ವೇದಕಾಲದ ನಂತರ ಉಗಮಗೊಂಡ ವಿವಿಧ ಮತಗಳ ಆಚರಣೆಗಳು ಅತಿರೇಕ ತಲುಪಿ ಸಮಾಜದ ಸ್ವಾಸ್ಥ್ಯ ಹಾಳಾಗತೊಡಗಿದಾಗ ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಲು ಪುರಾಣಗಳಲ್ಲಿ ಹೇಳಿದ ದೇವತಾ ಕಲ್ಪನೆಗೆ ಮೂರ್ತರೂಪ ಕೊಟ್ಟು ಜನಜೀವನಕ್ಕೆ ಅನುರೂಪವಾಗಿ ಭಗವಂತನನ್ನು ಕಲ್ಪಿಸಿ ಭಗವಂತನಲ್ಲಿ ಭಕ್ತಿ ಸಮರ್ಪಣೆಗಳ ಮೂಲಕ ಆಧ್ಯಾತ್ಮಿಕ ಸಾಧನೆ ನಡೆಸಲು ಮೂರ್ತಿ ಪೂಜೆ ಮತ್ತು ದೇವಾಲಯಗಳ ಉಗಮವಾಯಿತು ಎನ್ನಲಾಗುತ್ತದೆ. ಹಾಗೆ ನೋಡಿದರೆ ದೇವಾಲಯ ವಾಸ್ತುಶಿಲ್ಪ ಮತ್ತು ಕಲಾತ್ಮಕ ನಿರ್ಮಾಣಗಳು ಮಾನವ ನಾಗರಿಕತೆಯಷ್ಟೇ ಪುರಾತನ. ಪ್ರಾಚೀನ ಯೂರೋಪಿನ ಗ್ರೀಕ್, ರೋಮನ್, ಅಮೇರಿಕದ ಮಾಯನ್, ಇಂಕಾ, ಈಜಿಪ್ತ, ಪ್ರಾಚೀನ ಚೀನಾ ಮೊದಲಾದ ನಾಗರಿಕತೆಗಳಲ್ಲೂ ಭಾರತೀಯ ಸಂಸ್ಕೃತಿಯಂತೆಯೇ ದೇವಾಲಯಗಳು ವಿವಿಧ ರೂಪದಲ್ಲಿ ವ್ಯಕ್ತವಾಗಿವೆ. ಆದರೆ ಕ್ರಿಶ್ಚಿಯನ್, ಇಸ್ಲಾಂ ಮೊದಲಾದ ಮತಗಳ ಬರ್ಬರತೆಯಲ್ಲಿ ಈ ನಾಗರಿಕತೆಗಳ ಪ್ರಾಚೀನ ಶ್ರದ್ಧಾಕೇಂದ್ರಗಳು ದುರದೃಷ್ಟವಶಾತ್ ನಾಶವಾದರೆ ಭಾರತದಲ್ಲಿ ಮಾತ್ರ ದೇಗುಲ ಪರಂಪರೆ ನಿರಂತರ ಉಳಿದುಕೊಂಡು ಬಂದಿದೆ.
ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ಒಂದು ಪ್ರಮುಖ ಸ್ಥಾನವಿದೆ. ಪರಮಾತ್ಮನ ವಾಸಸ್ಥಾನ ದೇವಾಲಯ. ದೇವಸ್ಥಾನ ಒಂದು ಜೀವಂತಿಕೆ ವಾಸವಾಗಿರುವ ಮನೆ. ತನ್ನ ಪರಿವಾರದೊಂದಿಗೆ ಪ್ರತಿಷ್ಠಾಪನೆಗೊಂಡಿರುವ ಆಯಾ ದೇಗುಲದ ಪ್ರಮುಖ ದೇವತೆ ದೇವಸ್ಥಾನದ ಯಜಮಾನನಂತೇ. ಹಾಗೆಯೇ ದೇವಾಲಯಗಳು ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳ ಮತ್ತು ಸಾಮಾಜಿಕ ಸಮರಸತೆಯ ಕೇಂದ್ರಗಳೂ ಹೌದು. ಭಾರತೀಯ ದೇಗುಲಗಳು ಪಾಶ್ಚಾತ್ಯ ಸೆಮೆಟಿಕ್ ಮತಗಳಲ್ಲಿರುವಂತೆ ಜನರು ಒಟ್ಟು ಸೇರುವ ಸಲುವಾಗಿ ನಿರ್ಮಿಸಿದ ಸಮುದಾಯ ಭವನದ ಕಟ್ಟಡಗಳಲ್ಲ.
ಶ್ರೀ ಎಸ್ ಶ್ರೀಕಂಠಶಾಸ್ತ್ರಿಗಳ ಭಾರತೀಯ ಸಂಸ್ಕೃತಿ ಎನ್ನುವ ಪುಸ್ತಕದ ಕೆಲವು ಸಾಲುಗಳನ್ನು ಉಲ್ಲೇಖಿಸಿದರೆ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ದೇವಾಲಯಗಳ ವಿಕಾಸ ಮತ್ತು ಅದರ ಮಹತ್ವ ಸ್ಪಷ್ಟವಾದೀತು: ಪ್ರಾಚೀನ ದೇವಾಲಯಗಳೆಲ್ಲವೂ ಗುಹೆಗಳೋ ಗುಹಾಕಾರವಾಗಿಯೋ ಇದ್ದವು. ಮನುಷ್ಯನ ಹೃದಯವೆಂಬ ಗುಹೆಯಲ್ಲಿ ದಹರಾಕಾಶವಿದೆಯೆಂದೂ ಅದರಲ್ಲಿ ಜ್ಯೋತಿಸ್ವರೂಪನಾದ ಈಶ್ವರನು ಇರುವನೆಂದೂ ಭಕ್ತನು ಇಶ್ವರನ ಸಾಯುಜ್ಯಪಡೆಯಬಹುದೆಂದೂ ದೇವಾಲಯಗಳು ಸ್ಥೂಲನಿದರ್ಶನಗಳಿಂದ ಸೂಚಿಸಿರುವುವು. ಕೇವಲ ಮತದೃಷ್ಟಿಯಿಂದ ಅಲ್ಲದೇ ದೇವಾಲಯಗಳು ವಿದ್ಯಾಭ್ಯಾಸ, ಲಲಿತಕಲೆ, ಆರ್ಥಿಕಸ್ಥಿತಿ, ಸಮಾಜಸೇವೆ ದೃಷ್ಟಿಯಿಂದಲೂ ಸಮಾಜದಲ್ಲಿ ಮುಖ್ಯ ಸ್ಥಾನವನ್ನು ಪಡೆದಿದ್ದವು. ಆದುದರಿಂದಲೇ ಚಕ್ರವರ್ತಿಗಳಿಂದ ಹಿಡಿದು ಸಾಮಾನ್ಯರಲ್ಲಿಯೂ ಯಥಾಶಕ್ತಿ ದೇವದಾನವನ್ನು ಮಾಡಬೇಕೆಂಬ ನಂಬಿಕೆಯಿದ್ದಿತ್ತು. ಪ್ರತಿಯೊಂದು ಮುಖ್ಯ ದೇವಾಲಯದಲ್ಲಿಯೂ ಅರ್ಚಕ, ಹೂವಾಡಿಗ, ತೋಟಗಾರ, ಗಂಧಕಾರ, ಓಲಗದವ ಮುಂತಾದ ಅನೇಕ ಪರಿಚಾರಕರಿರತ್ತಿದ್ದರು. ದೇವಸ್ಥಾನದ ಮೇಲ್ವಿಚಾರಣೆಗೆ ಚುನಾಯಿತರಾದ ಸಭಾ ಸದಸ್ಯರಿದ್ದರು. ಇವರು ಶ್ರೀ ಭಂಡಾರದಿಂದ ಬರಗಾಲದಲ್ಲಿ ರೈತರಿಗೆ ಧಾನ್ಯ, ಹಣ, ಬೀಜ ಕೊಟ್ಟು ಲೇವಾದೇವಿಯನ್ನು ನಡೆಸುತ್ತಿದ್ದರು. ಸ್ಥಾನಿಕರೂ, ಪಾರುಪತ್ತೇಗಾರರೂ, ಮಣೆಗಾರರೂ ನಿತ್ಯಕಟ್ಟಳೆ, ಮಾಸೋತ್ಸವ, ಪುಷ್ಪೋತ್ಸವ, ಬ್ರಹ್ಮೋತ್ಸವ ಮುಂತಾದ ಉತ್ಸವಗಳನ್ನು ನಡೆಸುತ್ತ, ದೇವದಾನ ಭೂಮಿ ಸಾಗುವಳಿಯನ್ನು ಮಾಡಿಸುತ್ತಿದ್ದರು. ದೇವಸ್ಥಾನದ ಮಂಟಪದಲ್ಲಿ ಧರ್ಮಸ್ಥಾನವಿದ್ದು ವಿವಾದಗಳು ಪರಿಹಾರವಾಗುತ್ತಿದ್ದವು. ದೇವಾಲಯಗಳಲ್ಲಿ ನಾಟಕಶಾಲೆಗಳಿದ್ದು ಉತ್ಸವ ಸಮಯದಲ್ಲಿ ಸಂಸ್ಕೃತ ಮತ್ತು ದೇಶಭಾಷೆಗಳ ನಾಟಕ, ಬಯಲಾಟಗಳನ್ನು ಆಡುತ್ತಿದ್ದರು. ದೇವರ ಸೇವೆಗಾಗಿ ನಡೆಯುತ್ತಿದ್ದ ಸಂಗೀತ, ಭರತನಾಟ್ಯಗಳಿಂದ ಲಲಿತಕಲೆಗಳೂ, ವಾಸ್ತುಶಿಲ್ಪವೂ ಅಭಿವೃದ್ಧಿಯಾದವು. ಪುರಾಣ ಪಠಣ, ಕಾಲಕ್ಷೇಪ, ಕೀರ್ತನೆ, ಯಾತ್ರೆಗಳಿಂದ ಪಾಮರರಿಗೆ ನೀತಬೋಧೆಯಾಗುತ್ತಿತ್ತು. ಪ್ರೌಢವಿದ್ಯೆಗಾಗಿ ದೇವಾಲಯಗಳ ಆಶ್ರಯದಲ್ಲಿ ಘಟಿಕಾಸ್ಥಾನಗಳಿದ್ದು. ಇಲ್ಲಿ ವೇದ, ವೇದಾಂಗ, ವೈದ್ಯ ಮುಂತಾದ ಸಕಲಶಾಸ್ತ್ರಗಳನ್ನು ಬೋಧಿಸುವ ಉಪಾಧ್ಯಾಯರಿಗೂ ವಿದ್ಯಾರ್ಥಿಗಳಿಗೂ ವೇತನಗಳನ್ನು ಕೊಡುವುದಕ್ಕೂ ಉಚಿತವಾಗಿ ಅನ್ನ, ಬಟ್ಟೆ, ಎಣ್ಣೆ ನೀರು ಹಾಕುವುದಕ್ಕಾಗಿಯೂ ಏರ್ಪಾಡುಗಳಿದ್ದವು. ಅಲ್ಲದೇ ದೀನ ಅನಾಥರಿಗೆ ಅನ್ನದಾನ ಮಾಡುವ ಸತ್ರಗಳು, ಬಾಣಂತಿಯ ಚಿಕಿತ್ಸೆಗೆ ಪ್ರಸೂತಾರೋಗ್ಯ ಶಾಲೆಗಳೂ ಇತರ ಆರೋಗ್ಯ ಶಾಲೆಗಳೂ ಇದ್ದವು. ಆಗಾಗ ಸೇರುತ್ತಿದ್ದ ಜಾತ್ರೆಗಳಿಂದ ವರ್ತಕರ ವ್ಯಾಪಾರವೂ ವಿಶೇಷವಾಗಿ ನಡೆಯುತ್ತಿದ್ದುದಲ್ಲದೇ ಸಾಮಾನ್ಯ ಜನರಿಗೆ ವಸ್ತುಪ್ರದರ್ಶನ ಶಾಲೆಗಳಂತೆ ಉಪಯೋಗವಾಗುತ್ತಿದ್ದವು. ದೊಡ್ಡದೊಡ್ಡ ದೇವಾಲಯಗಳು ಕೋಟಗಳಂತೆ ಭದ್ರವಾಗಿದ್ದು ನೀರು ದವಸಧಾನ್ಯಗಳಿಂದ ತುಂಬಿದ್ದುದರಿಂದ ಯುದ್ಧಕಾಲದಲ್ಲಿ ಶರಣಾಗತರಿಗೆ ಆಶ್ರಯವೂ ಸಿಗುತ್ತಿದ್ದಿತ್ತು. ಭಾರತೀಯ ಸಂಸ್ಕೃತಿಯ ವಿವಿಧ ರೂಪಗಳಿಗೂ ದೇವಾಲಯಗಳು ಪ್ರತ್ಯಕ್ಷ ನಿದರ್ಶನಗಳಾಗಿದ್ದವು. ಭಾರತೀಯ ದೇವಾಲಯಗಳ ವಾಸ್ತುಶಿಲ್ಪ ರೀತಿಯನ್ನೂ, ಆಡಳಿತ ಪದ್ಧತಿಗಳನ್ನೂ ಅನುಸರಿಸಿ ಜಾವಾ, ಬಾಲಿ, ಸುಮಾತ್ರ, ಬರ್ಮಾ, ಕಾಂಬೋಡಿಯಾ ಮುಂತಾದ ದ್ವೀಪಾಂತರ ದೇಶಗಳಲ್ಲೂ ದೇವಾಲಯಗಳು ನಿರ್ಮಿತವಾದವು.
ದೇವಾಲಯ ವ್ಯವಸ್ಥೆ
ಪ್ರಾಚೀನ ಭಾರತದ ದೇಗುಲ ವ್ಯವಸ್ಥೆಯನ್ನು ಇಂದಿಗೂ ನಾವು ಕಾಣುತ್ತೇವೆ. ಗ್ರಾಮದೇವತೆಯ ದೇಗುಲ ಕೇಂದ್ರಿತವಾಗಿ ಸಮಸ್ತ ಚಟುವಟಿಕೆಗಳು ಜರುಗುವ ಹಳ್ಳಿಗಳು ಭಾರತ ದೇಶದಾದ್ಯಂತ ಕಾಣಸಿಗುತ್ತವೆ. ದೇಗುಲದ ರಥೋತ್ಸವ, ಜಾತ್ರೆ, ಪಲ್ಲಕ್ಕಿ ಉತ್ಸವ ಮೊದಲಾದವುಗಳನ್ನು ಇಡೀ ಊರಿನ ಜನರು ಭಾಗವಹಿಸಿ ನಡೆಸುವುದು ಸಾಮಾನ್ಯ. ಹಬ್ಬ ಹರಿದಿನಗಳ ಆಚರಣೆ, ಯಕ್ಷಗಾನ, ಬಯಲಾಟ, ಹರಿಕಥೆ, ಭಜನೆ ಮೊದಲಾದ ಧಾರ್ಮಿಕ, ಸಾಂಸ್ಕೃತಿಕ ಕಾಯಕ್ರಮಗಳ ಕೇಂದ್ರ ದೇವಸ್ಥಾನ. ಉದಾಹರಣೆಗೆ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳ ಅನೇಕ ಯಕ್ಷಗಾನ ಮೇಳಗಳು ದೇವಸ್ಥಾನ ಆಶ್ರಯದಲ್ಲಿರುವುದನ್ನು ಗಮನಿಸಬಹುದು. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಂತಹ ಐದಾರು ಮೇಳಗಳಿವೆ. ಅನೇಕ ದೇವಸ್ಥಾನಗಳ ಆಶ್ರಯದಲ್ಲಿ ಅನ್ನದಾನ, ವಿದ್ಯಾದಾನ ಮೊದಲಾದವುಗಳು ನಿರಂತರ ನಡೆಯುತ್ತಿರುವುದನ್ನು ದೇಶದುದ್ದಗಲಕ್ಕೂ ಕಾಣಬಹುದು. ದೇವಾಲಯದ ಸನ್ನಿಧಾನದಲ್ಲಿ ನ್ಯಾಯದಾನ ನಡೆಯುವ ಧರ್ಮಸ್ಥಳದಂತಹ ಅನೇಕ ಉದಾಹರಣೆಗಳನ್ನು ನಾವು ಗಮನಿಸಹುದು.
ಹಾಗೆಯೇ ದೇವಸ್ಥಾನ ಅವಲಂಬಿತ ಆರ್ಥಿಕ ಚಟುವಟಿಕೆಗಳು ಅನೇಕ ಕುಟುಂಬಗಳ ಜೀವನೋಪಾಯದ ಮಾರ್ಗವಾಗಿವೆ. ಪ್ರಮುಖ ದೇವಸ್ಥಾನಗಳ ಸುತ್ತ ಹೂವುಹಣ್ಣುಫಲಗಳ ಅಂಗಡಿ ಇಟ್ಟುಕೊಂಡವರು, ಸಾಮಗ್ರಿ ಉತ್ಪಾದಕರು, ದೇವಸ್ಥಾನದ ಪರಿಚಾರಕರು, ಅರ್ಚಕ ವರ್ಗದಿಂದ ಹಿಡಿದು ಭಕ್ತಾದಿಗಳ ಅನುಕೂಲಕ್ಕಿರುವ ವಾಹನ ವ್ಯವಸ್ಥೆ, ಲಾಡ್ಜಿಂಗ್ ಹೋಟೆಲ್ಗಳವರೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಆರ್ಥಿಕ ಚಟುವಟಿಕೆಗಳು ಉದ್ಯೋಗಾವಕಾಶವನ್ನು ಒದಗಿಸುತ್ತವೆ.
ಅಂತೆಯೇ ಪುಣ್ಯಕ್ಷೇತ್ರ ದರ್ಶನಕ್ಕಾಗಿ ಕೈಗೊಳ್ಳುವ ಯಾತ್ರೆಗಳು ಜನರನ್ನು ಇಡೀ ದೇಶದ ಮೂಲೆ ಮೂಲೆಯೊಂದಿಗೆ ಬೆಸೆಯುತ್ತವೆ. ಪುಣ್ಯಕ್ಷೇತ್ರ ಯಾತ್ರೆ ಪ್ರಾಚೀನ ಕಾಲದಿಂದ ನಮ್ಮಲ್ಲಿ ಬೆಳೆದುಬಂದ ಸಂಪ್ರದಾಯ. ಜೊತೆಗೆ ಈ ಆಧ್ಯಾತ್ಮಿಕ ಪ್ರವಾಸ ಅಂತರಂಗದ ವಿಕಾಸದ ಜೊತೆಗೆ ಪ್ರವಾಸೋದ್ಯಮದ ಪ್ರಗತಿಗೂ ಸಾಧನವಾಗಿದೆ.
ಶಿಥಿಲಗೊಳ್ಳುತ್ತಿದೆಯೇ ದೇಗುಲ ಸಂಸ್ಕೃತಿ?
ದೇಶದ ಮೇಲೆ ಮುಸ್ಲಿಂ ಆಕ್ರಮಣದ ನಂತರ ಹೇಗೆ ದೇವಸ್ಥಾನಗಳು ನಿರಂತರ ಗುರಿಯಾದವು ಎನ್ನುವುದನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಸೀತಾರಾಮ್ ಗೋಯೆಲ್ ಬರೆದ ಹಿಂದೂ ಟೆಂಪಲ್ಸ್: ವಾಟ್ ಹ್ಯಾಪನ್ಡ್ ಟು ದೆಮ್ ಎನ್ನುವ ಎರಡು ಸಂಪುಟಗಳ ಪುಸ್ತಕದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ದೇವಾಲಯಗಳು ಮುಸ್ಲಿಂ ಆಕ್ರಮಣದಲ್ಲಿ ನಾಶವಾಗಿದ್ದನ್ನು ಉಲ್ಲೇಖಿಸಿದ್ದಾರೆ. ಇತಿಹಾಸಕಾರ ಜದುನಾಥ್ ಸರ್ಕಾರ ಇನ್ನೂ ವಿಸ್ತಾರವಾಗಿ ತಮ್ಮ ಬರಹಗಳಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಅದರ ನಡುವೆಯೂ ಭಾರತ ತನ್ನ ದೇವಾಲಯಗಳನ್ನು ಅಲ್ಲಿನ ಸಂಪ್ರದಾಯಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಆದರೆ ಸಹಸ್ರ ವರ್ಷಗಳ ದೇಗುಲ ಸಂಸ್ಕೃತಿ ಶಿಥಿಲಗೊಳ್ಳುತ್ತಿದೆಯೇ ಎನ್ನುವ ಶಂಕೆ ಎಂದಿಗಿಂತ ಇಂದು ಹೆಚ್ಚು ಕಾಡುತ್ತಿದೆ. ಇದಕ್ಕೆ ಕಾರಣಗಳಿಲ್ಲದಿಲ್ಲ.
ಸ್ವಾತಂತ್ರ್ಯಾನಂತರ ಜಾರಿಗೆ ಬಂದ ಕಾನೂನುಗಳಿಂದ ಹಿಂದೂ ದೇಗುಲಗಳಲ್ಲಿ ರಾಜಕೀಯ ಹಸ್ತಕ್ಷೇಪ ನಿರಂತರ ನಡೆದುಬಂದಿದೆ. ಸಂವಿಧಾನದ ಆರ್ಟಿಕಲ್ 25ರ ಪ್ರಕಾರ ಧಾರ್ಮಿಕ ವಿಷಯಗಳಲ್ಲಿ ಜನರಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ ಮತ್ತು ಸರ್ಕಾರದ ಹಸ್ತಕ್ಷೇಪವನ್ನು ನಿಷೆಧಿಸುತ್ತದೆ. ಆದಾಗ್ಯೂ ಜಾರಿಗೆ ಬಂದ ಹಿಂದು ರಿಲಿಜಿಯಸ್ ಮತ್ತು ಚಾರಿಟೇಬಲ್ ಎಂಡೋವ್ಮೆಂಟ್ ಕಾನೂನುಗಳನ್ನು ಬಳಸಿಕೊಂಡು ಸರ್ಕಾರಗಳು ದೇವಾಲಯಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿವೆ. ಧಾರ್ಮಿಕೇತರ ಆಡಳಿತ ಮಾತ್ರ ಸರ್ಕಾರದ ಕೈಗೆ ಎನ್ನಲಾದರೂ ಸಹ ಸರ್ಕಾರ ನೇಮಿಸುವ ಅಧಿಕಾರಿಗಳ ಕೈಗೆ ದೇಗುಲದ ಸಂಪೂರ್ಣ ಆಗುಹೋಗುಗಳ ನಿಯಂತ್ರಣ ಹಸ್ತಾಂತರವಾಗಿದೆ. ಭಕ್ತರನ್ನು ಕೇಳುವವರಿಲ್ಲ. ಮುಜರಾಯಿ ಇಲಾಖೆಯ ಸುಪರ್ದಿಗೆ ಒಳಪಟ್ಟಿರುವ ನಮ್ಮ ರಾಜ್ಯದ ಕೆಲವು ಪ್ರಮುಖ ದೇವಸ್ಥಾನಗಳ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಗಮನಿಸಿದರೆ ಈ ವ್ಯವಸ್ಥೆಯಲ್ಲಿ ಆಗಿರುವ ಅಪಚಾರ ಕಾಣುತ್ತದೆ. ಸರ್ಕಾರಿ ಅಧಿಕಾರಿಯ ಮರ್ಜಿಯಲ್ಲಿ ದೇವಸ್ಥಾನ ಸಂಪ್ರದಾಯಗಳ ಆಚರಣೆ ನಡೆಯಬೇಕಾದದ್ದು ಅತ್ಯಂತ ದುರ್ದೈವದ ಸಂಗತಿ. ದೇವಾಲಯದ ಆದಾಯವನ್ನು ಅನ್ಯ ಉದ್ದೇಶಗಳಿಗೆ ವರ್ಗಾಯಿಸಬಾರದು ಎನ್ನುವ ಮುಜರಾಯಿ ಕಾನೂನು ಹೇಳಿದ್ದರೂ ಸರ್ಕಾರಗಳೇ ಅನ್ಯ ಉದ್ಧೇಶಗಳಿಗೆ ಬಳಸಿದ್ದನ್ನು ಒಪ್ಪಿಕೊಂಡಿವೆ.
ಜೊತೆಗೆ ಸಮಾನತೆ, ಸಾಮಾಜಿಕ ನ್ಯಾಯ ಇತ್ಯಾದಿಗಳ ಹೆಸರಿನಲ್ಲಿ ಪುರಾತನ ಕಾಲದಿಂದ ನಡೆದುಬಂದಿರುವ ಸಂಪ್ರದಾಯಗಳನ್ನು ಹಳಿಯುವ ಅನೇಕ ಪ್ರಯತ್ನಗಳನ್ನು ನಾವು ಕಾಣುತ್ತಿದ್ದೇವೆ. ಶಬರಿಮಲೆ ಅಯ್ಯಪ್ಪ ಸನ್ನಿಧಿ ಪ್ರಕರಣ ಇದಕ್ಕೊಂದು ಇತ್ತೀಚಿನ ಉದಾಹರಣೆ. ಸಹಸ್ರಾರು ವರ್ಷಗಳ ಸನಾತನ ಭಾರತೀಯ ಸಂಪ್ರದಾಯಗಳನ್ನು ಪಾಶ್ಚಾತ್ಯ ಚಿಂತನೆಗಳ ದೃಷ್ಟಿಯಲ್ಲಿ ವಿಶ್ಲೇಷಿಸಿ ಸರಿತಪ್ಪು ನಿರ್ಣಯಕ್ಕೆ ಬರುವುದು ಎಷ್ಟು ಸರಿ?
ಇನ್ನೂ ಒಂದು ಕಳವಳಕಾರಿ ಸಂಗತಿಯೆಂದರೆ ಗ್ರಾಮಗಳು ಖಾಲಿಯಾಗಿ ನಗರಗಳತ್ತ ಯುವಜನರು ಹೆಚ್ಚು ಹೆಚ್ಚು ಮುಖ ಮಾಡಿದಂತೆ ತಲೆತಲಾಂತರಗಳಿಂದ ಅಲ್ಲಿ ನಡೆದು ಬಂದ ದೇವಸ್ಥಾನದ ಉತ್ಸವ, ಜಾತ್ರೆ, ಹಬ್ಬದ ಪೂಜೆ ಮೊದಲಾದ ಸಾಂಪ್ರದಾಯಿಕ ಆಚರಣೆಗಳು ಕಳೆಗುಂದುತ್ತಿರುವುದನ್ನು ನಾವು ಅನೇಕ ಕಡೆಗಳಲ್ಲಿ ಕಾಣಬಹುದು. ಅನೇಕ ಹಳ್ಳಿಗಳಲ್ಲಿ ಒಂದು ಹೊತ್ತಿನ ಪೂಜೆ ಮಾಡಲೂ ಅರ್ಚಕರ ಕೊರತೆ ಇರುವ ಸನ್ನಿವೇಶ ಉಂಟಾದ ಉದಾಹರಣೆಗಳೂ ಇವೆ.
ಏನಾಗಬಹುದು ದೇವಾಲಯ ಸಂಪ್ರದಾಯಗಳು ನಶಿಸಿದರೆ ? ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾದ ತುರ್ತು ಇಂದು ಬಂದಿದೆ ಎಂದರೆ ತಪ್ಪಾಗಲಾರದು. ಯಾವುದೇ ಸಂಪ್ರದಾಯ ಸಂಸ್ಕೃತಿಗಳು ಜನಜೀವನದಲ್ಲಿ ಆಚರಣೆಯಲ್ಲಿದ್ದರೆ ಮಾತ್ರ ಉಳಿಯಬಲ್ಲವು. ಉಳಿಸಬೇಕಾದ ಹೊಣೆ ಇರುವುದು ನಮ್ಮ ಮೇಲೆಯೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.