ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕು ತುಂಬಾ ದುಬಾರಿ ಮತ್ತು ಸ್ಮಾರ್ಟ್. ಖರೀದಿ ಮಾಡುವ ಪ್ರತಿ ವಸ್ತುವೂ ಸ್ಮಾರ್ಟ್ ಆಗಬೇಕಿರಬೇಕು ಎಂಬುದು ಸ್ಮಾರ್ಟ್ ಜಗತ್ತಿನ ಸ್ಮಾರ್ಟ್ ಜನರ ಅನಿಸಿಕೆಯಾಗಿರುತ್ತದೆ. ಇಂದು ವಿಶ್ವ ಗ್ರಾಹಕ ಹಕ್ಕುಗಳ ದಿನ. ’ಟ್ರಸ್ಟೆಡ್ ಸ್ಮಾರ್ಟ್ ಪ್ರೊಡಕ್ಟ್ಸ್’ ಎಂಬುದು ಈ ಬಾರಿಯ ಘೋಷಣೆ. ಸ್ಮಾರ್ಟ್ ಗ್ಯಾಜೆಟ್ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ ಈ ಥೀಮ್ನಲ್ಲಿ ಗ್ರಾಹಕರ ದಿನವನ್ನು ಇಂದು ಆಚರಿಸಲಾಗುತ್ತಿದೆ. ಸ್ಮಾರ್ಟ್ ಗ್ಯಾಜೆಟ್ಗಳನ್ನು ಖರೀದಿ ಮಾಡುವಾಗ ಸ್ಮಾರ್ಟ್ ಆಗಿಯೇ ಯೋಚನೆ ಮಾಡಬೇಕು ಎಂಬುದು ಇದರ ಮುಖ್ಯ ಉದ್ದೇಶವಾಗಿದೆ.
ಸ್ಮಾರ್ಟ್ಫೋನ್, ಸ್ಮಾರ್ಟ್ ಟಿವಿ, ಧರಿಸಬಹುದಾದ ಫಿಟ್ನೆಸ್ ಟ್ರ್ಯಾಕರ್, ಧ್ವನಿ ಆಧಾರಿತ ಸಲಹೆ ಇತ್ಯಾದಿಗಳು ಸ್ಮಾರ್ಟ್ ಜಗತ್ತಿನ ಅನಿವಾರ್ಯಗಳೆನಿಸುತ್ತಿವೆ. ಇವುಗಳಿಂದ ಬದುಕು ಸರಳವಾಗುತ್ತಿದೆ ಎಂಬುದು ಕೆಲವರ ಅಭಿಪ್ರಾಯ. ಇನ್ನು ಕೆಲವರು ಇವುಗಳು ನಮ್ಮ ಬದುಕಿನ ಮೇಲೆ ವ್ಯತಿರಿಕ್ತವಾದ ಪ್ರಭಾವವನ್ನು ಬೀರುತ್ತಿದೆ ಎಂದು ಆರೋಪಿಸುತ್ತಲೂ ಇದ್ದಾರೆ. ಆದರೆ ಇವುಗಳನ್ನು ಹೇಗೆ ಬಳಸಬೇಕು, ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬ ಜಾಣ್ಮೆಯನ್ನು ಎಲ್ಲರೂ ಹೊಂದಿರಲೇಬೇಕು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರ್ಚ್ 15ನ್ನು ಗ್ರಾಹಕ ಹಕ್ಕುಗಳ ದಿನವಾಗಿ ಆಚರಿಸಲಾಗುತ್ತದೆ. ಗ್ರಾಹಕರ ಅವಶ್ಯಕತೆಗಳು, ಅಗತ್ಯಗಳು, ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ಅಮೆರಿಕಾ ಅಧ್ಯಕ್ಷ ಜಾನ್ ಎಫ್. ಕೆನಡಿಯವರಿಂದ ಪ್ರೇರಿತಗೊಂಡು ಈ ದಿನವನ್ನು ಆಚರಿಸಲಾಗುತ್ತಿದೆ. 1962 ರ ಮಾರ್ಚ್ 15 ರಂದು ಅವರು ಯುಎಸ್ ಕಾಂಗ್ರೆಸ್ಗೆ ಗ್ರಾಹಕರ ಹಕ್ಕುಗಳ ಬಗ್ಗೆ ವಿಶೇಷ ಸಂದೇಶವನ್ನು ನೀಡಿದ್ದರು. ಗ್ರಾಹಕ ಹಕ್ಕಿನ ಬಗ್ಗೆ ಮಾತನಾಡಿದ ಮೊತ್ತ ಮೊದಲ ವಿಶ್ವ ನಾಯಕ ಎಂಬ ಕೀರ್ತಿ ಅವರದ್ದು.
ಮೊದಲ ಬಾರಿಗೆ ಗ್ರಾಹಕ ಚಳುವಳಿ ಆರಂಭಗೊಂಡಿದ್ದು 1983 ರಲ್ಲಿ, ಇದೀಗ ಪ್ರತಿವರ್ಷ ಗ್ರಾಹಕ ಹಕ್ಕುಗಳನ್ನು ಪುರ್ನಶ್ಚೇತನಗೊಳಿಸುವ ನಿಟ್ಟಿನಲ್ಲಿ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತದ ಗ್ರಾಹಕ ಸಂಘಟನೆಗಳಿಗಾಗಿರುವ ಸದಸ್ಯತ್ವ ಸಂಸ್ಥೆ ಕನ್ಝ್ಯೂಮರ್ ಇಂಟರ್ನ್ಯಾಷನಲ್ನ ಕಾರ್ಯಕ್ರಮಗಳ ಭಾಗವಾಗಿ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಆಚರಣೆ ಮಾಡಲಾಗುತ್ತದೆ. ಗ್ರಾಹಕರನ್ನು ಸಂಭ್ರಮಾಚರಣೆ ಮತ್ತು ಪ್ರತಿಯೊಬ್ಬರಿಗೂ ಸುರಕ್ಷಿತವಾದ ಮತ್ತು ಸುಸ್ಥಿರ ಸರಕು ಮತ್ತು ಸೇವೆಗಳು ಸಿಗಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಗ್ರಾಹಕರನ್ನು ಸಬಲೀಕರಣರನ್ನಾಗಿ ಮಾಡಲು ಮತ್ತು ಅವರ ಹಕ್ಕುಗಳನ್ನು ರಕ್ಷಣೆ ಮಾಡಲು ಕನ್ಝ್ಯೂಮರ್ ಇಂಟರ್ನ್ಯಾಷನಲ್ 100 ರಾಷ್ಟ್ರಗಳ ಸುಮಾರು 200 ಸದಸ್ಯ ಸಂಘಟನೆಗಳನ್ನು ಒಟ್ಟಿಗೆ ತರುತ್ತದೆ.
ಭಾರತವೂ ಗ್ರಾಹಕರ ಹಕ್ಕುಗಳನ್ನು ರಕ್ಷಣೆ ಮಾಡಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ, 1986 ಭಾರತೀಯ ಗ್ರಾಹಕರಿಗೆ ಕೆಲವೊಂದು ಮೂಲ ಹಕ್ಕುಗಳನ್ನು ಕಲ್ಪಿಸಿದೆ. ಆದರೆ ಗ್ರಾಹಕರ ಹಕ್ಕುಗಳ ಬಗ್ಗೆ ಇರುವ ಅರಿವಿನ ಕೊರತೆಯಿಂದಾಗಿ ಸಂವಿಧಾನ ಕಲ್ಪಿಸಿದ ಹಕ್ಕುಗಳ ಸದುಪಯೋಗವನ್ನು ಮಾಡಿಕೊಳ್ಳಲು ಗ್ರಾಹಕರು ವಿಫಲರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಾಗೃತಿ, ಅರಿವು ಕಾರ್ಯಕ್ರಮಗಳನ್ನು ಸರ್ಕಾರಗಳು ಮತ್ತಷ್ಟು ಸಕ್ರಿಯಗೊಳಿಸಬೇಕಾದ ಅನಿವಾರ್ಯತೆ ಇದೆ.
ಸರಕು ಮತ್ತು ಸೇವೆಯ ಗುಣಮಟ್ಟ, ಪ್ರಮಾಣ, ದರ, ಪರಿಶುದ್ಧತೆ, ಸಾಮರ್ಥ್ಯವನ್ನು ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬ ಗ್ರಾಹಕನಿಗೂ ಇದೆ ಎಂಬುದು ಗ್ರಾಹಕ ಹಕ್ಕಿನ ವಿಶ್ಲೇಷಣೆಯಾಗಿದೆ.
ಗ್ರಾಹಕರ ಹಕ್ಕಿನ ಬಗ್ಗೆ ಪ್ರತಿಯೊಬ್ಬರೂ ಅವಶ್ಯಕವಾಗಿ ತಿಳಿದುಕೊಳ್ಳಲೇಬೇಕಿದೆ. ಗ್ರಾಹಕರ ಹಕ್ಕುಗಳ ಪೈಕಿ ಕೆಲವು ಈ ಕೆಳಗಿನಂತಿವೆ.
• ಎಲ್ಲಾ ವಿಧದ ಹಾನಿಕಾರಕ ಸರಕು ಮತ್ತು ಸೇವೆಗಳಿಂದ ರಕ್ಷಿಸಿಕೊಳ್ಳುವ ಹಕ್ಕು
• ಎಲ್ಲಾ ವಿಧದ ಸರಕು ಮತ್ತು ಸೇವೆಗಳ ಗುಣಮಟ್ಟ ಮತ್ತು ಪ್ರದರ್ಶನವನ್ನು ತಿಳಿದುಕೊಳ್ಳುವ ಹಕ್ಕು
• ಸರಕು ಮತ್ತು ಸೇವೆಗಳನ್ನು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳುವ ಹಕ್ಕು
• ಗ್ರಾಹಕರ ಹಿತಾಸಕ್ತಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕು
• ಗ್ರಾಹಕರ ಹಕ್ಕು ಉಲ್ಲಂಘನೆಯಾದಾಗ ಪರಿಹಾರ ಕಂಡುಕೊಳ್ಳುವ ಹಕ್ಕು
• ಗ್ರಾಹಕ ಶಿಕ್ಷಣವನ್ನು ಪೂರ್ಣಗೊಳಿಸುವ ಹಕ್ಕು
ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ ಒಂದು ವಸ್ತುಗಳನ್ನು ಖರೀದಿ ಮಾಡುತ್ತಾನೆ. ಹೀಗಾಗಿ ಪ್ರತಿಯೊಬ್ಬನೂ ಗ್ರಾಹಕನೇ ಆಗಿರುತ್ತಾನೆ. ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ವಸ್ತುವಿನ ಗುಣಮಟ್ಟ, ಪ್ರಮಾಣ, ದರ, ಉತ್ಪನ್ನ ತಯಾರಾದ ದಿನ ಮತ್ತು ಅದರ ಅವಧಿ ಕೊನೆಗೊಳ್ಳುವ ದಿನ ಇತ್ಯಾದಿಗಳ ಬಗ್ಗೆ ನಾವು ಅವಲೋಕನ ಮಾಡಲೇಬೇಕು. ಕಣ್ಣು ಮುಚ್ಚಿ ವಸ್ತುಗಳನ್ನು ಖರೀದಿ ಮಾಡುವ ಪ್ರವೃತ್ತಿ ಒಳ್ಳೆಯದಲ್ಲ. ನಾವು ನೀಡುವ ದರದ ಮೌಲ್ಯಕ್ಕೆ ಅನುಗುಣವಾಗಿ ಉತ್ಪನ್ನ ಇದೆಯೇ, ಗುಣಮಟ್ಟ ರುಜುವಾತು ಮಾಡುವ ಮಾಹಿತಿಗಳು ಉತ್ಪನ್ನದ ಪ್ಯಾಕೇಟ್ ಮೇಲೆ ಇದೆಯೇ ಎಂಬುದನ್ನು ಪರೀಕ್ಷಿಸಬೇಕು. ಸುಳ್ಳು ಹೇಳಿ ದಾರಿ ತಪ್ಪಿಸುವ ಉತ್ಪನ್ನಗಳ ಬಗ್ಗೆ ಎಚ್ಚರಿಕೆ ಇರಬೇಕು, ಅವುಗಳನ್ನು ಶಿಕ್ಷೆಗೊಳಪಡಿಸುವ ಧೈರ್ಯ ಇರಬೇಕು, ಜಾಹೀರಾತು ನೋಡಿ ಮರುಳಾಗುವ ಮನಸ್ಥಿತಿಯಿಂದ ಹೊರಬರಬೇಕು. ಅವಶ್ಯಕತೆಗೆ ಅನುಗುಣವಾಗಿ ನಮ್ಮ ಆಯ್ಕೆಗಳಿರಬೇಕು. ಆವಾಗ ಮಾತ್ರ ನಾವು ಗ್ರಾಹಕರಾಗಿ ನಮ್ಮ ಹಕ್ಕುಗಳನ್ನು ಕಾಪಾಡಲು ಸಾಧ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.