ಪ್ರಜಾಪ್ರಭುತ್ವದ ಅತೀದೊಡ್ಡ ಹಬ್ಬ ಚುನಾವಣೆ ಸಮೀಪಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕಾರ್ಯ ತಾರಕಕ್ಕೇರಿದೆ. ವೇಗದಲ್ಲಿ ಬೆಳೆಯುತ್ತಿರುವ, ಇಂಟರ್ನೆಟ್ ಯುಗದಲ್ಲಿ ಪ್ರಚಾರ ಅತ್ಯಂತ ಅವಶ್ಯಕವಾದುದು, ಆದರೆ ಕಳೆದ ಐದು ವರ್ಷಗಳಲ್ಲಿ ಮೌನವಾಗಿ ಮಾಡಿರುವ ಸಾಧನೆಗಳು ಆಡಳಿತರೂಢ ಎನ್ ಡಿ ಎ ಸರ್ಕಾರಕ್ಕೆ 2019ರ ಚುನಾವಣೆಯಲ್ಲಿ ಉತ್ತಮ ಫಲಿತಾಂಶವನ್ನು ತಂದುಕೊಡಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಕಳೆದ ಐದು ವರ್ಷದಲ್ಲಿ, ಸಮಾಜದ ಹಿಂದುಳಿದ ವರ್ಗಗಳ ಜನರ ಜೀವನದಲ್ಲಿ ಮಹಾನ್ ಪರಿವರ್ತನೆಗಳನ್ನು ತರುವ ನಿಟ್ಟಿನಲ್ಲಿ ಹಲವಾರು ಆರಂಭಗಳನ್ನು ನೀಡಲಾಗಿದೆ. ಹಣಕಾಸು ವಲಯದಲ್ಲಿ ಅತ್ಯಂತ ಅಂತರ್ಗತ ಕಾರ್ಯವನ್ನು ಮಾಡಲಾಗಿದೆ, 34 ಕೋಟಿ ಮಂದಿಯನ್ನು ಬ್ಯಾಂಕ್ ವ್ಯವಸ್ಥೆಯೊಳಗೆ ಬರುವಂತೆ ಮಾಡಲಾಗಿದೆ. ಎಲ್ಲದಕ್ಕೂ ಮಿಗಿಲಾಗಿ, ಉಜ್ವಲ ಯೋಜನೆ, ಸೌಭಾಗ್ಯ ಯೋಜನೆ, ಪಿಎಂ ಆವಾಸ್ ಯೋಜನೆ, ಆಯುಷ್ಮಾನ್ ಭಾರತ್, ಸ್ವಚ್ಛ ಭಾರತ್, ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಒದಗಿಸುವಿಕೆ, ಸಣ್ಣ ರೈತರಿಗೆ ವಾರ್ಷಿಕ ಆರು ಸಾವಿರ ರೂಪಾಯಿಗಳ ಧನಸಹಾಯ ಕೋಟ್ಯಾಂತರ ಜನರ ಬದುಕನ್ನು ಬೆಳಗಿಸಿದೆ. 2014ರಿಂದ ಸುಮಾರು 6 ಕೋಟಿ ಜನರು ಬಡತನ ರೇಖೆಗಿಂತ ಹೊರ ಬಂದಿದ್ದಾರೆ ಎಂಬುದನ್ನು ವರದಿ ತಿಳಿಸಿರುವುದು ನಿಜಕ್ಕೂ ಅದ್ಭತವಾದ ಮೈಲಿಗಲ್ಲಾಗಿದೆ. ಸರ್ಕಾರದ ಎಲ್ಲಾ ಯೋಜನೆಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರಯೋಜನವನ್ನು ನೀಡಿದೆ ಮತ್ತು ಬಡತನ ರೇಖೆಗಿಂತ ಮೇಲಿರುವವರ ಸಮಕಾಲೀನ ಜೀವನವನ್ನು ಉತ್ತಮವಾಗಿ ಕಟ್ಟಿಕೊಳ್ಳಲು ಯಶಸ್ವಿಯಾಗಿದ್ದಾರೆ.
ಉಜ್ವಲ ನರೇಂದ್ರ ಮೋದಿ ಸರ್ಕಾರದ ಅತೀ ಮಹತ್ವಾಕಾಂಕ್ಷೆಯ ಯೋಜನೆ. ಗ್ರಾಮೀಣ ಭಾಗದ ಮಹಿಳೆಯರ ಜೀವನಮಟ್ಟವನ್ನು ಸುಧಾರಿಸುವ ಸಲುವಾಗಿ ತಂದ ಯೋಜನೆ ಇದಾಗಿದೆ. 2016ರ ಮೇನಲ್ಲಿ ಈ ಯೋಜನೆ ಆರಂಭವಾಗುವುದಕ್ಕೂ ಮುನ್ನ, ಸರ್ಕಾರವು ನಕಲಿ ಅಕೌಂಟ್ಗಳನ್ನು ತೊಡೆದು ಹಾಕುವ ಕಾರ್ಯವನ್ನು ಸಕ್ರಿಯಗೊಳಿಸಿತು. ಸುಮಾರು 1.6 ಕೋಟಿ ನಕಲಿ ಖಾತೆಯನ್ನು ಸರ್ಕಾರ ಪತ್ತೆ ಹಚ್ಚಿದೆ ಮತ್ತು ಇವರನ್ನು ಎಲ್ ಪಿಜಿ ಸಿಲಿಂಡರ್ನ ಸಬ್ಸಿಡಿ ಫಲಾನುಭವಿಗಳ ಪಟ್ಟಿಯಿಂದ ಕೈಬಿಟ್ಟಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ, ಸಬ್ಸಿಡಿಯನ್ನು ಬಿಟ್ಟು ಬಿಡಿ ಎಂಬ ಅಭಿಯಾನವನ್ನೂ ಆರಂಭಿಸಿತು, ಇದರ ಫಲವಾಗಿ 1.0 ಕೋಟಿ ಜನರು 2015ರಿಂದ ತಮ್ಮ ಎಲ್ಪಿಜಿ ಮೇಲಿನ ಸಬ್ಸಿಡಿಯನ್ನು ಕೈಬಿಟ್ಟಿದ್ದಾರೆ. ಈ ಎಲ್ಲದರ ಫಲವಾಗಿ 2016ರ ಮೇನಲ್ಲಿ ಸರ್ಕಾರ ಉಜ್ವಲ ಯೋಜನೆಗೆ ಆರಂಭವನ್ನು ನೀಡಿತು ಮತ್ತು ಇದುವರೆಗೆ ಇದರಡಿ 7 ಕೋಟಿ ಎಲ್ಪಿಜಿಯನ್ನು ಬಡ ಕುಟುಂಬಗಳಿಗೆ ವಿತರಣೆ ಮಾಡಿದೆ. ಉತ್ತರಪ್ರದೇಶದಲ್ಲಿ ಈ ಯೋಜನೆ 1.1 ಕೋಟಿ ಫಲಾನುಭವಿಗಳನ್ನು ಹೊಂದಿದೆ, ಬಿಹಾರದಲ್ಲಿ 73 ಲಕ್ಷ ಮತ್ತು ಪಶ್ಚಿಮಬಂಗಾಳದಲ್ಲಿ 72 ಲಕ್ಷ ಫಲಾನುಭವಿಗಳನ್ನು ಈ ಯೋಜನೆ ಹೊಂದಿದೆ. 2020ರ ವೇಳೆಗೆ 8 ಕೋಟಿ ಮನೆಗಳಿಗೆ ಅಡುಗೆ ಅನಿಲವನ್ನು ಒದಗಿಸುವ ಗುರಿಯನ್ನು ಈ ಯೋಜನೆಯಡಿ ಇಟ್ಟುಕೊಳ್ಳಲಾಗಿದೆ. ಈ ಯೋಜನೆಯಡಿ, ಕೇಂದ್ರ ಸರ್ಕಾರವು, ಪ್ರತಿ ಕುಟುಂಬಗಳಿಗೆ ನೀಡುವ ಉಚಿತ ಅಡುಗೆ ಅನಿಲದ ಮೇಲೆ 1,600 ರೂಪಾಯಿಗಳ ಸಬ್ಸಿಡಿಯನ್ನು ತೈಲ ಕಂಪನಿಗಳಿಗೆ ನೀಡುತ್ತದೆ. ಈ ಸಬ್ಸಿಡಿಯು ಸಿಲಿಂಡರ್ ಸೆಕ್ಯೂರಿಟಿ ದರ ಮತ್ತು ಅದರ ಫಿಟ್ಟಿಂಗ್ ದರ ಆಗಿದೆ.
ಈ ಯೋಜನೆಯ ಬಗ್ಗೆ ಇರುವ ಅತೀದೊಡ್ಡ ಟೀಕೆಯೆಂದರೆ, ಒಂದು ಕುಟುಂಬ ಒಂದು ವರ್ಷದಲ್ಲಿ 3-4 ಸಿಲಿಂಡರ್ ಗಳನ್ನು ಈ ಯೋಜನೆಯಡಿ ಬಳಸಬಹುದು. ಉಳಿದವರಿಗೆ ವರ್ಷಕ್ಕೆ 10 ಸಿಲಿಂಡರ್ ಸಿಗುತ್ತವೆ. ಶೇ.80ರಷ್ಟು ಮಂದಿ ಉಜ್ವಲ ಫಲಾನುಭವಿಗಳು ತಮ್ಮ ಸಿಲಿಂಡರ್ ಅನ್ನು ರಿಫಿಲ್ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಸಿಲಿಂಡರ್ ಇದ್ದರೂ ಕಟ್ಟಿಗೆಯ ಮೂಲಕ ಅಡುಗೆ ಮಾಡುವ ಮೂಲಕ ಅಡುಗೆ ಅನಿಲವನ್ನು ಕಡಿಮೆ ಬಳಕೆ ಮಾಡುತ್ತಾರೆ. ದೊಡ್ಡ ಸಿಲಿಂಡರ್ಗಳಿಗೆ ರಿಫಿಲ್ ಮಾಡಲು ಹೆಚ್ಚು ದರ ಕೊಡಬೇಕಾಗುತ್ತದೆ ಎಂಬ ಕಾರಣವೂ ಇರುತ್ತದೆ. ಅದಕ್ಕಾಗಿಯೇ ತೈಲ ಮಾರುಕಟ್ಟೆ ಕಂಪನಿಗಳು 5 ಕೆಜಿ ಸಣ್ಣ ಸಿಲಿಂಡರ್ ಗಳನ್ನು ಹೆಚ್ಚಿನ ಮಟ್ಟದಲ್ಲಿ ಪೂರೈಕೆ ಮಾಡುತ್ತಿವೆ. ಈ ಎಲ್ಲದರ ಮಧ್ಯೆಯೂ ಉಜ್ವಲ ಯೋಜನೆ ಗ್ರಾಮೀಣ ಜನರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯವನ್ನು ಮಾಡುತ್ತಿದೆ. ಕಡಿಮೆ ಅವಧಿಯಲ್ಲೇ ಅತೀದೊಡ್ಡ ಯಶಸ್ಸನ್ನು ಕಂಡಿರುವ ಉಜ್ವಲ ಯೋಜನೆ, ಸರ್ಕಾರದ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.