಸೋಲಾರ್ ಪವರ್ ಅನ್ನು ಪಡೆಯಲು ದೆಹಲಿ ಮೆಟ್ರೋ ಮಧ್ಯಪ್ರದೇಶ ಮೂಲದ ರೇವಾ ಅಲ್ಟ್ರಾ ಮೆಗಾ ಸೋಲಾರ್ ಲಿಮಿಟೆಡ್ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಇದರ ಮೂಲಕ ತನ್ನ ರೈಲುಗಳಿಗೆ ಗ್ರೀನ್ ಪವರ್ ಅನ್ನು ಒದಗಿಸಲಿದೆ.
ಮುಂದಿನ ಎರಡು ತಿಂಗಳೊಳಗೆ ರೇವಾ ಸೋಲಾರ್ ಪಾರ್ಕ್ನಿಂದ ದೆಹಲಿ ಮೆಟ್ರೋ ಸೋಲಾರ್ ವಿದ್ಯುತ್ ಅನ್ನು ಪಡೆದುಕೊಳ್ಳಲಿದೆ. ಇದು ಮೆಟ್ರೋದ ನಿತ್ಯದ ಶೇ.90ರಷ್ಟು ವಿದ್ಯುತ್ ಅವಶ್ಯಕತೆಯನ್ನು ನೀಗಿಸಲಿದೆ. ಅಲ್ಲದೇ ಮುಂದಿನ 25 ವರ್ಷಗಳಲ್ಲಿ ಇದು ದೆಹಲಿ ಮೆಟ್ರೋಗೆ ರೂ.1,400 ಕೋಟಿಗಳನ್ನು ಉಳಿತಾಯ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.